ಪ್ರವಾಸ ಹೊರಡುವ ಮುನ್ನ ಬಟ್ಟೆಬರೆ, ಅಗತ್ಯ ಹಣಕಾಸು ದಾಖಲೆಗಳು, ಪಾಸ್‌ಪೋರ್ಟ್ ಹಾಗೂ ಮೊಬೈಲ್ ಚಾರ್ಜರ್ ಪ್ಯಾಕ್ ಮಾಡುವುದು ಪ್ರತಿಯೊಬ್ಬರ ಸಾಮಾನ್ಯ ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದ ಪ್ರವಾಸಿಗರ ಹೊಸದೊಂದು ವಿಚಿತ್ರ ಹ್ಯಾಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಮಾನ ಅಥವಾ ದೂರದ ಊರಿಗೆ ರೈಲು ಹತ್ತುವ ಮುನ್ನ ಅನೇಕ ಜಾಣ ಪ್ರಯಾಣಿಕರು ತಮ್ಮ ಸೂಟ್‌ಕೇಸ್‌ನ ಚಕ್ರಗಳಿಗೆ ‘ಸೆಲ್ಲೋ ಟೇಪ್’ ಅಥವಾ ‘ಡಕ್ಟ್ ಟೇಪ್’ (Tape) ಸುತ್ತುತ್ತಿದ್ದಾರೆ. ನೆಲದ ಮೇಲೆ ಸರಾಗವಾಗಿ ಉರುಳಬೇಕಾದ ಚಕ್ರಗಳಿಗೆ ಟೇಪ್ ಹಾಕಿ ಕವರ್ ಮಾಡುವುದೇಕೆ? ಇದರಿಂದಾಗುವ ಮಹತ್ವದ ಪ್ರಯೋಜನವಾದರೂ ಏನು? ಎಂಬ ಪ್ರಶ್ನೆ ಮತ್ತು ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ.
ನಾವು ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುವಾಗ ಲಗೇಜ್‌ನ ಚಕ್ರಗಳು ನಿರಂತರವಾಗಿ ವಿಮಾನ ನಿಲ್ದಾಣದ ಟರ್ಮಿನಲ್ ನೆಲ, ರೈಲ್ವೆ ಪ್ಲಾಟ್‌ಫಾರ್ಮ್, ಸಾರ್ವಜನಿಕ ರಸ್ತೆ ಹಾಗೂ ಧೂಳಿನಿಂದ ಕೂಡಿದ ಪಾದಚಾರಿ ಮಾರ್ಗಗಳ ನಿರಂತರ ಸಂಪರ್ಕದಲ್ಲಿರುತ್ತವೆ. ಇದರಿಂದ ರಸ್ತೆಯ ಕೊಳಕು ಕಸ, ಕೂದಲು, ಗಲೀಜು, ವಾಹನಗಳ ಆಯಿಲ್ ಜಿಡ್ಡು ಮತ್ತು ಹಾನಿಕಾರಕ ಸೂಕ್ಷ್ಮಾಣು ಬ್ಯಾಕ್ಟೀರಿಯಾಗಳು ಚಕ್ರದೊಳಗೆ ಆಳವಾಗಿ ಜಮೆಯಾಗುತ್ತವೆ.
2025 ರಲ್ಲಿ ಪ್ರಸಿದ್ಧ ಪ್ರವಾಸ ವಿಮಾ ಸಂಸ್ಥೆ ‘ಇನ್ಶೂರ್ ಆಂಡ್ ಗೋ’ (InsureandGo) ಮೈಕ್ರೋಬಯಾಲಜಿಸ್ಟ್ ಆಮಿ-ಮೇ ಪಾಯಿಂಟರ್ ಅವರೊಂದಿಗೆ ನಡೆಸಿದ ಮಹತ್ವದ ವೈಜ್ಞಾನಿಕ ಅಧ್ಯಯನದ ಪ್ರಕಾರ, ಇಡೀ ಸೂಟ್‌ಕೇಸ್‌ನಲ್ಲಿ ಅತ್ಯಂತ ಕೊಳಕಾದ ಮತ್ತು ಅಪಾಯಕಾರಿ ಭಾಗವೇ ‘ಚಕ್ರಗಳು’.
ಲಂಡನ್‌ನ ಪ್ರಮುಖ ರೈಲು ನಿಲ್ದಾಣದಲ್ಲಿ ಪರೀಕ್ಷಿಸಲಾದ ಸೂಟ್‌ಕೇಸ್‌ಗಳ ಚಕ್ರಗಳಲ್ಲಿ ಸಾರ್ವಜನಿಕ ಶೌಚಾಲಯದ ಕಮೋಡ್ ಸೀಟ್‌ಗಿಂತಲೂ ಬರೋಬ್ಬರಿ 58 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದವು! ಪ್ರತಿ 3 ಚದರ ಸೆಂಟಿಮೀಟರ್ ಜಾಗದಲ್ಲಿ ಬರೋಬ್ಬರಿ 400ಕ್ಕೂ ಅಧಿಕ ಬ್ಯಾಕ್ಟೀರಿಯಾ ಕಾಲನಿಗಳು ಜೀವಂತವಾಗಿ ಕಂಡುಬಂದಿದ್ದವು.
