ಪಾರ್ಟ್ನರ್‌ಗೆ ಪಾಸ್‌ವರ್ಡ್ ಹೇಳ್ಬೇಕಾ?

By Web Desk  |  First Published May 11, 2019, 1:58 PM IST

ಬ್ಯಾಂಕ್, ಆಫೀಸ್, ಮನೆ, ಫ್ರೆಂಡ್ಸ್, ಎಂಟರ್ಟೇನ್ಮೆಂಟ್, ಸೋಷಿಯಲ್ ಲೈಫ್, ಪರ್ಸನಲ್ ಲೈಫ್ ಹೀಗೆ ಎಲ್ಲವೂ ಛೂಮಂತರ್ ಆಗಿ ನಿಮ್ಮ ಪುಟ್ಟ ಫೋನ್‌ನೊಳಗೆ ಕುಳಿತಿವೆ. ಹೀಗೆ ನಿಮ್ಮ ಬದುಕೇ ಅಡಗಿರುವ ಫೋನ್‌ಗೆ ಪಾಸ್‌ವರ್ಡ್ ಹಾಕಿ ಪ್ರೊಟೆಕ್ಟ್ ಮಾಡಿಕೊಳ್ಳುವುದು ಇಂದಿನ ಅಗತ್ಯ ಹಾಗೂ ಜಾಣತನ ಕೂಡಾ. ಆದರೆ ಈ ಪಾಸ್‌ವರ್ಡನ್ನು ಸಂಗಾತಿಯೊಂದಿಗೆ ಶೇರ್ ಮಾಡ್ಬೇಕಾ ಎನ್ನೋದು ಗೊಂದಲ... 


ಪತಿ ಸ್ನಾನಕ್ಕೆ ಹೋದಾಗ ಅವನ ಮೊಬೈಲ್ ಫೋನ್ ಆಕೆಯ ಗಮನ ಸೆಳೆಯುತ್ತದೆ. ಸುಮ್ಮನೆ ಕುತೂಹಲಕ್ಕೆ ಓಪನ್ ಮಾಡಲು ನೋಡುತ್ತಾಳೆ. ಆದರೆ, ಅದು ಪಾಸ್‌ವರ್ಡ್ ಪ್ರೊಟೆಕ್ಟೆಡ್. ಅಷ್ಟಕ್ಕೇ ಸಲ್ಲದ ಅನುಮಾನವೊಂದು ಸುಳಿಯಲಾರಂಭಿಸುತ್ತದೆ. ಪಾಸ್‌ವರ್ಡ್ ಏನು ಅಂತ ಕೇಳಿದ್ರೆ ಆತ ಹೇಳುವುದಿಲ್ಲ. ಬದಲಿಗೆ ಏನು ನೋಡ್ಬೇಕು ನೀನು, ಓಪನ್ ಮಾಡಿಕೊಡ್ತೀನಿ ಅಂತ ಹೇಳ್ತಾನೆ. ಅವಳ ನಂಬಿಕೆಯ ಸೇತುವೆ ತೂರಾಡಲಾರಂಭಿಸುತ್ತದೆ. ಮದುವೆ ಆದ್ಮೇಲೆ ಇಬ್ಬರ ನಡುವೆನೂ ಯಾವ ಸೀಕ್ರೆಟ್ಸ್ ಕೂಡಾ ಇರಬಾರದು. ನಿನ್ನದೆಲ್ಲ ನನ್ನದು, ನನ್ನದೆಲ್ಲ ನಿನ್ನದು ಎಂದು ನಂಬಿದವಳು ಅವಳು. ಸ್ವಲ್ಪವಾದರೂ ಪರ್ಸನಲ್ ಸ್ಪೇಸ್ ಇರಬೇಕು ಎಂದು ತಿಳಿದವನು ಆತ. ಹಾಗಿದ್ದರೆ ಸಂಗಾತಿಯೊಂದಿಗೆ ಪಾಸ್ವರ್ಡ್ ಶೇರ್ ಮಾಡಬೇಕಾ?

