
ಇಂದಿನ ಕೆಲಸದ ಜಗತ್ತು ಅಂದರೆ ಅಂತ್ಯವಿಲ್ಲದ ಮೀಟಿಂಗ್‌ಗಳು, ಡೆಡ್‌ಲೈನ್‌ಗಳು, ಟಾರ್ಗೆಟ್‌ಗಳು. ಬೆಳಿಗ್ಗೆಯಿಂದ ರಾತ್ರಿ ತನಕ ಲ್ಯಾಪ್‌ಟಾಪ್, ಮೊಬೈಲ್ ನೋಟಿಫಿಕೇಶನ್, ಮ್ಯಾನೇಜರ್ ಕರೆಗಳು—ಇವೆಲ್ಲ ಸೇರಿ ಹಲವರನ್ನು ಸಂಪೂರ್ಣವಾಗಿ ಸುಸ್ತುಮಾಡುತ್ತಿವೆ. ಈ ಒತ್ತಡದಿಂದ ಹೊರಬರಲು ಕೆಲವರು ದೂರು ಹೇಳುತ್ತಾರೆ, ಕೆಲವರು ಸಹಿಸಿಕೊಂಡು ಮುಂದುವರಿಯುತ್ತಾರೆ. ಆದರೆ ಈಗ ಹೊಸ ತಲೆಮಾರಿನವರು, ವಿಶೇಷವಾಗಿ Gen Z, ಬೇರೆ ದಾರಿಯನ್ನೇ ಆಯ್ಕೆ ಮಾಡುತ್ತಿದ್ದಾರೆ. ಅದೇ - ‘ರೇಜ್ ಬುಕಿಂಗ್’ (Rage Booking).
ರೇಜ್ ಬುಕಿಂಗ್ ಎನ್ನುವುದು ಹೊಸ ಪ್ರಯಾಣದ ಟ್ರೆಂಡ್. ತುಂಬಾ ಒತ್ತಡದ ಕೆಲಸದ ನಂತರ, ಯಾವುದೇ ಮುಂಚಿತ ಯೋಜನೆ ಇಲ್ಲದೆ, ಕ್ಷಣಾರ್ಧದಲ್ಲಿ ವಿಮಾನ ಟಿಕೆಟ್ ಅಥವಾ ದೂರದೂರಿನಲ್ಲಿ ಹೋಟೆಲ್ ಬುಕ್ ಮಾಡುವುದೇ ಇದರ ತಿರುಳು. ಸಾಮಾನ್ಯವಾಗಿ ಇದು ರಾತ್ರಿ ಹೊತ್ತು, ಕೆಲಸದ ಬೇಸರ ತೀವ್ರವಾಗಿರುವ ಸಮಯದಲ್ಲಿ ನಡೆಯುತ್ತದೆ. ಬಜೆಟ್ ಬಗ್ಗೆ, ಪ್ಲ್ಯಾನ್ ಬಗ್ಗೆ ಹೆಚ್ಚು ಯೋಚನೆ ಇರುವುದಿಲ್ಲ. ಮನಸ್ಸಿನ ಆ ಕ್ಷಣದ ಭಾವನೆಗಳೇ ನಿರ್ಧಾರಕ್ಕೆ ಕಾರಣವಾಗುತ್ತವೆ.
ಇದು ಕೆಲವರಲ್ಲಷ್ಟೇ ಅಲ್ಲ. ಇಂಡಿಯಾ ಟೈಮ್ಸ್ ವರದಿ ಪ್ರಕಾರ, ಸುಮಾರು ಮೂರರಲ್ಲಿ ಒಬ್ಬ ಪ್ರಯಾಣಿಕ “ಒತ್ತಡದಿಂದ ತಪ್ಪಿಸಿಕೊಳ್ಳಲು ನಾವು ರೇಜ್ ಬುಕಿಂಗ್ ಮಾಡಿದ್ದೇವೆ” ಎಂದು ಒಪ್ಪಿಕೊಂಡಿದ್ದಾರೆ. ಈ ಟ್ರೆಂಡ್ ವಿಶೇಷವಾಗಿ ಯುವ ಉದ್ಯೋಗಿಗಳಲ್ಲಿ ವೇಗವಾಗಿ ಹರಡುತ್ತಿದೆ.
