ಜೈಪುರ ಲಿಟರರಿ ಫೆಸ್ಟಿವಲ್‌ನ 16ನೇ ಸಂಚಿಕೆ ಜನವರಿ 19ರಿಂದ ಆರಂಭವಾಗಿದೆ. ಜಗತ್ತಿನ ಅತಿ ದೊಡ್ಡ ಲಿಟರರಿ ಶೋ ಎಂದೇ ಕರೆಸಿಕೊಳ್ಳುವ ಈ ಸಾಹಿತ್ಯೋತ್ಸವದ ಮೊದಲ ದಿನದ ವಿಶೇಷ ವಿಷಯಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಕತೆಗಾರರಾದ ಜೋಗಿ.
ಜೋಗಿ, ಕನ್ನಡಪ್ರಭ
ಬಿಟ್-1
ಕೋವಿಡ್ ನಂತರ ಕಳೆಗಟ್ಟಿದ ಜೈಪುರ ಜಾತ್ರೆ
ತರುಣ ತರುಣಿಯರು ತುಂಬಿದ ಸಭೆ, ವರ್ಣರಂಜಿತ ವೇದಿಕೆ, ಜೈಪುರದ ಜನಪದ ಕಲೆಗಳ ಪ್ರದರ್ಶನ, ಜಾನಪದ ಸಂಗೀತಗಾರರ ಗಾನಗೋಷ್ಠಿ, ಶಂಖವಾದ್ಯ, ತಂಬೂರಿ, ನಗಾರಿ, ಭೇರಿಗಳ ಅನುರಣನದೊಂದಿಗೆ ಜೈಪುರ ಸಾಹಿತ್ಯ ಉತ್ಸವ ಆರಂಭಗೊಂಡಿತು. ಜೈಪುರ ಸಾಹಿತ್ಯೋತ್ಸವದ 16ನೇ ಸಂಚಿಕೆಯನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರಜಾಕ್ ಗುರ್ನಾ ದೀಪ ಬೆಳಗಿಸಿ ಉದ್ಘಾಟಿಸಿದರು. ಅದಕ್ಕೂ ಮುಂಚೆ ಜೈಪುರದ ಜಾನಪದ ಸಂಗೀತ ತಂಡ ಹತ್ತು ನಿಮಿಷಗಳ ಸಂಗೀತ ನಿನಾದ ಸೃಷ್ಟಿಸುವ ಮೂಲಕ ಸಾಹಿತ್ಯೋತ್ಸವಕ್ಕೆ ಬೇಕಾದ ಮನೋಭೂಮಿಕೆ ಸಿದ್ಧಪಡಿಸಿತು.
14 ಅಂತಾರಾಷ್ಟ್ರೀಯ ಭಾಷೆ ಮತ್ತು 21 ಭಾರತೀಯ ಭಾಷೆಗಳ ಕತೆಗಾರರು, ಕವಿಗಳು ಮತ್ತು ಕಲಾವಿದರು ಸಂಗಮಿಸಿದ ಜೈಪುರ ಜಾತ್ರೆಗೆ ದೂರದೂರದ ರಾಜ್ಯಗಳ ವಿದ್ಯಾರ್ಥಿಗಳು ಆಗಮಿಸಿದ್ದರು. ಕೋವಿಡ್ ನಂತರ ಮೊದಲ ಬಾರಿಗೆ ಜೈಪುರ ಜಾತ್ರೆ ತುಂಬಿ ತುಳುಕುವ ಜನಸಂದಣಿಯಿಂದ ನಳನಳಿಸಿತು.
