ಅನುವಾದಗೊಳ್ಳದೇ ಹೋದರೆ ಸಾಹಿತ್ಯ ಹಬ್ಬುವುದಿಲ್ಲ
ನಮ್ಮಲ್ಲಿಗೆ ಬರುವ ಶೇ.80ರಷ್ಟುಮಂದಿ 27 ವರ್ಷ ಒಳಗಿನವರು
ಎಡವೋ ಬಲವೋ, ನಮಗೆ ಎಲ್ಲವೂ ಒಂದೇ
ಜೆಎಲ್‌ಎಫ್ ಅಂದ್ರೆ ಸಂಗೀತ, ಸಾಹಿತ್ಯ, ಕಲೆ, ಪರಂಪರೆ ಮತ್ತು ಭೂರಿಭೋಜನ
ಸಂದರ್ಶನ: ಗಿರೀಶ್ ರಾವ್ ಹತ್ವಾರ್(ಜೋಗಿ)
ಜೈಪುರ ಲಿಟರರಿ ಫೆಸ್ಟಿವಲ್‌ನ 16ನೇ ಸಂಚಿಕೆ ಜನವರಿ 19ರಿಂದ ಆರಂಭವಾಗಲಿದೆ. ಜಗತ್ತಿನ ಅತಿ ದೊಡ್ಡ ಲಿಟರರಿ ಶೋ ಎಂದೇ ಕರೆಸಿಕೊಳ್ಳುವ ಈ ಸಾಹಿತ್ಯೋತ್ಸವದ ಕುರಿತು ಅದರ ಸಂಸ್ಥಾಪಕರಲ್ಲಿ ಒಬ್ಬರಾದ ಸಂಜಯ್ ಕೆ. ರಾಯ್ ಮಾತನಾಡಿದ್ದಾರೆ.
undefined
1. ಜೈಪುರ ಲಿಟರರಿ ಫೆಸ್ಟಿವಲ್,ಜೆಎಲ್‌ಎಫ್ ಶುರುವಾದದ್ದು ಹೇಗೆ?
ಎಡಿನ್‌ಬರೋ ಆರ್ಚ್ ಫೆಸ್ಟಿವಲ್ ಬಗ್ಗೆ ಕೇಳಿರ್ತೀರಿ. ಅಲ್ಲಿಗೆ ಹೋಗಿದ್ದ ಜೈಪುರದ ಜಾನ್ ಮತ್ತು ಫೈತ್ ಸಿಂಗ್ ಅಂಥದ್ದೇ ಒಂದು ಫೆಸ್ಟಿವಲ್‌ನ ಜೈಪುರ್‌ನಲ್ಲಿ ಮಾಡೋಣ ಅಂದರು. ಜೈಪುರ್ ವಿರಾಸತ್ ಫೆಸ್ಟಿವಲ್ ಆರಂಭಿಸಿದರು. ಅದು ಕೆಲವು ವರ್ಷ ನಡೀತು. ಅದರಲ್ಲಿ ಲಿಟರರಿ ಫೆಸ್ಟಿವಲ್ ನಡೆಸ್ತಿದ್ದ ನಮಿತಾ ಮತ್ತು ವಿಲಿಯಂ ಡಾರ್ಲಿಂಪಲ್ ಜತೆ ಸೇರಿಕೊಂಡು ಜೈಪುರ್ ಲಿಟರರಿ ಫೆಸ್ಟಿವಲ್ ಆರಂಭಿಸಿದೆವು. ಜೈಪುರ್‌ನಲ್ಲಿ ಇಂಥದ್ದೊಂದು ಸಾಹಿತ್ಯೋತ್ಸವ ಶುರು ಮಾಡಬಹುದೇ ಅಂತ ಕೇಳಿದಾಗ ಅನೇಕರು ನಕ್ಕಿದ್ದರು.
2. ಜೆಎಲ್‌ಎಫ್ ವಿಶೇಷತೆಗಳೇನು?
ಇದು ಅತ್ಯಂತ ಡೆಮಾಕ್ರಾಟಿಕ್ ಫೆಸ್ಟಿವಲ್. ಇಲ್ಲಿ ಎಲ್ಲರೂ ಸಮಾನರು. ಯಾರು ಮೊದಲು ಬರುತ್ತಾರೋ ಅವರಿಗೆ ಕುಳಿತುಕೊಳ್ಳಲು ಅವಕಾಶ. ದೊಡ್ಡವರಿಗೆ ಸೀಟು ರಿಸರ್ವ್ ಮಾಡೋದಿಲ್ಲ.
