ಎಲ್ಲ ಸ್ಟಾರ್ ನಟಿಯರಿಗೂ ಮೇಕಪ್‌ ಮಾಡೋ ಮಂಡ್ಯದ ಹುಡುಗಿ!

By Web Desk  |  First Published Apr 23, 2019, 11:22 AM IST

ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗುವ ಕನಸು ಅನೇಕರಿಗೆ ಇರುತ್ತದೆ. ಆದರೆ ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡುವ ಆ ಹಂತಕ್ಕೆ ಹೋಗುವುದು ಹೇಗೆ ಅನ್ನುವುದನ್ನು ಯಾರೂ ಹೇಳಿಕೊಡುವುದಿಲ್ಲ. ಕೆಲವೊಮ್ಮೆ ಬದುಕನ್ನು ನೋಡಿ ಅರ್ಥ್ ಮಾಡಿಕೊಳ್ಳಬೇಕಾಗುತ್ತದೆ. ಒಡತನದಿಂದ ಮೇಕಪ್‌ ಕಿಟ್ ಹಿಡಿದು ಧೈರ್ಯದಿಂದ ಪರಿಸ್ಥಿತಿ ಎದುರಿಸಿ ಇವತ್ತು ರಚಿತಾರಾಮ್‌, ಹರಿಪ್ರಿಯಾ, ಸುಮಲತಾ ಮುಂತಾದ ಪ್ರಸಿದ್ಧರಿಗೆ ಮೇಕಪ್‌ ಆರ್ಟಿಸ್ಟ್‌ ಹಾಗೂ ಹೇರ್‌ಸ್ಟೈಲಿಸ್ಟ್ ಆಗಿರುವವರು ಗೀತಾ ಎಂ. ಅವರು ತಾವು ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್ ಆದ ಕಥೆ ಹೇಳಿಕೊಂಡಿದ್ದಾರೆ. ಅವರ ಅ ಪರಿಶ್ರಮದ ಪಯಣದ ಕತೆಯೇ ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್ ಆಗುವ ಶ್ರಮವನ್ನು ಹೇಳುತ್ತದೆ.


ಮೇಘಾ ಎಂಎಸ್‌

ಗೀತಾ ಎಂ ಹುಟ್ಟಿದ್ದು ಮಂಡ್ಯ ಬೆಳೆದಿದ್ದು, ವಿದ್ಯಾಭ್ಯಾಸ ಎಲ್ಲಾ ರಾಮನಗರದಲ್ಲಿ. ನಾಲ್ಕು ಜನ ಮಕ್ಕಳಲ್ಲಿ ಎರಡನೆಯವರು. ಚೂಟಿಯಾಗಿದ್ದ ಇವರು ಯಾವುದೇ ವಿಷಯ, ವಿಚಾರಗಳನ್ನು ಬೇಗ ಕಲಿಯುತಿದ್ದರು. ಜಿಲ್ಲಾ ಹಾಗೂ ರಾಜ್ಯಮಟ್ಟದ ವಾಲಿಬಾಲ್‌ ಪ್ಲೇಯರ್‌ ಸಹ. ಬಾಲ್ಯದಲ್ಲಿಯೇ ಡಾಕ್ಟರ್‌ ಆಗುವ ಕನಸು ಕಂಡಿದ್ದರು. ಮನೆಯಲ್ಲಿ ಒಂದು ದಿನ ಊಟ ಇದ್ದರೆ ಮತ್ತೊಂದು ದಿನ ತಿನ್ನಲು ಏನೂ ಇರದಂತಹ ಬಡತನ. ಎಂಟನೇ ಕ್ಲಾಸ್‌ನಲ್ಲಿದ್ದಾಗಲೇ ಸಿನಿಮಾಗೆ ಮಕ್ಕಳು ಬೇಕೆಂದು ನಿರ್ಮಾಪಕಿ ಜಯಶ್ರೀ ದೇವಿ ಸ್ಕೂಲ್‌ಗೆ ಬಂದು ಗೀತಾ ಹಾಗೂ ಅವರು ತಂಗಿ ಸೇರಿ ಹಲವು ಮಕ್ಕಳನ್ನು ಕರೆದುಕೊಂಡು ಹೋದ್ರು. ಬಡತನದಿಂದಾಗಿ ವಿದ್ಯಾಭ್ಯಾಸ ಕೈ ಬಿಟ್ಟು, ಮೇಕಪ್‌ ಕಿಟ್‌ ಹಿಡಿಯಬೇಕಾಯಿತು. ಮೇಕಪ್‌ ಮಾಡುವುದು, ಹೇರ್‌ ಸ್ಟೈಲ್‌ ಇವ್ಯಾವುದರ ಬಗ್ಗೆಯೂ ಗೊತ್ತಿರದ ಗೀತಾ ಬಣ್ಣ ಹಚ್ಚುವ ಕಲಿಕೆ ಆರಂಭಿಸಿದರು.

