ಮಿಡತೆಗಳ ಈ ಮಹಾ ಪಯಣ ಮಾರಕ; ತಡೆಗಟ್ಟಬಹುದೇ?

By Kannadaprabha NewsFirst Published May 31, 2020, 9:04 AM IST
Highlights

ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಯೊಂದು ಇಡಿಯ ಮನುಕುಲವನ್ನು ತಲ್ಲಣಗೊಳಿಸಿ ಬಡವರು, ಕಾರ್ಮಿಕರು, ಆವಾಸ, ಆಹಾರಕ್ಕಾಗಿ, ವಲಸೆ ಹೋಗುವಂತೆ ಮಾಡುತ್ತಿರುವಾಗ, ವಲಸೆ ಹೊರಟ ಕೀಟಗಳ ಗುಂಪೊಂದು ಮನುಷ್ಯನ ಆಹಾರವನ್ನೇ ಕಬಳಿಸುತ್ತಿದೆ. ಅದೂ ದಿನವೊಂದಕ್ಕೆ ಸುಮಾರು ಮೂವತ್ತೈದು ಸಾವಿರ ಜನರ ಆಹಾರವನ್ನು ಒಮ್ಮಿಲೇ ಕಬಳಿಸಬಲ್ಲ ಇವುಗಳ ಅದ್ಭುತ ಸಾಮರ್ಥ್ಯದ ಮುಂದೆ ಮಾನವನ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. 

ನಾವು ಸಾಮಾನ್ಯವಾಗಿ ಕಾಣುವ ಹಸಿರು ಮಿಡತೆಯಂತೆಯೇ ಇರುವ ಆದರೆ ಕಂದು ಬಣ್ಣದ್ದಾಗಿರುವ ಇದು ಸಾಮಾನ್ಯವಾಗಿ ಮರುಭೂಮಿಯ ಜೀವಿ. ಇದು ಆಂಟಾರ್ಟಿಕವೊಂದನ್ನು ಬಿಟ್ಟು ಭೂಮಿಯ ಉಳಿದೆಲ್ಲ ಭಾಗದಲ್ಲಿ ವ್ಯಾಪಿಸಿರುವ ಮಿಡತೆಗಳ ಹತ್ತು ಸಾವಿರ ಪ್ರಭೇದಗಳಲ್ಲಿಯೇ ಅತ್ಯಂತ ಅಪಾಯಕಾರಿ ಜೀವಿ. ಆಫ್ರಿಕಾ, ಮಧ್ಯಪೂರ್ವ ಮತ್ತು ಭಾರತ ಉಪಖಂಡಗಳಲ್ಲಿ ಕಂಡು ಬರುವ ಇದರ ವೈಜ್ಞಾನಿಕ ನಾಮಧೇಯ, ಸಿಸ್ಟೋಸರ್ಕಾ ಗ್ರೆಗೇರಿಯಾ. ಸಣ್ಣ ಕೊಂಬಿನ ಮಿಡತೆ ಎಂದೂ ಕರೆಸಿಕೊಳ್ಳುವ ಇದು ದಿನವೊಂದಕ್ಕೆ ಸುಮಾರು ಇನ್ನೂರು ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಇದು ತನ್ನ ವರ್ತನೆ ಮತ್ತು ಶರೀರ ಕ್ರಿಯೆಗಳನ್ನು ಬದಲಿಕೊಳ್ಳಬಲ್ಲದು. ಉದಾಹರಣೆಗೆ ಒಂಟಿಯಾಗಿದ್ದಾಗ ಮರುಭೂಮಿಯ ಕುರುಚಲು ಸಸ್ಯಗಳಿಗೆ ಅಂಟಿಕೊಂಡು ತೆಪ್ಪಗೆ ಕುಳಿತಿರುವ ಇದು, ಗುಂಪಿನಲ್ಲಿದ್ದಾಗ ಹೆಚ್ಚು ಕ್ರಿಯಾಶೀಲವಾಗುತ್ತದೆ.

