ಜಮೀನುದಾರರ ದೌರ್ಜನ್ಯ, ಪಾಳೆಗಾರರ ಅಟ್ಟಹಾಸ; ರಕ್ತದೋಕುಳಿ ಹರಿಸುವ ಮಿರ್ಜಾಪುರ್

By Suvarna News  |  First Published Jul 16, 2024, 5:38 PM IST

ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ನಾಡ ಪಿಸ್ತೂಲು ಸೇರಿ ವಿಧ ವಿಧ ದಂಧೆ ಮಾಡುವ ಗ್ಯಾಂಗ್‌ಸ್ಟರ್ ಲೈಫ್‌ಸ್ಟೈಲ್ ಕುರಿತಾದ ಮಿರ್ಜಾಪುರ್ ವೆಬ್ ಸಿರೀಸ್ ಅಮೇಜಾನ್ ಪ್ರೈಮ್‌ವಲ್ಲಿ ಸ್ಟ್ರೀಮ್ ಆಗುತ್ತಿದ್ದು, ಮೈ ಝುಂ ಎನಿಸುವಂತಿದೆ.


- ವೀಣಾ ರಾವ್, ಕನ್ನಡಪ್ರಭ

ಎಕ್ಸೆಲ್ ಮೀಡಿಯಾದ ವೆಬ್ ಸೀರೀಸ್ ಎಂದರೆ ರೋಚಕ ಕತೆ ರೋಮಾಂಚನದ ಪ್ರಸ್ತುತಿ, ಮೈಮೇಲಿನ ಕೂದಲು ನಿಮಿರಿ ನಿಲ್ಲುವ ಭೀಭತ್ಸ ಕಥಾನಕ. ಇಲ್ಲಿ ಯಾವುದೇ ದೆವ್ವಭೂತಗಳಿರೋಲ್ಲ. ಮಾಟ ಮಂತ್ರ ಇಲ್ಲ. ಆದರೆ ಇಲ್ಲಿನ ಪಾತ್ರಗಳು ಹಾಗೂ ಕಥೆ ವೀಕ್ಷಕರಿಗೆ ರೌದ್ರತೆ ಎಂದರೆ ಏನು ಎಂಬುದನ್ನು ತಿಳಿಸಿಕೊಡುತ್ತದೆ.

Tap to resize

Latest Videos

undefined

ಅಮೇಜಾನ್ ಪ್ರೈಮ್ (Amazon Prime)ನಲ್ಲಿ ಓಡುತ್ತಿರುವ ಮಿರ್ಜಾಪುರ್ ಈಗ ಮೂರನೇ ಸರಣಿ ಬಂದಿದೆ. ಎಲ್ಲ ಸರಣಿಗಳಲ್ಲೂ ಹತ್ತು ಎಪಿಸೋಡುಗಳು.  ಪಂಕಜ್ ತ್ರಿಪಾಟಿಯ ದೈತ್ಯ ಅಭಿನಯದ ಪರಿಚಯವಾಗಬೇಕಾದರೆ ಮಿರ್ಜಾಪುರ್ ನೋಡಬೇಕು. ಮಧ್ಯಮ ನಿಲುವಿನ ಗೌರವರ್ಣದ ಚೂಪು ಮೂಗು ಚುರುಕು ಕಂಗಳ ತ್ರಿಪಾಟಿಯ ನಾಲಿಗೆ ಮಾತ್ರ ಅಷ್ಟೇ ಹರಿತ. ಇಲ್ಲಿ ಅಖಂಡಾನಂದ ತ್ರಿಪಾಟಿ ಅಥವಾ ಕಾಲೀನ್ ಭಯ್ಯಾ ಎಂಬ ಪಾತ್ರ ನಿರ್ವಹಿಸಿರುವ ಪಂಕಜ್, ಮಿರ್ಜಾಪುರ್‌ನಲ್ಲಿ ಒಬ್ಬ ಡಾನ್. ಒಬ್ಬ ಜಮೀನುದಾರ, ಪಾಳೆಗಾರ. ದರ್ಪ ಗಡಸು ಮಾತು ಖಡಕ್ ನಡವಳಿಕೆಗೆ ಹೆಸರಾದ ಕಾಲೀನ್ ಭಯ್ಯಾನ ಮೆದುಳು ಮಾತ್ರ ಚಾಣಕ್ಯನಂತೆ. ಕೊಲೆ ಅವನು ಮಾಡುವುದಿಲ್ಲ ಕೈ ಹೊಲಸು ಮಾಡಿಕೊಳ್ಳುವುದಿಲ್ಲ. ಆದರೆ ಬೇರೆಯವರ ಕೈಯಲ್ಲಿ ಮಾಡಿಸುತ್ತಾನೆ. ತಲೆ ಅವನದು ಕೃತ್ಯ ಬೇರೆಯವರದು.