Latest Videos

undefined

ಗೊತ್ತಿಲ್ಲದ ವಿದ್ಯೆ ಕಲಿತೆ

ಮೇಕಪ್‌ ಬಗ್ಗೆ ಆರಂಭದ ಪಾಠ ಮಾಡಿದ್ದು ನಟಿ ದಾಮಿನಿ. ಅದಕ್ಕೆ ನಾನು ಯಾವಾಗ್ಲೂ ದಾಮಿನಿ ಅವರನ್ನು ಅನ್ನ ಹಾಕಿದ ಗುರು ಎನ್ನುವೆ. ಇದೇ ಸ್ಪಾಂಜ್‌, ಬ್ರಶ್‌ ಹಿಡಿಯುವುದು ಹೀಗೆ, ಬಟ್ಟೆ, ಈ ರೀತಿ ಮೇಕಪ್‌ ಮಾಡ್ಬೇಕು, ಮೇಕಪ್‌ ಪೌಡರ್‌ ಹೀಗಿರ್ಬೇಕು ಅಂತೆಲ್ಲಾ ಇಂಚಿಂಚೂ ಹೇಳಿಕೊಟ್ಟರು. ಅವರು ಆಗ ನಟಿಯಾಗಿದ್ದರೂ, ಹೊಸಬರಿಗೆ ಹೇಳಿಕೊಡುವುದರಲ್ಲಿ ಎಂದೂ ಹಿಂಜರಿಯಲಿಲ್ಲ. ತಪ್ಪಿದ್ದರೆ ತಿದ್ದಿ ಹೇಳುತ್ತಿದ್ರು. ದಾಮಿನಿ ಅವರು ಮದುವೆ ಆಗಿ ಹೋಗುವವರೆಗೂ ಅವರಿಗೆ ಮೇಕಪ್‌ ಮಾಡ್ತಿದ್ದೆ. ಅದಾದ ನಂತರ ಬೇರೆಯವರಿಗೆ ಮೇಕಪ್‌ ಮಾಡಲು ಆರಂಭಿಸಿದೆ.

