ನಾನ್‌ಸ್ಟಿಕ್ vs ಸ್ಟೀಲ್ vs ಕಬ್ಬಿಣ: ಅಡುಗೆಗೆ ಈ ಮೂರರಲ್ಲಿ ಯಾವುದು ಬೆಸ್ಟ್?

Published : Nov 12, 2026, 12:09 PM IST
nonstick vs stainless steel vs cast iron

ಸಾರಾಂಶ

Nonstick vs Stainless Steel vs Cast Iron: ಅಡುಗೆಮನೆಗೆ ಹೊಸ ಪಾತ್ರೆ ಖರೀದಿಸುವಾಗ ನಾನ್‌ಸ್ಟಿಕ್, ಸ್ಟೀಲ್ ಅಥವಾ ಕ್ಯಾಸ್ಟ್ ಐರನ್ (ಕಬ್ಬಿಣ) ಪಾತ್ರೆಗಳಲ್ಲಿ ಯಾವುದನ್ನು ಆರಿಸಬೇಕೆಂಬ ಗೊಂದಲ ನಿಮಗೂ ಇದೆಯಾ? ಸರಿಯಾದ ಪಾತ್ರೆ ಕೇವಲ ಅಂದಕ್ಕೆ ಮಾತ್ರವಲ್ಲ, ನಿಮ್ಮ ಅಡುಗೆಯ ರುಚಿ ಮತ್ತು ಆರೋಗ್ಯಕ್ಕೂ ಅಷ್ಟೇ ಮುಖ್ಯ! ಹಾಗಾದರೆ ನಿಮ್ಮ ನಿತ್ಯದ ಅಡುಗೆಗೆ ಈ ಮೂರರಲ್ಲಿ ಯಾವುದು ಬೆಸ್ಟ್?

ಅಡುಗೆಮನೆಗೆ ಸರಿಯಾದ ಪಾತ್ರೆಗಳನ್ನು (Cookware) ಆರಿಸುವುದು ಕೇವಲ ಅಂದಕ್ಕಾಗಿ ಮಾತ್ರವಲ್ಲ, ಅದು ನಾವು ಮಾಡುವ ಅಡುಗೆಯ ರುಚಿ, ಪೋಷಕಾಂಶ ಮತ್ತು ಅಡುಗೆ ಮಾಡುವ ಶ್ರಮದ ಮೇಲೂ ನೇರ ಪರಿಣಾಮ ಬೀರುತ್ತದೆ. ಒಗ್ಗರಣೆ, ಸಾರು, ಪಲ್ಯಗಳಿಂದ ಹಿಡಿದು ಗರಿಗರಿ ದೋಸೆ, ರೊಟ್ಟಿ ಮತ್ತು ಡೀಪ್ ಫ್ರೈವರೆಗಿನ ಭಾರತೀಯ ಶೈಲಿಯ ಅಡುಗೆಗೆ ಒಂದೇ ರೀತಿಯ ಪಾತ್ರೆ ಸಾಲುವುದಿಲ್ಲ. ಪ್ರಮುಖವಾಗಿ ಬಳಸಲಾಗುವ ಮೂರು ಬಗೆಯ ಪಾತ್ರೆಗಳ ಗುಣಲಕ್ಷಣಗಳು ಇಲ್ಲಿವೆ...

ನಾನ್‌ಸ್ಟಿಕ್ ಪಾತ್ರೆಗಳು (Nonstick)

ಕಡಿಮೆ ಎಣ್ಣೆಯಲ್ಲಿ, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಅಡುಗೆ ಮಾಡಲು ಇದು ಬೆಸ್ಟ್. ದೋಸೆ, ಆಮ್ಲೆಟ್, ಚೀಲಾ ಮತ್ತು ಪ್ಯಾನ್‌ಕೇಕ್‌ಗಳು ಪಾತ್ರೆಗೆ ಅಂಟಿಕೊಳ್ಳದೆ ಸುಲಭವಾಗಿ ಬರುತ್ತವೆ.

ಎಚ್ಚರಿಕೆ: ಅತಿಯಾದ ಉರಿಯಲ್ಲಿ ಇದನ್ನು ಬಳಸಬಾರದು. ಸ್ಟೀಲ್ ಸೌಟು ಅಥವಾ ಗಟ್ಟಿಯಾದ ಸ್ಕ್ರಬ್ಬರ್ ಬಳಸಿದರೆ ಮೇಲಿನ ಟೆಫ್ಲಾನ್ ಕೋಟಿಂಗ್ ಕಿತ್ತುಹೋಗುತ್ತದೆ. ಕೋಟಿಂಗ್ ಹಾಳಾದ ತಕ್ಷಣ ಇವುಗಳ ಬಳಕೆಯನ್ನು ನಿಲ್ಲಿಸಬೇಕು.