60-70ರ ದಶಕದಲ್ಲಿ ಇದ್ದಿರಬಹುದಾದ ಈ ಪಾಳೆಗಾರಿಕೆ ಅಥವಾ ಜಮೀನುದಾರಿ ಸಂಸ್ಕೃತಿಯನ್ನು ಈಗಿನ ಕಾಲದ ಕತೆಗೆ ಅಳವಡಿಸಿ ಕೊಂಚ ಆಧುನಿಕ ಶೈಲಿಯಲ್ಲಿ ಈ ಮಿರ್ಜಾಪುರ್ ಸೀರೀಸ್ ಚಿತ್ರೀಕರಿಸಿದ್ದಾರೆ. ಪಂಕಜ್ ತ್ರಿಪಾಟಿ, ಕುಲಭೂಷಣ್ ಖರಬಂಧಾ, ದಿವೇಂದು, ಆಲಿ ಫಜಲ್, ರಾಜೇಶ್ ಟಿಲಾಂಗ್, ಶೀಬಾಚಡ್ಡಾ, ರಸಿಕಾ ದುಗ್ಗಲ್, ಶ್ರೇಯಾ ಫಿಲಗಾವ್‌ಕರ್, ಶ್ವೇತಾ ತ್ರಿಪಾಟಿ, ಅಮಿತ್ ಸಿಯಲ್, ವಿಜಯ್ ವರ್ಮಾ, ವಿಕ್ರಾಂತ್ ಮಸ್ಸೈ, ಇಷಾ ತಲ್ವಾರ್, ಪ್ರಮೋದ್ ಪಾಠಕ್ ತಾರಾಗಣದಲ್ಲಿದ್ದಾರೆ.

Gullak Web Series Review: ನಮ್ಮ ಮಧ್ಯಮ ವರ್ಗದ ಬಾಲ್ಯ ನೆನಪಿಸೋ ಕಥೆ ಗುಲಕ್!

ಇದು ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ನಡೆದಿರಬಹುದು ಎನ್ನಲಾದ ಕಥೆಗಳು. ಒಂದೊಂದು ಸಂಸ್ಥಾನಕ್ಕೆ ಒಬ್ಬೊಬ್ಬ ಪಾಳೆಗಾರನಿರುತ್ತಾನೆ. ಅರ್ಥಾತ್ ಬಾಹುಬಲಿ. ಆ ಪ್ರಾಂತ್ಯಕ್ಕೆ ಅವನೇ ಸರ್ವಾಧಿಕಾರಿ. ಅವನು ನಡೆದದ್ದೇ ದಾರಿ ಅವನು ಹೇಳಿದ್ದೇ ಕಾನೂನು. ಅವರನ್ನು ಯಾವ ಸರಕಾರವೂ ಏನೂ ಮಾಡುವುದಿಲ್ಲ. ಯಾವ ಪೊಲೀಸಿನವರೂ ಇವರ ತಂಟೆಗೆ ಬರುವುದಿಲ್ಲ. ಎಲ್ಲವೂ ಒಳಗೊಳಗೆ ಅಡ್ಜಸ್ಟ್‌ಮೆಂಟ್ ಈ ಸಂಸ್ಥಾನಗಳ ಪಾಳೇಗಾರರ ನಡುವೆ ಸ್ನೇಹ ವೈಮನಸ್ಸು ಪೈಪೋಟಿ ಎಲ್ಲವೂ ಇರುತ್ತದೆ. ಒಬ್ಬರನ್ನೊಬ್ಬರು ಹೇಗೆ ಬಿಟ್ಟು ಕೊಡುವುದಿಲ್ಲವೋ ಹಾಗೆಯೇ ಒಬ್ಬರನ್ನೊಬ್ಬರು ಕೊಲ್ಲಲೂ ಹೇಸುವುದಿಲ್ಲ.  ಇವರಿಗೆ ಎದುರು ಬಿದ್ದವರನ್ನು ಇನ್ನಿಲ್ಲವಾಗಿಸುವುದು ಇವರಿಗೆ ಚಿಟಿಕೆ ಹೊಡೆದಷ್ಟೇ ಸುಲಭ. ರಕ್ತದೋಕುಳಿ ಎಂದರೆ ಇವರಿಗೆ ಆರತಿಯ ಕೆನ್ನೀರಿನಷ್ಟೇ ಸಹಜ.

