
ಆಫೀಸ್‌ನಲ್ಲಿ ಕೂತಲ್ಲೇ ಕೂತು ಕೆಲಸ ಮಾಡೋದರಿಂದ ಮಂಡಿನೋವು ಬರಬಹುದಾ? ಬರುವ ಸಾಧ್ಯತೆ ಇದೆ. ಒಂದೇ ಭಂಗಿಯಲ್ಲಿ ಕೂತು ಕೆಲಸ ಮಾಡೋದ್ರಿಂದ ಜಾಯಿಂಟ್ಸ್‌ನಲ್ಲಿ ನೋವು, ಉರಿಯೂತದಂಥ ಸಮಸ್ಯೆ ಕಾಣಿಸಿಕೊಳ್ಳಬಹುದು.
ಡ್ರೈವರ್‌ಗಳಲ್ಲಿ, ಉದ್ಯೋಗಿಗಳಲ್ಲಿ ಸೊಂಟ ನೋವು, ಜಾಸ್ತಿ ಹತ್ತೋದು, ಇಳಿಯೋದು ಮಾಡಿದ್ರೆ ಮಂಡಿ ಹೀಗೆ ಯಾವ ಭಾಗದ ಮೇಲೆ ಹೆಚ್ಚು ಒತ್ತಡ ಬೀಳುತ್ತೋ ಆ ಜಾಯಿಂಟ್‌ನಲ್ಲಿ ನೋವು ಶುರುವಾಗೋದು ಸಾಮಾನ್ಯ. ಮೊದಲು ನೋವು, ಊತ ಕಾಣಿಸಿಕೊಳ್ಳತ್ತೆ. ಇದಕ್ಕೆ ಕೆಲಸದ ನಡುವೆ ಬ್ರೇಕ್ ತಗೊಳ್ಳಬೇಕು. ಕೆಲಸದಲ್ಲಿ 20 ನಿಮಿಷಕ್ಕೊಮ್ಮೆಯಾದರೂ ಕಾಲನ್ನು ಸ್ಟ್ರೆಚ್ ಮಾಡೋದು, ಸ್ವಲ್ಪ ನಡೆದಾಡೋದು ಅಥವಾ ವಾಶ್‌ರೂಂಗೆ ಹೋಗೋದರಿಂದ ಕಾಲುಗಳಿಗೆ ಚಲನೆ ಸಿಗುತ್ತೆ. ಮತ್ತೆ ಕೂರೋದ್ರಿಂದ ನಿರಂತರವಾಗಿ ಸ್ನಾಯುಗಳ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಬಹುದು. ಇದರಿಂದ ರಕ್ತಪರಿಚಲನೆಯೂ ಚೆನ್ನಾಗಿರುತ್ತೆ. ಜೊತೆಗೆ ಮೈ ಕೈ ಕಾಲು ಬೆಚ್ಚಗಿಟ್ಟುಕೊಳ್ಳೋದು ಒಳ್ಳೆಯದು.
ಮಂಡಿನೋವಿಗೆ ಅಂತಾನೇ ಯಾವುದಾದ್ರೂ ವ್ಯಾಯಾಮಗಳಿವೆಯಾ?
ಸಾಮಾನ್ಯವಾಗಿ ಬ್ರಿಸ್ಕ್ ವಾಕ್ ಮಾಡಿದ್ರೆ ಸಾಕಾಗುತ್ತೆ. ಇದಲ್ಲದೇ ಮಂಡಿಯನ್ನು ಬಲಪಡಿಸುವ ಕೆಲವು ಫಿಸಿಯೋಥೆರಪಿ ಟೆಕ್ನಿಕ್ ಗಳಿವೆ. ನೆಲದ ಮೇಲೆ ಅಂಗಾಲ ಮಲಗಿ ಟವೆಲ್ ಅನ್ನು ರೋಲ್ ಮಾಡಿ ಮಂಡಿ ಅಡಿಯಲ್ಲಿಟ್ಟುಕೊಳ್ಳಬೇಕು. ಮಂಡಿಯಿಂದ ಅದನ್ನು ಒತ್ತಬೇಕು. ೫ರಿಂದ ೧೦ ಎಣಿಕೆಯವರೆಗೂ ಒತ್ತಿ ಹಿಡಿಯಬಹುದು. ಇದನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಹೊತ್ತು ಮಾಡಬಹುದು. ಇದರಿಂದ ಮಂಡಿ ಬಲವಾಗುತ್ತೆ. ಆ ಜಾಯಿಂಗ್‌ಗೆ ಸ್ಟೆಬಿಲಿಟಿ ಜಾಸ್ತಿಯಾಗುತ್ತೆ.
ಚಳಿಗಾಲದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತೆ, ಇದಕ್ಕೂ ಮಂಡಿನೋವಿಗೂ ಸಂಬಂಧ ಇದೆಯಾ?
ಆಯುರ್ವೇದಿಕ್ ಥಿಯರಿ ಪ್ರಕಾರ, ಚಳಿಗಾಲದಲ್ಲಿ ವಾತದ ಸಮಸ್ಯೆ ಇರುತ್ತೆ. ವಾತ ಜಾಸ್ತಿ ಆದಾಗ ನೋವು ಹೆಚ್ಚಾಗುತ್ತೆ. ಡಿಹೈಡ್ರೇಶನ್ ಆಗದ ಹಾಗೆ ನೋಡಿಕೊಂಡರೆ ಈ ಸಮಸ್ಯೆ ದೇಹದೊಳಗೇ ವಾಸಿಯಾಗುತ್ತೆ. ಹೆಚ್ಚಾಗಿ ನೀರು ಕುಡಿಯಿರಿ. ದೇಹ ಬೇಕಾದಷ್ಟು ನೀರು ಬಳಸಿಕೊಂಡು ಉಳಿದರೆ ಅದು ಮೂತ್ರದ ರೂಪದಲ್ಲಿ ಹೊರಹೋಗುತ್ತೆ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಚಳಿಗಾಲದಲ್ಲಿ ಚರ್ಮ ಒಣಗುತ್ತೆ. ಎಗ್ಸಿಮಾದಂಥ ಸಮಸ್ಯೆ ಬರಬಹುದು.
ಚಳಿಗಾಲದಲ್ಲಿ ಮೂಳೆಗಳು ಹೆಲ್ದಿಯಾಗಿರಲು ಡಯೆಟ್ ಹೇಗಿರಬೇಕು?
ಕೊಬ್ಬಿನಂಶ ಇರುವ ಆಹಾರ ಪದಾರ್ಥ ಹೆಚ್ಚು ಸೇವಿಸಿ. ಹಾಲಿನ ಉತ್ಪನ್ನಗಳನ್ನು ಹೆಚ್ಚು ತಿನ್ನಬೇಕು. ಮಾಮೂಲಿಗಿಂತ ಹೆಚ್ಚು ಆಹಾರ ಬೇಕಾಗುತ್ತೆ. ಏಕೆಂದರೆ ಚಳಿಗಾಲದಲ್ಲಿ ಜಠರಾಗ್ನಿ ಅಂತೀವಲ್ಲ, ಡೈಜೆಸ್ಟಿವ್ ಫೈಯರ್ ಹೆಚ್ಚಾಗಿರುತ್ತೆ. ಇದರಿಂದ ದಪ್ಪ ಆಗುತ್ತೆ ಅನ್ನೋದೆಲ್ಲ ಭ್ರಮೆ. ಚೆನ್ನಾಗಿ ವ್ಯಾಯಾಮ ಮಾಡಿದ್ರೆ ತೂಕದಲ್ಲಿ ಸಮತೋಲನ ಇರುತ್ತೆ. ಜೊತೆಗೆ ಸೂಪ್‌ಗಳನ್ನು ಹೆಚ್ಚೆಚ್ಚು ಸೇವಿಸಿ. ಬಿಸಿಯಾಗಿರುವ ಆಹಾರ ಪದಾರ್ಥಗಳನ್ನೇ ಹೆಚ್ಚೆಚ್ಚು ತಿನ್ನಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.