ಸ್ಟೇನ್‌ಲೆಸ್ ಸ್ಟೀಲ್ (Stainless Steel)

ಭಾರತೀಯ ಅಡುಗೆಮನೆಗೆ ಇದು ಅತ್ಯಂತ ಸುರಕ್ಷಿತ ಹಾಗೂ ಬಹುಪಯೋಗಿ. ಸಾರು, ಸಾಂಬಾರ್, ಅನ್ನ ಮತ್ತು ಪಲ್ಯ ಮಾಡಲು ಇದು ಹೇಳಿಮಾಡಿಸಿದ್ದು. ಯಾವುದೇ ರಾಸಾಯನಿಕ ಕೋಟಿಂಗ್ ಇರುವುದಿಲ್ಲ ಮತ್ತು ಅಧಿಕ ಶಾಖವನ್ನು ತಡೆದುಕೊಳ್ಳುತ್ತದೆ. ಪಾತ್ರೆಯನ್ನು ಸರಿಯಾಗಿ ಬಿಸಿಮಾಡಿ ಎಣ್ಣೆ ಹಾಕಿದರೆ ಆಹಾರ ತಳಹಿಡಿಯುವುದಿಲ್ಲ. ದೀರ್ಘ ಬಾಳಿಕೆಗೆ ಉತ್ತಮ ಗುಣಮಟ್ಟದ 'ಟ್ರೈ-ಪ್ಲೈ' ಅಥವಾ 'ಮಲ್ಟಿ-ಪ್ಲೈ' ಸ್ಟೀಲ್ ಪಾತ್ರೆಗಳು ಸೂಕ್ತ.

ಕ್ಯಾಸ್ಟ್ ಐರನ್ / ಎರಕಹೊಯ್ದ ಕಬ್ಬಿಣದ ಪಾತ್ರೆ (Cast Iron)

ಶಾಖವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವಲ್ಲಿ ಇದು ನಂಬರ್ ಒನ್. ರೊಟ್ಟಿ, ಚಪಾತಿ, ದೋಸೆ ಮತ್ತು ಡೀಪ್ ಫ್ರೈಗೆ ಇದು ಅತ್ಯುತ್ತಮ. ಒಮ್ಮೆ ಸರಿಯಾಗಿ ಎಣ್ಣೆ ಸವರಿ ಹದ (Seasoning) ಮಾಡಿದರೆ ಇದು ನೈಸರ್ಗಿಕ ನಾನ್‌ಸ್ಟಿಕ್‌ನಂತೆ ಕೆಲಸ ಮಾಡುತ್ತದೆ.

ಎಚ್ಚರಿಕೆ: ಇದು ತೂಕ ಹೆಚ್ಚಿರುತ್ತದೆ. ತೊಳೆದ ತಕ್ಷಣ ಒರೆಸಿ, ತುಕ್ಕು ಹಿಡಿಯದಂತೆ ಕೊಂಚ ಎಣ್ಣೆ ಸವರಿ ಇಡಬೇಕು.

ತಜ್ಞರ ಅಂತಿಮ ತೀರ್ಮಾನ

ಯಾವುದೇ ಒಂದೇ ರೀತಿಯ ಪಾತ್ರೆಗಳ ಸೆಟ್ ಖರೀದಿಸುವ ಬದಲು, ನಿಮ್ಮ ಅಡುಗೆಮನೆಯಲ್ಲಿ ಈ ಮೂರರ ಮಿಶ್ರಣವಿರುವುದು ಜಾಣತನ. ದಿನನಿತ್ಯದ ಸಾರು-ಪಲ್ಯಗಳಿಗೆ ಸ್ಟೀಲ್, ಕಡಿಮೆ ಎಣ್ಣೆಯ ತಿಂಡಿಗಳಿಗೆ ನಾನ್‌ಸ್ಟಿಕ್ ಮತ್ತು ರೊಟ್ಟಿ-ದೋಸೆಗಳಿಗೆ ಕ್ಯಾಸ್ಟ್ ಐರನ್ ಬಳಸುವುದು ಅತ್ಯುತ್ತಮ ಎಂದು ಶೆಫ್ ಮುಸ್ಕಾನ್ ಅಜ್ಮಾನಿ ಸಲಹೆ ನೀಡಿದ್ದಾರೆ.