undefined
ಬಿಟ್-2
ಜೈಪುರ ಜಾತ್ರೆಯಲ್ಲಿ ಕಂಡ ಕನ್ನಡಿಗರು
ಸಾಮಾನ್ಯವಾಗಿ ಜೈಪುರ ಸಾಹಿತ್ಯೋತ್ಸವದಲ್ಲಿ ವೇದಿಕೆಯಲ್ಲಿ ಭಾಗವಹಿಸುವ ಲೇಖಕರನ್ನು ಬಿಟ್ಟರೆ ಕೇಳುಗರಾಗಿ ಬರುವ ಕನ್ನಡಿಗರ ಸಂಖ್ಯೆ ಕಡಿಮೆ. ಆದರೆ ಈ ಬಾರಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿಮರ್ಶಕ ವಿಕ್ರಮ ವಿಸಾಜಿ, ಕತೆಗಾರ ಮುದಿರಾಜ್ ಬಾಣದ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್, ಬುಕ್ ಬ್ರಹ್ಮದ ಸಂಪಾದಕ ದೇವು ಪತ್ತಾರ್, ಉಷಾಪ್ರಸಾದ್, ಸಾಹಿತ್ಯಾಸಕ್ತ ಶ್ರೀನಿವಾಸ ದೇಶಪಾಂಡೆ ಸೇರಿದಂತೆ ನೂರಕ್ಕೂ ಹೆಚ್ಚು ಕನ್ನಡಿಗರು ಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದಿಂದ ಉಪನ್ಯಾಸಕರು, ಹೈದರಾಬಾದ್, ಚೆನ್ನೈಯಿಂದ ಹೊರನಾಡ ಕನ್ನಡಿಗರೂ ಸಾಹಿತೋತ್ಸವಕ್ಕೆ ಶ್ರೋತೃಗಳಾಗಿ ಬಂದಿದ್ದರು. ಮಾತುಗಾರರಾಗಿ ಕನ್ನಡದಿಂದ ಸುಧಾಮೂರ್ತಿ, ಅಕ್ಕೈ ಪದ್ಮಶಾಲಿ ಮತ್ತು ದೀಪಾ ಬಸ್ತಿ ವಿವಿಧ ವಿಚಾರಗಳನ್ನು ಮಂಡಿಸಲು ಆಗಮಿಸಿದ್ದರು.
Jaipur Literary Festival: 'ಕೈಲಿ ಪುಸ್ತಕ ಇರಬೇಕು, ತಲೇಲಿ ಐಡಿಯಾ ಇರಬೇಕು..'
ಬಿಟ್-3
ಅನುವಾದಕರಿಗೆ ಮೊದಲ ಮಣೆ
16ನೇ ಜೈಪುರ ಸಾಹಿತ್ಯೋತ್ಸವದಲ್ಲಿ ಅನುವಾದಕರಿಗೆ ವಿಶೇಷ ಮನ್ನಣೆ ನೀಡುವುದಾಗಿ ಕಾರ್ಯಕ್ರಮ ಸಂಯೋಜಕರಾದ ಸಂಜಯ್ ಕೆ. ರಾಯ್ ತಿಳಿಸಿದರು. ಅನುವಾದ ಅತ್ಯಂತ ಅಗತ್ಯವಾದ ಕೆಲಸ. ಒಂದು ಭಾಷೆಯ ಮಹತ್ವದ ಕೃತಿಗಳನ್ನು ಜಗತ್ತಿಗೆ ತಲುಪಿಸುವುದು ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ಅನುವಾದಕರ ಪಾತ್ರ ದೊಡ್ಡದು. ಸಮರ್ಥ ಅನುವಾದಕರು ಒಂದು ಭಾಷೆಯ ಆಸ್ತಿ. ಅಂಥ ಅನುವಾದಕರನ್ನು ಮಾತನಾಡಿಸಿ, ಅನುವಾದ ಸಂತೋಷ, ಸಂಕಟಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಈ ಸಲದ ಜೈಪುರ ಸಾಹಿತ್ಯ ಜಾತ್ರೆಯಲ್ಲಿ ಆಗುತ್ತಿದೆ. ಎಲ್ಲಾ ಭಾಷೆಯಿಂದಲೂ ಅನುವಾದಕರು ಬಂದಿದ್ದಾರೆ ಎಂದು ಸಂಜಯ್ ರಾಯ್ ಅನುವಾದಕರ ಮಹತ್ವವನ್ನು ಆರಂಭದಲ್ಲಿ ಎತ್ತಿಹಿಡಿದರು.
