ಪಂಚಗವ್ಯ: ಬೆಳೆಗಳಿಗೆ ಔಷಧಯುಕ್ತ ಆಹಾರ!

By Kannadaprabha NewsFirst Published Dec 17, 2019, 12:59 PM IST
Highlights

ಬಹುತೇಕ ಎಲ್ಲ ರೈತರಿಗೂ ಪಂಚಗವ್ಯದ ಬಗ್ಗೆ ಗೊತ್ತು. ಆದರೆ ಹೆಚ್ಚಿನ ರೈತರು ಇದನ್ನು ಬಳಸುತ್ತಿಲ್ಲ. ಸಾವಯವ ಹಾಗೂ ನೈಸರ್ಗಿಕ ಕೃಷಿ ಮಾಡುವ ರೈತರು ಮಾತ್ರ ಇದನ್ನು ತಯಾರಿಸಿಕೊಂಡು ಬಳಸುತ್ತಿದ್ದಾರೆ.

 ಎಸ್.ಕೆ ಪಾಟೀಲ್

ಪಂಚಗವ್ಯವು ಸಾವಯವ ಉತ್ಪನ್ನವಾಗಿದ್ದು,ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಸಸ್ಯಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಹಸುವಿನ ಸಗಣಿ, ಮೂತ್ರ, ಹಾಲು, ಮೊಸರು, ತುಪ್ಪ ಈ ಐದನ್ನು ಸೇರಿಸಿ ತಯಾರಿಸುವುದೇ ಪಂಚಗವ್ಯ. ಬರಬರುತ್ತಾ ಅದಕ್ಕೆ ಬೆಲ್ಲ, ಬಾಳೆಹಣ್ಣು, ಎಳನೀರು ಮುಂತಾದ ಪದಾರ್ಥ ಹಾಕಿ ಇನ್ನಷ್ಟು ಎನ್‌ರಿಚ್ ಮಾಡಲಾಗುತ್ತದೆ.

ಇವೆಲ್ಲವುಗಳನ್ನು ಸೂಕ್ತ ಪ್ರಮಾಣದಲ್ಲಿ ಬೆರೆಸಿ ಪಂಚಗವ್ಯವನ್ನು ತಯಾರಿಸಿ ಬಳಸಿದಾಗ ಆಗುವ ಪವಾಡಗಳು ಅದ್ಭುತ. ಆದ್ದರಿಂದ ಎಲ್ಲ ರೈತರೂ ಇದನ್ನು ಅಳವಡಿಸಿಕೊಳ್ಳಲು ಒತ್ತಾಯಿಸುವ ಸಲುವಾಗಿ ಈ ಬರಹ.

ಪಂಚಗವ್ಯ ತಯಾರಿಸಲು ಬೇಕಾಗುವ ವಸ್ತುಗಳು :

ಹಸುವಿನ ತಾಜಾ ಸಗಣಿ - 10 ಕಿಲೋ.

ಗೋಮೂತ್ರ-10 ಲೀಟರ್,

ಹಸುವಿನ ಹಾಲು- 2 ಲೀಟರ್,

ಹಸುವಿನ ಮೊಸರು- 2 ಲೀಟರ್.

ಹಸುವಿನ ತುಪ್ಪ- 1 ಕಿಲೋ. (ತುಪ್ಪಕ್ಕೆ ಬದಲು ಒಂದು ಲೀಟರ್ ಕೆನೆಮೊಸರನ್ನೂ ಸಹಾ ಬಳಸಬಹುದು)

ಕಬ್ಬಿನ ಹಾಲು - 3 ಲೀಟರ್, (ಕಬ್ಬಿನ ಹಾಲು ಸಿಗದಿದ್ದರೆ ಅರ್ಧ ಕಿಲೋ ಬೆಲ್ಲಕ್ಕೆ ಮೂರು ಲೀಟರ್ ನೀರು ಸೇರಿಸಿ ಹಾಕಿ)

ಎಳನೀರು - 3 ಲೀಟರ್,

ಕಳಿತ ಬಾಳೆಹಣ್ಣು- ಒಂದುಡಜನ್.