ಇವರೆಲ್ಲಾ ಮಾಡುವುದು ಉತ್ತರಭಾರತದ ಪ್ರಸಿದ್ದ ಉದ್ಯಮವಾದ ರತ್ನಗಂಬಳಿ ವ್ಯಾಪಾರ. ಇದು ತೋರಿಕೆಗೆ ಮಾತ್ರ. ರತ್ನಗಂಬಳಿಯ ಒಳಗೆ ಪಾಕೀಟುಗಳಲ್ಲಿ ಅಫೀಮು ಗಾಂಜಾ ರವಾನೆಯಾಗುತ್ತಿರುತ್ತದೆ. ಜೊತೆಗೆ ನಾಟಿ ಪಿಸ್ತೂಲಿನ ದಂಧೆ ಕೂಡ ನಡೆಯುತ್ತಿರುತ್ತದೆ. ಆ ನಾಟಿ ಪಿಸ್ತೂಲಿಗೆ ಯಾವುದೇ ಟ್ರೇಡ್‌ಮಾರ್ಕ್ ಅಥವಾ ಗ್ಯಾರೆಂಟಿ ಅಥವಾ ಯಾವುದೇ ಕಂಪೆನಿಯ ಹೆಸರೂ ಇರುವುದಿಲ್ಲ. ಅದನ್ನು ಉಪಯೋಗಿಸುವಾಗ ಗುಂಡು ಹೊಡೆದವನ ಕೈ ಬೆರಳೇ ಕತ್ತರಿಸಿದರೂ ಮಾರಿದವನ ಹತ್ತಿರ ದೂರುವ ಹಾಗಿಲ್ಲ. ಇವರ ವ್ಯಾಪಾರ ವ್ಯವಹಾರ ಬಡಾಯಿಸಲು ಗಟ್ಟಿಮುಟ್ಟಾದ ಕಾಲೇಜು ಹುಡುಗರನ್ನು ಹಣದ ಅಮಿಷ ತೋರಿಸಿ ಕರೆತಂದು ವ್ಯಾಪಾರ ಮಾಡಿಸುತ್ತಾರೆ. ಕಾಲೇಜು ಹುಡುಗರ ಕೈಯಲ್ಲಿ ಅಗತ್ಯಕ್ಕಿಂತ ಹೆಚ್ಚು ಝಣಝಣ ಹಣ ಹರಿದಾಡುತ್ತದೆ. ಮೈಯಲ್ಲಿ ಹರೆಯ, ಕೈಯಲ್ಲಿ ಹಣ ದಾರಿ ತಪ್ಪಲು ಇನ್ನೇನು ಬೇಕು?