ಮಿಡತೆ ಏನೀ ನಡತೆ? ಬಿರುಗಾಳಿಯಂತೆ ದಾಳಿ ಮಾಡುವ ಕೀಟಗಳು

ವರ್ಷದ ಉಳಿದ ಭಾಗವೆಲ್ಲ ತನ್ನ ಪಾಡಿಗೆ ತಾನಿರುವ ಇದರ ಈ ನಡತೆಯನ್ನು ಸಾಲಿಟರಿ ಎಂದರೆ ಏಕಾಂಗಿ ವರ್ತನೆ ಎಂದು ಕರೆಯುತ್ತಾರೆ. ಬೇಸಿಗೆ ಬಂದು ಆಹಾರದ ಕೊರತೆಯುಂಟಾದಾಗ ಗುಂಪುಗೂಡುವ ಇದರ ನಡತೆಯನ್ನು ಗ್ರೆಗೇರಿಯಸ್‌ ಸಹವಾಸ ವರ್ತನೆ ಎಂದು ಕರೆಯುತ್ತಾರೆ. ಅವುಗಳಲ್ಲಿ ಬಿಡುಗಡೆಯಾಗುವ ಸೆರಟೋನಿನ್‌ ಎಂಬ ಪ್ರಚೋದಕ ರಾಸಾಯನಿಕ ವಸ್ತುವೇ ಕಾರಣ. ಇದು ನಮ್ಮ ನರಮಂಡಲದಲ್ಲಿ ಬಿಡುಗಡೆಯಾಗುವ ಆಹ್ಲಾದವನ್ನುಂಟು ಮಾಡುವ ರಾಸಾಯನಿಕವೇ ಆಗಿದೆ. ಇದಕ್ಕಾಗಿ ಈ ಮಿಡತೆಗಳು ಒಂದರ ಹತ್ತಿರ ಇನ್ನೊಂದು ಬಂದಾಗ, ಅವುಗಳ ಹಿಂಗಾಲುಗಳನ್ನು ಮೆಲ್ಲಗೆ ತಾಡಿಸುತ್ತವೆ. ಅವು ಹೆಚ್ಚು ಹೆಚ್ಚಾಗಿ ಹಾಗೆ ಮಾಡಿದಂತೆಲ್ಲಾ ಅವುಗಳ ಮಿದುಳಿನಿಂದ ಸೆರಟೋನಿನ್‌ ಹೆಚ್ಚು ಹೆಚ್ಚಾಗಿ ಬಿಡುಗಡೆಯಾಗುತ್ತಾ ಹೋಗುತ್ತದೆ. ಸ್ಥಳಾವಕಾಶ ಕಡಿಮೆಯಿದ್ದಾಗ ಒಂದಕ್ಕೊಂದು ಅಂಟಿಕೊಂಡು ಕುಳಿತಷ್ಟೂಹೆಚ್ಚು ಹೆಚ್ಚು ಸೆರಟೋನಿನ್‌( ಅಧ್ಯಯನಗಳ ಪ್ರಕಾರ ಈ ಅವಧಿಯಲ್ಲಿ ಅವುಗಳ ಮಿದುಳು ಕೂಡಾ ಗಾತ್ರದಲ್ಲಿ ದೊಡ್ಡದಾಗುತ್ತದೆ) ಬಿಡುಗಡೆಯಾಗುತ್ತದೆ ಮತ್ತು ಅದು ಎಲ್ಲೆಲ್ಲಿಯೋ ಅಡಗಿ ಕುಳಿತಿರುವ ಇತರ ಮಿಡತೆಗಳಲ್ಲಿ ಸಾಮಾಜಿಕ ವರ್ತನೆಯನ್ನು ಪ್ರೋತ್ಸಾಹಿಸಿ ಆಕರ್ಷಿಸುತ್ತದೆ.

ಇದುವರೆಗೆ ಇದ್ದ ಅವುಗಳ ಹಸಿರು ಬಣ್ಣ ಬದಲಾಗಿ ಹಳದಿ ಕಂದು ಬಣ್ಣಕ್ಕೆ ತಿರುಗಲು, ಅವುಗಳ ಚಲನೆಯ ತೀವ್ರತೆಯನ್ನು ಹೆಚ್ಚಿಸಲು ಮತ್ತು ಅವುಗಳ ಹಸಿವನ್ನು ಹೆಚ್ಚಿಸಲು ಸಹ ಇದೇ ರಾಸಾಯನಿಕ ವಸ್ತು ಕಾರಣ. ಒಂದು ಮಿಡತೆ ಗುಂಪಿನಲ್ಲಿದ್ದಾಗ, ದಿನಕ್ಕೆ ಎರಡು ಕೆ.ಜಿ ಆಹಾರವನ್ನು ಕಬಳಿಸಬಲ್ಲದು. ಒಂದು ಚದರ ಕಿ.ಮೀನ ಗುಂಪು, ದಿನಕ್ಕೆ ಮುವತ್ತಾರು ಸಾವಿರ ಜನರ ಆಹಾರವನ್ನು ತಿಂದುಬಿಡುತ್ತವೆ. ಅಂದಾಗ ಕೋಟಿಗಟ್ಟಲೇ ಇರುವ ಇವುಗಳ ಗುಂಪು ಎಷ್ಟುಹಾನಿಯನ್ನು ಮಾಡಬಲ್ಲದು ಎನ್ನುವುದನ್ನು ಊಹಿಸಬಹುದು. ದಿನವೆಲ್ಲ ಕ್ರಿಯಾಶೀಲವಾಗಿರುವ ಇವು ರಾತ್ರಿಯ ಹೊತ್ತು ಮಾತ್ರ ಮರ ಇಲ್ಲವೇ ಸಸ್ಯಗಳ ಮೇಲೆ ಕುಳಿತು ವಿಶ್ರಮಿಸುತ್ತವೆ.

