ಇವರ ಬಳಿ ಅಪರೂಪದ ಕ್ಯಾಮೆರಾಗಳಿವೆ

First Published May 1, 2018, 1:57 PM IST
Highlights

ಒಬ್ಬೊಬ್ಬರದ್ದು ಒಂದೊಂದು ಹವ್ಯಾಸ, ಕೆಲವರಿಗೆ ಅಂಚೆ  ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ ಮತ್ತೊಬ್ಬರಿಗೆ  ಪೆನ್ನುಗಳನ್ನು ಸಂಗ್ರಹಿಸಿಡುವ ಹವ್ಯಾಸ, ಮತ್ತೂ ಕೆಲವರಿಗೆ  ತಮ್ಮ ಇಷ್ಟದ ವ್ಯಕ್ತಿಗಳ ಭಾವಚಿತ್ರಗಳನ್ನು ಸಂಗ್ರಹಿಸಿಡುವ ಹವ್ಯಾಸ. ಆದರೆ ಸಿರಾ ನಗರದ ಶ್ರೀ ಅಶ್ವಥ್ ನಾರಾಯಣ್  ಅವರಿಗೆ ಒಂದು ವಿಶೇಷವಾದ ಹವ್ಯಾಸವಿದೆ.

ಒಬ್ಬೊಬ್ಬರದ್ದು ಒಂದೊಂದು ಹವ್ಯಾಸ, ಕೆಲವರಿಗೆ ಅಂಚೆ  ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ ಮತ್ತೊಬ್ಬರಿಗೆ  ಪೆನ್ನುಗಳನ್ನು ಸಂಗ್ರಹಿಸಿಡುವ ಹವ್ಯಾಸ, ಮತ್ತೂ ಕೆಲವರಿಗೆ  ತಮ್ಮ ಇಷ್ಟದ ವ್ಯಕ್ತಿಗಳ ಭಾವಚಿತ್ರಗಳನ್ನು ಸಂಗ್ರಹಿಸಿಡುವ ಹವ್ಯಾಸ. ಆದರೆ ಸಿರಾ ನಗರದ ಶ್ರೀ ಅಶ್ವಥ್ ನಾರಾಯಣ್  ಅವರಿಗೆ ಒಂದು ವಿಶೇಷವಾದ ಹವ್ಯಾಸವಿದೆ.

ಅದೇನೆಂದರೆ ಕ್ಯಾಮೆರಾಗಳನ್ನು ಸಂಗ್ರಹಿಸಿಡುವುದು. ಕ್ಯಾಮೆರಾಗಳ ಸಂಗ್ರಹವೆಂದರೆ ಇತರರಂತೆ ಮಾರುಕಟ್ಟೆಗಳಲ್ಲಿ ಬಂದ ಹೊಸದನ್ನೆಲ್ಲಾ ಕೊಂಡುತಂದು ಸಂಗ್ರಹಿಸುವ ಇರಾದೆಯದ್ದಲ್ಲ. ಅದಕ್ಕೆ ಬದಲಾಗಿ ಸ್ವತಃ  ತಾವು ಬಳಸಿದ ಕ್ಯಾಮೆರಾಗಳನ್ನು ಬಳಸಿದ ನಂತರ ಬೇರೆ ಯಾರಿಗೂ ಮಾರಾಟ ಮಾಡದೇ ಹಾಗೇ ಜೋಪಾನವಾಗಿ ಇಟ್ಟುಕೊಳ್ಳುವ ಹವ್ಯಾಸ. ಕೇವಲ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಾತ್ರವೇ ಉಪಯೋಗಿಸಲ್ಪಡುತ್ತಿದ್ದ ‘ಯಾಸ್ ಇಟ್’ ಕ್ಯಾಮೆರಾದಿಂದ ಪ್ರಾರಂಭಿಸಿ ಇತ್ತೀಚಿನ  ಎಸ್‌ಎಲ್‌ಆರ್, ಡಿಎಸ್‌ಎಲ್‌ಆರ್ ಕ್ಯಾಮೆರಾಗಳವರೆಗೂ ತಮ್ಮ ನಲವತ್ತೆಂಟು ವರ್ಷಗಳ ಸುಧೀರ್ಘ  ಫೋಟೋಗ್ರಫಿ ವೃತ್ತಿಜೀವನದಲ್ಲಿ ತಾವು ಬಳಸಿದ ನೂರಕ್ಕೂ ಅಧಿಕ  ಬಗೆಯ ವಿನ್ಯಾಸ ಹಾಗೂ ಸಾಮರ್ಥ್ಯಗಳುಳ್ಳ ಕ್ಯಾಮೆರಾಗಳನ್ನು ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡು ಬಂದಿದ್ದಾರೆ.

