Martin Film Review: ಮಾವನ ದೇಶ ಭಕ್ತಿ, ಅಳಿಯನ ಘರ್ಜನೆ: ಮೆಡಿಸನ್ ಮಾಫಿಯಾ, ಅಂತಾರಾಷ್ಟ್ರೀಯ ಕ್ರೈಮ್!

By Kannadaprabha News  |  First Published Oct 13, 2024, 9:41 AM IST

ಭಾರತೀಯ ವ್ಯಕ್ತಿಯೊಬ್ಬ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದಾನೆ. ಗಾಯಗೊಂಡಿರುವ ಆತನಿಗೆ ಅಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಈ ಚಿಕಿತ್ಸೆಯಿಂದ ತಾನು ಯಾರು ಎಂಬುದನ್ನು ಆತ ಮರೆತಿದ್ದಾನೆ. 


• ಆರ್. ಕೇಶವಮೂರ್ತಿ

ಭಾರತದ ಸಿನಿಮಾ ಪರದೆಯನ್ನು ಸಾಕುವುದ ರಲ್ಲಿ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ದ್ವೇಷ ಮತ್ತು ಪ್ರೇಮದ ಕತೆಗಳ ಪಾಲು ದೊಡ್ಡದು. ಆದರೆ, ಕಳೆದ ಹತ್ತು-ಹದಿನೈದು ವರ್ಷಗಳಿಂದ ಈ ರೀತಿಯ ಕತೆಗಳು ತೆರೆಮರೆ ಆಗಿರುವ ಹೊತ್ತಿನಲ್ಲಿ ಮತ್ತೆ 'ಮಾರ್ಟಿನ್' ಸಿನಿಮಾ ಪಾಕಿಸ್ತಾನ, ಇಂಡಿಯಾ, ಸೈನ್ಯ, ದೇಶ ಪ್ರೇಮದ ವಿಚಾರಗಳನ್ನು ಹೊತ್ತು ಬಂದಿದೆ. ಹೇಳಿ ಕೇಳಿ ಈ ಚಿತ್ರಕ್ಕೆ ಕತೆ ಬರೆದಿರುವುದು ಅರ್ಜುನ್ ಸರ್ಜಾ. ಅವರಿಗೆ ದೇಶದ ಗಡಿಗಳ ಮೇಲೆ ವಿಪರೀತ ಅಭಿಮಾನ. ತಮ್ಮ ಪುತ್ರಿ ಐಶ್ವರ್ಯ ಸರ್ಜಾ ಅವರನ್ನು ಕನ್ನಡಕ್ಕೆ ಪರಿಚಯಿಸಿದ 'ಪ್ರೇಮ ಬರಹ ಚಿತ್ರವೂ ಹೀಗೆ ಸೈನ್ಯ, ಗಡಿ, ಯುದ್ಧದ ಹಿನ್ನೆಲೆಯಲ್ಲೇ ತೆರೆದುಕೊಳ್ಳುತ್ತದೆ. 

Tap to resize

Latest Videos

undefined

'ಮಾರ್ಟಿನ್ 'ನಲ್ಲೂ ಆ ನೆರಳು ಮುಂದುವರಿದಿದೆ. ಹಾಗಾದರೆ ಧ್ರುವ ಸರ್ಜಾರ 'ಮಾರ್ಟಿನ್' ಹೇಗಿದೆ? ಅದ್ದೂರಿ ಮೇಕಿಂಗ್, ಮೈ ಜುಮ್ ಎನಿಸುವ ಸಾಹಸಗಳು, ಆಗಾಗ ಎಚ್ಚರಿಸುವ ಹಿನ್ನೆಲೆ ಸಂಗೀತ, ತೆರೆ ತುಂಬಾ ಪಾತ್ರಧಾರಿಗಳು, ಮೆಡಿಸನ್ ಮಾಫಿಯಾ, ಅಂತಾರಾಷ್ಟ್ರೀಯ ಕ್ರೈಮ್... ಹೀಗೆ ಎಲ್ಲವನ್ನೂ ಈ ಸಿನಿಮಾ ಪ್ರೇಕ್ಷಕರ ಮುಂದೆ ಗುಡ್ಡೆ ಹಾಕುತ್ತದೆ. ಭಾರತೀಯ ವ್ಯಕ್ತಿಯೊಬ್ಬ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದಾನೆ. ಗಾಯಗೊಂಡಿರುವ ಆತನಿಗೆ ಅಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಈ ಚಿಕಿತ್ಸೆಯಿಂದ ತಾನು ಯಾರು ಎಂಬುದನ್ನು ಆತ ಮರೆತಿದ್ದಾನೆ. 

