ಇನ್ನು ಎಲ್‌ಜಿ ಸ್ಮಾರ್ಟ್‌ಫೋನ್ ಸಿಗಲ್ಲ; ಉತ್ಪಾದನೆ ಸ್ಥಗಿತ ಮಾಡಿದ ಕಂಪನಿ

By Suvarna News  |  First Published Apr 6, 2021, 2:50 PM IST

ಎಲ್‌ಜಿ ಸ್ಮಾರ್ಟ್‌ಫೋನ್ ಇಷ್ಟ ಪಡೋರಿಗೆ ಇದು ಕಹಿ ಸುದ್ದಿ. ಇನ್ನು ಮುಂದೆ ಮಾರುಕಟ್ಟೆಯಲ್ಲಿ ಎಲ್‌ಜಿ ಸ್ಮಾರ್ಟ್‌ಫೋನ್‌ಗಳು ಸಿಗುವುದಿಲ್ಲ. ಕಂಪನಿಯು ತನ್ನ ಮೊಬೈಲ್ ಉತ್ಪಾದನಾ ವಿಭಾಗವನ್ನು ಸ್ಥಗಿತಗೊಳಿಸಿದೆ. ಈ ವಿಭಾಗವು ಭಾರಿ ನಷ್ಟ ಅನುಭವಿಸುತ್ತಿದ್ದದ್ದು ಕಂಪನಿಯ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.


ಭಾರತೀಯ ಗ್ರಾಹಕರಿಗೆ ಎಲ್‌ಜಿ ಕಂಪನಿಯು ತನ್ನ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೂಲಕವೇ ಹೆಚ್ಚು ಪರಿಚಿತವಾಗಿದೆ. ಟಿವಿ, ಎಸಿ, ಫ್ರಿಡ್ಜ್, ವಾಷಿಂಗ್ ಮಷಿನ್ ಇತ್ಯಾದಿಗಳ ಮೂಲಕ ಮನೆ ಮಾತಾಗಿರುವ ಎಲ್‌ಜಿ ಕಂಪನಿ ಸ್ಮಾರ್ಟ್‌ಫೋನ್‌ಗಳಿಂದಲೂ ಜನಪ್ರಿಯವಾಗಿತ್ತು. ಆದರೆ, ಎದುರಾಳಿ ಕಂಪನಿಗಳಿಗೆ  ಹೋಲಿಸಿದರೆ, ಭಾರತದಲ್ಲಿ ಎಲ್‌ಜಿ ತನ್ನ ಪ್ರಭಾವವನ್ನು ತೀರಾ ದಟ್ಟೈಯಿಸಲು ಸಾಧ್ಯವಾಗಲೇ ಇಲ್ಲ. ಇದೀಗ, ದಕ್ಷಿಣ ಕೊರಿಯಾದ ಮೂಲದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಸ್ಮಾರ್ಟ್‌ಫೋನ್ ತಯಾರಿಕೆಯಿಂದಲೇ ಹಿಂದೆ ಸರಿಯಲಿದೆ!

ಹೌದು. ಎಲ್‌ಜಿ ಕಂಪನಿ ತನ್ನ ಮೊಬೈಲ್ ಉತ್ಪಾದನಾ ವಿಭಾಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಅಂದರೆ, ಇನ್ನು ಮುಂದೆ ಮಾರುಕಟ್ಟೆಯಲ್ಲಿ ನಿಮಗೆ ಎಲ್‌ಜಿ ಸ್ಮಾರ್ಟ್‌ಫೋನ್‌ಗಳು ಮಾರಾಟಕ್ಕೆ ಸಿಗುವುದಿಲ್ಲ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವ ಪ್ರಮುಖ ಬ್ರ್ಯಾಂಡ್ ಎಲ್‌ಜಿ ಎಂದು ಗುರುತಿಸಿಕೊಳ್ಳಲಿದೆ.

Tap to resize

Latest Videos

undefined

ಲಾವಾದಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯ ಟ್ಯಾಬ್‌ ಬಿಡುಗಡೆ

ಎಲ್‌ಜಿ ಕಂಪನಿಯ ಈ ನಿರ್ಧಾರದಿಂದ ಉತ್ತರ ಅಮೆರಿಕದಲ್ಲಿ ಹೊಂದಿದ್ದ ಶೇ.10ರಷ್ಟು ಪಾಲನ್ನು ಅದು ಬಿಟ್ಟುಕೊಡಲಿದೆ. ಈ ಪ್ರದೇಶದಲ್ಲಿ ಕಂಪನಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ 3ನೇ ಸ್ಥಾನದಲ್ಲಿತ್ತು. ಮೊದಲನೆ ಸ್ಥಾನದಲ್ಲಿ ಆಪಲ್ ಮತ್ತು ಎರಡನೇ ಸ್ಥಾನದಲ್ಲಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್‌ಗಳಿವೆ.

