ಭಾರೀ ನಿರೀಕ್ಷೆಯ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಯಾವಾಗ ರಿಲೀಸ್?

By Suvarna News  |  First Published Apr 7, 2021, 4:07 PM IST

ಇಂಟರ್ನೆಟ್ ದೈತ್ಯ ಕಂಪನಿ ಗೂಗಲ್ ತನ್ನ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಯಾವಾ ಬಿಡುಗಡೆ ಮಾಡಲಿದೆ ಎಂಬ ಚರ್ಚೆಗಳು ಶುರುವಾಗಿವೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ ಕಂಪನಿ ಶೀಘ್ರವೇ ಪಿಕ್ಸೆಲ್ 6 ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪಿಕ್ಸೆಲ್ 6 ಕ್ಯಾಮೆರಾ ದೃಷ್ಟಿಯಿಂದಲೂ ವಿಶಿಷ್ಟ ಸ್ಮಾರ್ಟ್‌ಫೋನ್ ಆಗಿರಬಹುದಾಗಿದೆ.


ಇಂಟರ್ನೆಟ್ ದೈತ್ಯ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಾಫ್ಟವೇರ್ ಅಭಿವೃದಾತ ಕಂಪನಿ ಗೂಗಲ್, ಪಿಕ್ಸೆಲ್ ಸೀರೀಸ್ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತ ಬಂದಿದೆ. ಆದರೆ, ಗೂಗಲ್ ಪಿಕ್ಸೆಲ್ 5 ಬಳಿಕ ಕಂಪನಿ ಪಿಕ್ಸೆಲ್ 6 ಬಿಡುಗಡೆ ಸಾಕಷ್ಟು ಸಮಯವನ್ನು ತೆಗೆದುಕೊಂಡಿದೆ. ಪಿಕ್ಸೆಲ್ 6 ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ಒಂದಿಷ್ಟು ಮಾಹಿತಿ ಸೋರಿಕೆಯಾದದ್ದು ಬಿಟ್ಟರೆ ಹೆಚ್ಚೆನೂ ಮಾಹಿತಿ ಇಲ್ಲ.

ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ

Latest Videos

undefined

ಈಗ ವರದಿಯಾಗಿರುವ ಪ್ರಕಾರ ಗೂಗಲ್ ಪಿಕ್ಸೆಲ್ ಜೂನ್‌ ತಿಂಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸುಮಾರು ವರ್ಷಗಳಿಂದ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಪೋನ್‌ಗಳನ್ನು ತಯಾರು ಮಾಡುತ್ತಿದೆ. ಅತ್ಯುತ್ತಮ ಕ್ಯಾಮೆರಾ, ಆವರೇಜ್ ಹಾರ್ಡ್‌ವೇರ್ ಮತ್ತು ದುಬಾರಿ ಬೆಲೆಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದ್ದವು. ಇದೇ ಕಾರಣದಿಂದಾಗಿ ಗ್ರಾಹಕರು ಅಷ್ಟೇನೂ ಗಾಢವಾಗಿ ಈ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಮೋಡಿಗೆ ಒಳಗಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಂಡು, ಕೈಗೆಟುಕುವ ದರ, ಅತ್ಯುತ್ತಮ ಕ್ಯಾಮೆರಾಗಳಿರುವ ಮಧ್ಯಮ ವ್ಯಾಪ್ತಿಯ ಪಿಕ್ಸೆಲ್ 3ಎ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು.

ಪಿಕ್ಸೆಲ್ 6 ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿ ಅತ್ಯುತ್ತಮ ಹಾರ್ಡ್‌ವೇರ್ ಬಳಸಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಹಲವು ಬದಲಾವಣೆಗಳೊಂದಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಗೂಗಲ್ ತನ್ನದೇ ಸ್ವಂತ ಚಿಪ್‌ಸೆಟ್ ಅನ್ನು ಪರೀಕ್ಷಿಸುತ್ತಿದೆ. ಇದೇ ಚಿಪ್‌ಸೆಟ್ ಅನ್ನು ಕಂಪನಿ ಪಿಕ್ಸೆಲ್ 6 ಸ್ಮಾರ್ಟ್‌ಫೋನ್‌ನಲ್ಲಿ ಬಳಸಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವರದಿ ಮಾಡಿರುವ  9to5Google, ಗೂಗಲ್ ಟೆಸ್ಟ್ ಮಾಡುತ್ತಿರುವ ಈ ಚಿಪ್‌ಸೆಟ್‌ಗೆ ವೈಟ್ ಚಾಪೆಲ್ ಎಂಬ ಕೋಡ್ ನೇಮ್ ಕೊಡಲಾಗಿದೆ.

