ತತ್ವಜ್ಞಾನವೆಲ್ಲ ಬೊಗಳೆ, ಉಪದೇಶಗಳೆಲ್ಲ ರಗಳೆ ಎನ್ನುತ್ತಿದ್ದ ಯೂಜಿ ಒಬ್ಬ ಗುರೂಜಿ!

By Suvarna NewsFirst Published Jan 15, 2023, 1:19 PM IST
Highlights

ಮಾತುಗಳೆಲ್ಲ ಸುಳ್ಳು, ಮನಸ್ಸೆಂಬುದು ಮಾಯೆ, ನಮಗೆ ಒಂಟಿಯಾಗಿ ನಿಲ್ಲುವ ಧೈರ್ಯವಿಲ್ಲ, ಹೀಗಾಗಿ ನಾವು ಸಂಘಜೀವಿಗಳು, ಎಲ್ಲಾ ತತ್ವಜ್ಞಾನವೂ ಬೊಗಳೆ, ಎಲ್ಲಾ ಉಪದೇಶಗಳೂ ರಗಳೆ ಎನ್ನುತ್ತಿದ್ದ ಯೂಜಿ ಸಂಕ್ರಾಂತಿಯ ದಿನ ನೆನಪಾಗುತ್ತಾರೆ. 

ಜೋಗಿ

Gurus play a social role, so do prostitutes!
ಹಾಗಂತ ಹೇಳಿಯೂ ಪರಮಗುರು ಎಂದು ಕರೆಸಿಕೊಂಡವರು ಯುಜಿ ಕೃಷ್ಣಮೂರ್ತಿ. ಮಾತುಗಳೆಲ್ಲ ಸುಳ್ಳು, ಮನಸ್ಸೆಂಬುದು ಮಾಯೆ, ನಮಗೆ ಒಂಟಿಯಾಗಿ ನಿಲ್ಲುವ ಧೈರ್ಯವಿಲ್ಲ, ಹೀಗಾಗಿ ನಾವು ಸಂಘಜೀವಿಗಳು, ಎಲ್ಲಾ ತತ್ವಜ್ಞಾನವೂ ಬೊಗಳೆ, ಎಲ್ಲಾ ಉಪದೇಶಗಳೂ ರಗಳೆ ಎನ್ನುತ್ತಿದ್ದ ಯೂಜಿ ಸಂಕ್ರಾಂತಿಯ ದಿನ ನೆನಪಾಗುತ್ತಾರೆ. 
ಬೆಂಗಳೂರಿಗೆ ಆಗಾಗ ಬರುತ್ತಿದ್ದ, ಬಂದಾಗಲೆಲ್ಲ ಗೆಳೆಯ ಚಂದ್ರಶೇಖರ್ ಮನೆಯಲ್ಲಿ ಉಳಿದುಕೊಂಡು ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದ, ಎಲ್ಲರನ್ನೂ ಖಂಡಿಸುತ್ತಿದ್ದ, ಇಂದಿರಾ ಗಾಂಧಿಯಿಂದ ಹಿಡಿದು ಜಿಡ್ಡು ಕೃಷ್ಣಮೂರ್ತಿಯ ತನಕ ಎಲ್ಲರ ಕುರಿತೂ ಮಕ್ಕಳ ಹಾಗೆ, ಬಿಡುಬೀಸಾಗಿ ಮಾತಾಡುತ್ತಿದ್ದ ಯೂಜಿ ನನಗೆ ಪರಿಚಯವಾದದ್ದು ವೈಎನ್ಕೆ ದೆಸೆಯಿಂದ. ಈ ಬರಹದ ಶೀರ್ಷಿಕೆ ಕೂಡ ವೈಎನ್ಕೆ ಅವರ ಕುರಿತು ಬರೆದ ಪುಸ್ತಕದ್ದು.
ವೈಎನ್ಕೆಗೆ ಇಂಥ ಅವದೂತರ ಬಗ್ಗೆ ಅಚ್ಚರಿ ಮತ್ತು ಮೆಚ್ಚುಗೆ. ಹೀಗಾಗಿ ಅವರು ಯುಜಿ ಬಂದಾಗೆಲ್ಲ ನನ್ನನ್ನೂ ಜೊತೆಗೆ ಕರೆದುಕೊಂಡು ಕೆಆರ್ ರಸ್ತೆಯಲ್ಲಿರುವ ಚಂದ್ರಶೇಖರ್ ಮನೆಗೆ ಹೋಗುತ್ತಿದ್ದರು. ಅಲ್ಲಿ ಯುಜಿ ಕೂತಿರುತ್ತಿದ್ದರು.

ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡು, ಈ ಮುರುಗನಿಗೆ ಮಾತ್ರ ಮಂಚ್ ಮೇಲೆ ಮಹಾಪ್ರೀತಿ!

ಬೆಳ್ಳಗಿನ ಹತ್ತಿ ಪೈಜಾಮ, ಮೇಲೊಂದು ಜುಬ್ಬ. ಮೈ ಕೂಡ ಹ್ತತಿಯಿಂದಲೇ ಮಾಡಿದಷ್ಟು ಬಿಳಿ. ಮೇಲ್ನೋಟಕ್ಕೆ ಪರಿಶುದ್ಧ ದೇಹಿ ಅನ್ನಿಸುವಂಥ ರೂಪ. ನಕ್ಕರೆ ಮನೆಯೊಳಗೆ ಬೆಳ್ಳಗಿನ ಬೆಳಕು ಹಬ್ಬಿದ ಹಾಗೆ. ಮಾತಾಡಿದರೂ ಅಷ್ಟೇ ಮೃದು. ಆದರೆ ಮಾತಿನೊಳಗಿನ ಮಾತಿನಲ್ಲಿ ಕಾಠಿಣ್ಯ. ಎಲ್ಲವನ್ನೂ ಧಿಕ್ಕರಿಸಿ ಬದುಕಿಯೇನು ಎಂಬ ಬಿಂಕ.
ಆಗ ನಾವಿನ್ನೂ ಜಿಡ್ಡು ಕೃಷ್ಣಮೂರ್ತಿಯನ್ನು ಮೆಚ್ಚಿಕೊಂಡವರು. ಕೆ. ಎನ್. ಅರುಣ್ ಬರೆದ ಪ್ರೀತಿ ನದಿಯಂತೆ ಪುಸ್ತಕದ ಜಿಡ್ಡು ನಮಗೆ ಪ್ರಿಯ. ಯೂಜಿ ಅಂದರೆ ಅಲರ್ಜಿ. ಆದರೆ ಕ್ರಮೇಣ ಆ ವಯಸ್ಸಿಗೋ ಏನೋ ಯೂಜಿಯ ಉಡಾಫೆ ಕೂಡ ಇಷ್ಟವಾಗತೊಡಗಿತು. ನಮ್ಮ ಕವಿ ರಾಮಚಂದ್ರ ಶರ್ಮರ ಹಾಗೆ ಯೂಜಿ ಮಾತಾಡುತ್ತಿದ್ದಾರೆ ಅನ್ನಿಸುತ್ತಿತ್ತು.
ಯೂಜಿ ತನಗೊಂದು ವ್ಯಕ್ತಿತ್ವವೇ ಇಲ್ಲ. ನನ್ನನ್ನು ಯಾರೂ ನಿರಾಕರಿಸಲಾರರು, ಬೇಸರ ಪಡಿಸಲಾರರು, ಅವಮಾನಿಸಲಾರರು ಎಂಬಂತೆ ಇರುತ್ತಿದ್ದರು. ಏನೇ ಹೇಳಿದರೂ ಅದನ್ನು ಥಟ್ಟನೆ ನಿರಾಕರಿಸುವ ಪ್ರತ್ಯುತ್ಪನ್ನ ಮತಿಯಂತೂ ಅವರಿಗೆ ಸಿದ್ಧಿಸಿತ್ತು. ಅವರ ಮಾತುಗಳಲ್ಲೇ ವಿರೋಧಭಾಸ ಕಾಣಿಸುತ್ತಿತ್ತು. ಆದರೆ ಅದೆಲ್ಲವೂ ಯೋಚಿಸಿ ಯೋಜಿಸಿ ಆಡಿದ ಮಾತಲ್ಲ ಅನ್ನುವುದೂ ಗೊತ್ತಾಗುತ್ತಿತ್ತು.
ಶಿಕ್ಷಣದ ಕುರಿತು ಅವರಿಗಿದ್ದ ಅಭಿಪ್ರಾಯವೇ ದಿಗ್ಭ್ರಮೆ ಹುಟ್ಟಿಸುವಂತಿತ್ತು. ಮಕ್ಕಳಿಂದ ನಾವು ಕಲಿಯುವುದೇ ಸಾಕಷ್ಟಿದೆ. ಅದನ್ನು ಬಿಟ್ಟು ನಾವು ಅವರಿಗೆ ಕಲಿಸುವುದಕ್ಕೆ ಹೊರಡುತ್ತಿದ್ದೇವೆ. ಇದಕ್ಕಿಂತ ದೊಡ್ಡ ತಮಾಷೆ ಮತ್ತೇನಿದೆ ಎಂದವರು ಹಾಸ್ಯ ಮಾಡುತ್ತಿದ್ದರು. ಸಂತೋಷವನ್ನು ಎಲ್ಲಿಯ ತನಕ ಹುಡುಕುತ್ತೀರೋ ಅಲ್ಲಿ ತನಕ ನಿಮಗೆ ಸಿಗುವುದು ಅಸಂತೋಷ ಎಂಬಂಥ ನುಡಿಮುತ್ತುಗಳನ್ನೂ ಆಗಾಗ ಉದುರಿಸುತ್ತಿದ್ದರು. ಗುರುವಿನ ಮಾತು ಕೇಳಬೇಡಿ ಅನ್ನುತ್ತಿದ್ದರು. ನಾವು ಅಪ್ಪಣೆ ಗುರುವೇ ಅನ್ನುತ್ತಿದ್ದೆವು.