ಕಲ್ಲು ಮುಳ್ಳುಗಳ ಕಲಿಕೆಯ ಹಾದಿ

ನಾನು ಓದಿದ್ದು ಕನ್ನಡ ಮೀಡಿಯಂನಲ್ಲಿ. ಆದರೆ ಇಂಗ್ಲಿಷ್‌ ಕಲಿಯಬೇಕೆಂದು ತುಂಬಾ ಆಸೆ ಇತ್ತು. ಎಷ್ಟೋ ಜನ ಇಂಗ್ಲಿಷ್‌ನಲ್ಲಿ ಮಾತಾಡ್ತಿದ್ದದ್ದು ಏನೂ ಅರ್ಥ ಆಗ್ತಿರ್ಲಿಲ್ಲ. ಅಂದು ಮೇಕಪ್‌ ಮಾಡಲು ಅವಕಾಶಗಳು ಕಡಿಮೆ ಸಿಗ್ತಿತ್ತು. ಮನೆ ನಿರ್ವಹಣೆ ಜವಾಬ್ದಾರಿ ನನ್ನ ಮೇಲಿದ್ದರಿಂದ ಪ್ರತಿ ರುಪಾಯಿಯ ಲೆಕ್ಕ ಇಡುವುದು, ಉಳಿಸುವುದು ಮಾಡ್ತಿದ್ದೆ. ಅವಕಾಶಕ್ಕಾಗಿ ಎಲ್ಲರ ಬಳಿ ಅಂಗಲಾಚುತ್ತಿದ್ದೆ. ಅವಕಾಶ ಸಿಕ್ಕರೂ ನನ್ನ ದುಡಿಮೆಗೆ ಸಲ್ಲಬೇಕಾದ ದುಡ್ಡು ಸರಿಯಾಗಿ ಸಿಗುತ್ತಿರಲಿಲ್ಲ. ಅಂದಿಗೆ ಒಂದು ದಿನದ ಪೇಮೆಂಟ್‌ ರು.75. ಪೇಮೆಂಟ್‌ ಕೇಳಿದರೆ ಎಷ್ಟೋ ಬಾರಿ ಕಾಸ್ಟೂ್ಯಮ್‌ ಗೋಡೌನ್‌ಗೆ ಕೂಡಿ ಹಾಕಿ ಬೆಲ್ಟ್‌ನಲ್ಲಿ ಹೊಡೆದು ಕಳುಹಿಸುತ್ತಿದ್ರು. ಕಷ್ಟ, ಅವಮಾನ ನೆನೆದು ಎಷ್ಟೋ ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ. ಸಂಬಳ ಸಿಕ್ಕರೂ ಅದನ್ನು ಮನೆಗೆ ನೀಡುತ್ತಿದ್ದೆ. ನನ್ನ ಶ್ರಮ ನನ್ನ ಪ್ರತಿಭೆಯ ಪ್ರತಿಫಲ ಕೇಳ್ತಿದ್ದರೆ ಅವಮಾನಿಸಿ, ನೋವು ನೀಡಿ ಕಳಿಸುತ್ತಿದ್ದರು.

ಬಾಲಿವುಡ್‌ನಿಂದ ದಿಟ್ಟತನ ಕಲಿತೆ

ಅಂದು ಕನ್ನಡ ಸಿನಿಮಾ ಕಡಿಮೆ. ಹಾಗೇ ಅವಕಾಶವೂ ಕಡಿಮೆ ಇತ್ತು. ಅದಾಗಲೇ ಮೇಕಪ್‌ ಆರ್ಟಿಸ್ಟಾಗಿ ನಾನು ಕೆಲಸ ಶುರು ಮಾಡಿದ್ದೆ. ಒಂದು ಹೆಣ್ಣು ಚೆನ್ನಾಗಿ ಸರ್ವೈವ್‌ ಆಗ್ತಿದ್ದಾಳೆ ಎಂದರೆ ತುಂಬಾ ಜನ ತುಳಿಯಲು ನೋಡ್ತಾರೆ. ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಎಲ್ಲಾ ಅನುಭವ ಆಗಿದೆ. ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿದೆ. ಹೀಗೆ ಅವಮಾನಗಳನ್ನು ಧೈರ್ಯದಿಂದ ಎದುರಿಸುವಂತೆ ಕಲಿಸಿದ್ದು ಬಾಲಿವುಡ್‌. ಕನ್ನಡ ಸಿನಿಮಾದಲ್ಲಿ ಯಾವಾಗ ಅವಕಾಶ ಕಡಿಮೆ ಇತ್ತೋ ಆಗ ನಾನು ಬಾಲಿವುಡ್‌ ಕಡೆ ಮುಖ ಮಾಡಿದೆ. ಅಲ್ಲಿನ ಆರ್ಟಿಸ್ಟ್‌ಗಳು ಇದ್ದ ರೀತಿಯೂ ಹಾಗಿತ್ತು. ಅವರಾಯ್ತು ಅವರ ಕೆಲಸ ಆಯ್ತು ಎಂಬಂತೆ ಇರುತ್ತಿದ್ದರು. ಅವರೇ ನನ್ನಲ್ಲಿ ಧೈರ್ಯ ತುಂಬಿದ್ದು. ‘ನಿನ್ನಲ್ಲಿ ಪ್ರತಿಭೆ ಇದೆ. ಅದು ನಿನ್ನ ಬದುಕು ರೂಪಿಸುತ್ತೆ. ನನಗೆ ಹೀಗಾಯ್ತು, ಕೆಟ್ಟದಾಗಿ ನಡೆದುಕೊಳ್ತಾರೆ ಅಂತೆಲ್ಲಾ ನೀನು ಕೊರಗಿದಷ್ಟೂನೀನು ಮುಂದೆ ಬರಲು ಸಾಧ್ಯವಿಲ್ಲ. ಧೈರ್ಯದಿಂದ ಅದನ್ನೆಲ್ಲಾ ಎದುರಿಸಿ ಹೋರಾಡಬೇಕು. ಆಗ ನೀನು ಮುಂದೆ ಬರಲು ಸಾಧ್ಯ. ಉಳಿದದ್ದೆಲ್ಲಾ ದೇವರು ನೋಡ್ಕೋತಾನೆ’ ಎಂದು ನನಗೆ ಹೇಳುತ್ತಿದ್ದರು.

