
ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕಸ ಎಂದರೆ ಮೂಗು ಮುರಿಯುವವರೇ ಹೆಚ್ಚು. ಎಲ್ಲೆಂದರಲ್ಲಿ ಕಸ ಎಸೆಯುವುದು, ನದಿ-ರಸ್ತೆಗಳನ್ನು ಕೊಳಕು ಮಾಡುವುದು ಅನೇಕರ ಅಭ್ಯಾಸವಾಗಿದೆ. ಸರ್ಕಾರವು 'ಸ್ವಚ್ಛ ಭಾರತ'ದಂತಹ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ, ಜನರಲ್ಲಿ ಬದಲಾವಣೆ ಬಾರದ ಹೊರತು ಪೂರ್ಣ ಸ್ವಚ್ಛತೆ ಅಸಾಧ್ಯವಾಗಿದೆ. ಆದರೆ, ಜಗತ್ತಿನಲ್ಲಿ ಒಂದು ದೇಶ ಮಾತ್ರ "ದಯವಿಟ್ಟು ನಮಗೆ ಕಸ ಕೊಡಿ" ಎಂದು ಬೇರೆ ದೇಶಗಳನ್ನು ಕೇಳುತ್ತಿದೆ! ಅಷ್ಟೇ ಅಲ್ಲ, ಟನ್ ಗಟ್ಟಲೆ ಕಸವನ್ನು ಆಮದು ಮಾಡಿಕೊಳ್ಳಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆ ದೇಶವೇ ಸ್ವೀಡನ್ (Sweden).
177 ದೇಶಗಳ ತ್ಯಾಜ್ಯ ನಿರ್ವಹಣೆಯ ಪಟ್ಟಿಯಲ್ಲಿ ಎಸ್ಟೋನಿಯಾ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ಭಾರತವು 176ನೇ ಸ್ಥಾನದಲ್ಲಿದೆ. ಅಂದರೆ ನಾವು ಈ ವಿಷಯದಲ್ಲಿ ಬಹಳ ಹಿಂದೆ ಇದ್ದೇವೆ. ಕಸದ ಗುಡ್ಡೆಗಳನ್ನು ಎಲ್ಲಿ ಹಾಕಬೇಕು ಎಂಬ ಗೊಂದಲದಲ್ಲಿ ಅನೇಕ ದೇಶಗಳಿದ್ದರೆ, ವಿಶ್ವದ ಅತ್ಯಂತ ಸ್ವಚ್ಛ ದೇಶಗಳಲ್ಲಿ 5ನೇ ಸ್ಥಾನದಲ್ಲಿರುವ ಸ್ವೀಡನ್ ಮಾತ್ರ ವಿದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ಳುತ್ತಿದೆ.
ಸ್ವೀಡನ್ ದೇಶವು ವಿದೇಶಗಳಿಂದ ಕಸವನ್ನು ತರಿಸಿಕೊಳ್ಳಲು ಮುಖ್ಯ ಕಾರಣ ಅಲ್ಲಿರುವ ಅತ್ಯಾಧುನಿಕ 'ವೇಸ್ಟ್ ಟು ಎನರ್ಜಿ' (ತ್ಯಾಜ್ಯದಿಂದ ಇಂಧನ) ಪ್ಲಾಂಟ್‌ಗಳು. ಈ ಬೃಹತ್ ಫ್ಯಾಕ್ಟರಿಗಳಿಗೆ ಕಸವೇ ಮುಖ್ಯ ಕಚ್ಚಾ ವಸ್ತು. ಈ ತ್ಯಾಜ್ಯವನ್ನು ಬಳಸಿಕೊಂಡು ಅವರು ಇಡೀ ದೇಶಕ್ಕೆ ಅಗತ್ಯವಿರುವ ವಿದ್ಯುತ್ ಮತ್ತು ಶಾಖವನ್ನು (Heat) ಉತ್ಪಾದಿಸಿಕೊಳ್ಳುತ್ತಾರೆ.
