2020ಕ್ಕೂ ಮುನ್ನ ನೀವು ಈ 20 ಕೆಲಸಗಳನ್ನು ಮಾಡಲೇಬೇಕು!

By Suvarna News  |  First Published Dec 21, 2019, 12:32 PM IST

ಹೊಸ ನಿರೀಕ್ಷೆಗಳು, ಕನಸುಗಳನ್ನು ಹೊತ್ತು 2020 ಆಗಮನಕ್ಕೆ ಸಜ್ಜಾಗಿ ಹೊಸಿಲಿಗೆ ಬಂದು ನಿಂತಿದೆ. 2020 ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಮೂಟೆಗಳನ್ನು ಹೊತ್ತು ತರುತ್ತದೆ ಎಂಬ ನಿರೀಕ್ಷೆಗಳನ್ನಿಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಿಮ್ಮ ನಿರೀಕ್ಷೆಗಳು ಈಡೇರಬೇಕೆಂದರೆ ಅದಕ್ಕಾಗಿ ನೀವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯ ಎಂಬ ಬಗ್ಗೆ ಯೋಚಿಸಿದ್ದೀರಾ? 


ಬದಲಾವಣೆಯಿದ್ದಾಗ ಅಲ್ಲಿ ಹೊಸತನ, ಉತ್ಸಾಹ, ಸಂತಸ ಕೂಡ ಮನೆ ಮಾಡುತ್ತದೆ. ಹೀಗಾಗಿ 2020 ಖುಷಿ, ನೆಮ್ಮದಿ ಹಾಗೂ ಯಶಸ್ಸಿನ ಕ್ಞಣಗಳನ್ನು ನಿಮ್ಮ ನೆನಪಿನ ಜೋಳಿಗೆಗೆ ತುಂಬಿಸಬೇಕು ಅಂದ್ರೆ ನೀವು ಈ 20 ಕೆಲಸಗಳನ್ನು ಮಾಡುವುದು ಅಗತ್ಯ. 

1.ಮೊಬೈಲ್‍ನಲ್ಲಿರುವ ಪ್ರಯೋಜನಕ್ಕೆ ಬಾರದ 20 ಕಾಂಟ್ಯಾಕ್ಟ್‍ಗಳನ್ನು ಡಿಲೀಟ್ ಮಾಡಿ: ನಿಮ್ಮೊಂದಿಗೆ ಸಂಪರ್ಕದಲ್ಲಿರದ, ಅಗತ್ಯವಿಲ್ಲದ ವ್ಯಕ್ತಿಗಳ ಫೋನ್ ನಂಬರ್ ನಿಮ್ಮ ಮೊಬೈಲ್‍ನ ಮೆಮೋರಿಗೆ ಅನಗತ್ಯ ಹೊರೆಯೇ ಸರಿ. ಜೊತೆಗೆ ಕೆಲವೊಂದು ವ್ಯಕ್ತಿಗಳ ನಂಬರ್ ನೋಡಿದ ತಕ್ಷಣ ನಿಮ್ಮ ಮನಸ್ಸು ಕೂಡ ಕಹಿ ನೆನಪುಗಳ ಹೊರೆಯಿಂದ ಭಾರವಾಗಬಹುದು. ಆದಕಾರಣ ಇಂಥ ನಂಬರ್‍ಗಳನ್ನು ಡಿಲೀಟ್ ಮಾಡಿ. ಇದು ನಿಮ್ಮ ಮೊಬೈಲ್ ಮಾತ್ರವಲ್ಲ, ಮನಸ್ಸಿನ ಹೊರೆಯನ್ನು ಕೂಡ ತಗ್ಗಿಸಿ ನಿರಾಳತೆ ನೀಡುತ್ತದೆ.

Latest Videos

undefined

ಹೊರರಾಜ್ಯದ ಆಡು ಸಾಕಿದರೆ ಲಕ್ಷಾಂತರ ರು. ಆದಾಯ ಪಡೆಯಬಹುದು!

2.ಪ್ರಶಾಂತ ವಾತಾವರಣದಲ್ಲಿ 20 ನಿಮಿಷ ಧ್ಯಾನ ಮಾಡಿ: ಧ್ಯಾನ ನಿಮ್ಮ ಆರೋಗ್ಯದಲ್ಲಷ್ಟೇ ಅಲ್ಲ, ವ್ಯಕ್ತಿತ್ವದಲ್ಲಿಯೂ ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲದು. ಧ್ಯಾನ ಮನಸ್ಸಿನ ಒತ್ತಡವನ್ನು ತಗ್ಗಿಸಿ ಪ್ರಶಾಂತತೆಯನ್ನು ನೀಡುತ್ತದೆ. ಆದಕಾರಣ 2020ಕ್ಕೆ ಹೊಸ ಜೋಷ್ ತುಂಬಲು 20 ನಿಮಿಷ ಧ್ಯಾನ ಮಾಡಿ.

