ಆಡು, ಕುರಿ ಸಾಕಣೆ ಬಹಳ ಮಂದಿ ಮಾಡುತ್ತಿದ್ದಾರೆ. ಆದರೆ ಅನಚಿ ಗ್ರಾಮದ ಅಪ್ಪು ಕಲಬುರ್ಗಿ ಅವರದು ಭಿನ್ನ ಬಗೆಯ ಕುರಿಗಳ ಸಾಕಣೆ. ರೋಗ ನಿರೋಧಕ ಗುಣ ಹೊಂದಿರುವ ಈ ಆಡುಗಳ ವಿಶೇಷತೆ ಹಲವು. ಇವುಗಳಿಗೆ ಬೇಡಿಕೆಯೂ ಹೆಚ್ಚು. ಹಾಗಾಗಿ ಲಕ್ಷಾಂತರು ರು. ಆದಾಯವೂ ಇದೆ.
ಪ.ನಾ.ಹಳ್ಳಿ. ಹರೀಶ್ ಕುಮಾರ್
ಜಿಲ್ಲಾಕೇಂದ್ರ ವಿಜಯಪುರದಿಂದ ಸೊಲ್ಲಾಪುರ ರಸ್ತೆಯಲ್ಲಿ ಸುಮಾರು 60 ಕಿ.ಮೀ ಸಾಗಿದರೆ ಇಂಡಿ ತಾಲೂಕಿನಲ್ಲಿ ಅಣಚಿ ಎಂಬ ಗ್ರಾಮವಿದೆ. ಇಲ್ಲಿನ ತಮ್ಮ ತೋಟದಲ್ಲಿಅಪ್ಪು ಕಲಬುರ್ಗಿ ಅವರು ಅನೇಕ ಬಗೆಯ ಆಡು ಹಾಗೂ ಕುರಿಗಳನ್ನು ಪೋಷಿಸುತ್ತಿದ್ದಾರೆ. ಅವು ಸಾಮಾನ್ಯ ಕುರಿಗಳಲ್ಲ, ಮಹಾರಾಷ್ಟ್ರ, ರಾಜಸ್ಥಾನ್ ಹಾಗೂ ಪಂಜಾಬಿನ ತಳಿಗಳಾದ ಮಾಗ್ರಾ, ಬೀಟಲ್, ಶಿರೋಯ್, ಉಸ್ಮಾನಾಬಾದಿ, ಶೌಚತ್ ಹಾಗೂ ಕೋಟಾ ತಳಿಗಳು. ಎರಡು ಎಕರೆ ಜಮೀನಿಟ್ಟು ಇವುಗಳ ಸಾಕಣೆಯಿಂದ ಲಕ್ಷಾಂತರ ರು.ಗಳಷ್ಟು ಆದಾಯ ಗಳಿಸುತ್ತಾರೆ ಅಪ್ಪು.
undefined
ವಿಶಾಲ ಜಾಗದಲ್ಲಿ ಕುರಿ ಶೆಟ್
ಇವರ ಜಮೀನಿನಲ್ಲಿ 50*60 ಅಳತೆಯ ಜಾಗದಲ್ಲಿ ಬೃಹತ್ ಶೆಡ್ ಇದೆ. ಇದರಲ್ಲಿ 20*60 ರಷ್ಟು ಸ್ಥಳದಲ್ಲಿ ಕುರಿಗಳ ವಿಶ್ರಾಂತಿಗೆಂದು ಜಾಗ. ಉಳಿದ 30*60 ರಷ್ಟು ಸ್ಥಳ ಕುರಿಗಳ ಓಡಾಟಕ್ಕೆ ಮೀಸಲು. ನೆಲವನ್ನೇ ಸಮತಟ್ಟಾಗಿಸಿ ನಿರ್ಮಿಸಿದ ಶೆಡ್ ತುಂಬ ನಾನಾ ಮಾದರಿಯ ಕುರಿಗಳು ಓಡಾಡುತ್ತಿರುತ್ತವೆ. ಜಮೀನಿನ ಉಳಿದ ಭಾಗದಲ್ಲಿ ಈ ಕುರಿಗಳಿಗಾಗಿ ಮೆಕ್ಕೇಜೋಳವನ್ನು ಬೆಳೆಯುತ್ತಾರೆ.