ಇಲ್ಲಿ ಭಾಗವಹಿಸೋರ ಪೈಕಿ ಶೇಕಡಾ 80ರಷ್ಟುಮಂದಿ ತರುಣ ತರುಣಿಯರು. 27 ವರ್ಷದ ಒಳಗಿನವರು. ಜಗತ್ತಿನ ಬೆಸ್ಟ್ ಲೇಖಕರು, ಚಿಂತಕರು, ಶಾಸ್ತ್ರಜ್ಞರು ಇಲ್ಲಿಗೆ ಬರುತ್ತಾರೆ. ಇದು ಸಾಹಿತ್ಯೋತ್ಸವ ಮಾತ್ರ ಅಲ್ಲ. ಇಲ್ಲಿ ಸಂಗೀತ, ಕಲೆ, ಪರಂಪರೆ, ಒಳ್ಳೆಯ ಆಹಾರ ಎಲ್ಲವೂ ಇದೆ. ಎಡಿನ್‌ಬರೋ ಉತ್ಸವದಲ್ಲಿ ಸ್ಯಾಂಡ್‌ವಿಚ್, ಬಿಯರ್ ಕೊಟ್ಟು ಕಳಿಸ್ತಿದ್ದರು. ನಾವು ಅತ್ಯುತ್ತಮ ಔತಣ ಕೊಡುತ್ತೇವೆ.
3. ಜೆಎಲ್‌ಎಫ್ ಇಷ್ಟುಜನಪ್ರಿಯವಾಗುವ ನಂಬಿಕೆ ಇತ್ತೇ?
ಇರಲಿಲ್ಲ. ಇದು ಶುರುವಾಗಿದ್ದೇ ಒಂದು ಆಕ್ಸಿಡೆಂಟ್. ನಂತರ ಬಾಯಿಂದ ಬಾಯಿಗೆ ಹಬ್ಬಿತು. ಜನ ಬರೋಕೆ ಶುರು ಮಾಡಿದರು. ನಾಲ್ಕೈದು ವರ್ಷದ ನಂತರ ದೀಪಕ್ ಛೋಪ್ರಾ ಈಮೇಲ್ ಹಾಕಿ ಓಪ್ರಾ ವಿನ್‌ಫ್ರೇ ಬರಬೇಕೂಂತಿದ್ದಾರೆ. ಅವಕಾಶ ಇದೆಯಾ ಕೇಳಿದರು. ನಮಗೂ ಅವರು ಬರಬೇಕು ಅಂತ ಇತ್ತು. ಆದರೆ ಅವರನ್ನು ಸಂಪರ್ಕಿಸೋಕೆ ಆಗಿರಲಿಲ್ಲ. ಆಕೆ ಬಂದದ್ದೇ ತಡ ಇಡೀ ಜಗತ್ತು ನಮ್ಮ ಕಡೆ ನೋಡಿತು. ಅದೇ ವರ್ಷ ಸಲ್ಮಾನ್ ರಶ್ದಿ ಬರಬೇಕಾಗಿತ್ತು, ಬರಲಿಲ್ಲ. ಅದನ್ನು ಬಹುತೇಕ ಪತ್ರಿಕೆಗಳು ಬರೆದವು. ಜೆಎಲ್‌ಎಫ್ ಜಾಗತಿಕ ಭೂಪಟದಲ್ಲಿ ಕಾಣಿಸಿಕೊಂಡಿತು.
4. ನೀವು ಪುಸ್ತಕ ಬರೆದವರನ್ನೇ ಆಹ್ವಾನಿಸುತ್ತೀರಲ್ಲ?
ಹೌದು. ನಮ್ಮದು ಜನರಲ್ ಫೆಸ್ಟಿವಲ್ ಅಲ್ಲ. ನಿಮ್ಮ ಬಳಿ ಪುಸ್ತಕ ಇರಬೇಕು ಅಥವಾ ಐಡಿಯಾ ಇರಬೇಕು.
5. ಎಡ ಬಲದ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ?