ಇದೆಲ್ಲವನ್ನು ಪ್ಲಾಸ್ಟಿಕ್ ಡ್ರಮ್‌ನಲ್ಲಿ ಒಂದರ ನಂತರ ಒಂದರಂತೆ ಹಾಕಿ ಚೆನ್ನಾಗಿ ಬೆರೆಸಬೇಕು. ಮುಚ್ಚಳ ಮುಚ್ಚದೇ ಹಾಗೇ ತೆರೆದಿಡಬೇಕು. ಅಂದರೆ ಮೀಥೇನ್ ಅನಿಲವು ಹೊರಹೋಗುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಮಿಶ್ರಣವನ್ನು ಕಲಕಬೇಕು. 18ನೇ ದಿನ ಕಳೆದ ಮೇಲೆ ಇದು ಬಳಸಲು ಸಿದ್ಧವಾಗುತ್ತದೆ.

ಪಂಚಗವ್ಯ: ಬೆಳೆಗಳಿಗೆ ಔಷಧಯುಕ್ತ ಆಹಾರ!

ಪ್ರಯೋಜನ ಏನು?

ಸಸ್ಯಗಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುವ 16 ವಿವಿಧ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಪಂಚಗವ್ಯ ಬಳಕೆಯಿಂದ ಆಗುವ ಪ್ರಯೋಜನ ಹೀಗಿವೆ.
1 ಘನ ರೂಪದ ರಸಗೊಬ್ಬರಗಳಿಗೆ ಹೋಲಿಸಿದರೆ ಇದು ಪೋಷಕಾಂಶಗಳನ್ನು ತ್ವರಿತವಾಗಿ ಸಸ್ಯಗಳಿಗೆ ಕೊಡಮಾಡುತ್ತದೆ.

2 ಆಳವಾದ ಮತ್ತು ವ್ಯಾಪಕವಾದ ಬೇರುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬರ ನಿರೋಧಕತೆಯನ್ನು ಉತ್ತೇಜಿಸುತ್ತದೆ.

3  ಇದು ಸಸ್ಯಗಳು ದೀರ್ಘ ಒಣ ವಾತಾವರಣವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ.

4  ಕೀಟಗಳ ಮುತ್ತಿಕೊಳ್ಳುವಿಕೆ ಮತ್ತು ರೋಗಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

5  ದ್ಯುತಿಸಂಶ್ಲೇಷಣೆಯನ್ನು ಸಮರ್ಥವಾಗಿ ಸಕ್ರಿಯಗೊಳಿಸುತ್ತದೆ.

6 ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ.

7 ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ.

8 ಬೆಳವಣಿಗೆಯ ಹಂತದಲ್ಲಿ ಬೇಕಾದ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

9 ರಸ ಹೀರುವ ಕೀಟಗಳನ್ನು ಮತ್ತು ಎಲೆ ತಿನ್ನುವ ಕೀಟಗಳನ್ನು ನಿಯಂತ್ರಿಸುತ್ತದೆ.

10 ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಸ್ಯಗಳಿಗೆ ಸಹಾಯ ಮಾಡುತ್ತದೆ.

11 ರೈತ ಸ್ನೇಹಿ ಕೀಟಗಳು ಮತ್ತು ಇತರ ಜೀವಿಗಳನ್ನು ಆಕರ್ಷಿಸುತ್ತದೆ.

12 ಹೂವುಗಳು ಮತ್ತು ಮೊಗ್ಗುಗಳನ್ನು ಉದುರುವುದು ಕಡಿಮೆಯಾಗುತ್ತದೆ.

ಪಂಚಗವ್ಯ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಸೂಕ್ಷ್ಮ ಪೋಷಕಾಂಶಗಳು, ವಿವಿಧ ಅಮೈನೋ ಆಮ್ಲಗಳು, ಜೀವಸತ್ವಗಳು, ಆಕ್ಸಿನ್‌ಗಳು, ಸುಡೋಮೊನಾಸ್, ಅಜಟೊಬ್ಯಾಕ್ಟರ್ ಮತ್ತು ಫಾಸ್ಫರ್ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮ ಜೀವಿಗಳನ್ನು ಸಹ ಒಳಗೊಂಡಿದೆ.
 

click me!