ಬೇರೆಯವಳು ಬಂದು ನಾನೇ ನಿನ್ನ ಹೆಂಡತಿ ಅಂದ್ಳು? ಮಗಳೂ ಒಪ್ಪಿ ಇವಳೇ ಅಮ್ಮ ಅಂದ್ಲು?  ಸೀಕ್ರೆಟ್ ಕಥೆಯ ಸಿನಿಮಾ

Published : Jan 22, 2025, 05:23 PM IST
ಬೇರೆಯವಳು ಬಂದು ನಾನೇ ನಿನ್ನ ಹೆಂಡತಿ ಅಂದ್ಳು? ಮಗಳೂ ಒಪ್ಪಿ ಇವಳೇ ಅಮ್ಮ ಅಂದ್ಲು?  ಸೀಕ್ರೆಟ್ ಕಥೆಯ ಸಿನಿಮಾ

ಸಾರಾಂಶ

ವೇದ್‌ನ ಪತ್ನಿ ಮೀರಾ ಕಾಣೆಯಾಗುತ್ತಾಳೆ ಮತ್ತು ನಂತರ ಪತ್ತೆಯಾದಾಗ, ವೇದ್ ಅವಳನ್ನು ತನ್ನ ಪತ್ನಿ ಎಂದು ಗುರುತಿಸಲು ನಿರಾಕರಿಸುತ್ತಾನೆ. ಮೀರಾಳಂತೆ ಕಾಣುವ ಮಹಿಳೆಯನ್ನು ಕುಟುಂಬದ ಇತರ ಸದಸ್ಯರು ಗುರುತಿಸಿದರೂ, ವೇದ್ ಮಾತ್ರ ಅವಳು ನಕಲಿ ಎಂದು ಒತ್ತಾಯಿಸುತ್ತಾನೆ. ಈ ರಹಸ್ಯದ ಹಿಂದಿನ ಸತ್ಯವೇನು?

ಖೋಜ್: ರ‍್ಛಾಯಿಯೋಂಕೀ ಉಸ್ ಪಾರ್

ವೇದ್ ಒಬ್ಬ ಕ್ರಿಮಿನಲ್ ಲಾಯರ್, ಪತ್ನಿ ಮೀರಾ ಮಗಳು ಟಿಯಾ ಮೂರುಜನರ ಮುಚ್ಚಟೆಯಾದ ಸಂಸಾರ. ಒಂದು ದಿನ ವೇದ್ ಹೆಂಡತಿ ಮೀರಾ ಕಳೆದುಹೋಗುತ್ತಾಳೆ. ವೇದ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋಗುತ್ತಾನೆ. 'ತಾನು ಕೇಸಿನ ವಿಷಯವಾಗಿ ದೆಹಲಿಗೆ ಹೋಗಿದ್ದಾಗಿಯೂ ಅಲ್ಲಿಂದ ಬಂದ ನಂತರ ತನ್ನ ಜನ್ಮದಿನ ಇತ್ತು, ಅದರ ಸಲುವಾಗಿ ಮೀರಾ ಪಾರ್ಟಿಗೆ  ಎಲ್ಲ ತಯಾರಿ ಮಾಡಿದ್ದಳು ಆದರೆ ಅವಳೇ ಪತ್ತೆ ಇರಲಿಲ್ಲ. ತಾನು ಬೆಳಗಿನ ವರೆಗೂ ಕಾದು ಅವಳು ಬರದೆ ಇದ್ದಾಗ ಠಾಣೆಯಲ್ಲಿ ದೂರು ಕೊಡಲು ಬಂದೆ' ಎಂದು ಹೇಳುತ್ತಾನೆ.