ಮೇಕಪ್‌ ಆರ್ಟಿಸ್ಟ್‌ಗಳಿಗೆ ಇರುವ ತೊಂದರೆ

ಸಿನಿಮಾ ಕ್ಷೇತ್ರ ತುಂಬಾ ಒಳ್ಳೆಯದೇ. ಪ್ರತಿಭೆ ಅನಾವರಣಕ್ಕೆ ಇದು ಬಹಳ ದೊಡ್ಡ ವೇದಿಕೆ. ಆದರೆ ಇಲ್ಲಿ ಇರುವ ಜನರಲ್ಲಿ ಕೆಲವರು ಕೆಟ್ಟವರು ಇರುತ್ತಾರೆ. ಹಾಗಾಗಿ ಸಿನಿಮಾ ಕ್ಷೇತ್ರ ಎಂದರೆ ಕೆಟ್ಟದು ಎಂಬ ಮನೋಭಾವ ಎಲ್ಲರಲ್ಲೂ ಮೂಡಿದೆ. ಪ್ರತಿಭೆಗೆ ಅವಕಾಶ ಸಿಕ್ಕರೂ ಆಮೇಲೆ ಅವರ ಜೀವನದಲ್ಲಿ ಆಟ ಆಡುವ, ಕೆಟ್ಟದಾಗಿ ನಡೆಸಿಕೊಳ್ಳುವ ಜನ ಇಲ್ಲಿದ್ದಾರೆ. ನಮ್ಮಂತಹವರಿಗೆ ಈ ಫೀಲ್ಡ್‌ನಲ್ಲಿ ಬೇಕಿರುವುದು ಪ್ರತಿಭೆ, ಕಲಿಯುವ ಹಂಬಲ, ಧೈರ್ಯ ಮತ್ತು ಆತ್ಮವಿಶ್ವಾಸ. ಇವಿದ್ದರೆ ಮಾತ್ರ ಇಲ್ಲಿ ಸರ್ವೈವ್‌ ಆಗಲು ಸಾಧ್ಯ. ನನಗಾದಂತೆ ಎಷ್ಟೋ ಜನರಿಗೂ ಆಗಿದೆ. ಇಲ್ಲಿಯ ಜನರ ಕಾಟ ತಡೆಯಲಾಗದೆ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಫೀಲ್ಡ್‌ ಬಿಟ್ಟು ಹೋದವರು ಇದ್ದಾರೆ. ಹೆಣ್ಣುಮಕ್ಕಳಷ್ಟೇ ಅಲ್ಲದೆ ಗಂಡುಮಕ್ಕಳಿಗೂ ಈ ಹಿಂಸೆ ಆಗಿದ್ದಿದೆ.

