
ಬೆಂಗಳೂರು ಜೀವನ ದುಬಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ಉತ್ತಮ ಪ್ರದೇಶಗಳಲ್ಲಿ ಮನೆ ಬಾಡಿಗೆ ಕೇಳಿದರೇನೇ ಹಳ್ಳಿಗಳಲ್ಲಿ ಒಬ್ಬರು ತಿಂಗಳಿನ ಎಲ್ಲಾ ಖರ್ಚನ್ನೂ ಸರಿದೂಗಿಸುವಂತೆ ಇರುತ್ತದೆ. ಅದರಲ್ಲಿಯೂ ಸಂಸಾರಿಗಳಾಗಿದ್ದರೆ ಒಬ್ಬರ ಸಂಬಳ ಕೆಲವೇ ಸಾವಿರ ರೂಪಾಯಿಗಳಲ್ಲಿ ಇದ್ದರೆ, ಪತಿ-ಪತ್ನಿ ದುಡಿಯುವುದು ಅನಿವಾರ್ಯವೂ ಆಗಿದೆ. ಹಾಗೆಂದ ಮಾತ್ರಕ್ಕೆ ಬೆಂಗಳೂರಿನಲ್ಲಿ ಇರುವವರೆಗೂ ತಿಂಗಳಿಗೆ ಲಕ್ಷ ಲಕ್ಷ ದುಡಿಯುವವರಲ್ಲ. 20-25 ಸಾವಿರ ರೂಪಾಯಿ ಸಂಬಳ ಒಬ್ಬರು ಪಡೆದರೂ ಸಂಸಾರ ನಿಭಾಯಿಸಿಕೊಂಡು ಹೋಗುವವರು ಇದ್ದಾರೆ. 3-4 ಲಕ್ಷ ರೂಪಾಯಿ ಮಾಸಿಕ ಸಂಬಳ ಪಡೆದರೂ ಸ್ಯಾಲರಿ ಸಾಲರಿ... ಎಂದು ಗೋಳಾಡುವವರೂ ಇದ್ದಾರೆ. ಅದು ಅವರವರ ಜೀವನ ಕ್ರಮಕ್ಕೆ ಬಿಟ್ಟಿರುವ ವಿಷಯ.
ಆದರೆ ಸಾಮಾನ್ಯ ಜನರ ಮಾತಿಗೆ ಬರುವುದಾದರೆ, ಬೇರೆ ಊರುಗಳಿಗೆ ಹೋಲಿಸಿದರೆ ಬೆಂಗಳೂರು ದುಬಾರಿ. ನಾಲ್ಕೈದು ಮಂದಿ ಇರುವ ಸಂಸಾರದಲ್ಲಿ ಡಬಲ್ ಬೆಡ್ರೂಮ್ ಮನೆಗಳು ಬೇಕೆಂದರೆ ಹಲವು ಪ್ರದೇಶಗಳಲ್ಲಿ ಶುರುವಾಗುವುದೇ 22-25 ಸಾವಿರ ರೂಪಾಯಿಗಳಿಂದ. ಇನ್ನು ವಾಸ್ತು-ಗೀಸ್ತು ನೋಡುವವರಿಗೆ 30-40 ಸಾವಿರ ಕೊಟ್ಟರೂ ಉತ್ತಮ ಮನೆ ಸಿಗುವುದಿಲ್ಲ. ಇಂಥ ಪ್ರದೇಶಗಳಲ್ಲಿ ವಾಸಿಸುವ ಅವಿವಾಹಿತ ಯುವಕನೊಬ್ಬ, ತಾನು ಬ್ರಹ್ಮಚಾರಿಯಾಗಿದ್ರೂ ಎಷ್ಟು ಖರ್ಚಾಗುತ್ತಿದೆ ಎನ್ನೋದನ್ನು ವಿವರಿಸಿದ್ದಾನೆ. ಬೆಂಗಳೂರಿನಲ್ಲಿ ಇದ್ದ ಎರಡು ವರ್ಷಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡಿರುವುದು ಲೆಕ್ಕಾಚಾರ ಹಾಕಿದಾಗ ತಿಳಿಯಿತು ಎಂದಿದ್ದಾನೆ.
"ನಾನು ಬೆಂಗಳೂರಿನಲ್ಲಿ ಬ್ರಹ್ಮಚಾರಿಯಾಗಿ ವಾಸಿಸಿದ ಎರಡು ವರ್ಷಗಳಲ್ಲಿ 12 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇನೆ" ಎಂದು ಹರ್ಷ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಪುಟ "unfiltered_bachelord" ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.