ಇನ್ಸಪೆಕ್ಟರ್ ಅಮೋಲ್ ದೂರು ದಾಖಲಿಸಿಕೊಳ್ಳುತ್ತಾನೆ. ವೇದ್ ನನ್ನು ನಾನಾ ವಿಧದ ಪ್ರಶ್ನೆಗಳನ್ನು ಕೇಳುತ್ತಾನೆ. 'ವೇದ್ ನಿಗೆ ಏನಾದರೂ ಬೇರೆ ಅಫೇರ್ ಇದೆಯೇ ಅಥವಾ ಮೀರಾಳಿಗೆ ಬಾಯ್ ಫ್ರೆಂಡ್ ಇದ್ದಾರ ಎಂದೆಲ್ಲ ಕೇಳುತ್ತಾನೆ. ವೇದ್ ಯಾವುದನ್ನೂ ಒಪ್ಪುವುದಿಲ್ಲ. ತಾನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುವುದಾಗಿ ಹೇಳುತ್ತಾನೆ. ಮೀರಾಗೆ ಕೊಂಚ ಕೋಪ ಹೀಗಾಗಿ ಅವಳಿಂದ ಮಗುವಿಗೆ ತೊಂದರೆ ಯಾಗಬಾರದು ಎಂದು ಮಗಳು ಟಿಯಾಳನ್ನು ಬೋಡಿಂಗ್ ಸ್ಕೂಲಿನಲ್ಲಿ ಬಿಟ್ಟಿದ್ದೇನೆ ಎನ್ನುತ್ತಾನೆ. ಆದರೆ ತನಗೆ ಅವಳು ಬೋರ್ಡಿಂಗ್ ಸ್ಕೂಲಿನಲ್ಲಿ ಇರುವುದು ಇಷ್ಟವಿಲ್ಲ ಆದರೆ ಮೀರಾಳಿಗೆ ಟಿಯಾ ಮನೆಯಲ್ಲಿ ಇರುವುದು ಇಷ್ಟವಿಲ್ಲ ಇದರ ಬಗ್ಗೆ ಆಗಾಗ ಜಗಳ ನಡೆಯುತ್ತ ಇರುತ್ತದೆ ಆದರೆ ಇದು ನಮ್ಮ ಸಂಬಂಧಕ್ಕೇನೂ ಧಕ್ಕೆ ಆಗಿಲ್ಲ ಎಂದು ಹೇಳುತ್ತಾನೆ.

ಅಮೋಲ್ ಮೀರಾಳನ್ನು ಹುಡುಕಲು ಶುರು ಮಾಡುತ್ತಾನೆ. ವೇದ್ ಮಗಳು ಟಿಯಾಳ ಹಾಸ್ಟೆಲ್ ಗೂ ಒಮ್ಮೆ ಹೋಗಿ ಬರುತ್ತಾನೆ ಆದರೆ ಮೀರಾ ಬಗ್ಗೆ ಏನೂ ಹೇಳುವುದಿಲ್ಲ. ಅಮೋಲ್ ವೇದ್ ಗೆ ಪೋನ್ ಮಾಡಿ ಮುಂಬಯಿಯಲ್ಲಿ ಒಂದು ಶವ ಸಿಕ್ಕಿದೆ ಅದು ನಿನ್ನ ಹೆಂಡತಿಯ ಚಹರೆಯನ್ನು ಹೋಲುತ್ತದೆ ಹೋಗಿ ಐಡೆಂಟಿಫೈ ಮಾಡಿ ಬಾ ಎನ್ನುತ್ತಾನೆ. ವೇದ್ ಹೆದರುತ್ತಲೇ ಮುಂಬೈಗೆ ಹೋಗಿ ಆಸ್ಪತ್ರೆಯಲ್ಲಿ ಆ ಶವವನ್ನು ನೋಡುತ್ತಾನೆ. ಅದು ತನ್ನ ಹೆಂಡತಿಯದಲ್ಲ ಎನ್ನುತ್ತಾನೆ.