ಐನೂರು ರುಪಾಯಿಯಿಂದ ಲಕ್ಷದವರೆಗೆ: 
ಅಶ್ವಥ್ ನಾರಾಯಣ್  ಅವರ ಸಂಗ್ರಹದಲ್ಲಿ ಪ್ರಾರಂಭದಲ್ಲಿ ಅವರು ಬಳಸಿದ ‘ಯಾಸ್ ಇಟ್’ ಕ್ಯಾಮೆರಾದಿಂದ ಪ್ರಾರಂಭಿಸಿ ತದನಂತರ ಅವರು ಬಳಸಿದ ಸೂರ್ಯನ ಬೆಳಕಿನಲ್ಲಿ ಮಾತ್ರವೇ ಕಾರ್ಯ ನಿರ್ವಹಿಸುವ ಕಟ್‌ಫಿಲ್ಮ್ 2 ಬಿ ಕ್ಯಾಮೆರಾ, ಒಮ್ಮೆಲೇ ರೀಲೊಂದಕ್ಕೆ 12 ಫೋಟೋಗಳನ್ನು ತೆಗೆಯಬಹುದಾಗಿದ್ದ 120 ಕ್ಯಾಮೆರಾಗಳು, ತದನಂತರ ಬಂದ ಫ್ಲ್ಯಾಶ್ ಕ್ಯಾಮೆರಾಗಳು,  35ಎಂಎಂ ಕ್ಯಾಮೆರಾಗಳು, 70ಎಂಎಂ ಕ್ಯಾಮೆರಾಗಳು, ಮೈಕ್ರೋಲೆನ್ಸ್ ಕ್ಯಾಮೆರಾಗಳು, ಪೆಂಟ್ಯಾಕ್ಸ್, ವಿವಿಟಾರ್, ರಿಖೋ, ಎಫ್‌ಎಂ10, ಪ್ರಮುಖವಾದವುಗಳಾಗಿವೆ. ನಿಕಾನ್, ಕೆನಾನ್, ರೋಲಿಕ್ ಫ್ಲೆಕ್ಸ್, ರೋಲಿಕ್ ಕಾರ್ಡ, ಯಾಶಿಕಾ, ಸೋನಿಯಂತಹ ಬ್ರಾಂಡೆಡ್ ಕಂಪೆನಿಯ ಕ್ಯಾಮೆರಾಗಳೂ ಇವರ ಸಂಗ್ರಹದಲ್ಲಿರುವುದು ವಿಶೇಷ. ಅವರ ಸಂಗ್ರಹದಲ್ಲಿ ಈಗ 500 ರೂಗಳ ಮುಖಬೆಲೆಯ ಕ್ಯಾಮೆರಾಗಳಿಂದ ಲಕ್ಷ ರು.ಗಳವರೆಗಿನ ಕ್ಯಾಮೆರಾಗಳು ರಾರಾಜಿಸುತ್ತಿವೆ.

ಆಸಕ್ತರಿಗೆಲ್ಲಾ ಉಚಿತ ಮಾಹಿತಿ:

ವಿಶೇಷವೆಂದರೆ ಅಶ್ವಥ್ ನಾರಾಯಣ್ ಈ ಎಲ್ಲಾ ಸಂಗ್ರಹಿಸಿದ ಕ್ಯಾಮೆರಾಗಳನ್ನು ತಮ್ಮ ಸ್ಟುಡಿಯೋದಲ್ಲಿಯೇ ಒಪ್ಪವಾಗಿ ಜೋಡಿಸಿ ಸಾರ್ವಜನಿಕರಿಗೆ ದರ್ಶನಕ್ಕೆ ಲಭ್ಯವಾಗಿಸಿದ್ದಾರೆ. ಅದಲ್ಲದೇ ವಿದ್ಯಾರ್ಥಿಗಳು, ಆಸಕ್ತಿರಿಗೆಲ್ಲಾ ಕ್ಯಾಮರಾಗಳ ಬಗೆಗಿನ ಪ್ರಾಥಮಿಕ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಇದೆಲ್ಲವನ್ನು ನೋಡಿಯಾದ ಮೇಲೆ ಇಷ್ಟೆಲ್ಲಾ  ಕ್ಯಾಮೆರಾಗಳನ್ನು ಸಂಗ್ರಹಿಸಿಡಲು ಕಾರಣವೇನು ಎಂದು ಕೇಳಿದರೆ ‘ನಾನು ಬಳಸಿದ ಕ್ಯಾಮೆರಾಗಳನ್ನು ಮತ್ತೊಬ್ಬರಿಗೆ ಮಾರಲು ಮನಸ್ಸಾಗದೇ ಹಾಗೇ ಸಂಗ್ರಹಿಸಿಡಲು ಪ್ರಾರಂಭಿಸಿದೆ. ನನ್ನ ಜೀವನವೇ ಈ ಕ್ಯಾಮೆರಾಗಳ  ಕೈಯಲ್ಲಿ ಸವೆಸಿದ್ದಾಯ್ತು. ಅವುಗಳಿಲ್ಲದೇ ಒಂದು ದಿನವನ್ನೂ ನಾನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ತನ್ನೊಂದಿಗೆ ಸಮಯ ಕಳೆದ ಎಲ್ಲಾ  ಕ್ಯಾಮೆರಾಗಳನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳುವ ಆಸೆಯಿಂದ ಅವುಗಳನ್ನೆಲ್ಲಾ ಸಂಗ್ರಹಿಸಿದ್ದೇನೆ’ ಎನ್ನುತ್ತಾರೆ ಅವರು. ಅಲ್ಲದೇ ಇದುವರೆಗೂ ಸಾಕಷ್ಟು ಯುವಕರಿಗೆ ಫೋಟೋಗ್ರಫಿ
ಕುರಿತಾಗಿ ತರಬೇತಿ ನೀಡಿ ಸ್ವಂತ ಉದ್ಯೋಗ ಮಾಡಲು ನೆರವಾಗಿರುವ ಅಶ್ವಥ್ ನಾರಾಯಣ್ ಅವರೊಂದಿಗೆ ನೀವೂ ಮಾತನಾಡಿ. ದೂ. 9902858016

click me!