
ಮುಂಬೈ; ಗಾಡ್ ಆಫ್ ಕ್ರಿಕೆಟ್ ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ತಮ್ಮ ಅದ್ಭುತ ಬ್ಯಾಟಿಂಗ್‌ಗೆ ಎಷ್ಟು ಪ್ರಸಿದ್ಧರೊ, ಆಹಾರದ ಮೇಲಿರುವ ತಮ್ಮ ಅಪಾರ ಪ್ರೀತಿಗೂ ಅಷ್ಟೇ ಪ್ರಸಿದ್ಧರು. ಕ್ರೀಡಾಂಗಣದಲ್ಲಿ ವಿರೋಧಿ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದ ಸಚಿನ್, ಅಡುಗೆ ವಿಷಯಕ್ಕೆ ಬಂದರೆ ಮಾತ್ರ ನೈಜ ಮತ್ತು ಸಾಂಪ್ರದಾಯಿಕ ಮನೆ ಅಡುಗೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಮರಾಠಿ ಭಾಷೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ನೆಚ್ಚಿನ ಭಕ್ಷ್ಯ ಹಾಗೂ ತಾಯಿಯ ಕೈ ಅಡುಗೆಯ ಸವಿನೆನಪುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್‌ನಿಂದ ದೂರ ಸರಿದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಚಿನ್, ತಮ್ಮ ಬಿಡುವಿನ ವೇಳೆಯಲ್ಲಿ ಆಸಕ್ತಿದಾಯಕ ವೀಡಿಯೊ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಹಂಚಿಕೊಂಡ ವೀಡಿಯೊದಲ್ಲಿ ಸಚಿನ್ ತಮ್ಮ ಮನೆಯಲ್ಲಿ ತುಪ್ಪದೊಂದಿಗೆ ಅನ್ನ ತಿನ್ನುವುದನ್ನು ಕಾಣಬಹುದು. ಈ ವೇಳೆ ತಮ್ಮ ತಾಯಿ ತಯಾರಿಸುತ್ತಿದ್ದ ವಿಶೇಷ ಅಡುಗೆಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಅವರು, ನಾನು ದೊಡ್ಡ ಪ್ರವಾಸಗಳಿಗೆ ತೆರಳಿದಾಗಲೆಲ್ಲಾ ನನ್ನ ತಾಯಿ ಮಾಡುತ್ತಿದ್ದ ಅಡುಗೆ ತುಂಬಾ ನೆನಪಿಸಿಕೊಳ್ಳುತ್ತಿದ್ದೆ. ವಿದೇಶಿ ಪ್ರವಾಸದಲ್ಲಿದ್ದಾಗ ಮನೆಗೆ ಮರಳುವ ಮೊದಲು ತಾಯಿಗೆ ಕರೆ ಮಾಡಿ, ಮನೆಗೆ ಬಂದ ತಕ್ಷಣ ನನಗೆ ವಾರಣ್-ಭಾತ್, ಆಲೂಗಡ್ಡೆ ಭಾಜಿ, ತುಪ್ಪದೊಂದಿಗೆ ವಾರಣ್-ಭಾತ್ ಮತ್ತು ನನ್ನ ಅತ್ಯಂತ ನೆಚ್ಚಿನ ಸೀಗಡಿ ಭಾಜಿ ಬೇಕು ಎಂದು ಹೇಳುತ್ತಿದ್ದೆ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ತಮ್ಮ ತಾಯಿ ತಯಾರಿಸುವ ಸೀಗಡಿ ಭಾಜಿಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್, ನನ್ನ ತಾಯಿ ಮಾಡುವ ಸೀಗಡಿ ಭಾಜಿ ಅತ್ಯಂತ ವಿಶೇಷವಾಗಿರುತ್ತಿತ್ತು. ಅವರಂತೆ ಜಗತ್ತಿನಲ್ಲಿ ಯಾರೂ ಅದನ್ನು ಅಷ್ಟು ರುಚಿಯಾಗಿ ಬೇಯಿಸಲು ಸಾಧ್ಯವಿಲ್ಲ ಎಂದು ನಾನು ಇಂದಿಗೂ ಭಾವಿಸುತ್ತೇನೆ ಎಂದಿದ್ದಾರೆ. ವಯಸ್ಸಾಗಿದ್ದರಿಂದ ತಮ್ಮ ತಾಯಿ ಈಗ ಮೊದಲಿನಂತೆ ಹೆಚ್ಚು ಅಡುಗೆ ಮಾಡುವುದಿಲ್ಲವಾದರೂ, ಅವರು ತಮ್ಮ ಪಾಕವಿಧಾನಗಳನ್ನು ಮನೆಯ ಇತರರಿಗೆ ಹಂಚಿಕೊಂಡಿದ್ದಾರೆ. ಮನೆಯವರು ಅದನ್ನು ಮಾಡಲು ಪ್ರಯತ್ನಿಸುತ್ತಾರಾದರೂ ತಾಯಿಯ ಕೈ ರುಚಿ ಸಂಪೂರ್ಣವಾಗಿ ತರಲು ಸಾಧ್ಯವಾಗುತ್ತಿಲ್ಲ ಎಂದು ಸಚಿನ್ ತಿಳಿಸಿದ್ದಾರೆ.