ಎರಡೂ ಕಡೆಯವರಿಂದಲೂ ಭಾಗವಹಿಸಲಿಕ್ಕೆ ಒತ್ತಡ ಬರುತ್ತದೆ. ನನಗೆ ಅದು ಮುಖ್ಯವೇ ಅಲ್ಲ. ಅವರ ಹತ್ತಿರ ಒಂದು ಒಳ್ಳೆಯ ಪುಸ್ತಕ ಇದ್ದರೆ ಅಷ್ಟೇ ಸಾಕು. ಅವರು ಎಡವೋ ಬಲವೋ ನನಗೆ ಅಪ್ರಸ್ತುತ. ಎಲ್ಲರನ್ನೂ ನಾವು ಕರೆದಿದ್ದೇವೆ. ಎಲ್ಲವೂ ದೃಷ್ಟಿಕೋನವೂ ಇಲ್ಲಿ ಬರಬೇಕು. ಪ್ರೇಕ್ಷಕರು ಅವರಿಗೆ ಬೇಕಾದುದನ್ನು ಆಯ್ದುಕೊಳ್ಳಲಿ.
6. ನಿಮ್ಮ ಫೆಸ್ಟಿವಲ್ ಭಾರತದ ಬೇರೆ ಬೇರೆ ಭಾಗಗಳಲ್ಲಿ ಆರಂಭಿಸುವ ಆಲೋಚನೆ ಇದೆಯಾ?
ಇಲ್ಲ. ಈಗಾಗಲೇ ಬೇರೆ ಬೇರೆ ಊರುಗಳಲ್ಲಿ ಸಾಹಿತ್ಯೋತ್ಸವ ನಡೀತಿದೆ. ಭಾರತದಲ್ಲಿ ಇದೇ ಮಾದರಿಯ 183 ಫೆಸ್ಟಿವಲ್‌ಗಳಿವೆ. ಅವರೆಲ್ಲ ನಿಮ್ಮ ಶೈಲಿಯಲ್ಲೇ ಮಾಡ್ತಿದ್ದಾರೆ ಅಂತ ಕೆಲವರು ಹೇಳ್ತಾರೆ. ಆದರೆ ನನ್ನ ಐಡಿಯಾ ಅದೇ. ಹೆಚ್ಚು ಸಾಹಿತ್ಯೋತ್ಸವಗಳು ಬರಬೇಕು. ನಾವೇ ಎಲ್ಲವನ್ನೂ ಮಾಡಬೇಕು ಅಂತೇನಿಲ್ಲ. ಜಾಸ್ತಿಯಾದಂತೆ ಬರಹಕ್ಕೆ ಹೆಚ್ಚು ವೇದಿಕೆ ಸಿಗುತ್ತದೆ. ಮಾತಾಡದೇ ಇದ್ದವರಿಗೆ ಮಾತಾಡಲು ಅವಕಾಶ ಸಿಗುತ್ತದೆ. ನಾವು ಎಲ್ಲ ಸಾಹಿತ್ಯೋತ್ಸವವನ್ನೂ ಬೆಂಬಲಿಸುತ್ತೇವೆ.
ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ, ವಿಶ್ವವಿದ್ಯಾಲಯದಿಂದ ಐತಿಹಾಸಿಕ ನಿರ್ಧಾರ
7. ಕನ್ನಡದ ಸಾಹಿತ್ಯ ಜಗತ್ತಿನಲ್ಲಿ ಅತ್ಯುತ್ತಮ ಲೇಖಕರ ಕೊರತೆ ಕಂಡಿದೆಯೇ?
ಒಳ್ಳೇ ಅನುವಾದಕರ ಕೊರತೆಯಿದೆ. ನಿಮ್ಮ ಭಾಷೆಯ ಬರಹಗಳು ನಿಮ್ಮ ಭಾಷೆಯಲ್ಲೇ ಇದ್ದಾಗ ಅದು ಅಲ್ಲಿಯೇ ಉಳಿಯುತ್ತದೆ. ಅದು ಅನುವಾದವಾಗಿ ಬರೆಯಬೇಕು. ಆಗಲೇ ನಾಳೆಯ ಮಹತ್ವದ ಲೇಖಕರು ಹುಟ್ಟೋದು. ಅದಕ್ಕೆ ಅತ್ಯುತ್ತಮ ಅನುವಾದಕರು ಬೇಕು. ಪ್ರಕಾಶಕರು ಅದರ ಮಹತ್ವ ಮನಗಾಣಬೇಕು.