ಖಂಡಿತಾ ಇದು ವೈಯಕ್ತಿಕ ವಿಷಯ. ಮೊದಲನೆಯದಾಗಿ ಇನ್ನೊಬ್ಬರ ಪಾಸ್‌ವರ್ಡ್ ಕೇಳುವುದು ಉಚಿತವಲ್ಲ. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಜೀವನದ ಪ್ರತಿ ಆಗುಹೋಗುಗಳು, ಬ್ಯಾಂಕಿಂಗ್, ಕೆಲಸ, ಮೂವೀಸ್, ಸೋಷಿಯಲ್ ಮೀಡಿಯಾಗಳು, ಗೆಳೆಯರೊಂದಿಗಿನ ಸಂಬಂಧ ಪ್ರತಿಯೊಂದೂ ಮೊಬೈಲ್ ಫೋನ್‌ನೊಳಗೆ ಅಡಗಿ ಕುಳಿತಿವೆ. ಹೀಗಾಗಿ, ಎಷ್ಟೇ ಕ್ಲೋಸ್ ಇದ್ದರೂ ಒಬ್ಬರ ಪಾಸ್‌ವರ್ಡನ್ನು ಮತ್ತೊಬ್ಬರು ಕೇಳುವುದು ಖಂಡಿತಾ ಒಳ್ಳೆಯ ವರ್ತನೆಯಲ್ಲ. 

Latest Videos

undefined

ಒಂದು ವೇಳೆ ಕೇಳಿದರೆಂದುಕೊಳ್ಳಿ. ನಯವಾಗಿ ನಿರಾಕರಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇರುತ್ತದೆ. ಏಕೆಂದರೆ ಒಬ್ಬರ ಪರ್ಸನಲ್ ಸ್ಪೇಸ ಅನ್ನು ಮತ್ತೊಬ್ಬರು ಗೌರವಿಸಲೇಬೇಕು. 

ಹಳೇ ಪ್ರೇಮಿಯೊಂದಿಗೆ ಬೇಕಾ ಬಾಂಧವ್ಯದ ಬಂಧ?

ನಿಮ್ಮ ಸಂಗಾತಿ ನಿಮಗೆ ಪಾಸ್‌ವರ್ಡ್ ಹೇಳಲಿಲ್ಲವೆಂದ ಮಾತ್ರಕ್ಕೆ ಏನೋ ಮೋಸ ಮಾಡುತ್ತಿದ್ದಾರೆಂದು ತಿಳಿಯುವುದು, ಅನುಮಾನಿಸುವುದು, ಚುಚ್ಚು ಮಾತುಗಳನ್ನಾಡುವುದು ಒಳ್ಳೆಯದಲ್ಲ. ಒಂದು ವೇಳೆ ನೀವು ಸ್ವಇಚ್ಛೆಯಿಂದಲೇ ಪಾಸ್‌ವರ್ಡ್ ಶೇರ್ ಮಾಡಿದರೆ ತೊಂದರೆ ಇಲ್ಲ. ಇಷ್ಟಕ್ಕೂ ನಿಮಗೆ ಸಂಗಾತಿಯ ಪಾಸ್‌ವರ್ಡ್ ಏಕೆ ಬೇಕೆಂಬುದು ಪ್ರಶ್ನೆ. ನಿಮಗೆ ಬೇಕಾದ ಫೋಲ್ಡರ್ ಇಲ್ಲವೇ ಆ್ಯಪ್ ಪಾಸ್‌ವರ್ಡ್ ಪ್ರೊಟೆಕ್ಟ್ ಆಗಿರುತ್ತದೆ. ಕೇಳಿದರೆ ಅದನ್ನು ಅವರೇ ಓಪನ್ ಮಾಡಿಕೊಡುತ್ತಾರೆ. ಅದಾಗದೇ ಪಾಸ್‌ವರ್ಡ್ ಹೇಳಲಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾದರೆ ನೀವು ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇಟ್ಟಿಲ್ಲ ಎಂದರ್ಥ. 

ಆದರೆ ಇಬ್ಬರೂ ಪಾಸ್‌ವರ್ಡ್  ಶೇರ್ ಮಾಡಿಕೊಂಡು ಕೆಲವು ದಿನಗಳ ಬಳಿಕ ಒಬ್ಬರು ಪಾಸ್‌ವರ್ಡ್ ಚೇಂಜ್ ಮಾಡಿ ಅದನ್ನು ಹೇಳುತ್ತಿಲ್ಲವೆಂದಾಗ ಅನುಮಾನಿಸುವುದರಲ್ಲಿ ಅರ್ಥವಿದೆ. 