ಬಿಟ್-4
ಕಸರಹಿತ, ಕಾರ್ಬನ್ ರಹಿತ
ನಮ್ಮ ವಿಶ್ವ ಸಂಕಷ್ಟದಲ್ಲಿದೆ. ನಾವು ಸೃಷ್ಟಿಸುತ್ತಿರುವ ಕಸ ಮತ್ತು ಮಾಲಿನ್ಯ ವಿಶ್ವವನ್ನು ಕಲುಷಿತಗೊಳಿಸುತ್ತಿವೆ. ಹೀಗಾಗಿ ಈ ಸಲದ ಸಮ್ಮೇಳನವನ್ನು ಕಸ ರಹಿತ ಮತ್ತು ಕಾರ್ಬನ್ ರಹಿತ ಸಮ್ಮೇಳನವಾಗಿ ರೂಪಿಸಲು ನಿರ್ಧರಿಸಿದ್ದೇವೆ, ಇದು ಈ ಜಗತ್ತಿಗೆ ನಾವು ಸಲ್ಲಿಸುವ ಗೌರವ ಮತ್ತು ಪ್ರೀತಿ ಎಂದು ಸಂಜಯ್ ರಾಯ್ ಘೋಷಿಸಿದರು.
ಸಮ್ಮೇಳನದಲ್ಲಿ ಈ ಸಲ ಭಾಗವಹಿಸುವವರ ಕೊಡುವ ಗುರುತಿನ ಚೀಟಿಗೆ ಪ್ಲಾಸ್ಟಿಕ್ ಕವಚ ಇರಲಿಲ್ಲ. ಕಾರ್ಯಕ್ರಮ ಪಟ್ಟಿಯನ್ನು ಕಡಿಮೆ ಸಂಖ್ಯೆಯಲ್ಲಿ ಮುದ್ರಿಸಲಾಗಿತ್ತು. ನೀರಿನ ಸದ್ಬಳಕೆ ಮತ್ತು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಇಡೀ ಸಾಹಿತ್ಯ ಜಾತ್ರೆಯ ಅಂಗಳನ್ನು ಸ್ವಚ್ಛವಾಗಿ ಇರಿಸಲು ಆಯೋಜಕರೂ, ಸ್ವಯಂ ಸೇವಕರೂ ಸಾಹಿತ್ಯಾಸಕ್ತರಿಗೆ ಸೂಚಿಸುತ್ತಿದ್ದರು.
ಬಿಟ್ -5
4 ನಿಮಿಷ 21 ಸೆಕಂಡ್
ಜೈಪುರ ಸಾಹಿತ್ಯೋತ್ಸವದ ಆಶಯ ಭಾಷಣ ಮಾಡಲಿಕ್ಕೆ ಬಂದಿದ್ದ ತಾಂಜಾನಿಯ ಮೂಲದ ಬ್ರಿಟಿಷ್ ಲೇಖಕ ಅಬ್ದುಲ್ ರಜಾಕ್ ಗುರ್ನಾ ಕೇವಲ ನಾಲ್ಕು ನಿಮಿಷ 21 ಸೆಕೆಂಡಿನಲ್ಲಿ ತಮ್ಮ ಮಾತು ಮುಗಿಸಿದರು. ತಾವು ಹೇಳಬೇಕಾದ ವಿಚಾರಗಳನ್ನು ನಿರರ್ಗಳವಾಗಿ ಹೇಳಿ ಮುಗಿಸಿದಾಗ ಸೇರಿದ ಸಾವಿರಾರು ಮಂದಿ ಅವರ ಚುಟುಕು ಮಾತಿಗೆ ಬೆರಗಾಗಿ ಚಪ್ಪಾಳೆ ತಟ್ಟಿದರು.