ಯಾಕೆ ಸ್ಥಗಿತ?
ಎಲ್‌ಜಿ ಎಲೆಕ್ಟ್ರಾನಿಕ್ಸ್‌ನ ಮೊಬೈಲ್ ಉತ್ಪಾದನಾ ವಿಭಾಗದವು ಕಳೆದ ಆರು ವರ್ಷಗಳಿಂದ ಸತತ ನಷ್ಟ ಅನುಭವಿಸುತ್ತಿತ್ತು.  ಅವಧಿಯಲ್ಲಿ ಕಂಪನಿ ಅಂದಾಜು 4.5 ಶತಕೋಟಿ ಡಾಲರ್‌(ಅಂದರೆ 33,000 ಕೋಟಿ ರೂಪಾಯಿ) ನಷ್ಟ ಅನುಭವಿಸಿದೆ ಎಂದು ರಾಯಟರ್ಸ್‌ ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಹಲವು ಸುದ್ದಿ ತಾಣಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಕಂಪನಿ ತನ್ನ ಮೊಬೈಲ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ಮೊಬೈಲ್‌ ವಿಭಾಗವನ್ನು ಸ್ಥಗಿತಗೊಳಿಸಿ ಸ್ಮಾರ್ಟ್‌ ಹೋಮ್ಸ್, ಆರ್ಟಿಫಿಷಿಯಲ್ ಇಂಟೆಲಜೆನ್ಸ್,ಕನೆಕ್ಟೆಡ್ ಡಿವೈಸ್, ರೊಬೊಟಿಕ್ಸ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಕಾಂಪೋನೆಂಟ್ಸ್‌ಗಳನ್ನು ಉತ್ಪಾದಿಸುವ ಬಗ್ಗೆ ಹೆಚ್ಚು  ಗಮನ ಕೇಂದ್ರೀಕರಿಸಲಿದೆ ಎಂದು ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಮೂರನೇ ಅತಿ ದೊಡ್ಡ ಉತ್ಪಾದಕ
ಎಲ್‌ಜಿ ಸ್ಮಾರ್ಟ್‌ಫೋನ್ ಉತ್ಪಾದನೆಯ ಅತ್ಯುತ್ತಮ ದಿನಗಳಲ್ಲಿ ಕಂಪನಿಯು ಅತ್ಯುತ್ತಮ ಪ್ರದರ್ಶನವನ್ನು ತೋರಿತ್ತು. 2013ರ ಹೊತ್ತಿಗೆ ಕಂಪನಿಯು ಜಗತ್ತಿನ ಮೂರನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ಕಂಪನಿ ಎನಿಸಿಕೊಂಡಿತ್ತು.

ಆಧಾರ್‌ ಜೊತೆ ಪಾನ್‌ ಕಾರ್ಡ್‌ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?

ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾಗಳಿರುವ ಫೋನ್‌ ಸೇರಿದಂತೆ ನಾನಾ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಮೊಬೈಲ್ ಉತ್ಪಾದನೆಗೆ ಸಂಬಂಧಿಸಿದಂತೆ ಎಲ್‌ಜಿಗಿಂತ ಮೊದಲಿನ ಎರಡು ಸ್ಥಾನಗಳಲ್ಲಿ ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳಿದ್ದವು.

ಆದರೆ, ಕಂಪನಿ ತನ್ನ ಅದೇ ಪ್ರದರ್ಶನವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಕಂಪನಿಯ ಸ್ಮಾರ್ಟ್‌ಫೋನ್‌ಗಳು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ ತೊಂದರೆಗಳನ್ನು ಎದುರಿಸಿದವು. ಸಾಫ್ಟ್‌ವೇರ್ ಅಪ್‌ಡೇಟ್ ಕೂಡ ಯಶಸ್ವಿಯಾಗುತ್ತಿರಲಿಲ್ಲ. ಹೀಗಾಗಿ ಕಂಪನಿ ನಿಧಾನವಾಗಿ ಜನರ ಮನಸ್ಸಿನಿಂದ ದೂರವಾಗಲು ಶುರುವಾಯಿತು. ಜೊತೆಗೆ ಚೀನಿ ಕಂಪನಿಗಳ ಹೋಲಿಸಿದರೆ, ಎಲ್‌ಜಿ ಸ್ಮಾರ್ಟ್‌ಫೋನ್ ಮಾರ್ಕೆಟಿಂಗ್ ತಂತ್ರದಲ್ಲಿ ಹಿಂದೆ ಬಿತ್ತು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಸದ್ಯ, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಕೇವಲ ಶೇ.2ರಷ್ಟು ಪಾಲು ಹೊಂದಿದೆ. ಕಳೆದ ವರ್ಷ ಸ್ಯಾಮ್ಸಂಗ್ ಕಂಪನಿ 256 ದಶಲಕ್ಷ ಸ್ಮಾರ್ಟ್‌ಫೋನ್ ಮಾರಾಟ ಮಾಡಿದರೆ, ಎಲ್‌ಜಿ ಕಂಪನಿ ಕೇವಲ 23 ದಶಲಕ್ಷ ಮಾರಾಟ ಮಾಡಿದೆ ಎನ್ನುತ್ತಿದೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್. ಹೀಗಿದ್ದಾಗ್ಯೂ, ಎಲ್‌ಜಿ ಲ್ಯಾಟಿನ್ ಅಮೆರಿಕದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಹೊಂದಿದೆ. ಈ ಪ್ರದೇಶದಲ್ಲಿ ಕಂಪನಿ ಐದನೇ ಸ್ಥಾನದಲ್ಲಿದೆ.

4ಜಿ ಬಳಿಕ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ ಲಾಂಚ್

ಈಗ ಎಲ್‌ಜಿ ತನ್ನ ಮೊಬೈಲ್ ವಿಭಾಗವನ್ನು ಶಾಶ್ವತವಾಗಿ ಮುಚ್ಚುಲು ಹೊರಟಿರುವುದರಿಂದ ಅದರ ಲಾಭವನ್ನು ಚೀನಾ ಮೂಲದ ಒಪ್ಪೊ, ವಿವೋ ಮತ್ತು ಶಿಯೋಮಿಗಳು ಪಡೆಯುವ ಸಾಧ್ಯತೆ ಇದೆ. ಮಧ್ಯಮ ಮತ್ತು ಅಗ್ಗದ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಈ ಕಂಪನಿಗಳು ಪಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

click me!