ಕಾಲೀನ್ ಭಯ್ಯಾ ಕೂಡಾ ಇಂತಹುದೇ ಒಬ್ಬ ಡಾನ್ ಅಂದರೆ ಬಾಹುಬಲಿ. ಅವನ ಪ್ರಾಂತ್ಯ ಮಿರ್ಜಾಪುರ. ಇವನ ಬಂಟ ಮತ್ತು ಡ್ರೈವರ್ ಮಕ್ಬೂಲ್. ಮಕ್ಬೂಲ್ ಆರಡಿಯ ಆಜಾನುಬಾಹು ಹಾಗೂ ನರರೂಪದ ರಾಕ್ಷಸ. ಇವನ ನಿಷ್ಠೆಯೆಲ್ಲ ಕಾಲೀನ್ ಭಯ್ಯಾನೆಡೆಗೆ. ಕಾಲೀನ್ ಯಾರನ್ನು ಮುಗಿಸು ಎಂದರೆ ಅವರನ್ನು ಮುಗಿಸುತ್ತಾನೆ ದೂಸರಾ ಮಾತಾಡುವುದಿಲ್ಲ. ತನ್ನವರೇ ಆದರೂ ಕಾಲೀನ್ ಬೈಯ್ಯಾ ಹೇಳಿದರೆ ಮುಗಿಯಿತು. ಅವರ ಕತೆ ಖಲಾಸ್. ಕಳ್ಳ ದಂಧೆಯ ಜವಾಬ್ದಾರಿಯೆಲ್ಲ ಮಕ್ಬೂಲನದೇ. ಅವನೊಂದು ತರ ಮಿರ್ಜಾಪುರ ಸಾಮ್ರಾಜ್ಯಕ್ಕೆ ಸೇನಾಧಿಪತಿ.

ನಮ್ಮ ನಿಮ್ಮ ಹಳ್ಳಿಯ ಕತೆ ಎನಿಸುವ ಪಂಚಾಯತ್: ಮಿಸ್ ಮಾಡಬಾರದ ವೆಬ್ ಸೀರಿಸ್

ಕಾಲೀನ್ ಭಯ್ಯಾನ ಮಗ ಮುನ್ನಾ ತ್ರಿಪಾಟಿ. ಇವನು ಮಿರ್ಜಾಪುರ ಸಂಸ್ಥಾನದ ಯುವರಾಜ. ಮಿರ್ಜಾಪುರ ಗದ್ದುಗೆಯ ಮೇಲೆಯೇ ಸದಾ ಇವನ ಕಣ್ಣು. ತನ್ನ ತಂದೆ ತನಗೆ ಯಾವಾಗ ಆ ಗದ್ದುಗೆ ವಹಿಸಿಕೊಡುತ್ತಾನೆ ಎಂಬುದೇ ಇವನ ಸದಾಕಾಲದ ಚಿಂತೆ. ತಂದೆಯೇ ಇವನ ವೈರಿ.  ಕಾಲೇಜಿನಲ್ಲಿ ಓದುತ್ತಿದ್ದರೂ ತನ್ನ ಪಟಾಲಂ ಜೊತೆ ಮಾಡುವ ಆಟಾಟೋಪಗಳಿಗೇನೂ ಕಡಿಮೆಯಿಲ್ಲ. ಸಜ್ಜನರಿಗೆ ಇವನೊಂದು ಪಿಡುಗು. ಕಾಲೀನ್ ಭಯ್ಯಾ ನೋಡಲು ಸಭ್ಯ ಹಾಗೂ ಗಟ್ಟಿಗ. ಮಾತು ಕಡಿಮೆ. ಆದರೆ ಮಾತಾಡಿದರೆ ಗುಂಡು ಹೊಡೆದಂತೆ. ಕಾಲೀನ್ ಭಯ್ಯಾ ತಾನಾಗೆ ಯಾರನ್ನೂ ಕೊಲೆ ಮಾಡಲು ಹೋಗುವುದಿಲ್ಲ, ಮಾಡಿಸುತ್ತಾನೆ. ಆದರೆ ಮುನ್ನಾ ಮನುಷ್ಯರನ್ನು ಸೊಳ್ಳೆಗಳಂತೆ ಹೊಸಕಿ ಹಾಕುವ ರಾಕ್ಷಸ. ಮನೆಯಲ್ಲಿ ಚೆಲ್ಲಾಡುವಷ್ಟು ಐಶ್ವರ್ಯ ಕೈಯಲ್ಲಿ ಮಿರ್ಜಾಪುರದ ಅಧಿಕಾರದ ಮತ್ತು. ಹರೆಯ ತಣಿಸಲು ಇವನು ಬಯಸಿದ ಹೆಣ್ಣುಗಳು ಇವನನ್ನು ಹಾಡಿ ಹೊಗಳುವ ಚೇಲಾ ವಂಧಿಮಾಗಧರು ಇನ್ನೇನು ಬೇಕು?