ಅನ್ನ ಹಾಕುವುದೂ ಸ್ಟಾರ್‌ಗಳೇ

ಸೆಲೆಬ್ರಿಟಿಗಳು ಎಲ್ಲರನ್ನೂ ಆಕರ್ಷಿಸುತ್ತಾರೆ. ಅವರೆಲ್ಲಾ ಒಂಥರಾ ನಮ್ಮ ಪಾಲಿಗೆ ಕನ್ನಡಿ ಇದ್ದಂತೆ. ನಾವು ಅವರಿಗೆ ಮಾಡುವ ಮೇಕಪ್‌, ಬೇರೆ ಬೇರೆ ಸ್ಟೈಲ್‌ಗಳು ಜನರನ್ನು ಆಕರ್ಷಿಸುತ್ತದೆ. ಅದೇ ಸಾಮಾನ್ಯರಿಗೆ ಮಾಡಿದರೆ ಅದು ಅವರಿಗೆ ಮಾತ್ರ ಸೀಮಿತವಾಗುತ್ತದೆ. ನಾಲ್ಕು ಜನರಿಗೆ ಅಟ್ರ್ಯಾಕ್ಟ್ ಮಾಡತ್ತದಷ್ಟೇ. ಸೆಲೆಬ್ರಿಟಿಗಳಿಗೆ ಒಂದು ದೊಡ್ಡ ಸಮೂಹವನ್ನು ಅಟ್ರ್ಯಾಕ್ಟ್ ಮಾಡುವ ಶಕ್ತಿ ಇದೆ. ಈ ಸ್ಟೈಲ್‌ ಮಾಡಿದವರು ಯಾರೆಂದು ತುಂಬ ಜನ ಕೇಳ್ತಾರೆ. ಅಷ್ಟೇ ಅಲ್ಲದೆ ಸೆಲೆಬ್ರಿಟಿಗಳ ಮೇಲೆ ನಮ್ಮಿಂದ ಬೇರೆ ಬೇರೆ ಪ್ರಯೋಗ ನಡೆಯುತ್ತಿರುತ್ತೆ. ಅದು ಜನರಿಗೆ ಇಷ್ಟಆದ್ರೆ ಟ್ರೆಂಡ್‌ ಆಗುತ್ತೆ. ಹೀಗೆ ನಮಗೆ ಅನ್ನ ಹಾಕುವುದು ಸ್ಟಾ​ರ್‍ಸ್ಗಳೇ ಆದರೂ ಸಾಮಾನ್ಯರು ಇದರಿಂದ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ.

ಈಗ ನಿಮ್ಮ ಲೈಫ್‌ ಹೇಗಿದೆ?

ಕಷ್ಟದಿಂದ ಮೇಲೆ ಬಂದಿರುವುದರಿಂದ ಸುಂದರ ಜೀವನ ನಡೆಸುತ್ತಿದ್ದೇನೆ. ನನ್ನ ಅಕ್ಕ, ತಂಗಿ, ತಮ್ಮ ಎಲ್ಲರ ಜೀವನ ಸೆಟಲ್‌ ಮಾಡಿದ್ದೀನಿ. ಒಂದು ರೀತಿಯಲ್ಲಿ ಜವಾಬ್ದಾರಿಯಿಂದ ಮುಕ್ತಿ ಹೊಂದಿದ್ದೇನೆ. ಮನೆ, ಕಾರು ಎಲ್ಲವೂ ನನ್ನ ಬಳಿ ಇದೆ. ಕೈತುಂಬಾ ಕೆಲಸ ಇದೆ. ಇಷ್ಟುತೃಪ್ತಿ ಜೀವನ ನಡೆಸುತ್ತಿರುವುದರಿಂದ ಸಂತೋಷ ಇದೆ. ನನ್ನ ಜೊತೆಗೆ ಸ್ವಲ್ಪ ಜನ ಕೆಲಸ ಮಾಡುತ್ತಿದ್ದಾರೆ. ನಾನು ನೇರವಾಗಿ ಮಾತಾಡ್ತೀನಿ, ಏನೇ ಕಷ್ಟಬಂದ್ರೂ ಧೈರ್ಯದಿಂದ ಹೋರಾಡಿ ಎದುರಿಸುತ್ತೇನೆ. ನನ್ನ ಕೆಲಸದಲ್ಲಿ ಚೇಂಜಸ್‌ ಕಾಣ್ತೀನಿ, ಹೊಸ ಸ್ಟೈಲ್‌ ಹುಟ್ಟು ಹಾಕ್ತೀನಿ, ಹೊಸ ಹೊಸ ಆವಿಷ್ಕಾರ ಜಾಸ್ತಿ. ಒಂದರ್ಥದಲ್ಲಿ ಹಲವು ಅವಮಾನಗಳ ನಡುವೆ ದುಃಖ ನುಂಗಿಕೊಂಡು ಖುಷಿ ಜೀವನ ನಡೆಸುತ್ತಿದ್ದೀನಿ.