Jaipur Literary Festival: 'ಕೈಲಿ ಪುಸ್ತಕ ಇರಬೇಕು, ತಲೇಲಿ ಐಡಿಯಾ ಇರಬೇಕು..'

ಅವರನ್ನು ನೋಡುವುದಕ್ಕೆ ಬರುತ್ತಿದ್ದವರು ಕೂಡ ಅಂತಿಂಥವರಲ್ಲ. ಒಮ್ಮೆ ಮಹೇಶ್ ಭಟ್ ಮಗಳು ಪೂಜಾಳ ಜೊತೆ ಬಂದಿದ್ದರು. ಆಗಷ್ಟೇ ಪೂಜಾಗೆ ಮಹೇಶ್ ಭಟ್ ವಿಚಿತ್ರ ಸಲಹೆ ಕೊಟ್ಟು ಸುದ್ದಿಯಾಗಿದ್ದರು. ಯಾರ ಜೊತೆಗಾದರೂ ಓಡಾಡು. ಆದರೆ ಬಸಿರಾಗಬೇಡ ಅನ್ನುವ ಅಪ್ಪನ ಹೇಳಿಕೆ ಎಲ್ಲರನ್ನೂ ಕಂಗಾಲಾಗಿಸಿತ್ತು. ಅಂಥ ಹೊತ್ತಲ್ಲಿ ಯುಜಿ ಜೊತೆ ಮತ್ತು ತಂದೆ ಮಗಳು ಕೆಲವು ದಿನ ಇದ್ದರು.
ಅವರ ಜೊತೆಗಿನ ಹತ್ತೆಂಟು ಭೇಟಿಗಳಿಂದ ಹೆಕ್ಕಿದ ನೆನಪುಗಳು ಸಾಕಷ್ಟಿವೆ. ಏನನ್ನೂ ತಿನ್ನದೇ, ಏನೂ ಕುಡಿಯದೇ, ಮಾತೇ ಆಡದೇ, ಪತ್ರಿಕೆ ಓದದೇ, ಟೀವಿ ನೋಡದೇ ಯುಜಿ ಬದುಕಬಲ್ಲವರಾಗಿದ್ದರು ಅನ್ನುವುದು ಆಗ ನಮಗೆಲ್ಲ ಬೆರಗಿನ ಸಂಗತಿ.
ಅವರು ಹಾಗಿದ್ದರಾ.. ನಮಗೆ ಹಾಗೆ ಕಂಡಿದ್ದರಾ.. ನಮ್ಮ ಆಸೆಗಳನ್ನೆಲ್ಲ ಅವರು ಸಾಕಾರಗೊಳಿಸಿದವರಂತೆ ಕಾಣುತ್ತಿದ್ದರಾ. ವೈಎನ್ಕೆಗೆ ಅವರು ಯಾಕೆ ಇಷ್ಟವಾದರು? ಒಂದೂ ಗೊತ್ತಾಗುತ್ತಿಲ್ಲ.

click me!