ಕಾಲೀನ್ ಭಯ್ಯಾ ತನ್ನ ನಾಡ ಪಿಸ್ತೂಲ್ ವ್ಯಾಪಾರ ಬಡಾಯಿಸಲು ಇಬ್ಬರು ಕಾಲೇಜು ಹುಡುಗರನ್ನು ಆರಿಸುತ್ತಾನೆ. ಗುಡ್ಡು ಪಂಡಿತ್ ಹಾಗೂ ಬಬ್ಲು ಪಂಡಿತ್. (ಆಲಿ ಫಜಲ್ ಮತ್ತು ವಿಕ್ರಾಂತ್ ಮಸ್ಸೈ) ಇವರಿಬ್ಬರೂ ಒಬ್ಬ ಸುಸಂಸ್ಕೃತ ಲಾಯರ್ ರಾಧಾಕೃಷ್ಣ ಪಂಡಿತ್ ನ ಮಕ್ಕಳು. ಅಪ್ಪ ಇದ್ದುದರಲ್ಲಿ ತೃಪ್ತಿ ಪಡಬೇಕು ಅನ್ಯಾಯಕ್ಕೆ ಹೋಗಬಾರದು ಅನ್ಯಾಯದಿಂದ ಸಂಪಾದಿಸಿದ ಹಣ ಕ್ಷಣಿಕ ಎಂಬ ಮನಸ್ಸಿನ ವ್ಯಕ್ತಿ. ಆದರೆ ಮಕ್ಕಳು ಮಹತ್ವಾಕಾಂಕ್ಷಿಗಳು. ಅಪ್ಪನ ಸಂಬಳದ ಸಾಕೂ ಸಾಲದ ಜೀವನ ಅವರಿಗೆ ಬೇಡ. ಹೀಗಾಗಿ ಅಪ್ಪನ ವಿರೋಧದ ನಡುವೆಯೇ ಗುಡ್ಡು ಹಾಗೂ ಬಬ್ಲು ಕಾಲೀನ್ ಭಯ್ಯಾನ ಅರಮನೆ ಸೇರುತ್ತಾರೆ. ಅವನ ಕಳ್ಳದಂಧೆಗೆ ಕೈ ಜೋಡಿಸುತ್ತಾರೆ. ಹಣ ಬಾಚಿಕೊಳ್ಳುತ್ತಾರೆ. ಇದರಲ್ಲಿ ಬಾಹುಬಲ ಇರುವ ಗುಡ್ಡು ಬುದ್ಧಿಬಲ ಅಲ್ಪಸ್ವಲ್ಪ ವಿವೇಚನೆ ಇರುವ ಬಬ್ಲೂ ಇಬ್ಬರೂ ಕಾಲೀನ್ ಭಯ್ಯಾನಿಗೆ ಎಡ-ಬಲಭುಜವಾಗುತ್ತಾರೆ. ಸಹಜವಾಗಿ ಯುವರಾಜ ಮುನ್ನಾ ತ್ರಿಪಾಟಿಯ ಕೆಂಡಗಣ್ಣಿಗೆ ತುತ್ತಾಗುತ್ತಾರೆ.

Chilli Chicken Review: ನಾನ್ ವೆಜ್ ಮೆನುವಿನಲ್ಲಿ ಎಲ್ಲೂ ಮಿಸ್ ಆಗದ ಚಿಲ್ಲಿ ಚಿಕನ್!