ತಾನೇ ಮರೆತು ಹೋಗಿರುವ ತನ್ನ ಗುರುತನ್ನು ತಾನೇ ಹುಡುಕುವ ಸವಾಲಿಗೆ ನಾಯಕನ ಪಾತ್ರ ತೆರೆದುಕೊಳ್ಳುತ್ತದೆ. ತಾನು ಯಾರೆಂಬ ನಾಯಕನ ಪ್ರಶ್ನೆಗೆ 'ಅರ್ಜುನ್' ಎನ್ನುವ ಉತ್ತರ ಸಿಗುತ್ತದೆ. ಹಾಗಾದರೆ ಮಾರ್ಟಿನ್ ಯಾರು, ಆತನಿಗೂ ಅರ್ಜುನ್‌ಗೂ ಇರೋ ನಂಟೇನು ಎಂಬ ಕುತೂಹಲದಲ್ಲಿ ಉಳಿದ ಸಿನಿಮಾ ಸಾಗುತ್ತದೆ. ಗ್ಯಾಂಗ್‌ಸ್ಟರ್‌ ವರ್ಸಸ್ ಕಸ್ಟಮ್ ಅಧಿಕಾರಿ ನಡುವಿನ ಕತೆಯಲ್ಲಿ ಡೈನೋಸಾರ್, ಘೇಂಡಾಮೃಗ, ಕಿಂಗ್ ಕಾಂಗ್‌ನಂತಹ ದೈತ್ಯ ಪ್ರಾಣಿಗಳು ಇದ್ದಕ್ಕಿದ್ದಂತೆ ನಾಡಿಗೆ ಬಂದರೆ ಹೇಗಿರುತ್ತದೆ ಎಂಬುದಕ್ಕೆ ಧ್ರುವ ಸರ್ಜಾರ ಪಾತ್ರವೂ ಸೇಮ್ ಟು ಸೇಮ್ ಅದೇ ರೀತಿ. 

ಚಿತ್ರ: ಮಾರ್ಟಿನ್
ನಿರ್ದೇಶನ: ಎ.ಪಿ.ಅರ್ಜುನ್
ತಾರಾಗಣ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಚಿಕ್ಕಣ್ಣ ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ನಿತಿನ್ ಧೀ‌ರ್

ತೆರೆ ತುಂಬಾ ಪಾತ್ರಗಳಿದ್ದರೂ ಧ್ರುವ ಸರ್ಜಾ ಅವರ ಹೊರತಾಗಿ ಬೇರೆಯವರು ನೆನಪಿನಲ್ಲಿ ಉಳಿಯಲ್ಲ ಮತ್ತು ಅವರಿಗೆ ಸ್ಟೀನ್ ಸ್ಪೇಸ್ ಕೂಡ ಇಲ್ಲ. ಅರ್ಜುನ್‌ ಸರ್ಜಾ ಅವರ ಹಳೆಯ ದೇಶ ಭಕ್ತಿ ಗೀತೆಯನ್ನು ನಿರ್ದೇಶಕ ಎ ಪಿ ಅರ್ಜುನ್ ಸಾಧ್ಯವಾದ ಮಟ್ಟಿಗೆ ತೆರೆ ಮೇಲೆ ತರುವ ಸಾಹಸ ಮಾಡಿಸಿದ್ದಾರೆ. ನಿರ್ದೇಶಕರ ಈ ಸಾಹಸಕ್ಕೆ ಬೆನ್ನೆಲು ಬಾಗಿರುವುದು ನಿರ್ಮಾಪಕ ಉದಯ್ ಕೆ ಮೆಹ್ತಾ ಅವರ ಅದ್ದೂರಿತನ, ಸತ್ಯ ಹೆಗಡೆ ಕ್ಯಾಮೆರಾ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ, ರವಿ ಬನ್ನೂರು ಹಿನ್ನೆಲೆ ಸಂಗೀತ ಮತ್ತು ಒಂದು ಮೆಲೋಡಿ ಹಾಡು. ಈ ಚಿತ್ರವನ್ನು ಮಾವನ (ಅರ್ಜುನ್ ಸರ್ಜಾ) ದೇಶ ಭಕ್ತಿ ಗೀತೆಯಲ್ಲಿ ಅಳಿಯನ (ಧ್ರುವ ಸರ್ಜಾ) ಘರ್ಜನೆ ಎನ್ನಬಹುದು.

click me!