ನಂಬಿ ಕೆಟ್ಟವರೂ ಇಲ್ಲ, ಬಿದ್ದವರೂ ಇಲ್ಲ!

By Web Desk  |  First Published May 27, 2019, 2:29 PM IST

ಆಗಷ್ಟೇ ಜನಿಸಿದ ಮಗುವಿನ ದೃಷ್ಟಿಯಲ್ಲಿ ಈ ಜಗತ್ತಿನ ಬಗ್ಗೆ ಎಂಥ ಭಾವನೆ ಇರಬಹುದು ಊಹಿಸಿಕೊಳ್ಳಿ. ಆ ಮಗುವಿಗೂ ಜಗತ್ತಿನ ಬಗ್ಗೆ ನಂಬಿಕೆ ಬರುವ ಹಾಗೆ ಮಾಡುವುದು ಅಮ್ಮನ ಸ್ಪರ್ಶ. ಮಗುವನ್ನು ಜೀವಿಸುವಂತೆ ಮಾಡುವ ಶಕ್ತಿ ಅದು. ಆ ಶಕ್ತಿಯ ಬಗೆಗೇ ಈ ಬರಹ.
 


ಅದು ಮಹಾಭಾರತ ಯುದ್ಧ. ಕೌರವರು, ಪಾಂಡವರು ಹಲವು ಅಕ್ಷೋಹಿಣಿ ಸೈನ್ಯದೊಂದಿಗೆ ಪರಸ್ಪರ ಎದುರಾಗಿದ್ದಾರೆ. ಯುದ್ಧೋತ್ಸಾಹದಿಂದಲೇ ರಣರಂಗಕ್ಕೆ ಬಂದ ಅರ್ಜುನ. ತನ್ನೆದುರು ನಿಂತ ಬಂಧು, ಮಿತ್ರರನ್ನು ಕಂಡಕೂಡಲೇ ಆ ಉನ್ಮಾದ ಅಡಗಿತು. ಕೈ ಸೋತಿತು.

ಅವನಿಗೆ ಅವನ ಬಗ್ಗೆಯೇ ನಂಬಿಕೆ ಕುಸಿಯಿತು. ಆಗ ಅವನಲ್ಲಿ ಧೈರ್ಯ ತುಂಬಿದ ಕುಸಿದ ನಂಬಿಕೆಯನ್ನು ಮತ್ತೆ ಕಟ್ಟಿದವನು ಕೃಷ್ಣ. ಆಗ ದಾರಿ ತೋರುವ ಬೆಳಕಿನಂತೆ ಉದ್ಭವಿಸಿದ್ದು ಭಗವದ್ಗೀತೆ. ಇದಾಗಿ ಎಷ್ಟೋ ಸಹಸ್ರ ವರ್ಷ ಸಂದಿದೆ. ಇಂದಿಗೂ ನಮ್ಮ ನಂಬಿಕೆಯ ಕೋಟೆ ಅಲುಗಾಡತೊಡಗಿದಾಗ ಮತ್ತೆ ಸ್ಥಿರತೆ ತರುವ ಶಕ್ತಿ ಈ ಗೀತೆಗಿದೆ.

Latest Videos

undefined

ಜೀವನ ನಡೆಯುತ್ತಿರುವುದೇ ನಂಬಿಕೆ ಎಂಬ ಆ ಬಲವಾದ ಶಕ್ತಿಯಿಂದ. ನಂಬಿಕೆಯಿಂದ ಧೈರ್ಯ, ಧೈರ್ಯದಿಂದ ಉತ್ಸಾಹ, ಉತ್ಸಾಹದಿಂದ ಕಾರ್ಯೋನ್ಮುಖವಾಗುವ ಆಸಕ್ತಿ.. ಹೀಗೆ ಸರಪಳಿ ಮುಂದುವರಿದು ಅದು ನೆಮ್ಮದಿ ಎಂಬ ಕೊನೆಯ ಹಂತ ತಲುಪುತ್ತದೆ.

ಅದರೆ ಕೆಲವೊಮ್ಮೆ ಆ ನಂಬಿಕೆ ಎಂಬುದು ಸ್ವಲ್ಪ ವ್ಯತ್ಯಯವಾಗಿ ಅಪನಂಬಿಕೆ, ಮೂಢನಂಬಿಕೆಗಳಂತಹ ಎಡವಟ್ಟುಗಳಿಗೆ ಎಡೆಮಾಡಿ ಕೊನೆಯವರೆಗೂ ನೆಮ್ಮದಿ ದೊರಕದೇ ಇರುವಂತಹ ಅಪಾಯವೂ ಇರುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದಂತೆ ತೃಪ್ತಿ ಎಂಬ ತಡೆಗೋಡೆ ಹಾಕಿಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