ಕಾಲೀನ್ ಭಯ್ಯಾನ ಅಪ್ಪನಾಗಿ ಬಾಲಿವುಡ್‌ನ ಹಿರಿಯ ನಟ ಖುಲಭೂಷಣ್ ಖರಬಂಧಾ ನಟಿಸಿದ್ದಾರೆ. ಅವರ ಅಭಿನಯ ಈ ಮಾಗಿದ ವಯಸ್ಸಲ್ಲೂ ತನ್ನ ಖದರ್ ಅನ್ನು ಕೊಂಚವೂ ಕಳೆದುಕೊಂಡಿಲ್ಲ. ವೃದ್ಧ ಸಿಂಹದಂತೆ ಅವರ ಘರ್ಜನೆ ನೊಡುಗರ ಮೈನವಿರೇಳಿಸುತ್ತದೆ. ಕಾಲೀನ್ ಭಯ್ಯಾನ ಹೆಂಡತಿಯಾಗಿ ಅತೃಪ್ತ ಮನಸ್ಸಿನ ಹೆಣ್ಣಾಗಿ ರಸಿಕಾ ದುಗ್ಗಲ್‌ದು ಒಳ್ಳೆಯ ಅಭಿನಯ. ಇನ್ನು ಗುಡ್ಡುವಿನ ಹೆಂಡತಿ ಪಾತ್ರದಲ್ಲಿ ಶ್ರೇಯಾ (ನಟ ಸಚಿನ್ ಮಗಳು) ಹಾಗೂ ಬಬ್ಲುವಿನ ಗೆಳತಿಯಾಗಿ ಶ್ವೇತಾ ತ್ರಿಪಾಟಿ ಚೆಂದ ನಟಿಸಿದ್ದಾರೆ. ಅದರಲ್ಲೂ ಗೋಲು ಆಗಿ ಶ್ವೇತಾ ತ್ರಿಪಾಟಿಯ ಅಭಿನಯ ಮೈ ಝುಂ ಎನಿಸುತ್ತದೆ. ಹೆಣ್ಣಾಗಿ ಒಂದು ಗ್ಯಾಂಗ್ ಸ್ಟರ್ ಪಾತ್ರ ಮಾಡುವುದು ಕಠಿಣ, ಅದನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾಳೆ. ಗುಡ್ಡು ಹಾಗೂ ಬಬ್ಲುವಿನ ತಾಯಿಯಾಗಿ ಶೀಬಾ ಚಡ್ಡಾ ಮರುಕ ಗಿಟ್ಟಿಸಿದರೆ, ತಂದೆಯಾಗಿ ರಾಜೇಶ್ ಟಿಲಾಂಗ್ ಅವರದ್ದು ಸತ್ವಯುತ ಅಭಿನಯ. ಎಷ್ಟೋ ಬಾರಿ ಒಬ್ಬ ಅಸಹಾಯಕ ತಂದೆಯಾಗಿ ತಮ್ಮ ಅಭಿನಯದಿಂದ ನೋಡುಗರ ಕಣ್ಣಲ್ಲಿ ನೀರು ಬರಿಸುತ್ತಾರೆ. ಪ್ರಾಮಾಣಿಕವಾಗಿ ಬದುಕಿದರೆ ಎಷ್ಟು ಹಿಂಸೆ ಎಂಬುದನ್ನು ಅವರ ಅಭಿನಯ ತೋರಿಸುತ್ತದೆ.  ಕಣ್ಣುಗಳಲ್ಲೇ ಬಹಳಷ್ಟು ಮಾತಾಡುತ್ತಾರೆ ರಾಜೇಶ್. ಇನ್ನು ದದ್ದಾ ಆಗಿ ಲಿಲ್ಲಿಪುಟ್ ಶಕ್ತಿಯುತ ಅಭಿನಯ. ವಿಜಯ್‌ ವರ್ಮಾ ದ್ವಿಪಾತ್ರದಲ್ಲಿ ಭೇಷ್ ಎನಿಸಿಕೊಳ್ಳುತ್ತಾರೆ. ಮುನ್ನಾ ತ್ರಿಪಾಟಿಯ ಪತ್ನಿಯಾಗಿ ಇಷಾ ತಲ್ವಾರ್ ಖಡಕ್ ಅಭಿನಯ. ಇನ್ನು ಉಳಿದವರು ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ತಮ್ಮ ಹಿಂದಿನ ಜನ್ಮದಲ್ಲಿ ಹೀಗೆಯೇ ಇದೇ ಹೆಸರಿನ ಡಾನ್‌ಗಳಾಗಿದ್ದರೇನೋ ಎಂಬಂಥ ಸಹಜ ಅಭಿನಯ ಎಲ್ಲರದ್ದು. ಇಲ್ಲಿ ರಕ್ತದ ಓಕುಳಿ ನದಿಯಾಗಿ ಹರಿದಿದೆ. ತರಕಾರಿ ಕಟ್ ಮಾಡುವಂತೆ ತಲೆಗಳನ್ನು ಕತ್ತರಿಸುತ್ತಾರೆ. ಪ್ರೀತಿ ಮಮತೆಗೆ ಇಲ್ಲಿ ಜಾಗವಿಲ್ಲ. ಎಲ್ಲರೂ ತಮ್ಮ ಗದ್ದುಗೆ ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡಬಲ್ಲರು.