3.ನಿಮ್ಮನ್ನು ನೀವು ಕ್ಷಮಿಸಲು 20 ಕಾರಣಗಳನ್ನು ಕಂಡುಕೊಳ್ಳಿ: ನಿಮ್ಮ ಮನಸ್ಸಿಗೆ ನೀವೇ ನೂರಾರು ಕಷ್ಟಗಳನ್ನು ಹೇರಿರುತ್ತೀರಿ. ಯಾವುದೋ ಸಂದರ್ಭದಲ್ಲಿ ಮಾಡಿದ ಎಡವಟ್ಟು ಕೆಲಸಗಳು, ಆಡಿದ ಮಾತುಗಳು ನಿಮ್ಮ ಮನಸ್ಸಿನೊಳಗೆ ಹೊಕ್ಕು ಆಗಾಗ ಚಡಿಯೇಟು ನೀಡುತ್ತಿರುತ್ತವೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ಕಾರ್ಯ ಮಾಡುತ್ತದೆ ಎಂಬುದು ನೆನಪಿರಲಿ. ನಿಮ್ಮನ್ನು ನೀವು ಕ್ಷಮಿಸಲು ನೂರಾರು ಕಾರಣಗಳಿರುತ್ತವೆ. ಎಲ್ಲವನ್ನು ಹುಡುಕುವುದು ಕಷ್ಟವಾಗಬಹುದು. ಕನಿಷ್ಠ 20 ಕಾರಣಗಳನ್ನಾದರೂ ಹುಡುಕಿ ನಿಮಗೆ ನೀವೇ ಕ್ಷಮಾದಾನ ನೀಡಿ.

4. 2019ಕ್ಕೆ ಕೃತಜ್ಞರಾಗಿರಲು ಕಾರಣವಾದ 20 ಅಂಶಗಳನ್ನು ಪಟ್ಟಿ ಮಾಡಿ: ಕೃತಜ್ಞತೆ ಎನ್ನುವುದು ನಮ್ಮಲ್ಲಿ ಸಕಾರಾತ್ಮಕ ಮನೋಭಾವವನ್ನು ಪೋಷಿಸುತ್ತದೆ. 2019 ನಿಮಗೆ ನೀಡಿದ ಸಿಹಿ ಅನುಭವಗಳನ್ನು ಪಟ್ಟಿ ಮಾಡುವ ಮೂಲಕ ಆ ವರ್ಷಕ್ಕೆ ಕೃತಜ್ಞತೆ ಸಲ್ಲಿಸಿ.  ಆ ಮೂಲಕ 2020ಕ್ಕೆ ಪಾಸಿಟಿವ್ ಆಲೋಚನೆಗಳೊಂದಿಗೆ ಕಾಲಿಡುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮನಸ್ಸನ್ನು ಕೇಂದ್ರೀಕರಿಸಿ.

ಗುಡ್‌ ಬೈ 2019: ವಿಭಿನ್ನ ಡ್ರೆಸ್ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸೆಲೆಬ್ರಿಟಿಗಳು!

5. 2019ರೊಂದಿಗೆ ಬಿಟ್ಟು ಹೋಗುವ 20 ವಿಷಯಗಳನ್ನು ಪಟ್ಟಿ ಮಾಡಿ: ಬದುಕು ಹರಿಯುವ ನದಿಯಂತೆ ನಿರಂತರವಾಗಿ ಸಾಗುತ್ತಲಿರಬೇಕು. ನಿಮ್ಮೊಳಗಿರುವ ಅನಗತ್ಯವಾದ 20 ವಿಷಯಗಳನ್ನು ಪಟ್ಟಿ ಮಾಡಿ. ಅವುಗಳನ್ನು 2019ರಲ್ಲೇ ಬಿಟ್ಟು ಮುಂದೆ ಸಾಗಿ.