6 ರಾಜ್ಯಗಳಿಗೆ ಮಿಡತೆ ಸೇನೆ ದಾಳಿ! 

ಬೇಸಿಗೆ ಮುಗಿದು ಮಳೆ ಆರಂಭವಾಗುತ್ತಿದ್ದಂತೆ ಮಣ್ಣಿನಲ್ಲಿರುವ ತೇವಾಂಶ ಮತ್ತು ಗಿಡ ಮರಗಳ ಹಸಿರು ಮಿಡತೆಗಳ ಗುಂಪು ದೊಡ್ಡದಾಗುತ್ತದೆ ಹಾಗೂ ಇವುಗಳಲ್ಲಿ ಸಂತಾನಾಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಹೆಣ್ಣು ಮಿಡತೆ ತನ್ನ ಮೂರು ತಿಂಗಳ ಜೀವಿತಾವಧಿಯಲ್ಲಿ ಮೂರು ಬಾರಿ ಮೊಟ್ಟೆಗಳನ್ನು ಇಡುತ್ತದೆ. ಪ್ರತಿ ಬಾರಿ ಎಪ್ಪತ್ತರಿಂದ, ಎಂಭತ್ತು ಮೊಟ್ಟೆಗಳನ್ನು ಇಡುತ್ತದೆ. ಇದು ಆರರಿಂದ ಹನ್ನೊಂದು ದಿನಗಳ ಅಂತರದಲ್ಲಿ ನಡೆಯುತ್ತದೆ. ಒಂದು ಚದರ ಮೀಟರ್‌ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಮೊಟ್ಟೆಗಳ ಗುಂಪುಗಳು ಕಂಡುಬರುತ್ತವೆ. ಎರಡು ವಾರಗಳಲ್ಲಿ ಮೊಟ್ಟೆಗಳು ಒಡೆದು ರೆಕ್ಕೆ ರಹಿತವಾದ ನಿಂಫ್‌ ಎಂದು ಕರೆಯುವ ಮಿಡತೆಗಳು ಹೊರಬರುತ್ತವೆ. ಇವು ಮುಂದಿನ ಎರಡು ತಿಂಗಳು ಬಕಾಸುರನಂತೆ ತಿನ್ನುತ್ತ ತಮ್ಮ ದೇಹವನ್ನು ಬೆಳೆಸಿಕೊಳ್ಳುತ್ತವೆ. ಈ ಅವಧಿಯಲ್ಲಿ ಐದು ಬಾರಿ ತಮ್ಮ ದೇಹದ ಹೊರ ಕವಚವನ್ನು ಬಿಟ್ಟು ಹೊಸದನ್ನು ಬೆಳೆಸಿಕೊಳ್ಳುತ್ತವೆ. ಮುಂದೆ ಗುಂಪಿನಲ್ಲಿ ಹಾರುತ್ತಾ ಮತ್ತೆ ಸಂತಾನಭಿವೃದ್ಧಿಗೆ ತಯಾರಾಗುತ್ತವೆ.