ಇದಾದ ನಂತರ ಮಾರನೇ ದಿನ ಅಮೋಲ್ ವೇದ್ ನ ಮನೆಗೆ ಬಂದು ನಿನ್ನ ಹೆಂಡತಿ ಸಿಕ್ಕಿದ್ದಾಳೆ ಎನ್ನುತ್ತಾನೆ. ಮೀರಾಳನ್ನು ಕರೆತರುತ್ತಾನೆ. ಮೀರಾ ವೇದನಿಗೆ 'ಸಾರಿ ವೇದ್ ನಾನು ನಿನಗೆ ಹೇಳದೆಯೇ ಹೊರಗೆ ಹೋಗಿದ್ದೆ ನಂಗೆ ಮೂಡ್ ಕೆಟ್ಟಿತ್ತು 'ಎನ್ನುತ್ತಾಳೆ. ವೇದ್ ಅವಕ್ಕಾಗುತ್ತಾನೆ ಏಕೆಂದರೆ ಪೊಲೀಸ್ ಕರೆತಂದಿರುವ ಮೀರಾ ತನ್ನ ಪತ್ನಿ ಮೀರಾ ಅಲ್ಲ. ನಿಮಗೆ ತಪ್ಪು ಕಲ್ಪನೆ ಆಗಿದೆ ಇವಳು ಯಾರೋ ಗೊತ್ತಿಲ್ಲ ಇವಳು ತನ್ನ ಪತ್ನಿ ಅಲ್ಲವೇ ಅಲ್ಲ ಎನ್ನುತ್ತಾನೆ. ಆದರೆ ವೇದ್ ನ ಮನೆಯಲ್ಲಿ ಇದ್ದ ಮೀರಾಳ ತಂಗಿ ಅದಿತಿ ಅಮೋಲ್ ಇವಳು ತನ್ನ ಅಕ್ಕ ಮೀರಾಳೆ ಎಂದು ಹೋಗಿ ಮೀರಾಳನ್ನು ತಬ್ಬುತ್ತಾಳೆ. ವೇದ್ ನ ಮಗಳು ಟಿಯಾ ಸಹ ಬರುತ್ತಾಳೆ. ಅವಳೂ ಸಹ ಮಮ್ಮೀ ಎನ್ನುತ್ತ ಮೀರಾಳನ್ನು ತಬ್ಬುತ್ತಾಳೆ. ಎಲ್ಲರೂ ಮೀರಾಳನ್ನು ಗುರ್ತಿಸಿದ್ದಾರೆ ಆದರೆ ವೇದ್ ಅವಳೇ ಮೀರಾ ಎಂದು ಒಪ್ಪಲು ತಯಾರಿಲ್ಲ. ಪೊಲೀಸ್ ಅಧಿಕಾರಿಗೆ ತಮ್ಮ ಮದುವೆಯ ಫೋಟೋಸ್ ತೋರಿಸುತ್ತಾನೆ. ಅವೆಲ್ಲವೂ ಈಗ ಬಂದಿರುವ ಮೀರಾಳದ್ದೇ ಆಗಿರುತ್ತದೆ. ಯಾವುದೇ ಫೋಟೋ ತೋರಿಸಿದರೂ ಅದು ಈಗ ಬಂದಿರುವ ಮೀರಾಳೆ ಆಗಿರುತ್ತಾಳೆ ಆದರೆ ವೇದ್ ಮಾತ್ರ ಇವಳೇ ಮೀರಾ ಎಂದು ಒಪ್ಪಲು ತಯಾರಿಲ್ಲ.

ಪೊಲೀಸ್ ಅಧಿಕಾರಿ ಅಮೋಲ್ ತಲೆ ಕೆಟ್ಟುಹೋಗುತ್ತದೆ. ಅವನು ಕರೆತಂದಿರುವ ಮೀರಾಗೆ ವೇದ್ ನ  ಪ್ರತಿಯೊಂದು ವಿಷಯವೂ ಗೊತ್ತು. ಮನೆಯ ಮೂಲೆಮೂಲೆಯೂ ಗೊತ್ತು. ಮಗುವಿನ ಬಗ್ಗೆ ಗೊತ್ತು. ಮೀರಾಳ ಬೆನ್ನಮೇಲೆ ಗಾಯದ ಗುರುತು ಇರುತ್ತದೆ. ಅದೂ ಈ ಮೀರಾಳ ಬೆನ್ನ ಮೇಲೆಯೂ ಇದೆ. ವೇದ್ ನ ಇಷ್ಟ ಅಯಿಷ್ಟಗಳು ಇವಳಿಗೆ ಗೊತ್ತು. ಯಾವ ಕೋನದಲ್ಲಿ ನೀನು ಇವಳನ್ನು ನಿನ್ನ ಹೆಂಡತಿ ಅಲ್ಲ ಎಂದು ಹೇಳುತ್ತೀಯ ಎಂದು ವೇದ್ ನನ್ನು ಕೇಳಿದರೆ ಅವನಲ್ಲಿ ಉತ್ತರವಿಲ್ಲ ಆದರೆ ಇವಳು ನನ್ನ ಹೆಂಡತಿಯಲ್ಲ ಎಂಬ ವರಾತ ಮಾತ್ರ ನಿರಂತರ.