ಆಹಾರ ಸವಿಯುವ ಸಾಂಪ್ರದಾಯಿಕ ಶೈಲಿಯ ಬಗ್ಗೆಯೂ ಮಾತನಾಡಿದ ಸಚಿನ್, ಬಿಸಿ ಬಿಸಿ ಅನ್ನದ ಮೇಲೆ ಧಾರಾಳವಾಗಿ ತುಪ್ಪ ಇರಲೇಬೇಕು. ಮತ್ತು ಎಲ್ಲಕ್ಕಿಂತ ಅತ್ಯಂತ ಮುಖ್ಯವಾದ ವಿಷಯವೆಂದರೆ, ಆಹಾರವನ್ನು ಚಮಚದಿಂದ ತಿನ್ನುವ ಬದಲು ನಿಮ್ಮ ಸ್ವಂತ ಕೈಗಳಿಂದಲೇ ತಿನ್ನಬೇಕು ಎಂದು ವೀಡಿಯೊದಲ್ಲಿ ವಿಶೇಷ ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಮನೆ ಅಡುಗೆಯಲ್ಲಿ ಸಚಿನ್ ಅವರಿಗೆ ವಾರಣ್-ಭಾತ್, ಬದನೆಕಾಯಿ ಭರಿತ್, ಪುರನ್ಪೋಲಿ ಮತ್ತು ಮೋದಕ್ ನೆಚ್ಚಿನ ಭಕ್ಷ್ಯ. ಅನೇಕ ಸಂದರ್ಶನಗಳಲ್ಲೂ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು ಮಾಂಸಾಹಾರಿ ಭಕ್ಷ್ಯಗಳ ವಿಷಯಕ್ಕೆ ಬಂದರೆ, ಸಚಿನ್ ಅವರಿಗೆ ಸಮುದ್ರಾಹಾರದ ಮೇಲೆ ವಿಶೇಷ ಪ್ರೀತಿಯಿದೆ. ಮುಂಬೈನ ಪ್ರಸಿದ್ಧ ಸಮುದ್ರಾಹಾರ ರೆಸ್ಟೋರೆಂಟ್‌ಗಳಿಂದ ಬರುವ ಮಸಾಲೆಯುಕ್ತ ಸೀಗಡಿ ಕರಿ ಮತ್ತು ಮಟನ್ ಬಿರಿಯಾನಿ ಅವರ ನೆಚ್ಚಿನ ಮೆನು ಐಟಂಗಳಾಗಿವೆ.
ಕೇವಲ ಭಾರತೀಯ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ಅಡುಗೆಯಷ್ಟೇ ಅಲ್ಲದೆ, ಸಚಿನ್ ಅಂತಾರಾಷ್ಟ್ರೀಯ ಆಹಾರ ಶೈಲಿಯನ್ನು ಸವಿಯಲು ಇಷ್ಟಪಡುತ್ತಾರೆ. ಜಪಾನೀಸ್ ಆಹಾರ ಸಂಸ್ಕೃತಿಯಲ್ಲಿ ಪ್ರಸಿದ್ಧವಾಗಿರುವ 'ಸುಶಿ' ಎಂದರೆ ಸಚಿನ್‌ಗೆ ಅತ್ಯಂತ ಇಷ್ಟ. ಕ್ರಿಕೆಟ್ ವೃತ್ತಿಜೀವನದಲ್ಲಿ ಪ್ರಪಂಚದಾದ್ಯಂತ ಪ್ರವಾಸ ಮಾಡುವಾಗ ಆಯಾ ದೇಶಗಳ ಸ್ಥಳೀಯ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ಪ್ರಯತ್ನಿಸುವುದು ಅವರ ಅಭ್ಯಾಸವಾಗಿತ್ತು. ಪ್ರಸ್ತುತ ಕ್ರಿಕೆಟ್ ಮೈದಾನದಿಂದ ದೂರವಿದ್ದರೂ, ಆಹಾರದ ಮೇಲಿನ ತಮ್ಮ ಪ್ರೀತಿಯ ಮೂಲಕ ಸಚಿನ್ ಜಾಗತಿಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.