ಇದನ್ನು ನೆನಪಿನಲ್ಲಿಡಿ

ನಾನ್‌ಸ್ಟಿಕ್ ಪಾತ್ರೆಗಳಿಗೆ ಟಿಪ್ಸ್ (Nonstick Care)
ಖಾಲಿ ಪಾತ್ರೆ ಬಿಸಿ ಮಾಡಬೇಡಿ: ನಾನ್‌ಸ್ಟಿಕ್ ಪಾತ್ರೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಅಥವಾ ಆಹಾರ ಹಾಕದೆ ಹೆಚ್ಚು ಹೊತ್ತು ಬಿಸಿ ಮಾಡಬೇಡಿ. ಇದರಿಂದ ವಿಷಕಾರಿ ಹೊಗೆ ಹೊರಹೊಮ್ಮಿ, ಕೋಟಿಂಗ್ ಹಾಳಾಗುತ್ತದೆ.

ಮರ ಅಥವಾ ಸಿಲಿಕಾನ್ ಸೌಟು ಬಳಸಿ: ಯಾವುದೇ ಕಾರಣಕ್ಕೂ ಸ್ಟೀಲ್ ಚಮಚ ಬಳಸಬೇಡಿ. ಸಿಲಿಕಾನ್ ಅಥವಾ ಮರದ ಸೌಟುಗಳನ್ನು ಬಳಸಿದರೆ ಕೋಟಿಂಗ್‌ಗೆ ಗೆರೆ ಬೀಳುವುದಿಲ್ಲ.

ಬಿಸಿಯಿರುವಾಗಲೇ ತಣ್ಣೀರು ಹಾಕಬೇಡಿ: ಬಿಸಿಬಿಸಿ ಪ್ಯಾನ್ ಅನ್ನು ನೇರವಾಗಿ ಸಿಂಕ್‌ನಲ್ಲಿಟ್ಟು ತಣ್ಣೀರು ಸುರಿಯಬೇಡಿ (ಇದನ್ನು 'ಥರ್ಮಲ್ ಶಾಕ್' ಎನ್ನುತ್ತಾರೆ). ಇದರಿಂದ ಪಾತ್ರೆಯ ಆಕಾರ ಡೊಂಕಾಗುತ್ತದೆ ಮತ್ತು ಕೋಟಿಂಗ್ ಬೇಗನೆ ಕಿತ್ತುಬರುತ್ತದೆ.

ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಿಗೆ ಟಿಪ್ಸ್ (Stainless Steel Hacks)
ನೀರಿನ ಹನಿ ಪರೀಕ್ಷೆ (Water Drop Test): ಸ್ಟೀಲ್ ಪಾತ್ರೆಯಲ್ಲಿ ದೋಸೆ ಅಥವಾ ಪದಾರ್ಥ ಅಂಟಿಕೊಳ್ಳಬಾರದು ಎಂದರೆ, ಮೊದಲು ಪಾತ್ರೆಯನ್ನು ಚೆನ್ನಾಗಿ ಕಾಯಿಸಿ. ನಂತರ ಕೆಲವು ಹನಿ ನೀರು ಚಿಮುಕಿಸಿ. ಆ ನೀರು ಆವಿಯಾಗದೆ ಮುತ್ತಿನಂತೆ ಓಡಾಡಿದರೆ ಪಾತ್ರೆ ರೆಡಿಯಾಗಿದೆ ಎಂದರ್ಥ. ಈಗ ಎಣ್ಣೆ ಹಾಕಿ ಅಡುಗೆ ಮಾಡಿದರೆ ಆಹಾರ ತಳಹಿಡಿಯುವುದಿಲ್ಲ!

ತಣ್ಣೀರಿಗೆ ಉಪ್ಪು ಹಾಕಬೇಡಿ: ಸ್ಟೀಲ್ ಪಾತ್ರೆಯಲ್ಲಿ ನೀರು ಕಾಯಿಸುವಾಗ, ನೀರು ಕುದಿಯುವ ಮುನ್ನವೇ ಉಪ್ಪು ಹಾಕಿದರೆ ಪಾತ್ರೆಯ ತಳದಲ್ಲಿ ಸಣ್ಣ-ಸಣ್ಣ ಕಲೆಗಳು (Pitting) ಬೀಳುತ್ತವೆ. ನೀರು ಚೆನ್ನಾಗಿ ಕುದಿಯುವಾಗ ಮಾತ್ರ ಉಪ್ಪು ಹಾಕಿ.