6.ನಿಮಗೆ ಹೆಮ್ಮೆ ತರುವ ನೀವು ಮಾಡಿದ 20 ಕಾರ್ಯಗಳನ್ನು ಗುರುತಿಸಿ: ಮುಂದೆ ಸಾಗುವ ಮುನ್ನ ಒಮ್ಮೆ ಹಿಂತಿರುಗಿ ನೋಡುವುದರಿಂದ ಮುಂದಿನ ಹಾದಿ ಸವೆಸಲು ಅಗತ್ಯವಾದ ಶಕ್ತಿ, ಸಾಮಥ್ರ್ಯ ಸಿಗುತ್ತದೆ. ಹೀಗಾಗಿ ನಿಮ್ಮ ಮನಸ್ಸಿಗೆ ಖುಷಿ ಕೊಟ್ಟ, ನಿಮಗೆ ನೀವೇ ಹೆಮ್ಮೆಪಡುವ 20 ಕಾರ್ಯಗಳನ್ನು ಪಟ್ಟಿ ಮಾಡಿ. ಆ ಮೂಲಕ ನಿಮ್ಮ ಗತಕಾಲದ ಬಗ್ಗೆ ಹೆಮ್ಮೆಪಡಿ.

7. ಪ್ರೀತಿ, ಪಾರ್ಥನೆ, ಹಣ ಹಾಗೂ ಸಮಯ ನೀಡಬಯಸುವ 20 ಸಂಗತಿಗಳು: ನಾವೆಲ್ಲರೂ ಈ ಜಗತ್ತಿನ ಒಂದು ಭಾಗ. ನಾವು ಬದುಕುವ ಸಮಾಜಕ್ಕೆ ನೆರವು ನೀಡುವುದು ನಮ್ಮ ಕರ್ತವ್ಯ. ಆದಕಾರಣ ನೀವು ಯಾರಿಗೆ ಪ್ರೀತಿ ನೀಡಬಯಸುತ್ತೀರಿ ಹಾಗೂ ಯಾವ ಕಾರ್ಯಗಳಿಗೆ ನೆರವು ನೀಡಲು ಇಚ್ಛಿಸುತ್ತೀರಿ ಎಂಬುದನ್ನು ಪಟ್ಟಿ ಮಾಡಿ.

ಬದಲಾಗುತ್ತಿದೆ ಆಕರ್ಷಣೆಯ ಟ್ರೆಂಡ್, ಹೆಚ್ಚುತ್ತಿರುವ ಸೆಪಿಯೋಸೆಕ್ಷುಯಲ್‌ ವರ್ಗ!

8.ನಿಮ್ಮ ಯಶಸ್ಸನ್ನು ಸಂಭ್ರಮಿಸಲು 20 ಕಾರಣಗಳು: ನೀವು ಈ ತನಕ ಮಾಡಿರುವ ಸಾಧನೆಗಳನ್ನು ಸಂಭ್ರಮಿಸಲು ನಿಮ್ಮ ಬಳಿಯಿರುವ 20 ಕಾರಣಗಳನ್ನು ಹುಡುಕಿ. 

9.ನಿಸರ್ಗದ ಮಡಿಲಲ್ಲಿ 20 ನಿಮಿಷ ಮಗುವಾಗಿ: ಮೊಬೈಲ್ ಅನ್ನು ಮನೆಯಲ್ಲಿಟ್ಟು ಅಥವಾ ಸ್ವಿಚ್ ಆಪ್ ಮಾಡಿ ಗಿಡಮರಗಳಿರುವ ಪ್ರಶಾಂತವಾದ ಸ್ಥಳದಲ್ಲಿ 20 ನಿಮಿಷ ವಾಕ್ ಮಾಡಿ. ಸುತ್ತಮುತ್ತಲಿರುವ ಗಿಡ, ಮರಗಳು, ಪಕ್ಷಿಗಳು, ಪ್ರಾಣಿಗಳು…ಹೀಗೆ ಪ್ರತಿ ವಸ್ತುವನ್ನು ನೋಡಿ. ಮನಸ್ಸೆಲ್ಲ ಆ ಪರಿಸರದ ಸುತ್ತಲೇ ಸುತ್ತಲಿ. ಇದು ನಿಮ್ಮಲ್ಲೊಂದು ಪಾಸಿಟಿವ್ ಎನರ್ಜಿಯನ್ನು ಹುಟ್ಟುಹಾಕುವುದಂತೂ ಪಕ್ಕಾ.