ನಿಮ್ಮ ಜಮೀನಲ್ಲಿ ಎರೆಹುಳು ಬರುವಂತೆ ಮಾಡಿದ್ರೆ ಕೈತುಂಬಾ ಹಣವೂ ಬರುತ್ತೆ!
ಈ ಕುರಿಗಳಿಗೆ ಬೇಡಿಕೆ ಹೆಚ್ಚು
ಅಪ್ಪು ಅವರ ಬಳಿ ಸುಮಾರು 100ಕ್ಕೂ ಅಧಿಕ ಕುರಿ ಹಾಗೂ ಆಡುಗಳಿವೆ. ಅವುಗಳೆಲ್ಲವೂ ಹೊರರಾಜ್ಯದ ತಳಿಗಳಾಗಿರುವುದು ವಿಶೇಷ. ಇವುಗಳಲ್ಲಿ ರಾಜಸ್ಥಾನದ ‘ಮಾಗ್ರಾ’ ತಳಿಯ ಕುರಿಗಳು ಉತ್ಕೃಷ್ಟ ಗುಣಮಟ್ಟದ ಉಣ್ಣೆಗೆ ಹೆಸರುವಾಸಿ. ಇವುಗಳ ಮಾಂಸ ಹಾಗೂ ಹಾಲಿಗೆ ಸಾಕಷ್ಟು ಬೇಡಿಕೆಯಿದೆ. ಒಮ್ಮೆಗೆ ಎರೆಡೆರಡರಂತೆ ಜನಿಸುವ ಮರಿಗಳು ಹತ್ತು ತಿಂಗಳಾಗುವಷ್ಟರಲ್ಲಿ 25ರಿಂದ 30 ಕಿಲೋ ತೂಗುತ್ತವೆ. ಪಂಜಾಬ್‌ನ ಆಡು ತಳಿ ‘ಬೀಟಲ್’ ಬೃಹತ್ ಗಾತ್ರದವು. ವಯಸ್ಕ ಹೋತವೊಂದು ಸುಮಾರು ಒಂದು ಕ್ವಿಂಟಾಲ್ ತೂಗಬಲ್ಲುದು. ಈ ತಳಿ ಆಡು 7 ತಿಂಗಳಿಗೊಮ್ಮೆ ಮರಿ ಹಾಕುತ್ತದೆ. ವರ್ಷಕ್ಕೆರೆಡು ಬಾರಿ ಸಂತಾನೋತ್ಪತ್ತಿಯ ಸಾಮರ್ಥ್ಯ ಹೊಂದಿದೆ. ರಾಜಸ್ಥಾನದ ಮತ್ತೊಂದು ಆಡು ತಳಿ ‘ಶಿರೋಯ್’ ಮಾಂಸ ಹಾಗೂ ಹಾಲಿಗೆ ಪ್ರಸಿದ್ಧಿ ಪಡೆದಿದೆ. ಇವುಗಳ ಜೊತೆಗೆ ರಾಜಸ್ಥಾನದ ‘ಶೌಚತ್’, ‘ಕೋಟಾ’, ಮಹಾರಾಷ್ಟ್ರದ ‘ಉಸ್ಮಾನಾಬಾದಿ’ ಆಡಿನ ತಳಿಗಳೂ ಇವೆ. ಇವುಗಳ ಹಾಲು ಮತ್ತು ಮಾಂಸಕ್ಕೆ ಅಧಿಕ ಬೇಡಿಕೆ ಇದೆ.