ಪೊಲೀಸ್ ಆಫಿಸರ್ ಒಂದು ಉಪಾಯ ಮಾಡುತ್ತಾನೆ. ಇವರಿಬ್ಬರನ್ನೂ ಠಾಣೆಗೆ ಕರೆಸಿ ಒಂದು ಕ್ವಿಜ್ ಮಾಡಿಸುತ್ತಾನೆ. ಆ ಪ್ರಶ್ನೆಗಳಿಗೆ ಇಬ್ಬರೂ ಒಂದೇ ಬಗೆಯ ಉತ್ತರ ಹೇಳಬೇಕು. ಅದರಲ್ಲೂ ಮೀರಾ ಗೆಲ್ಲುತ್ತಾಳೆ ಆದರೆ ವೇದ್ ನ ಬಡಬಡಿಕೆ ನಿಲ್ಲುವುದಿಲ್ಲ.

ಮೀರಾ ವೇದನಿಗೆ ಯಾವ ಅರೋಗ್ಯ ಸಮಸ್ಯೆ ಇದೆ, ಏನು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾನೆ ಅವನ ಡಾಕ್ಟರ್ ಯಾರು ಎಲ್ಲವೂ ಹೇಳಿದರೂ ಅವಳೇ ಮೀರಾ ಎಂದು ವೇದ್ ಒಪ್ಪುವುದೇ ಇಲ್ಲ. ತನಗೇನೂ ಕಾಯಿಲೆ ಇಲ್ಲ, ಈ ಮೀರಾ ಪಾತ್ರಧಾರಿ ಏನೇನೋ ಕಾಯಿಲೆಗಳನ್ನು ಸೃಷ್ಟಿಸಿ ನಿರೂಪಿಸಿ ನನ್ನ ಹುಚ್ಚನನ್ನಾಗಿ ಮಾಡಿ ಆಸ್ತಿ ಹೊಡೆಯಬೇಕೆಂದು ಬಂದಿದ್ದಾಳೆ ಎನ್ನುತ್ತಾನೆ. ತಾನು ಈ ನಕಲಿ ಮೀರಾ ಜೊತೆ ವಾಸ ಮಾಡಲಾರೆ ಸಂಸಾರ ಮಾಡಲಾರೆ ಎನ್ನುತ್ತಾನೆ.

ವೇದ್ ಪೊಲೀಸಿನವನಲ್ಲಿ ನಂಬಿಕೆ ಕಳೆದುಕೊಂಡು ಈಗ ಬಂದಿರುವ ಮೀರಾ ಯಾರೆಂದು ತಿಳಿಯಲು ಖಾಸಗಿ ಪತ್ತೆದಾರನೊಬ್ಬನನ್ನು ನೇಮಿಸುತ್ತಾನೆ. ಆ ಖಾಸಗಿ ಪತ್ತೆದಾರ ಮೀರಾ ಹಿಂದೆ ಹಿದೆಯೇ ಹೋಗಿ ಏನೇನೋ ವಿಷಯಗಳನ್ನು ಕಲೆ ಹಾಕಿ ವೇದನಿಗೆ ಕಳಿಸುತ್ತಿರುತ್ತಾನೆ. ಆದೆ ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ಒಮ್ಮೆ ಈ ಖಾಸಗಿ ಪತ್ತೆದಾರ ವೇದನಿಗೆ ಮೀರಾಳದೆಂದು ಹೇಳಿ ಒಂದು ಪೆನ್ ಡ್ರೈವ್ ತಂದುಕೊಡುತ್ತಾನೆ. ಅದನ್ನು ವೇದ್ ಪೊಲೀಸ್ ಠಾಣೆಗೆ ತರುತ್ತಾನೆ. ಇದರಲ್ಲಿ ಏನಾದರೂ ಸಾಕ್ಷಿ ಸಿಗಬಹುದು ಇದನ್ನು ಓಪನ್ ಮಾಡಿ ನೋಡಿ ಎಂದು ಠಾಣೆಯಲ್ಲಿರುವ ಸೈಬರ್ ವಿಭಾಗಕ್ಕೆ ಕೊಡುತ್ತಾನೆ. ಅಲ್ಲಿಗೆ ಪೆನ್ ಡ್ರೈವ್ ಕಳೆದುಹೋಗಿದೆ ಎಂದು ಮೀರಾಳು ಬಂದಿರುತ್ತಾಳೆ. ಮೀರಾ ಮತ್ತು ವೇದ್ ಇಬ್ಬರೂ ಠಾಣೆಯಲ್ಲಿ ಜಗಳ ಆಡುತ್ತಾರೆ.