10.ಎರಡು ನಿಮಿಷ ಮರವೊಂದಕ್ಕೆ ಒರಗಿ 20 ಅನುಭಗಳನ್ನು ಪಡೆಯಿರಿ: ಮರವೊಂದರ ಬಳಿ ತೆರಳಿ ಅದಕ್ಕೆ ಒರಗಿ ಸುಮ್ಮನೆ ನಿಂತುಕೊಳ್ಳಿ. ಶುದ್ಧ ಗಾಳಿ ನಿಮ್ಮ ನರನಾಡಿಗಳಲ್ಲಿ ಸಂಚರಿಸಿ ಹೊಸ ಉತ್ಸಾಹವನ್ನು ನೀಡುತ್ತದೆ. ಮರದಿಂದ ನಿಮಗೆ ಅದೆಷ್ಟೋ ಅನುಭವಗಳು ಧಕ್ಕಬಹುದು. ಅದರಲ್ಲಿ 20 ಅನ್ನು ನೆನಪಿಟ್ಟುಕೊಳ್ಳಿ.

11. ಹೊಸ ಕೆಲಸ ಮಾಡಿ ಇಲ್ಲವೆ ಕಲಿಯಿರಿ: ಬಹುದಿನಗಳಿಂದ ನಿಮ್ಮ ಮನಸ್ಸಿನಲ್ಲಿ ಮಾಡಬೇಕೆಂದುಕೊಂಡ ಹೊಸ ಕಾರ್ಯವೊಂದನ್ನು ಮಾಡಿ. ಉದಾಹರಣೆಗೆ ಕಾರ್ ಡ್ರೈವಿಂಗ್ ಕಲಿಯಬೇಕೆಂದುಕೊಂಡಿದ್ದರೆ ತಡಮಾಡದೆ ಆ ಕೆಲಸ ಮಾಡಿ. ಹೊಸ ವಿಚಾರ ಕಲಿಯುವುದು ಅಥವಾ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.

12. ನಿಮ್ಮಿಷ್ಟದ ಮ್ಯೂಸಿಕ್‍ಗೆ 20 ನಿಮಿಷ ಡ್ಯಾನ್ಸ್ ಮಾಡಿ: ನಿಮ್ಮೊಳಗಿನ ತುಂಟತನವನ್ನು ಹೊರಹಾಕಲು ಅಳುಕೇಕೆ? ಮನಸ್ಸಿಗೆ ಹಿತವೆನಿಸುವ, ಖುಷಿ ನೀಡುವ ಮ್ಯೂಸಿಕ್‍ಗೆ ಮೈ ಮರೆತು ಡ್ಯಾನ್ಸ್ ಮಾಡಲು ಈ ವರ್ಷ ಹಿಂದೇಟು ಹಾಕಬೇಡಿ. ನಿಮಿಷ್ಟದ ಹಾಡಿಗೆ 20 ನಿಮಿಷ ಕುಣಿದು ಕುಪ್ಪಳಿಸಿ. 

13. ಜೀವನದಲ್ಲಿ ಖುಷಿ ಕೊಡುವ 20 ಸಂಗತಿಗಳನ್ನು ಪಟ್ಟಿ ಮಾಡಿ: ನಿಮಗೆ ಅತ್ಯಂತ ಖುಷಿ ಕೊಟ್ಟ ದಿನ ಯಾವುದು? ಆ ಖುಷಿಗೆ ಕಾರಣವಾದ 20 ಸಂಗತಿಗಳನ್ನು ಪಟ್ಟಿ ಮಾಡಿ. ಅವುಗಳನ್ನು ನೀವು ಹೇಗೆ ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿ.

14. ನಿಮ್ಮ ಈಗಿನ ಹಾಗೂ ಮುಂದಿನ ಯಶಸ್ಸನ್ನು ನಿರ್ಧರಿಸುವ 20 ಸಕಾರಾತ್ಮಕ ಗುಣಳು: ನಿಮ್ಮ ಈಗಿನ ಹಾಗೂ ಮುಂದಿನ ಜೀವನವನ್ನು ನಿರ್ಧರಿಸುವ ನಿಮ್ಮಲ್ಲಿನ 20 ಗುಣಗಳನ್ನು ಪಟ್ಟಿ ಮಾಡಿ. ಉದಾಹರಣೆಗೆ ನೀವು ಅತ್ಯಂತ ಕಾಳಜಿಯುಳ್ಳವರು, ಪ್ರಭಾವಶಾಲಿಗಳು ಇತ್ಯಾದಿ. ಇದನ್ನೆಲ್ಲ ಬರೆದ ಬಳಿಕ ಗಟ್ಟಿಯಾಗಿ ಓದಿ