8. ಅನುವಾದ ಅಷ್ಟು ಮುಖ್ಯ ಅನ್ನುತ್ತೀರಾ?
ನೀವು ಮನೋರಂಜನ್ ಬ್ಯಾಪಾರಿಯ ಕತೆ ಕೇಳಿರಬಹುದು. ನಕ್ಸಲೈಟ್ ಆಗಿದ್ದ, ಬಂಧನಕ್ಕೊಳಗಾದ. ಜೈಲಿನಲ್ಲಿ ಅಕ್ಷರ ಕಲಿತ. ಇನ್ನೂರು ಪುಸ್ತಕ ಓದಿದ. ನಂತರ ರಿಕ್ಷಾ ಓಡಿಸುತ್ತಿದ್ದ. ಆಗ ಮಹಾಶ್ವೇತಾದೇವಿ ಪುಸ್ತಕ ಓದುತ್ತಿದ್ದ. ಅದೇ ರಿಕ್ಷಾದಲ್ಲಿ ಬಂದ ಮಹಿಳೆಯೊಬ್ಬರ ಹತ್ತಿರ ಆ ಕಾದಂಬರಿಯ ಒಂದು ಪದದ ಅರ್ಥ ಕೇಳಿದ. ಆ ಮಹಿಳೆ ಮಹಾಶ್ವೇತಾದೇವಿಯೇ ಆಗಿದ್ದರು. ಅವನಿಗೆ ಪುಸ್ತಕ ಬರೆಯಲು ಹೇಳಿದರು. ಅವನು ನಂತರ ಜೆಎಲ್‌ಎಫ್‌ಗೂ ಬಂದ. ಅವನ ಬಗ್ಗೆ ನಾನು ಕೆಲವರಿಗೆ ಹೇಳಿದೆ. ಅವನ ಪುಸ್ತಕ ಅನುವಾದಗೊಂಡಿತು. ಎ ರನ್‌ಅವೇ ಬಾಯ್ ನಮ್ಮಲ್ಲೇ ಬಿಡುಗಡೆಯಾಯಿತು. 12 ಭಾಷೆಗೆ ಅನುವಾದಗೊಂಡಿತು. ಅವನಿಗೆ ಹೌರಾದಿಂದ ಚುನಾವಣಾ ಟಿಕೆಟ್ ಸಿಕ್ಕಿ ಶಾಸಕನೂ ಆದ. ಈ ವರ್ಷ ಅವನು ಜೆಎಲ್‌ಎಫ್‌ಗೆ ಜೆಸಿಬಿ ಪುಸ್ತಕ ಬಹುಮಾನದ ನಾಮನಿರ್ದೇಶಿತನಾಗಿ ಬರುತ್ತಿದ್ದಾನೆ. ಇದು ಅನುವಾದದ ಶಕ್ತಿ.
9. ಈ ಸಲದ ಕನ್ನಡಿಗರು ಯಾರೆಲ್ಲ ಇದ್ದಾರೆ?
ಸುಧಾಮೂರ್ತಿ ನಮ್ಮಲ್ಲಿಗೆ ಬರುತ್ತಲೇ ಇರುತ್ತಾರೆ. ಅವರಲ್ಲದೇ, ಶಿವರಾಮ ಕಾರಂತರ ಅದೇ ಊರು ಅದೇ ಮರ ಅನುವಾದಿಸಿದ ದೀಪಾ ಬಸ್ತಿ, ಅಕ್ಕೈ ಪದ್ಮಶಾಲಿ ಕರ್ನಾಟಕದಿಂದ ಬರುತ್ತಿದ್ದಾರೆ.
10. ನೀವು ಬೇರೆ ಸಾಹಿತ್ಯೋತ್ಸವಗಳಿಗೆ ಹೋಗುತ್ತೀರಾ?
ಬೆಂಗಳೂರು ಸಾಹಿತ್ಯೋತ್ಸವಕ್ಕೆ ಬಹಳ ವರ್ಷಗಳಿಂದ ಕರೆಯುತ್ತಿದ್ದಾರೆ. ಆದರೆ ಹೋಗಲು ಸಮಯ ಆಗುತ್ತಿಲ್ಲ. ವಿದೇಶದ ಕೆಲವು ಫೆಸ್ಟಿವಲ್‌ಗಳಿಗೆ ಹೋಗುತ್ತೇನೆ.