ಆ ಸೈಬರ್ ವಿಭಾಗದವನು ಆ ಪೆನ್ ಡ್ರೈವ್ ಕರಪ್ಟ್ ಆಗಿದೆ ಅದರಲ್ಲಿ ಇರುವ ಎಲ್ಲ ಮಾಹಿತಿಗಳೂ ಡಿಲೀಟ್ ಆಗೋಯ್ತು ಎನ್ನುತ್ತಾನೆ. ವೇದ್ ನ ತಲೆ ಕೆಡುತ್ತದೆ. ಅದೊಂದೆ ಅವಳನ್ನು ನಕಲಿ ಎಂದು ಸಾಬೀತು ಪಡಿಸಲು ಸಾಕ್ಷಿ ಇದ್ದದ್ದು ಅದನ್ನೂ ಹಾಳು ಮಾಡಿದಿರಿ ನೀವು ಎಂದು ಜಗಳ ಮಾಡುತ್ತಾನೆ. ಅಮೋಲ್ ವೇದ್ ನನ್ನು ಸಮಾಧಾನಿಸುತ್ತಾನೆ. ಈ ಪೆನ್ ಡ್ರೈವ್ ಪ್ರಕರಣವಾದ ನಂತರ ಆ ಖಾಸಗಿ ಪತ್ತೆದಾರ ಒಮ್ಮೆ ಈ ಮೀರಾ ನಕಲಿ ಇವಳ ಬಗ್ಗೆ ಬಲವಾದ ಸಾಕ್ಷಿ ದೊರಕಿದೆ ಅದನ್ನು ತಂದು ಕೊಡುತ್ತೇನೆ ಎಂದು ಹೇಳಿದವನು ಮಾಯವಾಗಿ ಬಿಡುತ್ತಾನೆ. ಅವನ ಪತ್ತೆಯೇ ಸಿಗುವುದಿಲ್ಲ.

ಒಂದು ದಿನ ಒಬ್ಬ ಡಾಕ್ಟರ್ ವೇದ್ ಮನೆಗ ಬರುತ್ತಾರೆ. ಆಕೆ ವೇದನಿಗೆ 'ನಾನು ನಿನ್ನನ್ನು ತಪಾಸಿಸುತ್ತಿರುವ ವೈದ್ಯೆ  ನಿನಗೆ ರೋಗ ಉಲ್ಬಣಗೊಂಡಿದೆ ಒಮ್ಮ ಕ್ಲಿನಿಕ್ ಗೆ ಬಂದು ಚೆಕ್ ಮಾಡಿಸಿಕೋ' ಎಂದು ಹೇಳುತ್ತಾಳೆ, ವೇದ್ ಆ ವೈದ್ಯೆಗೆ ಮೀರಾಳ ಎದುರಿನಲ್ಲೇ ಬೈದು ಕಳಿಸಿಬಿಡುತ್ತಾನೆ. ಮೀರಾ ವೇದನ ಇಷ್ಟದ ತಿಂಡಿ ಅಡುಗೆ ಎಲ್ಲವನ್ನೂ ಮಾಡುತ್ತಾಳೆ, ಕೊನೆ ಅವನ ರುಚಿಯ ಪ್ರಕಾರವೇ ಕಾಫಿಯನ್ನೂ ಮಾಡುತ್ತಾಳೆ ಆದರೂ ವೇದ್ ಅವಳು ತನ್ನ ಹೆಂಡತಿ ಎಂದು ಒಪ್ಪಲು ತಯಾರಿಲ್ಲ. ಇವಳು ನಕಲಿ ಎಂದೇ ಹೇಳುತ್ತಾನೆ. ವೇದ್ ದೋಷಾರೋಪಣೆಯಿಂದ ಬೇಸತ್ತ ಅಮೋಲ್ ವೇದನಿಗೆ ಹೇಳುತ್ತಾನೆ, "ಒಮ್ಮೆ ವೈದ್ಯರ ಬಳಿ ಪೂರ್ಣ ಚೆಕ್ ಮಾಡಿಸಿಕೋ ಆಗ ನನಗೂ ನಿನ್ನ ಮೇಲೆ ನಂಬಿಕೆ ಬರುತ್ತದೆ" ವಿಧಿಯಿಲ್ಲದೆ ವೇದ್ ಆಸ್ಪತ್ರೆಗೆ ಹೋಗಿ ಎಂಆರ್ ಐ ಮಾಡಿಸುತ್ತಾನೆ. ರಿಪೋರ‍್ಟ್ ನೋಡಿದ ಡಾಕ್ಟರ್ ನಿನ್ನ ಮೆದುಳಲ್ಲಿ ವಿಪರೀತ ತೊಂದರೆಗಳಿವೆ ಹೊರಗೆ ಇದ್ದರೆ ನಿನ್ನಿಂದ ಹಾನಿಯಾಗುವುದೇ ಹೆಚ್ಚು ನೀನು ಈ ಕೂಡಲೇ ಅಡ್ಮಿಟ್ ಆಗಬೇಕು ಎನ್ನುತ್ತಾರೆ. ವೇದನಿಗೆ ಭಯವಾಗುತ್ತದೆ. ಮೀರಾನೂ ಇಲ್ಲ ತಾನೂ ಆಸ್ಪತ್ರೆ ಸೇರಿದರೆ ತನ್ನಮಗಳ ಗತಿಯೇನು ಎಂದು ಹಲುಬುತ್ತಾನೆ.