ಪ್ರಯಾಣ ಆರಂಭಿಸುವ ಮುನ್ನ ಚಕ್ರದ ಉರುಳುವ ಭಾಗಕ್ಕೆ ಗಟ್ಟಿಯಾಗಿ ಟೇಪ್ ಸುತ್ತಲಾಗುತ್ತದೆ. ಇದು ಕೊಳೆಯನ್ನು ತಡೆಯುವ ಅತ್ಯುತ್ತಮ ತಾತ್ಕಾಲಿಕ ರಕ್ಷಣಾ ಕವಚವಾಗಿ (Protective barrier) ಕೆಲಸ ಮಾಡುತ್ತದೆ. ಪ್ರವಾಸ ಮುಗಿದು ಮನೆ ಅಥವಾ ಹೋಟೆಲ್ ತಲುಪಿದ ತಕ್ಷಣ, ಆ ಟೇಪ್ ಅನ್ನು ಸುಲಭವಾಗಿ ಕಿತ್ತು ಡಸ್ಟ್‌ಬಿನ್‌ಗೆ ಎಸೆಯಬಹುದು. ಇದರಿಂದ ಚಕ್ರಗಳಿಗೆ ಅಂಟಿಕೊಂಡಿದ್ದ ಕಣ್ಣಿಗೆ ಕಾಣದ ಧೂಳು ಮತ್ತು ರೋಗಾಣುಗಳು ಟೇಪ್ ಜೊತೆಯಲ್ಲೇ ಹೊರಬರುತ್ತವೆ. ಮುಖ್ಯವಾಗಿ ಹೊರಗಿನ ಅಪಾಯಕಾರಿ ಕ್ರಿಮಿಕೀಟಗಳು ನಿಮ್ಮ ಸ್ವಚ್ಛವಾದ ಮನೆ, ಕಾರ್ಪೆಟ್ ಅಥವಾ ಮಲಗುವ ಕೋಣೆಯನ್ನು ಪ್ರವೇಶಿಸುವುದು ಸುಲಭವಾಗಿ ತಪ್ಪುತ್ತದೆ.
ಈ ಹ್ಯಾಕ್ ಕೊಳೆಯನ್ನು ತಡೆಯಲು ಸಹಕಾರಿಯಾದರೂ, ಇದರಲ್ಲಿ ಕೆಲವು ಮಿತಿಗಳಿವೆ. ಟೇಪ್ ಅನ್ನು ಅತಿಯಾಗಿ ದಪ್ಪವಾಗಿ ಅಥವಾ ಸಡಿಲವಾಗಿ ಅಂಟಿಸಿದರೆ ಚಕ್ರಗಳು ಸರಾಗವಾಗಿ ತಿರುಗದೆ ಜಾಮ್ ಆಗುವ ಸಾಧ್ಯತೆ ಇರುತ್ತದೆ. ಇದು ಲಗೇಜ್ ಎಳೆಯುವಾಗ ತೊಂದರೆ ಉಂಟುಮಾಡಬಹುದು. ಅಲ್ಲದೆ, ಟೇಪ್ ತೆಗೆದ ನಂತರ ಅದರ ಜಿಗುಟಾದ ಗಮ್ ಚಕ್ರಕ್ಕೆ ಉಳಿದುಕೊಂಡು ಮತ್ತಷ್ಟು ಧೂಳನ್ನು ಆಕರ್ಷಿಸಬಹುದು.
ಹಾಗಾಗಿ, ಟೇಪ್ ಬಳಸುವುದಕ್ಕಿಂತ ಪ್ರವಾಸ ಮುಗಿಸಿ ಮನೆಗೆ ಬಂದ ತಕ್ಷಣ ಚಕ್ರಗಳನ್ನು ಆ್ಯಂಟಿಬ್ಯಾಕ್ಟೀರಿಯಲ್ ವೈಪ್ಸ್ ಅಥವಾ ಬಿಸಿ ಸಾಬೂನು ನೀರಿನಿಂದ ಸ್ವಚ್ಛಗೊಳಿಸುವುದು ಹೆಚ್ಚು ಸುರಕ್ಷಿತ ಮತ್ತು ಸೂಕ್ತ ಪರಿಹಾರವಾಗಿದೆ ಎಂದು ಪರಿಣಿತರು ಸಲಹೆ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.