ಮಿಡತೆಗಳ ಈ ಮಹಾ ಪಯಣ ಮಾರಕ

ಈಗ ಭಾರತವನ್ನು ಪ್ರವೇಶಿಸಿರುವ ಮಿಡತೆಗಳ ಮೂಲವಿರುವುದು 2018ರಲ್ಲಿ ಅಂದರೆ ಎರಡು ವರ್ಷಗಳ ಹಿಂದೆ. ಆಗ ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಇಥಿಯೋಪಿಯ, ಸೊಮಾಲಿಯ, ಕೆನ್ಯಾಗಳಲ್ಲಿ 2017ರ ಭಾರೀ ಬರಗಾಲದ ನಂತರ ಪ್ರವಾಹ ಸ್ಥಿತಿ ಉಂಟಾಯಿತು. ಈ ತಂಪಾದ ವಾತಾವರಣ, ಮಿಡತೆಗಳ ಸಂತಾನೋತ್ಪತ್ತಿಗೆ ಬಹಳ ಅನುಕೂಲಕರವಾಗಿದ್ದು ಸುಮಾರು ಮೂರು ತಲೆಮಾರಿನ ಮಿಡತೆಗಳು ಜನಿಸಿದವು. ಹೀಗಾಗಿ, 2019ರ ಆರಂಭದಲ್ಲಿಯೇ ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಅವುಗಳು ಗುಂಪು ಅಥವಾ ಸ್ವಾಮ್‌ರ್‍ ಉಂಟುಮಾಡುವಷ್ಟುಬೆಳೆದಿದ್ದವು. ಅಲ್ಲಿಂದ ಅವು ಹಾರಾಡುತ್ತ ಇರಾನ್‌, ಯೆಮನ್‌ ಮತ್ತು ಸೌದಿ ಅರೇಬಿಯಾವನ್ನು ಸೇರಿದವು.

ಉತ್ತರ, ಪೂರ್ವ ದಿಕ್ಕಿನತ್ತ ಮಿಡತೆ ಸೈನ್ಯ: ಕರ್ನಾಟಕದಲ್ಲಿ ದಾಳಿ ಸಾಧ್ಯತೆ ಕ್ಷೀಣ!

ಇದಕ್ಕೆ ಬೀಸುತ್ತಿದ್ದ ಗಾಳಿಯೂ ಸಹ ನೆರವಾಯಿತು. ಇಲ್ಲಿ ಮತ್ತೆ ತಮ್ಮ ಗುಂಪನ್ನು ಬೆಳೆಸಿಕೊಂಡ ಮಿಡತೆಗಳು ಪಾಕಿಸ್ತಾನದವರೆಗೆ ಹಾರಿ ಅಲ್ಲಿಯ ಹತ್ತಿಯ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದವು. ಅವು ವಸಂತ ಋುತುವಿನಲ್ಲಿ ಆಫ್ರಿಕಾದ ಕಡೆ ಚಲಿಸಿದವು. ಈ ವರ್ಷ 2020ರಲ್ಲಿ ಅವು ಅರಬ್ಬೀ ಸಮುದ್ರವನ್ನು ಹಾಯ್ದು ಭಾರತದ ರಾಜಸ್ಥಾನವನ್ನು ತಲುಪಿದವು. ಈಗ ಭಾರತ, ಪಾಕಿಸ್ಥಾನ, ಇರಾನ್‌ ಮತ್ತು ಆಫ್ರಿಕಾದ ಕೆಲವು ದೇಶಗಳು ಕಳೆದ ಮುವತ್ತು ವರ್ಷಗಳಲ್ಲಿಯೇ ಅತಿ ದೊಡ್ಡದಾದ ಮಿಡತೆ ಹಾವಳಿಯನ್ನು ಅನುಭವಿಸುತ್ತಿದ್ದು ಇನ್ನೂ ಮುಂದೆಯೂ ಮತ್ತಷ್ಟುಬರಬಹುದು ಎಂದು ನಿರೀಕ್ಷಿಸಲಾಗಿದೆ. ಕೇವಲ ಗಡಿ ರಾಜ್ಯಗಳಲ್ಲದೆಯೇ, ಗುಜರಾತ್‌, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳನ್ನು ಬಾಧಿಸುತ್ತಿವೆ. ಅವುಗಳ ಚಲನೆಗೆ ಬಲವಾದ ಅಂಫಾನ್‌ ಚಂಡಮಾರುತದ ಗಾಳಿಯೂ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಹಿಮಾಚಲಪ್ರದೇಶ, ಹರಿಯಾನಾ, ಉತ್ತರಖಂಡ್‌, ತೆಲಂಗಾಣ ಮತ್ತು ಕರ್ನಾಟಕವನ್ನು ಕೂಡಾ ಎಚ್ಚರಿಸಲಾಗಿದೆ.