ಅಧ್ಯಯನಗಳು ಹೇಳುವುದೇನು?

ಕಾಸ್ಪರ್‌ಸ್ಕೈ ಲ್ಯಾಬ್ ನಡೆಸಿದ ಅಧ್ಯಯನದ ಪ್ರಕಾರ, ಶೇ.70ರಷ್ಟು ಕಪಲ್ ತಮ್ಮ ಪಾಸ್‌ವರ್ಡ್ ಶೇರ್ ಮಾಡಿಕೊಳ್ಳುತ್ತಾರೆ. ಅದರೆ, ಅವರಲ್ಲಿ ಹೆಚ್ಚಿನವರು ತಮ್ಮ ನಂಬಿಕೆಯನ್ನು ಸಾದರಪಡಿಸಲು, ಒಬ್ಬರನ್ನೊಬ್ಬರು ಕನ್ವಿನ್ಸ್ ಮಾಡಲು ಶೇರ್ ಮಾಡಿದ್ದಾಗಿ ಹೇಳಿದ್ದಾರೆ. ಅಂದರೆ, ಸಂಬಂಧ ಹಾಳಾಗುವ ಭಯಕ್ಕೆ ಪಾಸ್‌ವರ್ಡ್ ಶೇರ್ ಮಾಡಿದ್ದೇ ಹೊರತು ಇಚ್ಛೆಯಿಂದ ನೀಡಿದ್ದಲ್ಲ. ಇನ್ನು ಕೆಲವರು ಪ್ರತೀ ಬಾರಿ ಪಾಸ್ವರ್ಡ್ ಹಾಕಿಕೊಡುವುದು ಮುಜುಗರ ಅಥವಾ ಕಿರಿಕಿರಿ ಎನಿಸಿ ಪಾಸ್‌ವರ್ಡ್ ಹಂಚಿಕೊಂಡಿದ್ದಾರೆ. 

ದಾಂಪತ್ಯ ಸುಖವಾಗಿರಬೇಕೆ? ನಿಮ್ಮ ಸಂಗಾತಿಯಿಂದ ಇದನ್ನೆಲ್ಲಾ ನಿರೀಕ್ಷಿಸಬೇಡಿ!

ಇನ್ನು ಎಲ್ಲವೂ ಸರಿಯಿದ್ದಾಗ ಓಕೆ, ಆದರೆ ಸಂಬಂಧಗಳು ಯಾವತ್ತು ಹೇಗಿರುತ್ತವೆಂದು ಹೇಳಲು ಬರುವುದಿಲ್ಲ. ನಾಳೆ ಬ್ರೇಕಪ್ ಆದರೆ ಪಾಸ್‌ವರ್ಡ್ ಶೇರ್ ಮಾಡಿರುವುದರಿಂದ ಹಲವು ರಿಸ್ಕ್‌ಗಳು ಬರಬಹುದು. ಕಾಸ್ಪರ್‌ಸ್ಕೈ ಸ್ಟಡಿಯಲ್ಲೇ ಶೇ.21ರಷ್ಟು ಜನರು ತಾವು ಎಕ್ಸ್ ಪಾರ್ಟ್ನರ್ ಅನ್‌ಲೈನ್ ಖಾತೆಗೆ ಆಗಾಗ ಹೋಗಿ ಗೂಢಾಚಾರಿಕೆ ನಡೆಸುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಶೇ.12ರಷ್ಟು ಮಂದಿ ತಾವು ಅವರ ವೈಯಕ್ತಿಕ ಸಂಗತಿಗಳನ್ನು ಬಹಿರಂಗಪಡಿಸಿ ಸೇಡು ತೀರಿಸಿಕೊಳ್ಳಲು ಬಯಸುವುದಾಗಿಯೂ ಹೇಳಿದ್ದಾರೆ. 

ಹೀಗಾಗಿ, ಒಂದು ವೇಳೆ ಪಾಸ್‌ವರ್ಡ್‌ಗಳನ್ನು ಶೇರ್ ಮಾಡಿದ್ದಲ್ಲಿ ‌ಸಂಬಂಧ ಹಳಸಿದಾಗ ಮಾಡಬೇಕಾದ ಮೊದಲ ಕೆಲಸ ಪಾಸ್‌ವರ್ಡ್ ಬದಲಿಸುವುದು. 

click me!