ಈ ಬಾಹುಬಲಿಗಳ ಮನೆತನದ ಹೆಂಗಸರೂ ತಂತ್ರ ಹೂಡುವುದರಲ್ಲಿ ಏನೂ ಕಡಿಮೆಯಿಲ್ಲ. ಅವರೂ ಸಹ ಈ ರಾಜಕಾರಣದಲ್ಲಿ ಹಾಗೂ ರಕ್ತದೋಕುಳಿ ಚೆಲ್ಲುವುದರಲ್ಲಿ ರಾಜಕೀಯ ನಿಪುಣತೆಯಲ್ಲಿ ತಜ್ಙರು.

ಈ ಕತೆ ಈಗ ಹೇಳಿದರೆ ಸ್ವಾರಸ್ಯ ಇರದು. ಮೂರು ಸರಣಿಯಲ್ಲಿ ಬಂದಿರುವ ಈ ಸೀರೀಸ್ ನೋಡಿಯೇ ಇದರ ಥ್ರಿಲ್ ಅನ್ನು ಅನುಭವಿಸಬೇಕು. ಬಹಳ ದೊಡ್ಡ ಎಪಿಸೋಡುಗಳು. ಉದ್ದವಾದ ಕಥಾಸಾರ. ಈಗ ಮೂರನೇ ಸರಣಿಯಲ್ಲಿ ಕಥೆ ಪೂರಾ ಮುಗಿದಿಲ್ಲ. ನಾಲ್ಕನೇ ಸರಣಿ ಇದೆ ಎಂಬ ಸುಳುಹು ಕೊಟ್ಟಿದೆ.

Gullak Web Series Review: ನಮ್ಮ ಮಧ್ಯಮ ವರ್ಗದ ಬಾಲ್ಯ ನೆನಪಿಸೋ ಕಥೆ ಗುಲಕ್!