ಇದನ್ನೂ ಓದಿ:  Kishkindha Kaandam: ಕಾಡಿನ ಒಂಟಿ ಮನೆಯಲ್ಲಿನ ರಹಸ್ಯಗಳ ರೋಚಕ ತಿರುವಿನ ಕಣ್ಣೀರು ತರಿಸೋ ಭಾವನಾತ್ಮಕ ಕಥೆ

ಮನೆಗೆ ಬಂದರೆ ಮೀರಾ ನೀನು ನನಗೆ ತುಂಬಾ ಕಿರುಕುಳ ಕೊಡುತ್ತಿದ್ದೀಯ ನಾವಿಬ್ಬರೂ ವಿಚ್ಛೇದನ ತೆಗೆದುಕೊಳ್ಳೊಣ ಎನ್ನುತ್ತಾಳೆ. ತನ್ನ ಲಾಯರ್ ನನ್ನು ಕರೆದು ಪೇಪರ್ ರೆಡಿ ಮಾಡಲು ಹೇಳುತ್ತಾಳೆ. ಜೀವನಾಂಶ ಬೇಡ ಆದರೆ ಮಗುವನ್ನು ತನ್ನ ಸುಪರ್ದಿಗೆ ಕೊಡಬೇಕು ಎನ್ನುತ್ತಾಳೆ. ವೇದನಿಗೆ ದಿಕ್ಕೇ ತೋಚದ ಹಾಗೆ ಆಗುತ್ತದೆ. ಅವನು ಪೊಲೀಸ್ ಠಾಣೆಗೆ ಬಂದು ಮೀರಾಳ ಮೇಲೆ ದೂರು ಹೇಳುತ್ತಾನೆ. ಮೀರಾಳೂ ವೇದನ ಹಿಂದೆಯೇ ಠಾಣೆಗೆ ಬಂದು ತಾನೂ ದೂರು ಹೇಳುತ್ತಾಳೆ. ಈ ವಾದವಿವಾದ ಗಳ ಚಕಮಕಿಯಲ್ಲಿ ವೇದ್ ಒಮ್ಮೆ 'ಮೀರಾ ಇವಳಾಗಲು ಸಾಧ್ಯವೇ ಇಲ್ಲ. ಇವಳು ನಕಲಿ ನಿಜವಾದ ಮೀರಾ ಅಸಲಿಗೆ ಇಲ್ಲವೇ ಇಲ್ಲ' ಎಂದು ಬಿಡುತ್ತಾನೆ. ಹಾಗಾದರೆ ಅಸಲಿ ಮೀರಾ ಎಲ್ಲದ್ದಾಳೆ ಹೇಳು? ಎಂದು ಪೊಲೀಸ್ ಅಧಿಕಾರಿ ಅಮೋಲ್ ವೇದನಿಗೆ ಪಟ್ಟು ಹಿಡಿಯುತ್ತಾನೆ.