15. ನಿಮ್ಮ ಧ್ಯೇಯ, ಉದ್ದೇಶಗಳನ್ನು ನಿಮ್ಮದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿ: 2020ರಲ್ಲಿ ನೀವೇನು ಧ್ಯೇಯ ಹಾಗೂ ಉದ್ದೇಶಗಳನ್ನು ಹೊಂದಿದ್ದೀರಿ ಎನ್ನುವುದನ್ನು ರೆಕಾರ್ಡ್ ಮಾಡಿ. ಸಮಯ ಸಿಕ್ಕಾಗಲೆಲ್ಲ ಅದನ್ನು ಕೇಳಿಸಿಕೊಳ್ಳುತ್ತಿರಿ. ಇದರಿಂದ ನೀವು ಮಾಡಬೇಕೆಂದಿರುವ ಕೆಲಸಗಳು ಮರೆತು ಹೋಗುವುದಿಲ್ಲ.

16. 20 ನಿಮಿಷ ಪ್ರಾರ್ಥಿಸಿ: ನಿಮಗಾಗಿ, ನಿಮ್ಮನ್ನು ಪ್ರೀತಿಸುವವರಿಗಾಗಿ, ನಿಮ್ಮ ಸಮಾಜ ಹಾಗೂ ವಿಶ್ವದ ಒಳಿತಿಗಾಗಿ 20 ನಿಮಿಷ ದೇವರ ಮುಂದೆ ಕುಳಿತು ನಿರ್ಮಲ ಮನಸ್ಸಿನಿಂದ ಪ್ರಾರ್ಥಿಸಿ.

17. ನಿಮ್ಮ ಮನಸ್ಸಿನಲ್ಲಿರುವ ಗುರಿಗಳಿಗೆ ದೃಶ್ಯರೂಪ ನೀಡಿ: 2020 ಹಾಗೂ ಅದರಾಚೆಗೆ ನೀವು ಸಾಧಿಸಬೇಕೆಂದುಕೊಂಡಿರುವ ಗುರಿಗಳನ್ನು ಪೆನ್, ಪೇಪರ್ ಅಥವಾ ಕಂಪ್ಯೂಟರ್ ಮೂಲಕ ದೃಶ್ಯರೂಪಕ್ಕಿಳಿಸಿ ನಿಮ್ಮ ರೂಮ್‍ನ ಗೋಡೆಗೆ ಅಂಟಿಸಿ. 

18. 2020ರಲ್ಲಿ ಗುರಿ ಸಾಧನೆಗಾಗಿ ಮಾಡಬೇಕಾದ 20 ಕಾರ್ಯಗಳು: ನಿಮ್ಮ ಕನಸುಗಳು ನನಸಾಗಬೇಕಾದರೆ  2020ರಲ್ಲಿ ನೀವು ಮಾಡಲೇಬೇಕಾದ 20 ಕಾರ್ಯಗಳ ಪಟ್ಟಿ ಮಾಡಿ.

19. ನಿಮ್ಮೊಳಗಿನ ಪ್ರೀತಿಯನ್ನು ವ್ಯಕ್ತಪಡಿಸಿ: ನಿಮ್ಮನ್ನು ನೀವೆಷ್ಟು ಪ್ರೀತಿಸುತ್ತೀರಿ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳ ಬಗ್ಗೆ ನಿಮಗಿರುವ ಪ್ರೀತಿಯನ್ನು ತೋರ್ಪಡಿಸಲು ಹಿಂದೇಟು ಹಾಕಬೇಡಿ. 2020ರ ಆಗಮನಕ್ಕೂ ಮುನ್ನವೇ ಪ್ರೀತಿಯನ್ನು ಹಂಚಿಬಿಡಿ.

20. ಪುಸ್ತಕ, ಹೊಸ ಕೋರ್ಸ್ ಅಥವಾ ಗುರುವಿಗಾಗಿ ಹಣ ವ್ಯಯಿಸಿ: ನಿಮ್ಮ ಗುರಿ ಸಾಧನೆಗೆ ನೆರವಾಗುವ ಪುಸ್ತಕ, ಕೋರ್ಸ್ ಅಥವಾ ಗುರುವಿಗೆ ಹಣ ವ್ಯಯಿಸಲು ಇದು ಸರಿಯಾದ ಸಮಯ. ಇದರಿಂದ ನಿಮ್ಮ ಜ್ಞಾನ ವಿಸ್ತರಿಸಿ ಆತ್ಮವಿಶ್ವಾಸ ಹೆಚ್ಚುತ್ತದೆ.

click me!