ಸ್ವೀಡನ್ ವಿಶ್ವದ ಅತ್ಯಂತ ಶೀತಲ ದೇಶಗಳಲ್ಲಿ ಒಂದು. ಅಲ್ಲಿ ಚಳಿಗಾಲದಲ್ಲಿ ತಾಪಮಾನವು ಶೂನ್ಯಕ್ಕಿಂತ ಕೆಳಕ್ಕೆ ಕುಸಿಯುತ್ತದೆ. ಅಂತಹ ಕಠಿಣ ಚಳಿಯಲ್ಲಿ ಮನೆಗಳನ್ನು ಬೆಚ್ಚಗಿಡಲು ಅವರು ಈ ಕಸವನ್ನು ಅದ್ಭುತವಾಗಿ ಬಳಸುತ್ತಾರೆ. ತ್ಯಾಜ್ಯವನ್ನು ಬೃಹತ್ ಕುಲುಮೆಗಳಲ್ಲಿ ಸುಡುವುದರಿಂದ ಬರುವ ಶಾಖವನ್ನು ಭೂಗತ ಪೈಪ್‌ಗಳ ಮೂಲಕ ಲಕ್ಷಾಂತರ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ಸರಬರಾಜು ಮಾಡಲಾಗುತ್ತದೆ. ಇದರಿಂದಾಗಿ ವಿದ್ಯುತ್ ಉಪಕರಣಗಳ ಸಹಾಯವಿಲ್ಲದೆಯೇ ಮನೆಗಳು ಬೆಚ್ಚಗಿರುತ್ತವೆ.
ಮರುಬಳಕೆ ಮಾಡಲು ಸಾಧ್ಯವಿಲ್ಲದ ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಹೆಚ್ಚಿನ ತಾಪಮಾನದಲ್ಲಿ ಸುಡಲಾಗುತ್ತದೆ. ಈ ಪ್ರಕ್ರಿಯೆಯಿಂದ ಉತ್ಪತ್ತಿಯಾಗುವ ಉಷ್ಣ ಶಕ್ತಿಯನ್ನು ವಿದ್ಯುತ್ ಆಗಿ ಪರಿವರ್ತಿಸಿ ದೇಶದಾದ್ಯಂತ ಸರಬರಾಜು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಕಸವನ್ನು ಸುಟ್ಟ ನಂತರ ಉಳಿಯುವ ಬೂದಿಯನ್ನು ರಸ್ತೆ ನಿರ್ಮಾಣದಲ್ಲಿ ಮತ್ತು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅಂದರೆ ಆ ದೇಶದಲ್ಲಿ ಒಂದು ಸಣ್ಣ ವಸ್ತು ಕೂಡ ವ್ಯರ್ಥವಾಗುವುದಿಲ್ಲ.
ಇತರ ದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ಳುವುದು ಸ್ವೀಡನ್‌ಗೆ ಅತ್ಯಂತ ಲಾಭದಾಯಕ ವ್ಯವಹಾರವಾಗಿದೆ. ತಮ್ಮ ದೇಶದಲ್ಲಿ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗದ ದೇಶಗಳು, ಆ ಕಸವನ್ನು ಸ್ವೀಕರಿಸಿದ್ದಕ್ಕಾಗಿ ಸ್ವೀಡನ್‌ಗೆ ಹಣವನ್ನೂ ಪಾವತಿಸುತ್ತವೆ. ಅತ್ತ ಕಸ ವಿಲೇವಾರಿಯಾದ ಸಂತೋಷ ಆ ದೇಶಗಳಿಗೆ, ಇತ್ತ ಹಣದ ಜೊತೆಗೆ ಉಚಿತ ಇಂಧನ ಮತ್ತು ವಿದ್ಯುತ್ ಪಡೆಯುವ ಲಾಭ ಸ್ವೀಡನ್‌ಗೆ.
ಇನ್ನೊಂದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿರುವ ಕಸವನ್ನು ಸ್ವೀಡನ್ ತನ್ನ ಪಾಲಿನ 'ಅಕ್ಷಯಪಾತ್ರೆ'ಯನ್ನಾಗಿ ಮಾಡಿಕೊಂಡಿರುವ ರೀತಿ ನಿಜಕ್ಕೂ ಜಗತ್ತಿಗೆ ಮಾದರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.