ಸೊಳ್ಳೆ ಪರದೆಯಲ್ಲಿ ಸಣ್ಣ ರಂಧ್ರವಾದ್ರೆ ಟೆನ್ಷನ್ ಬೇಡ, ಕೀಟ ಒಳಗೆ ಬರದಂತೆ ಹೀಗೆ ರಿಪೇರಿ ಮಾಡಿ

Published : Oct 13, 2026, 03:37 PM IST
mosquito net repair

ಸಾರಾಂಶ

ಸೊಳ್ಳೆಯಿಂದ ರಕ್ಷಣೆ ಪಡೆಯಲು ನಾವು ಬೆಡ್‌ ಗೆ ಸೊಳ್ಳೆ ಪರದೆ ಹಾಕ್ತೇವೆ. ಕೆಲವೊಮ್ಮೆ ಕ್ಲೀನ್‌ ಮಾಡುವ ಭರದಲ್ಲಿ ಇಲ್ಲ ಬೇರೆ ಯಾವುದೋ ಕಾರಣದಿಂದ ಸೊಳ್ಳೆ ಪರದೆಯಲ್ಲಿ ಸಣ್ಣ ರಂಧ್ರಗಳಾಗುತ್ವೆ. ಈ ಟೈಂನಲ್ಲಿ ನೀವು ಸೊಳ್ಳೆ ಪರದೆ ಎಸೆಯಬೇಕಾಗಿಲ್ಲ. ಮನೆಯಲ್ಲೇ ಅದನ್ನು ರಿಪೇರಿ ಮಾಡ್ಬಹುದು.

ದಿನನಿತ್ಯ ಬಳಕೆ ಮಾಡುವಾಗ ಸೊಳ್ಳೆ ಪರದೆಯಲ್ಲಿ ಸಣ್ಣ ಸಣ್ಣ ತೂತುಗಳು ಅಥವಾ ಕಟ್ಗಳು ಆಗುವುದು ಸಾಮಾನ್ಯ. ಉಗುರು, ಹರಿತವಾದ ವಸ್ತು ಇಲ್ಲ ಬೇರೆ ಯಾವುದೋ ವಸ್ತು ಟಚ್‌ ಆಗಿ ಪರದೆ ಸಣ್ಣದಾಗಿ ತೂತಾದ್ರೆ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ತೂತಾಗಿರುವ ಸೊಳ್ಳೆ ಪರದೆ ಹಾಕಿಯೂ ಪ್ರಯೋಜನವಿಲ್ಲ. ಹಾಗಂತ ಅದನ್ನು ಬದಲಿಸಲು ಮನಸ್ಸಿಲ್ಲ ಅಂತಾದ್ರೆ ನೀವು ಅದನ್ನು ಮನೆಯಲ್ಲೇ ರಿಪೇರಿ ಮಾಡಿ.

ಸಣ್ಣ ತೂತನ್ನು ನಿರ್ಲಕ್ಷಿಸಬೇಡಿ

ಸೊಳ್ಳೆ ಪರದೆಯಲ್ಲಿರುವ ಸಣ್ಣ ತೂತು ನೋಡಲು ಸಾಮಾನ್ಯವಾಗಿ ಕಾಣಿಸಬಹುದು. ಆದರೆ ಅದೇ ಜಾಗದಿಂದ ಸೊಳ್ಳೆ ಮತ್ತು ಇತರ ಕೀಟಗಳು ಮನೆಯೊಳಗೆ ಬರಬಹುದು. ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ ಬಳಕೆಯ ಸಮಯದಲ್ಲಿ ತೂತು ಮತ್ತಷ್ಟು ದೊಡ್ಡದಾಗುವ ಸಾಧ್ಯತೆಯೂ ಇದೆ. ಹಾಗಾಗಿ ತೂತು ಕಾಣಿಸಿಕೊಂಡ ತಕ್ಷಣ ಅದನ್ನು ಸರಿಪಡಿಸುವುದು ಉತ್ತಮ.

ರಿಪೇರಿ ಮಾಡಲು ಏನೇನು ಬೇಕು?