ಸಾಕೋದು ಕಷ್ಟ ಅಲ್ಲ
ಈ ಬಗೆಯ ತಳಿಯ ಕುರಿಗಳ ಪೋಷಣೆ ನಾಟಿ ಕುರಿ ಸಾಕಾಣೆಗಿಂತಲೂ ಸರಳ. ಇವು ನಿರ್ದಿಷ್ಟ ಮೇವನ್ನೇನೂ ಬೇಡುವುದಿಲ್ಲ. ಎಲ್ಲವನ್ನೂಆಹಾರವಾಗಿ ಸೇವಿಸುತ್ತವೆ. ಹತ್ತರಿಂದ ಹನ್ನೆರೆಡು ವರ್ಷ ಬದುಕುತ್ತವೆ. ರೋಗ ಬಾಧೆಯೂ ಕಡಿಮೆ. ನಾಟಿ ಕುರಿಗಳಂತೆ ಇವುಗಳನ್ನು ದಿನಪೂರ್ತಿ ಮೇಯಲು ಬಿಡದೆ ಕೆಲವು ಗಂಟೆಗಳ ಕಾಲ ಹೊಲದಲ್ಲಿಅಡ್ಡಾಡಿಸುತ್ತಾರೆ ಅಪ್ಪು. ದಿನಕ್ಕೆರೆಡು ಬಾರಿ ಮೆಕ್ಕೆ ಜೋಳದ ಮೇವು ನೀಡುತ್ತಾರೆ. ನೀರು ಸದಾಕಾಲ ದೊರೆಯುವಂತೆ ತೊಟ್ಟಿಗಳ ವ್ಯವಸ್ಥೆ ಇದೆ. ಆಗಾಗ ಕುದುರೆ ಮೆಂತ್ಯೆ, ಹೆಡ್ಲೂಸನ್, ಸೇವಾಫೇಸ್-21ನ್ನು
ಒದಗಿಸಲಾಗುತ್ತಿದೆ. ವಾತಾವರಣದಲ್ಲಿ ಬದಲಾವಣೆಗಳಾದರೂ ಇವು ಸೊರಗುವುದಿಲ್ಲ.
ರೇಷ್ಮೆ ಬೆಳೆಯಿಂದ 5.60ಲಕ್ಷ ಎಣಿಸುತ್ತಿರುವ ಬಳ್ಳಾರಿ ಕೊಟ್ರಮ್ಮ!
ಖರ್ಚೆಷ್ಟು, ಲಾಭ ಹೇಗೆ?
ಮರಿ ಹುಟ್ಟಿದಾಗಿನಿಂದ ಸುಮಾರು 8 ರಿಂದ 10 ತಿಂಗಳು ಪೋಷಿಸಿ ಬಳಿಕ ಮಾರಾಟ ಮಾಡುತ್ತಾರೆ. ಆ ಹೊತ್ತಿಗೆ ಕುರಿ, ಆಡುಗಳು 25ರಿಂದ 30 ಕೆಜಿ ತೂಕವಿರುತ್ತವೆ. ಇವುಗಳ ಹಾಲು ಹಾಗೂ ಮಾಂಸಕ್ಕಾಗಿ ಫಾರಂ ಬಳಿಯೇ ಖರೀದಿಸುವ ಗ್ರಾಹಕರಿದ್ದಾರೆ. 10 ತಿಂಗಳಿಂದ ಎರಡು ವರ್ಷದವರೆಗಿನ ಆಡು,ಕುರಿಗಳಿಗೆ ಸಾಕಷ್ಟು ಬೇಡಿಕೆಯಿದೆ. ಹೋತಕ್ಕೆ ಪ್ರತಿ ಕಿಲೋಗೆ 500ರು.ನಂತೆ ಹಾಗೂ ಆಡಿಗೆ 350ರು.ನಂತೆ ಮಾರಾಟ ಮಾಡುತ್ತಾರೆ. ಹೀಗೆ ಕೊಂಡೊಯ್ದವರು ಆರು ತಿಂಗಳು ಪೋಷಿಸಿದರೆ ಅವು 75ರಿಂದ 90 ಕಿಲೋಗಳಷ್ಟು ತೂಕ ಪಡೆಯಬಲ್ಲವು. ಆಗ ಮಾಂಸ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸುತ್ತಾರೆ. ಈ ಕಾರಣಕ್ಕೆ ಅಪ್ಪು ಅವರ ಆಡು, ಕುರಿಗಳಿಗೆ ಹೆಚ್ಚೆಚ್ಚು ಬೇಡಿಕೆಯಿದ್ದು ಇದು ಲಾಭದಾಯಕ ಉದ್ಯಮವಾಗುವತ್ತ ಸಾಗಿದೆ. ಪ್ರತೀ ಕುರಿಗೆ ವಾರ್ಷಿಕ 4ರಿಂದ 5 ಸಾವಿರಗಳಷ್ಟು ಖರ್ಚು ಇದೆ. ಆದರೆ ಶೀಘ್ರದಲ್ಲೇ ಖರ್ಚೆಲ್ಲ ಕಳೆದು ಸಾಕಷ್ಟು ಲಾಭ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ಅಪ್ಪು ಕಲಬುರ್ಗಿ ಅವರ ಸಂಪರ್ಕ ಸಂಖೆ- 9945354009