ಇದೊಂದು ಮಾಸ್ ಸರಣಿ. ಕ್ರೈಮ್ ಮತ್ತು ಥ್ರಿಲ್ ಇಷ್ಟ ಪಡುವವರು ನೋಡಿ ಎಂಜಾಯ್ ಮಾಡಬಹುದು. ಸೆಕ್ಸ್ ಕೂಡಾ ಢಾಳಾಗಿ ಸೇರಿಸಿದ್ದಾರೆ. ಅಖಂಡಾನಂದ ತ್ರಿಪಾಟಿಯಾಗಿ ಪಂಕಜ್ ಅಭಿನಯ ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮೈ ನವಿರೇಳಿಸುವ ಅವರ ಅಭಿನಯವನ್ನು ನೋಡಿಯೇ ಸವಿಯಬೇಕು. ಇನ್ನು ಮುನ್ನಾ ತ್ರಿಪಾಟಿ, ಮಕ್ಬೂಲ್, ಗುಡ್ಡು ಇವರ ಕ್ರೌರ್ಯ ಬೆಚ್ಚಿ ಬೀಳಿಸುತ್ತದೆ. ಇದನ್ನು ಕೇವಲ ಒಂದು ಸೀರೀಸ್ ಆಗಿ ನೋಡಿ ಮರೆತು ಬಿಡಬಹುದಾದರೆ ಪರವಾಗಿಲ್ಲ. ಆದರೆ ಈ ಸರಣಿಗಳಲ್ಲಿರುವ ಕ್ರೌರ್ಯವನ್ನು ಜೀವನಕ್ಕೆ ಅಳವಡಿಕೊಂಡರೆ ಮಾತ್ರ ಬಹಳ ಕಷ್ಟ. ಸಮಾಜ ಇಂಥ ಗ್ಯಾಂಗ್‌ಸ್ಟರ್ ಗಳನ್ನು ಮಟ್ಟ ಹಾಕಬೇಕು. ಈ ರೌಡಿಯಿಸಂ ಈಗಿನ ನಾಗರೀಕ ಸಮಾಜಕ್ಕೆ ಒಪ್ಪುವಂಥದ್ದಲ್ಲ. ಸಮಾಜದಲ್ಲಿ ಇತ್ತೀಚೆಗೆ ಘಟಿಸಿದ ನಾಗರೀಕ ಸಮಾಜವನ್ನು ಬೆಚ್ಚಿ ಬೀಳಿಸುವಂತ ಕೆಲವು ಕೊಲೆ ಪ್ರಕರಣಗಳನ್ನು ಕಂಡಾಗ ಓದಿದಾಗ ಇಂತಹ ವೆಬ್ ಸೀರೀಸ್ ಗೆ ಒಂದು ಮಟ್ಟದ ಕಡಿವಾಣ ಇರಲೇಬೇಕು ಎನಿಸುತ್ತದೆ. ವಿಶೇಷವಾಗಿ ಗುಡ್ಡು ಪಾತ್ರಪೋಷಣೆಯಲ್ಲಿ ಆಲಿ ಫಜಲ್ ಭೀಭತ್ಸವಾಗಿ ನಟಿಸಿದ್ದಾರೆ. ಆಲಿ ಒಳ್ಳೆಯ ಖಳನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥಹ ಅಭಿನಯದಿಂದ ಆಲಿಯಂಥ ನಟರು ಜನರ ಮನಸ್ಸಿನಲ್ಲಿ ಒಂದು ಭಯ ಹುಟ್ಟುಹಾಕುತ್ತಾರೆ. ಮತ್ತು ಆಲಿಯಂಥ ಸಹಜ ನಟರು ಬೇಗ ಇಂಥ ಇಮೇಜಿನಿಂದ ಹೊರಬರುವುದು ಒಳ್ಳೆಯದು ಇಂಥ ರೌಡಿ ಪಾತ್ರಕ್ಕೇ ಬ್ರಾಂಡ್ ಆಗಬಾರದು. ಮುನ್ನಾ ಪಾತ್ರದ ದಿವ್ಯೇಂದು ಬಹಳ ಒಳ್ಳೆಯ ಹಾಸ್ಯನಟ ಕೂಡ. ಇವರು ಅಭಿನಯ ಚತುರತೆಯನ್ನು ಮಡಗಾಂವ್ ಎಕ್ಸ್ಪ್ರೆಸ್ ನಲ್ಲಿ ನೋಡಬಹುದು. ಇಂಥ ನಟ ಮಿರ್ಜಾಪುರ್ ನಲ್ಲಿ ಕ್ರೌರ್ಯದ ಪರಮಾವಧಿಯಂತೆ ನಟಿಸಿದ್ದಾರೆ. ಮುನ್ನಾ ಪಾತ್ರದಲ್ಲಿ ಲೀನವಾಗಿ ಹೋಗಿದ್ದಾರೆ. ಕುತಂತ್ರಿ ರಾಜಕಾರಣಿಯಾಗಿ ಪ್ರಮೋದ್ ಪಾಠಕ್ ಅಭಿನಯ ಸೊಗಸಾಗಿದೆ.

ಪ್ರತಿಕ್ಷಣ ರೋಚಕತೆ, ಮೈ ಕೂದಲು ನಿಮಿರಿ ನಿಲ್ಲುವ ದೃಶ್ಯಗಳು ಎಲ್ಲ ಕಲಾವಿದರ ಸಹಜ ಅಭಿನಯ ಕುತೂಹಲ ಮೂಡಿಸುವ ಚಿತ್ರಕಥೆ, ಎಲ್ಲೂ ಬೋರೆನಿಸದ ಬಿಗಿ ನಿರ್ದೇಶನ, ಮಿರ್ಜಾಪುರ್ ಅನ್ನು ವೆಬ್ ಸೀರೀಸ್ ಗಳ ಮೊದಲ ಸಾಲಿನಲ್ಲಿ ನಿಲ್ಲಿಸಿದೆ.
 

click me!