ಸೊಳ್ಳೆ ಜಾಲದ ತೂತನ್ನು ಸರಿಪಡಿಸಲು, ಸೊಳ್ಳೆ ಪರದೆ ರಿಪೇರಿ ಪ್ಯಾಚ್ ಅಥವಾ ಹಳೆಯ ಪರದೆ ಸಣ್ಣ ತುಂಡು, ಪಾರದರ್ಶಕ ಅಂಟು ಟೇಪ್ ಅಥವಾ ಫ್ಯಾಬ್ರಿಕ್ ಗ್ಲೂ, ಕತ್ತರಿ, ಸ್ವಚ್ಛವಾದ ಬಟ್ಟೆ,ಸ್ವಲ್ಪ ಸಾಬೂನು ಮತ್ತು ನೀರು ಬೇಕಾಗುತ್ತದೆ. ನಿಮ್ಮ ಬಳಿ ರಿಪೇರಿ ಪ್ಯಾಚ್ ಇಲ್ಲದಿದ್ದರೆ ಹಳೆಯ ಸೊಳ್ಳೆ ಪರದೆಯಿಂದಲೇ ಒಂದು ಸಣ್ಣ ತುಂಡನ್ನು ಕತ್ತರಿಸಿ ಬಳಸಬಹುದು. ಮೊದಲು ತೂತಾಗಿರುವ ಜಾಗವನ್ನು ಸ್ವಚ್ಛಗೊಳಿಸಿ. ರಿಪೇರಿ ಮಾಡುವ ಮೊದಲು ತೂತಿನ ಸುತ್ತಲಿನ ಜಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಸ್ವಲ್ಪ ಸಾಬೂನು ಮತ್ತು ನೀರನ್ನು ಬಳಸಿ ಧೂಳು, ಕೊಳೆ ಮತ್ತು ಜಿಡ್ಡನ್ನು ತೆಗೆಯಿರಿ. ಇದರಿಂದ ಪ್ಯಾಚ್ ಸರಿಯಾಗಿ ಅಂಟಿಕೊಳ್ಳಲು ಸಹಾಯವಾಗುತ್ತದೆ.

ಸ್ವಚ್ಛಗೊಳಿಸಿದ ನಂತರ ಆ ಜಾಗ ಸಂಪೂರ್ಣವಾಗಿ ಒಣಗುವವರೆಗೆ ಕಾಯಿರಿ. ಒದ್ದೆಯಾದ ಜಾಲದ ಮೇಲೆ ಪ್ಯಾಚ್ ಅಂಟಿಸಿದರೆ ಅದು ಸರಿಯಾಗಿ ಹಿಡಿದುಕೊಳ್ಳುವುದಿಲ್ಲ. ತೂತಿಗಿಂತ ಸ್ವಲ್ಪ ದೊಡ್ಡ ಪ್ಯಾಚ್ ಕತ್ತರಿಸಿ, ಈಗ ಪರದೆಯಲ್ಲಿರುವ ತೂತಿನ ಗಾತ್ರವನ್ನು ಗಮನಿಸಿ, ಅದಕ್ಕಿಂತ ಸ್ವಲ್ಪ ದೊಡ್ಡದಾದ ಪ್ಯಾಚ್ ಕತ್ತರಿಸಿ. ತೂತು ಸಂಪೂರ್ಣವಾಗಿ ಮುಚ್ಚುವಷ್ಟು ಪ್ಯಾಚ್ ಇರಬೇಕು. ತುಂಬಾ ಚಿಕ್ಕ ಪ್ಯಾಚ್ ಬಳಸಿದರೆ ಅಂಚುಗಳು ತೆರೆದಿದ್ದು, ಸೊಳ್ಳೆಗಳು ಒಳಗೆ ಬರಬಹುದು.

ಪ್ಯಾಚ್ ಅನ್ನು ತೂತಿನ ಮೇಲೆ ಇಟ್ಟು, ಅದರ ನಾಲ್ಕೂ ಬದಿಗಳಲ್ಲಿ ಹಾಳಾದ ಜಾಗ ಸಂಪೂರ್ಣವಾಗಿ ಮುಚ್ಚಿದೆಯೇ ಎಂದು ಪರಿಶೀಲಿಸಿ. ನಂತರ ಫ್ಯಾಬ್ರಿಕ್ ಗ್ಲೂ ಅಥವಾ ಸೂಕ್ತವಾದ ಪಾರದರ್ಶಕ ಅಂಟು ಟೇಪ್ ಬಳಸಿ ಪ್ಯಾಚ್ ಅನ್ನು ಭದ್ರವಾಗಿ ಅಂಟಿಸಿ.