ಸುಂದರ ಬದುಕಿಗೆ ಮನಸ್ಸು ಹಗುರವಾಗಿರುವುದು ಅತಿ ಅವಶ್ಯಕ. ಮನಸ್ಸು ಹಗುರವಾಗಲು ಚಿಂತೆ, ಸಮಸ್ಯೆಗಳೆಂಬ ಭಾರವನ್ನು ಕೆಳಗಿಳಿಸಿಕೊಳ್ಳಬೇಕು. ನಂಬಿಕೆ ಎಂಬ ಫ್ಲಾಟ್‌ಫಾರಂ ಮೇಲೆ ನಮ್ಮ ಸಮಸ್ಯೆಯ ಭಾರವನ್ನು ಹಾಕಿಕೊಂಡಾಗ ಮನಸ್ಸು ಹಗುರವಾಗುವುದರಲ್ಲಿ ಎರಡು ಮಾತಿಲ್ಲ. ಹೀಗೆ ನಂಬಿಕೆ ಎಂಬುದು ಮನಸ್ಸು ಹಗುರವಾಗಲು ಮಾತ್ರ ಕಾರಣವ್ಲಲದೇ ನಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ದೇವರಲ್ಲಿರಲಿ ನಂಬುಗೆ

ಅಸ್ತಿಕ, ನಾಸ್ತಿಕ ಎಂಬ ವಾದ ಏನೇ ಇರಲಿ, ಕಾಣದ ಆ ದೇವರ ಮೇಲೂ ಒಂದು ನಂಬಿಕೆ ಇಡಿ. ಅಥವಾ ಆ ನಂಬಿಕೆಯನ್ನೇ ದೇವರೆಂದು ತಿಳಿಯಿರಿ. ನೀವು ದೇವರನ್ನು ನಂಬುವುದು ಪರರಿಗೆ ಕಷ್ಟವಾಗುವಂತೆಯೋ, ಹೊರೆಯಾಗುವಂತೆಯೋ ಆಗಿರಬಾರದು.

ಉದಾಹರಣೆಗೆ ದೇವರು ಒಳ್ಳೆಯದು ಮಾಡುತ್ತಾನೆ ಎಂಬ ನಂಬಿಕೆಯಿಂದ ದೊಡ್ಡ ದೊಡ್ಡ ಹರಕೆ ಹೊರುವುದು, ಹರಕೆ ತೀರಿಸಲು ಮತ್ತೊಬ್ಬರಲ್ಲಿ ಸಾಲ ಮಾಡುವುದು, ಅವರು ಕೇಳಿದಾಗ ಸಾಲ ಮರುಪಾವತಿಸಲಾಗದೇ ಕಷ್ಟಪಡುವುದು ಹೀಗೆ. ನಿಮ್ಮ ದೇವರನ್ನು ನೀವು ನಂಬಿ, ಮನಸ್ಸು ಹಗುರವಾಗುವಷ್ಟುನಂಬಿ. ಆದರೆ ನಿಮ್ಮ ನಂಬುಗೆ ಮೂಢನಂಬಿಕೆಯಾಗದಂತೆ ಎಚ್ಚರವಹಿಸಿ.

ದೇವರಲ್ಲಿ ನಂಬಿಕೆ ಪ್ರಾಮಾಣಿಕವಾಗಿರಬೇಕು. ಆ ನಂಬಿಕೆ ಕೇವಲ ತೋರ್ಪಡಿಕೆಯಾದರೆ ಯಾವುದೇ ಪ್ರಯೋಜನ ಇರುವುದಿಲ್ಲ. ಅಹಂಕಾರದಿಂದಲೋ, ಅಪ್ರಾಮಾಣಿಕವಾಗಿಯೋ ಆ ನಂಬಿಕೆಗೂ ಧಕ್ಕೆ ತಂದುಕೊಂಡರೆ ನಮ್ಮ ಆತ್ಮವಿಶ್ವಾಸ ಕುಸಿಯುವುದೇ ಹೊರತು, ಬೇರೆಯವರಿಗೆ ಇದರಿಂದ ನಷ್ಟವಿಲ್ಲ.

ಯಾರೂ ನೋಡುವುದಿಲ್ಲ ಎಂದು ಅದೆಷ್ಟೋ ಕೆಟ್ಟಕೆಲಸಗಳನ್ನು ಲಜ್ಜೆಗೆಟ್ಟು ಮಾಡುತ್ತಿರುತ್ತೇವೆ. ಆದರೆ ನಮ್ಮ ಕೆಟ್ಟಕೆಲಸಗಳನ್ನೂ ದೇವರು ನೋಡುತ್ತಿರುತ್ತಾನೆ ಎಂದು ನಂಬಿದಲ್ಲಿ ಸಹಜವಾಗಿಯೇ ಕೆಟ್ಟಕೆಲಸಗಳಿಂದ ದೂರ ಉಳಿಯಲು ಸಾಧ್ಯ.