ಇನ್ನು ಎಲ್‌ಜಿ ಸ್ಮಾರ್ಟ್‌ಫೋನ್ ಸಿಗಲ್ಲ; ಉತ್ಪಾದನೆ ಸ್ಥಗಿತ ಮಾಡಿದ ಕಂಪನಿ

ಇದೇ ವರದಿಯ ಪ್ರಕಾರ, ಈ ಚಿಪ್‌ಸೆಟ್ ಪಿಕ್ಸೆಲ್‌ಗೆ ಪವರ್ ನೀಡುವುದು ಮಾತ್ರವಲ್ಲದೇ ಕ್ರೋಮ್‌ಬುಕ್‌ಗೂ ಇದರ ಲಾಭ ತಂದುಕೊಡಲಿದೆ. ವಿಶೇಷ ಎಂದರೆ, ಈ ಚಿಪ್‌ಸೆಟ್ ಅನ್ನು ಗೂಗಲ್ ಸ್ಯಾಮ್ಸಂಗ್ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮುಂಬರುವ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ರೇವೆನ್, ಒರಿಯಲ್ ಮತ್ತ ಪಾಸ್‌ಪೋರ್ಟ್ ಕೋಡ್‌ನೇಮ್‌ಗಳಡಿ ನಾನಾ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರವೇನ್ ಮತ್ತು ಒರಿಯಾಲ್ ಕೋಡ್‌ನೇಮ್‌ನ ಸ್ಮಾರ್ಟ್‌ಫೋನ್‌ಗಳು ಪಿಕ್ಸೆಲ್ 6 ಮಾಡೆಲ್‌ಗಳಾಗಿರುವ ಸಾಧ್ಯತೆ ಇದೆ ಮತ್ತು ಪಾಸ್‌ಪೋರ್ಟ್ ಬಹುಶಃ ಕಂಪನಿಯ ಪಿಕ್ಸೆಲ್ ಪೋಲ್ಡೇಬಲ್ ಸ್ಮಾರ್ಟ್‌ಫೋನ್ ಆಗಿರಬಹುದು ಎಂದು ಸೋರಿಕೆಯಾದ ಮಾಹಿತಿಯಿಂದ ಗೊತ್ತಾಗಿದೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ಇನ್ನೂ ಹೊರ ಹಾಕಿಲ್ಲ.

ಪಿಕ್ಸೆಲ್ 6 ಸ್ಮಾರ್ಟ್‌ಫೋನ್, 4ಕೆ ವಿಡಿಯೋ ರೆಕಾರ್ಡಿಂಗ್ ಸಪೋರ್ಟ್ ಮಾಡುವ ಪಂಚ್ ಹೋಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಯೂ ಇದೆ.

ಭಾರೀ ಸದ್ದು ಮಾಡುತ್ತಿರುವ ಈ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಯಾವಾಗ ಬಿಡಗುಡೆಯಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿಗಳಿಲ್ಲ. ಆದರೆ, ಕೆಲವು ಮೂಲಗಳ ಪ್ರಕಾರ ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ರಿಲೀಸ್ ಆಗೋ ಸಾಧ್ಯತೆ ಇದೆ. ವಿಶೇಷ ಎಂದರೆ, ಈ ಹಿಂದೆ ಗೂಗಲ್ ರಿಲೀಸ್ ಮಾಡಿದ್ದ,  ಗೂಗಲ್ ಪಿಕ್ಸೆಲ್ 4 ಮತ್ತು ಗೂಗಲ್ ಪಿಕ್ಸೆಲ್ 5 ಸ್ಮಾರ್ಟ್‌ಫೋನ್ ಭಾರತದಲ್ಲಿ ನೆಲೆ ಕಂಡಿರಲಿಲ್ಲ. ಹಾಗಾಗಿ, ಗೂಗಲ್ ಪಿಕ್ಸೆಲ್ 6  ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದೆ.

ಲಾವಾದಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯ ಟ್ಯಾಬ್‌ ಬಿಡುಗಡೆ

ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲವೋ ಅದೇ ರೀತಿ, ಅದರ ಬೆಲೆಯ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಗೂಗಲ್ ಪಿಕ್ಸೆಲ್ 5 ಬಿಡುಗಡೆಯಾದಾಗ ಅದರ ಬೆಲೆ 699 ಅಮೆರಿಕನ್ ಡಾಲರ್ ಇತ್ತು. ಹಾಗಾಗಿ, ಈ ಪಿಕ್ಸೆಲ್ 6 ಬೆಲೆಯಲ್ಲಿ ಸ್ವಲ್ಪ ಕಡಿತವನ್ನು ನಿರೀಕ್ಷಿಸಬಹುದು ಎನ್ನುತ್ತಿದೆ ಮಾರುಕಟ್ಟೆ.

click me!