ಅಗರ್ವಾಲ್ ಅವರು ತಮ್ಮ ಸ್ನೇಹಿತರೊಂದಿಗೆ ವಿಲ್ಲಾವನ್ನು ಬಾಡಿಗೆಗೆ ಪಡೆದಿದ್ದಾರೆ. ಇದಕ್ಕೆ ಅವರು ತಿಂಗಳಿಗೆ 28 ಸಾವಿರ ಬಾಡಿಗೆ ತುಂಬುತ್ತಾರೆ. ದಿನಸಿಗಳಿಗೆ ತಿಂಗಳಿಗೆ 5,000 ರೂ.ಗಳನ್ನು ವೆಚ್ಚ ಮಾಡಿದರೆ, ಅಡುಗೆ ಮತ್ತು ಸೇವಕಿ ಸೇವೆಗಳಿಗೆ ಮತ್ತೊಂದು 4,500 ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇಂಟರ್ನೆಟ್ ಮತ್ತು ಇತರ ಸಣ್ಣ ವೆಚ್ಚಗಳು ತಿಂಗಳಿಗೆ ಸುಮಾರು 1,000 ರೂ.ಗಳನ್ನು ವೆಚ್ಚ ಮಾಡುತ್ತೇನೆ. ಪೆಟ್ರೋಲ್ಗೆ ಇನ್ನೂ 3,000 ರೂ, ಹೊರಗೆ ಊಟ ಮತ್ತು ಆಹಾರವನ್ನು ಆರ್ಡರ್ ಮಾಡಲು ತಿಂಗಳಿಗೆ ಸುಮಾರು 5,000 ರೂ.ಗಳನ್ನು ವೆಚ್ಚ ಮಾಡುವುದಾಗಿ ತಿಳಿಸಿದ್ದಾರೆ. ಊರಿನಿಂದ ಬೆಂಗಳೂರಿಗೆ ಬಂದು ಹೋಗಲು, ತಿಂಗಳಿಗೆ ಸುಮಾರು 4,000 ರೂ.ಗಳನ್ನು ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.
ಈ ವೆಚ್ಚಗಳು ತಿಂಗಳಿಗೆ ಸರಿಸುಮಾರು 50,000 ರೂ. ಆಗಬಹುದು ಎಂದಿದ್ದಾರೆ. ಅವರು ಎರಡು ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಬೆಂಗಳೂರಿನಲ್ಲಿ ಇರುವ ಕಾರಣದಿಂದ ಇದು ಒಂದು ವರ್ಷದಲ್ಲಿ ಸುಮಾರು 6 ಲಕ್ಷ ರೂ. ಮತ್ತು ಎರಡು ವರ್ಷಗಳಲ್ಲಿ 12 ಲಕ್ಷ ರೂ.ಗಳಾಗುತ್ತದೆ ಎಂದಿದ್ದಾರೆ. ಎಚ್ಚರಿಕೆಯಿಂದ ಯೋಜಿಸಿದರೂ ಸಹ, ಸಣ್ಣ ದೈನಂದಿನ ವೆಚ್ಚಗಳು ಬೇಗನೆ ಸೇರುತ್ತವೆ ಮತ್ತು ಪ್ರಮುಖ ಆರ್ಥಿಕ ಹೊರೆಯಾಗಬಹುದು ಎಂದಿದ್ದಾರೆ. ಎಲ್ಲರೂ ಹೀಗೆ ತಮ್ಮ ಮಾಸಿಕ ಖರ್ಚನ್ನು ಟ್ರ್ಯಾಕ್ ಮಾಡಿದರೆ ಎಷ್ಟು ಖರ್ಚಾಗುತ್ತದೆ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಜೀವನ ವೆಚ್ಚವು ತುಂಬಾ ದುಬಾರಿಯಾಗಿದೆ ಮತ್ತು 50,000 ರೂ.ಗಳನ್ನು ಎಲ್ಲಿ, ಹೇಗೆ ಖರ್ಚು ಆಗುತ್ತದೆಯೋ ತಿಳಿಯುವುದಿಲ್ಲ ಎಂದಿದ್ದಾರೆ. "ನೀವು ಅಂತಿಮವಾಗಿ ನಿಮ್ಮ ಜೀವನ ವೆಚ್ಚವನ್ನು ಲೆಕ್ಕ ಹಾಕುತ್ತೀರಿ ಮತ್ತು ವಾಸ್ತವವು ತೀವ್ರವಾಗಿ ಪರಿಣಾಮ ಬೀರುತ್ತದೆ" ಎಂದು ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ವಿಲ್ಲಾ ಬಾಡಿಗೆ, ಸ್ವಿಗ್ಗಿ ಆರ್ಡರ್‌ಗಳು ಮತ್ತು ವಾರಾಂತ್ಯದ ಇಂಧನದ ನಡುವೆ, ವೆಚ್ಚಗಳು ನಿರೀಕ್ಷೆಗಿಂತ ವೇಗವಾಗಿ ಸೇರುತ್ತವೆ ಎಂದು ಅವರು ಮುಂದುವರಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.