ಕಪ್ಪಾದ ಕಲೆ ಹೋಗಲಾಡಿಸಲು: ಪಾತ್ರೆ ತಳ ಹಿಡಿದರೆ, ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಮತ್ತು ವಿನೆಗರ್ ಹಾಕಿ, ನೀರು ಬೆರೆಸಿ 5 ನಿಮಿಷ ಕುದಿಸಿದರೆ ಕಲೆಗಳು ಸುಲಭವಾಗಿ ಮಾಯವಾಗುತ್ತವೆ.

ಕ್ಯಾಸ್ಟ್ ಐರನ್ (ಕಬ್ಬಿಣದ) ಪಾತ್ರೆಗಳಿಗೆ ಟಿಪ್ಸ್ (Cast Iron Hacks)
ಹುಳಿ ಪದಾರ್ಥಗಳನ್ನು ಮಾಡಬೇಡಿ: ಕಬ್ಬಿಣದ ಪಾತ್ರೆಗಳಲ್ಲಿ ಟೊಮ್ಯಾಟೋ ಗೊಜ್ಜು, ಹುಣಸೆಹಣ್ಣಿನ ಸಾರು ಅಥವಾ ನಿಂಬೆಹಣ್ಣು ಬಳಸುವ ಅಡುಗೆಗಳನ್ನು ಹೆಚ್ಚು ಹೊತ್ತು ಬೇಯಿಸಬೇಡಿ. ಹುಳಿ ಅಂಶವು ಕಬ್ಬಿಣದೊಂದಿಗೆ ವರ್ತಿಸಿ ಆಹಾರ ಕಪ್ಪಾಗುವ ಮತ್ತು ಲೋಹದ ರುಚಿ ಬರುವ ಸಾಧ್ಯತೆ ಇರುತ್ತದೆ.

ತುಕ್ಕು ಹಿಡಿಯದಂತೆ ತಡೆಯುವ ಸರಳ ಉಪಾಯ: ತೊಳೆದ ನಂತರ ಪಾತ್ರೆಯನ್ನು ಒಲೆಯ ಮೇಲಿಟ್ಟು 1 ನಿಮಿಷ ಬಿಸಿ ಮಾಡಿ, ಸಂಪೂರ್ಣ ತೇವಾಂಶ ಆವಿಯಾದ ನಂತರ 2 ಹನಿ ಅಡುಗೆ ಎಣ್ಣೆ ಸವರಿ ಇಡಿ. ಹೀಗೆ ಮಾಡಿದರೆ ಅದು ಎಂದಿಗೂ ತುಕ್ಕು ಹಿಡಿಯುವುದಿಲ್ಲ.

ಸಾಬೂನು ಬಳಕೆ ಕಡಿಮೆ ಇರಲಿ: ಕ್ಯಾಸ್ಟ್ ಐರನ್‌ಗೆ ಕಠಿಣವಾದ ಡಿಟರ್ಜೆಂಟ್ ಸೋಪ್ ಬಳಸಬೇಡಿ. ಬಿಸಿ ನೀರು ಮತ್ತು ಮೃದುವಾದ ಬ್ರಷ್ ಬಳಸಿ ತೊಳೆಯುವುದು ಉತ್ತಮ.

ಗೋಲ್ಡನ್ ರೂಲ್ (Golden Rule)
ದೋಸೆ-ರೊಟ್ಟಿಗೆ ಕ್ಯಾಸ್ಟ್ ಐರನ್, ನಿತ್ಯದ ಸಾರು-ಪಲ್ಯ-ಅನ್ನಕ್ಕೆ ಸ್ಟೀಲ್, ಕಡಿಮೆ ಎಣ್ಣೆಯ ಆಮ್ಲೆಟ್ ಅಥವಾ ಚೀಲಾವಿಗೆ ನಾನ್‌ಸ್ಟಿಕ್ — ಈ ನಿಯಮ ಪಾಲಿಸಿದರೆ ನಿಮ್ಮ ಪಾತ್ರೆಗಳೂ ಬಾಳಿಕೆ ಬರುತ್ತವೆ, ಅಡುಗೆಯೂ ಸೂಪರ್ ಆಗಿರುತ್ತದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಟಿ ಶರ್ಮಿಳಾ ಟ್ಯಾಗೋರ್ ಮತಾಂತರ, ಕೊ*ಲೆ ಬೆದರಿಕೆ: ದಶಕಗಳ ಬಳಿಕ ಮೌನ ಮುರಿದ ಪುತ್ರಿ ಸಬಾ ಖಾನ್​
ತಂದೆ ಅದೃಷ್ಟ ಬದಲಿಸಿದ ಮಗಳು ! ಹುಟ್ಟಿದ 24 ಗಂಟೆಯಲ್ಲೇ ಕೋಟ್ಯಾಧಿಪತಿಯಾದ ಅಪ್ಪ