ಸ್ನೇಹಿತರನ್ನು ನಂಬಿ

ದೇವರನ್ನು ಬಿಟ್ಟರೆ ನಾವು ಅತಿಯಾಗಿ ನಂಬುವುದು ಸ್ನೇಹಿತರನ್ನೇ. ಸಮಾನ ವಯಸ್ಕರು, ಸಮಾನ ಮನಸ್ಕರುಗಳಲ್ಲಿ ನಂಬಿಕೆ ಹೆಚ್ಚುವುದು ಸಾಮಾನ್ಯ. ನಂಬಿಕಸ್ಥರೊಂದಿಗೆ ಹಲವು ಖಾಸಗಿ ವಿಷಗಳನು ಹೇಳಿಕೊಂಡು ಮನಸನ್ನು ಹಗುರಮಾಡಿಕೊಳ್ಳಬಹುದು. ಇಷ್ಟುಮಾತ್ರವಲ್ಲದೆ ಅವರ ಕಷ್ಟಕಾರ್ಪಣ್ಯಗಳನ್ನೂ ಕೇಳಿಸಿಕೊಳ್ಳುವ ವ್ಯವಧಾನ ಬೆಳೆಸಿಕೊಂಡು ಅವರ ಸಮಾಧಾನಕ್ಕೂ ಕಾರಣವಾಗಬೇಕು. ಕೆಲವರು ಇಂತಹ ನಂಬಿಕಸ್ಥ ಸ್ನೇಹಿತರೊಂದಿಗೂ ಅಪನಂಬಿಕೆಯನ್ನು ಕಾಣುತ್ತಾರೆ. ಅವರು ಹಂಚಿಕೊಂಡ ಅದೇಷ್ಟೋ ಖಾಸಗಿ ವಿಷಯಗಳನ್ನೂ ಹೊರ ಜಗತ್ತಿನೊಂದಿಗೆ ಹಂಚಿಕೊಂಡು ಅವರ ನಂಬಿಕೆಗೆ ದ್ರೋಹ ಮಾಡಿಬಿಡುತ್ತಾರೆ. ಆದರೆ ಅಪನಂಬಿಕೆ, ನಂಬಿಕೆ ದ್ರೋಹ ಮುಂತಾದವುಗಳು ನಂಬಿಕೆ ಎಂಬ ಶಕ್ತಿಗೆ ಕುಂದು ಉಂಟುಮಾಡುವಂತಹವು. ಆದ್ದರಿಂದ ಇವುಗಳಿಂದ ದೂರವಿರುವುದೇ ಒಳಿತು.

ಸಾವಿನಲ್ಲಿಡಿ ನಂಬುಗೆ

ಕೆಲವರು ನಮಗೆ ಸಾವೇ ಇಲ್ಲ, ಜೀವನದಲ್ಲಿ ಯಾವುದೇ ಅಪಾಯವೂ ಸಂಭವಿಸುವುದಿಲ್ಲ ಎಂಬ ಬಲವಾದ ನಂಬಿಕೆಯೊಂದಿಗೆ ಆಸ್ತಿಪಾಸ್ತಿ ಸಂಗ್ರಹಿಸುತ್ತಲೇ ಇರುತ್ತಾರೆ. ಸಮಾಜಕ್ಕೆ ತೊಂದರೆ ಉಂಟಾದರೂ ಪರವಾಗಿಲ್ಲ ತಮಗೆ ಮಾತ್ರವಲ್ಲದೇ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹೀಗೆ ಎಲ್ಲರಿಗೂ ಬೇಕೆಂಬ ಸ್ವಾರ್ಥದಿಂದ ಸಂಗ್ರಹ ಮಾಡುವುದರಲ್ಲೇ ತಮ್ಮ ಜೀವನ ಕಳೆದಿರುತ್ತಾರೆ. ಕೆಲವೊಮ್ಮೆ ಅದನ್ನು ಅನುಭವಿಸಲಾಗದೇ ಅವರು ನಂಬದ ಸಾವನ್ನು ಪಡೆದುಬಿಡುತ್ತಾರೆ. ಹೀಗಾಗಲು ಬಿಡದೇ, ಸಾವು ಖಚಿತ ಎಂಬ ನಂಬುಗೆಯಲ್ಲಿ ನಿಯಮಿತವಾದ ಸಂಗ್ರಹದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ.

- ಸುಧೀಂದ್ರ ಜಮ್ಮಟ್ಟಿಗೆ 

click me!