ಇಂದಿನ ಕಾರ್ಪೊರೇಟ್ ಜೀವನದಲ್ಲಿ ಕೆಲಸ–ಜೀವನ ಸಮತೋಲನ ಅನ್ನೋದು ಕಾಗದದ ಮಾತಾಗಿ ಉಳಿದಿದೆ. ದೀರ್ಘ ಕೆಲಸದ ಗಂಟೆಗಳು, ನಿರಂತರ ಒತ್ತಡ, ಯಾವಾಗಲೂ ಆನ್ ಇರುವ ನಿರೀಕ್ಷೆ—ಇವೆಲ್ಲದಿಂದ ಬರ್ನೌಟ್ ಸಾಮಾನ್ಯ ಸ್ಥಿತಿಯಾಗಿದೆ. ಹೀಗಾಗಿ, “ಸ್ವಲ್ಪ ವಿರಾಮ ಬೇಕು” ಅನ್ನೋ ಮನಸ್ಥಿತಿಯಲ್ಲಿ, ಟ್ರಾವೆಲ್ ಸುಲಭವಾದ ಕಾರಣವಾಗುತ್ತಿದೆ. ಕೆಲವರಿಗೆ ಅದು ಗೋವಾ ಟ್ರಿಪ್, ಕೆಲವರಿಗೆ ಕಾಫಿ ತೋಟಗಳ ನಡುವೆ ಒಂದು ಹೋಂಸ್ಟೇ, ಇನ್ನೂ ಕೆಲವರಿಗೆ ಹಿಮಾಲಯದ ಶಾಂತ ಊರು.
ಈ ತಕ್ಷಣದ ತಪ್ಪಿಸಿಕೊಳ್ಳುವಿಕೆ ಫಲಕಾರಿಯೇ? ಅನೇಕರ ಪ್ರಶ್ನೆ ಇದೇ. ಇದರಿಂದ ನಿಜವಾಗಿಯೂ ಲಾಭವಿದೆಯಾ? ಉತ್ತರ: ಹೌದು, ಒಂದು ಮಟ್ಟಿಗೆ. ವರದಿಗಳ ಪ್ರಕಾರ, ರೇಜ್ ಬುಕಿಂಗ್ ಮೂಲಕ ಮಾಡಿದ ಟ್ರಿಪ್‌ಗಳು ಮನಸ್ಸಿಗೆ ತಾತ್ಕಾಲಿಕ ನೆಮ್ಮದಿ ನೀಡುತ್ತವೆ. ನಿರಂತರ ನೋಟಿಫಿಕೇಶನ್, ಎಕ್ಸೆಲ್ ಶೀಟ್, HR ಇಮೇಲ್‌ಗಳಿಂದ ದೂರವಾಗಿ ಕೆಲವು ದಿನ ಕಳೆಯುವುದರಿಂದ ಮನಸ್ಸು ಸ್ವಲ್ಪ ಹಗುರಾಗುತ್ತದೆ. ಒತ್ತಡ ಸಂಪೂರ್ಣವಾಗಿ ಮಾಯವಾಗದಿದ್ದರೂ, ಮನಸ್ಸಿಗೆ ಉಸಿರಾಡುವ ಜಾಗ ಸಿಗುತ್ತದೆ.
ರೇಜ್ ಬುಕಿಂಗ್ ಕೇವಲ ಟ್ರಾವೆಲ್ ಟ್ರೆಂಡ್ ಅಲ್ಲ. ಇದು ಇಂದಿನ ಕೆಲಸದ ಒತ್ತಡದ ಜೀವನಶೈಲಿಗೆ ಹಿಡಿದ ಕನ್ನಡಿ. ಜನರು ತಕ್ಷಣದ ನೆಮ್ಮದಿಗಾಗಿ ಪ್ರಯಾಣವನ್ನು ಆಯ್ಕೆ ಮಾಡುತ್ತಿದ್ದಾರೆಂದರೆ, ಅದು ಕೆಲಸದ ಜಗತ್ತಿನ ಮೇಲೆ ಮರುಪರಿಶೀಲನೆ ಅಗತ್ಯವಿದೆ ಅನ್ನೋ ಸೂಚನೆ.
ನೀವು ಕೂಡ ಪ್ರೆಸೆಂಟೇಶನ್, ಟಾರ್ಗೆಟ್, ಕರೆಗಳಿಂದ ಬೇಸತ್ತು “ಎಲ್ಲ ಬಿಟ್ಟು ಎಲ್ಲಾದರೂ ಹೋಗಬೇಕು” ಅನ್ನಿಸುತ್ತಿದ್ದರೆ, ಅಂಥವರು ನೀವು ಒಬ್ಬರೇ ಅಲ್ಲ. ಆ ಭಾವನೆಗೆ ಈಗ ಒಂದು ಹೆಸರು ಸಿಕ್ಕಿದೆ- ಅದೇ ರೇಜ್ ಬುಕಿಂಗ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.