ಈಗ ಇರುವ ಸವಾಲುಗಳೇನು?

ಮೇಕಪ್‌ ಆರ್ಟಿಸ್ಟ್‌ ಅಂದ್ರೆ ಕೆಲಸವೇ ಹಾಗಿರುತ್ತೆ. ಕಷ್ಟಗಳನ್ನು ಮರೆಮಾಚಿ ನಾವೂ ಮೇಕಪ್‌ ಹಾಕಿಕೊಂಡು ಹೊಟ್ಟೆಪಾಡಿಗಾಗಿ ಬದುಕಬೇಕು. ಕಾಂಪಿಟೇಷನ್‌ ಜಾಸ್ತಿಯಾಗಿದೆ. ಇಲ್ಲಿ ಪ್ರತಿಭೆ ಜೊತೆಗೆ ಕಲಿಯುವ ಹಂಬಲ ಇರಬೇಕು. ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತದೆ. ನಾವು ಗುರುತಿಸಿಕೊಳ್ಳಬೇಕು ಅಂದರೆ ಅವಕಾಶವನ್ನು ನಾವೇ ಹುಟ್ಟು ಹಾಕಬೇಕು, ಹುಡುಕಿಕೊಂಡು ಹೋಗಬೇಕಾಗುತ್ತದೆ. ನಮ್ಮಲ್ಲಿ ಪರ್ಫೆಕ್ಟ್ನೆಸ್‌ ಇದ್ರೆ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಅದಕ್ಕೆ ಶ್ರದ್ಧೆ ಬೇಕು. ಹೊಸ ಟ್ರೆಂಡ್‌ ಬರುತ್ತಿದೆ ಎಂದರೆ ಅದನ್ನು ಮೊದಲು ಕಲಿತು ಬೇರೆಯವರು ಹೊರ ತರುವ ಮುನ್ನ ನಾನು ಅಳವಡಿಸಿರುತ್ತೇನೆ. ಹೀಗಾಗಿ ಜನ, ಸ್ಟಾ​ರ್‍ಸ್ಗಳು ನನ್ನ ಕೆಲಸ ಮೆಚ್ಚಿ ನನ್ನ ಬಳಿ ಬರುತ್ತಾರೆ. ಇಲ್ಲಿ ಮೇಲೆದ್ದು ಬಂದು ಗುರುತಿಸಿಕೊಳ್ಳುವುದೇ ಬಹು ದೊಡ್ಡ ಸವಾಲು. ಒಬ್ಬರು ಗುರುತಿಸಿಕೊಳ್ಳಿದ್ದಾರೆ ಎಂದರೆ ಅವರನ್ನು ತುಳಿಯುವ ಕೆಲಸ ಮಾಡ್ತಾರೆ. ಅದಕ್ಕೆ ನಾನು ಹೇಳೋದು ಸಿನಿಮಾ ಕ್ಷೇತ್ರ ಕೆಟ್ಟದ್ದಲ್ಲ ಇಲ್ಲಿನ ಜನ ಕೆಟ್ಟವರು ಅಂತ. ನನ್ನ ಕೆಲಸದಲ್ಲಿ ನಾನು ಫುಲ್‌ ಫಿನಿಷಿಂಗ್‌ ಇರುವಂತೆ ನಾನು ಮೇಕಪ್‌ ಮಾಡ್ತೀನಿ ಹಾಗಾಗಿ ಈಗಲೂ ನಾನೇ ಬೇಕೆಂದು ಎಷ್ಟೋ ಜನ ನನಗೆ ಕಾಲ್‌ ಮಾಡಿ ಕರೆಸಿಕೊಳ್ತಾರೆ.

click me!