ಹಸಿರಾಗಿ ಕಂಡದ್ದೆಲ್ಲವನ್ನೂ ಕಬಳಿಸುವ ಇವು ಕುರಿಗಳ ಉಣ್ಣೆಯನ್ನು, ಮನುಷ್ಯರ ಬೆನ್ನ ಮೇಲಿನ ಅರಿವೆಯನ್ನೂ ತಿಂದ ದಾಖಲೆಗಳಿವೆ. ಒಮ್ಮೆ ಒಂದು ಹೊಲವನ್ನು ಹೊಕ್ಕರೆ ಅಲ್ಲಿಂದ ಅವು ಎದ್ದಾಗ ಉಳಿಯುವುದು ಕೇವಲ ಅವು ತಿನ್ನಲಾಗದ ಬೇರು ಮತ್ತು ಗಟ್ಟಿಕಾಂಡ ಮಾತ್ರ. ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬರುವ ಇವುಗಳು ಹಲವಾರು ಬಾರಿ ಆಹಾರದ ಕೊರತೆಗೆ ಕಾರಣವಾಗಿವೆ. ಆದುದರಿಂದಲೇ ಅವುಗಳೆಂದರ ಅಷ್ಟೊಂದು ಭೀತಿ. ಈ ಬಾರಿ ಮೊಟ್ಟಮೊದಲು ಏಪ್ರಿಲ್‌ 11 ರಂದು ಇವು ಭಾರತ ಪಾಕಿಸ್ಥಾನ ಗಡಿಯಲ್ಲಿ ಕಾಣಿಸಿಕೊಂಡವು. ಆದರೆ ಈ ಬಾರಿ ಇವು ನಗರ ಪ್ರದೇಶಗಳಲ್ಲಿಯೂ ಕಾಣಿಸಿಕೊಂಡಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಇದಕ್ಕೆ ಬಲವಾದ ಗಾಳಿ ಬೀಸುವಿಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಜೂನ್‌ ಮಧ್ಯ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವು ಈ ಬಾರಿ ಮುಂಚೆಯೇ ಕಾಣಿಸಿಕೊಳ್ಳಲು ಏರುತ್ತಿರುವ ಭೂಮಿಯ ತಾಪಮಾನವೇ ಕಾರಣ ಎಂದೂ ಹೇಳಲಾಗಿದೆ.

ಕಾರ್ಕಳದಲ್ಲಿ ಬೃಹತ್ ರಕ್ಕಸ‌ ಮಿಡತೆ ಪತ್ತೆ! 

ತಡೆಗಟ್ಟಬಹುದೇ

ಗಡಿ ರೇಖೆಗಳನ್ನು ಕೇರ್‌ ಮಾಡದ ಇವುಗಳನ್ನು ತಡೆಗಟ್ಟುವುದು ಅಸಾಧ್ಯ. ಆದರೆ ಒಮ್ಮೆ ಬಂದ ಮೇಲೆ ನಿವಾರಿಸುವುದೂ ಕೂಡಾ ಸುಲಭವಲ್ಲ. ಜಾಗಟೆಗಳನ್ನು ಬಾರಿಸುವುದರಿಂದ ಹಿಡಿದು ಬಲೆ ಬೀಸುವ, ಸುಡುವ, ಕೀಟನಾಶಕಗಳನ್ನು ಸಿಂಪಡಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತವೆ. ಇವುಗಳ ಅಗಾಧ ಸಂಖ್ಯೆಯ ಮುಂದೆ, ಈ ಪ್ರಯತ್ನಗಳು ಹೆಚ್ಚು ಶ್ರಮದಾಯಕವೆನಿಸುತ್ತವೆ. ಇತ್ತೀಚೆಗೆ ಡ್ರೋನ್‌ಗಳನ್ನು ಬಳಸಿ ಕೀಟನಾಶಕ ಸಿಂಪಡಿಸುವ ಪ್ರಯತ್ನವೂ ನಡೆದಿದೆ. ಇವುಗಳನ್ನು ಹಿಡಿದು ಕೋಳಿ ಮುಂತಾದ ಇತರ ಜೀವಿಗಳಿಗೆ ಆಹಾರವನ್ನಾಗಿ ಬಳಸುವ, ನಮ್ಮ ಆಹಾರವನ್ನು ತಿನ್ನುವ ಇವುಗಳನ್ನೇ ಆಹಾರ ಮಾಡಿಕೊಳ್ಳುವ ಯತ್ನಗಳು ಸಾಗಿವೆ. ಆದರೆ ಇವೆಲ್ಲ ಅವು ಒಮ್ಮೆ ಬಂದ ನಂತರ ಅಷ್ಟುಹೊತ್ತಿಗಾಗಲೇ ಆಗಬಾರದಿದ್ದ ಹಾನಿ ಆಗಿಬಿಟ್ಟಿರುತ್ತದೆ. ಪ್ರಕೃತಿಯ ಮುಂದೆ ಇನ್ನು ಮುಂದೆ ಮಾನವನ ಆಟ ನಡೆಯಲಾರದು ಎನ್ನುವುದರ ಸಂಕೇತವೇ?

click me!