ಜೈಪುರ ಸಾಹಿತ್ಯ ಉತ್ಸವ 2023ಕ್ಕೆ ವೇದಿಕೆ ಸಜ್ಜು
ಬಿಟ್ -6
ನೆಲದಲ್ಲಿ ಕುಳಿತರು ಸುಧಾಮೂರ್ತಿ
ಮೊದಲು ಬಂದವರಿಗೆ ಆಸನ ವ್ಯವಸ್ಥೆ. ಇಲ್ಲಿ ಸೀಟು ರಿಸರ್ವ್ ಮಾಡುವ ವ್ಯವಸ್ಥೆ ಇಲ್ಲ ಎಂದು ಜೈಪುರ ಲಿಟರೇಚರ್ ಫೆಸ್ಟಿವಲ್ ನಿಯಮ ಹೇಳುತ್ತದೆ. ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಸುಧಾಮೂರ್ತಿ, ಮುಂದಿನ ಸಾಲಲ್ಲಿ ನೆಲದ ಮೇಲೆ ನೂರಾರು ಮಂದಿಯ ಜತೆ ಕುಳಿತು ಕಾರ್ಯಕ್ರಮ ಕೇಳಬೇಕಾಯಿತು.
ಶಶಿ ತರೂರ್ ಮತ್ತು ಕೆರೋಲಿನ್ ಎಲ್ಕಿನ್ಸ್ ಮಾತುಕತೆಯ ಕಾರ್ಯಕ್ರಮಕ್ಕೆ ಕೇಳುಗರು ಕಿಕ್ಕಿರಿದು ನೆರೆದಿದ್ದರು. ಲೆಗಸಿ ಆಫ್ ವಯಲೆನ್ಸ್ ಕೃತಿಯ ಕುರಿತು ನಡೆದ ಬಿರುಸಿನ ಮಾತುಕತೆಗೆ ಬಂದ ಸುಧಾಮೂರ್ತಿ ಎಲ್ಲರಂತೆ ನೆಲದ ಮೇಲೆ ಕುಳಿತು ಇಡೀ ಕಾರ್ಯಕ್ರಮ ವೀಕ್ಷಿಸಿದರು. ಅವರು ಕಾರ್ಯಕ್ರಮದಲ್ಲಿ ಇರುವುದನ್ನು ಗಮನಿಸಿ, ಮಾತುಗಾರರು ರಿಷಿ ಸುನಕ್ ವಿಚಾರವನ್ನೂ ಪ್ರಸ್ತಾಪಿಸಿದರು.
ಬಿಟ್-6
ಜೈಪುರಕ್ಕೆ ಬಂದ ತಟ್ಟೆ ಇಡ್ಲಿ
ಸಾಮಾನ್ಯವಾಗಿ ಜೈಪುರದ ಸಾಂಪ್ರದಾಯಿಕ ತಿನಿಸುಗಳೇ ಜೈಪುರ ಸಾಹಿತ್ಯೋತ್ಸವದಲ್ಲಿ ದೊರೆಯುತ್ತಿದ್ದವು. ಈ ಸಲ ಸಾಹಿತ್ಯ ಜಾತ್ರೆಯ ಅಂಗಳದಲ್ಲಿ ಬಿಡದಿಯ ವಿಶೇಷ ತಟ್ಟೆ ಇಡ್ಲಿಯೂ ಕಾಣಿಸಿಕೊಂಡಿತ್ತು. ವಿದೇಶಿ ಪ್ರಜೆಗಳು ಥಾಟೆ ಇದ್ಲಿ ಎಂದು ಕೇಳುತ್ತಾ ತಟ್ಟೆ ಇಡ್ಲಿ ಸವಿಯುತ್ತಿದ್ದರು. ರಸಂ ವಡಾ, ರಾಗಿದೋಸೆಗಳಿಗೂ ಬೇಡಿಕೆ ಇತ್ತು.