ಅಸಲಿ ಮೀರಾ ಯಾರು? ಈ ನಕಲಿ ಮೀರಾ ಯಾರು? ಅಸಲಿ ಮೀರಾ ಏನಾಗಿದ್ದಾಳೆ? ಇಲ್ಲಿರುವ ಮೀರಾ ನಕಲಿಯಾದರೆ ಟಿಯಾ ಮೀರಾಳನ್ನು ಗುರ್ತಿಸಿ ತನ್ನಮ್ಮ ಎಂದು ಹೇಳಿದ್ದು ಹೇಗೆ? ಮೀರಾಳ ತಂಗಿ ಅದಿತಿ ಸಹ ತನ್ನಕ್ಕ ಇವಳೇ ಎಂದು ಹೇಳಿದ್ದಳಲ್ಲ! ಅದಿತಿ ಟಿಯಾ ಸುಳ್ಳು ಹೇಳಿದರೆ? ಆ ಪೆನ್ ಡ್ರೈವ್ ನಲ್ಲಿ ಇದ್ದದ್ದು ಏನು? ಖಾಸಗಿ ಪತ್ತೆದಾರ ಎಲ್ಲಿಹೋದ? ವೇದ್ ಗೆ ಮಾನಸಿಕ ಕಾಯಿಲೆ ಇರುವುದು ನಿಜವೇ? ಅಮೋಲ್ ಮೀರಾಳನ್ನು ಹುಡುಕುವ ನಾಟಕ ಆಡುತ್ತಿದ್ದಾನೆಯೇ ಈ ಎಲ್ಲ ಸಂದೇಹಗಳು ನಿವಾರಣೆ ಆಗಬೇಕಾದರೆ ನೀವು ಖೋಜ್ ವೆಬ್ ಸೀರೀಸ್ ನೋಡಿ. ಝೀ 5 ರಲ್ಲಿ ಸ್ಕ್ರೀಂ ಆಗುತ್ತಿದೆ. ಪ್ರಭಲ್ ಬಾರುಹ್ ನಿರ್ಮಿಸಿ ನಿರ್ದೇಶೀಸಿರುವ ಈ ವೆಬ್ ಸೀರೀಸ್ ಏಳು ಎಪಿಸೋಡುಗಳನ್ನು ಹೊಂದಿದೆ. ಎಲ್ಲಿಯೂ ಕಿಂಚತ್ ಸುಳುಹು ಬಿಟ್ಟುಕೊಡದ ಈ ಸೀರೀಸ್ ಕುತೂಹಲಭರಿತವಾಗಿ ನೋಡಿಸಿಕೊಂಡು ಹೋಗುತ್ತದೆ. ಯಾವ ಅಸಭ್ಯ ದೃಶ್ಯಗಳಿಲ್ಲದೆ ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ಸೀರೀಸ್. ಸಸ್ಪೆನ್ಸ್, ಥ್ರಿಲ್ ಎಲ್ಲವನ್ನೂ ಧಾರಾಳವಾಗಿಯೇ ಅನುಭವಿಸಬಹುದಾದ ಸೀರೀಸ್ ಇದು. ವೇದ್ ಆಗಿ ಶರೀಬ್ ಹಶ್ಮಿ ಪ್ರೌಢ ಅಭಿನಯ ನೀಡಿದ್ದಾರೆ. ನಕಲಿ ಮೀರಾ ಆಗಿ ಅನುಪ್ರಿಯಾ ಗೋಯಂಕ ಚೆಂದವಾಗಿ ಅಭಿನಯಿಸಿದ್ದಾರೆ. ಪೊಲೀಸ್ ಆಫೀಸರ್ ಆಗಿ ಅಮೀರ್ ದಲವಿ ಸಂಯಮ ದಿಂದ ನಟಿಸಿದ್ದಾರೆ. ಪೋಷಕ ಪಾತ್ರಗಳೆಲ್ಲವೂ ಹಿತಮಿತವಾಗಿ ಚೆನ್ನಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:  ಕೆಟ್ಟ ಸಂದೇಶ ಸಾರುವ ಬಹಳ ಒಳ್ಳೇ ಮೂವಿ ಲಕ್ಕಿ ಭಾಸ್ಕರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Single Salma Movie Review: ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದೆ 'ಸಿಂಗಲ್ ಸಲ್ಮಾ'.. ಓಪನ್ ರಿಲೇಷನ್ ಶಿಪ್ ಸರಿಯೇ? ಈ ಸ್ಟೋರಿ ನೋಡಿ..
ರೂಪಾ ಅಯ್ಯರ್ 'ಆಜಾದ್ ಭಾರತ್' ಹೇಗಿದೆ? ಯಾಕೆ ಈ ಸಿನಿಮಾ ನೋಡಬೇಕು? ಇಲ್ಲಿದೆ ಮುಖ್ಯ ಕಾರಣ..