ಪ್ಯಾಚ್ ಅನ್ನು ನಿಧಾನವಾಗಿ ಒತ್ತಿ

ಪ್ಯಾಚ್ ಅಂಟಿಸಿದ ನಂತರ ಅದನ್ನು ಕೈಯಿಂದ ನಿಧಾನವಾಗಿ ಒತ್ತಿ. ಇದರಿಂದ ಅದು ಜಾಲಕ್ಕೆ ಸರಿಯಾಗಿ ಅಂಟಿಕೊಳ್ಳುತ್ತದೆ. ಅಂಟು ಸಂಪೂರ್ಣವಾಗಿ ಒಣಗುವವರೆಗೆ ಕಾಯಿರಿ. ತಕ್ಷಣವೇ ಜಾಲವನ್ನು ಬಳಸಬೇಡಿ. ಅಂಟು ಒಣಗಿದ ನಂತರ ಪ್ಯಾಚ್ನ ಅಂಚುಗಳನ್ನು ಪರೀಕ್ಷಿಸಿ. ಎಲ್ಲಿಯೂ ತೆರೆದ ಜಾಗವಿಲ್ಲದಿದ್ದರೆ ಸೊಳ್ಳೆ ಜಾಲವನ್ನು ಮತ್ತೆ ಬಳಸಬಹುದು.

ತೂತು ದೊಡ್ಡದಾಗಿದ್ದರೆ ಏನು ಮಾಡಬೇಕು?

ಕೆಲವೊಮ್ಮೆ ಜಾಲದಲ್ಲಿ ಸಣ್ಣ ತೂತಿನ ಬದಲಿಗೆ ಉದ್ದವಾದ ಕಟ್ ಅಥವಾ ದೊಡ್ಡ ರಂಧ್ರ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಕೇವಲ ಟೇಪ್ ಅಥವಾ ಗ್ಲೂ ಬಳಸುವುದಕ್ಕಿಂತ ಹೊಲಿಗೆ ಹಾಕುವುದು ಹೆಚ್ಚು ಬಲವಾದ ವಿಧಾನವಾಗಿರಬಹುದು. ಇದಕ್ಕಾಗಿ ಸೂಜಿಯ ಜೊತೆಗೆ ಸೊಳ್ಳೆ ಪರದೆಯ ಬಣ್ಣಕ್ಕೆ ಹೊಂದುವ ನೈಲಾನ್ ಅಥವಾ ಪಾಲಿಯೆಸ್ಟರ್ ದಾರವನ್ನು ಬಳಸಿ. ಮೊದಲು ತೂತಿನ ಸುತ್ತಲೂ ಸಡಿಲವಾಗಿ ನೇತಾಡುವ ಎಳೆಗಳಿದ್ದರೆ ಅವುಗಳನ್ನು ಎಚ್ಚರಿಕೆಯಿಂದ ಕತ್ತರಿಸಿ. ತೂತು ಚಿಕ್ಕದಾಗಿದ್ದರೆ ಎರಡೂ ಅಂಚುಗಳನ್ನು ಹತ್ತಿರ ತಂದು ಹೊಲಿಯಬಹುದು. ತೂತು ಸ್ವಲ್ಪ ದೊಡ್ಡದಾಗಿದ್ದರೆ ಅದರ ಹಿಂದೆ ಜಾಲದ ಸಣ್ಣ ಪ್ಯಾಚ್ ಇಟ್ಟು, ನಾಲ್ಕೂ ಬದಿಗಳನ್ನು ಹೊಲಿಯಿರಿ. ಇದರಿಂದ ರಿಪೇರಿ ಹೆಚ್ಚು ಗಟ್ಟಿಯಾಗುತ್ತದೆ ಮತ್ತು ಹರಿದ ಭಾಗ ಮತ್ತಷ್ಟು ದೊಡ್ಡದಾಗುವುದನ್ನು ತಡೆಯಲು ಸಹಾಯವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಕ್ಕರ್‌ನಲ್ಲಿ ರೈಸ್ ಬೆಂದಿಲ್ಲವೇ? ಬೇಯದ ಅನ್ನವನ್ನು 5 ನಿಮಿಷಗಳಲ್ಲಿ ಸಾಫ್ಟ್ ಮಾಡಿ
'ನನ್ನ ಹತ್ರ ದುಡ್ ಇಲ್ಲ..' ನೇರವಾಗಿ ಹೇಳೋದೇ ಇಂದಿನ ಹೊಸ ಟ್ರೆಂಡ್! ಏನಿದು ಲೌಡ್ ಬಜೆಟಿಂಗ್?