
ಕಿವಿಯಲ್ಲಿ ಜಮೆಯಾಗುವ ಇಯರ್ ವ್ಯಾಕ್ಸ್ ಹೊರತೆಗೆಯುವುದು ಹಲವರಿಗೆ ತಲೆ ನೋವಾಗಿ ಪರಿಣಮಿಸಿದೆ. ಇದಕ್ಕಾಗಿ ಹಲವರು ಕಾಟನ್ ಬಡ್ಸ್'ನ ಮೊರೆ ಹೋಗುತ್ತಾರೆ. ಇಯರ್ ವ್ಯಾಕ್ಸ್ ನಿಜಕ್ಕೂ ಕಿವಿಗೆ ಸುರಕ್ಷತೆ ನೀಡುತ್ತದೆ ಆದರೆ ಇದು ಅತಿಯಾಗಿ ಜಮೆಯಾದರೆ ಕಿಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.
ಈ ರೀತಿ ಕಿವಿಯಲ್ಲಿ ಜಮೆಯಾದ ಇಯರ್ ವ್ಯಾಕ್ಸ್'ನ್ನು ಹೊರತೆಗೆಯಲು ಹಲವಾರು ಮಂದಿ ಕಾಟನ್ ಬಡ್ಸ್'ನ್ನು ಬಳಸುತ್ತಾರೆ. ಆದರೆ ವೈದ್ಯರ ಪ್ರಕಾರ ಹತ್ತಿಯುಂಡೆಯಿಂದ ಇಯರ್ ವ್ಯಾಕ್ಸ್'ನ್ನು ಹೊರ ತೆಗೆಯುವುದರಿಂದ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಾಟನ್ ಬಡ್ಸ್ ಕಿವಿಯಲ್ಲಿ ಜಮೆಯಾದ ಇಯರ್ ವ್ಯಾಕ್ಸ್'ನ್ನು ಇನ್ನಷ್ಟು ಒಳ ತಳ್ಳುತ್ತದೆ, ಇದರಿಂದ ಈ ಕೆಳಕಂಡ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.
ಕಾಟನ್ ಬಡ್ಸ್'ನಿಂದ ಇಯರ್ ವ್ಯಾಕ್ಸ್'ನ್ನು ಹೊರ ತೆಗೆಯುವುದರಿಂದ: ಕಿವಿ ನೋವು, ಕಿವುಡುತನ, ತಲೆ ತಿರುಗುವುದು, ಕಿವಿ ಮುಚ್ಚಿ ಹೋದಂತ ಅನುಭವವಾಗುವುದು, ಕಿವಿಯೊಳಗೆ ಒಂದು ರೀತಿಯ ಶಬ್ಧವಾಗುವುದು, ಕಿವಿ ತುರಿಸುವಿಕೆ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ.
ಇದನ್ನು ತಡೆಯಲು ನೀವು ಮೊದಲು ಮಾಡಬೇಕಾದ ಕೆಲಸವೆಂದರೆ ಕಾಟನ್ ಬಡ್ಸ್ ಬಳಸುವುದನ್ನು ಸ್ಥಗಿತಗೊಳಿಸಬೇಕು. ಹಾಗಾದರೆ ಕಿವಿಯನ್ನು ಹೇಗೆ ಸ್ವಚ್ಛಗೊಳಿಸುವುವುದು? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.
ಕಿವಿಯನ್ನು ಕಾಟನ್ ಬಡ್ಸ್'ನ ಸಹಾಯವಿಲ್ಲದೆ ಸ್ವಚ್ಛಗೊಳಿಸುವ ಸುಲಭ ವಿಧಾನಗಳು ಇಲ್ಲಿವೆ ನೋಡಿ.
1.ಹೈಡ್ರೋಜನ್ ಫೆರಾಕ್ಸೈಡ್: ನೀರು ಹಾಗೂ ಹೈಡ್ರೋಜನ್ ಫೆರಾಕ್ಸೈಡ್ ಇವೆರಡನ್ನೂ ಸಮ ಪ್ರಮಾಣದಲ್ಲಿ ಬೆರೆಸಿ ಇದರ ಒಂದೆರಡು ಹನಿಗಳನ್ನು ಕಿವಿಗೆ ಹಾಕಿ ಇದು ಒಳ ಹೋಗುವಂತೆ ಕಿವಿಯನ್ನು ಅಲುಗಾಡಿಸಿ. ಎರಡು ನಿಮಿಷದ ಬಳಿಕ ಕಿವಿಯನ್ನು ನೆಲದ ಕಡೆ ಬಾಗಿಸಿ, ಇದರಿಂದ ಕಿವಿಯೊಳಗೆ ಜಮೆಯಾದ ಇಯರ್ ವ್ಯಾಕ್ಸ್' ಹೊರ ಬರುತ್ತದೆ.
2. ಆಲಿವ್ ತೈಲ: ಆಲಿವ್ ಎಣ್ಣೆ ಕಿವಿಯೊಳಗಿರುವ ಇಯರ್ ವ್ಯಾಕ್ಸ್'ನ್ನು ಮೃದುಗೊಳಿಸುತ್ತದೆ. ಇದರಿಂದ ಇಯರ್ ವ್ಯಾಕ್ಸ್ ಸುಲಭವಾಗಿ ಹೊರ ಬರುತ್ತದೆ. ನಿದ್ದೆ ಮಾಡುವ ಮುನ್ನ ಕಿವಿಗೆ ಒಂದೆರಡು ಹನಿ ಆಲಿವ್ ಎಣ್ಣೆಯನ್ನು ಹಾಕಿ ಕಿವಿಯನ್ನು ನೆಲದ ಕಡೆ ಬಾಗಿಸಿ ಮಲಗಿ. ವಾರದಲ್ಲಿ ನಾಲ್ಕು ದಿನಗಳ ಕಾಲ ತಪ್ಪದೆ ಮಾಡುವುದರಿಂದ ಕಿವಿಯನ್ನು ಸ್ವಚ್ಛವಾಗಿಡಬಹುದು.
3. ಪ್ಯಾರಫಿನ್ ಎಣ್ಣೆ: ಇದರ ಬಳಕೆ ಸೂಕ್ತವಾಗಿದ್ದು ಇದು ಇಯರ್ ವ್ಯಾಕ್ಸ್ ಹೊರತೆಗೆಯಲು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ. ಮೂರು ಅಥವಾ ನಾಲ್ಕು ಚಮಚದಷ್ಟು ಪ್ಯಾರಫಿನ್ ಎಣ್ಣೆಯನ್ನು ಹದವಾಗಿ ಬಿಸಿ ಮಾಡಿ ಕಿವಿಗೆ ಹಾಕಿ. ಐದು ನಿಮಿಷದ ಬಳಿಕ ಕಿವಿಯನ್ನು ಬಿಸಿ ನೀರಿನಿಂದ ತೊಳೆದುಕೊಳ್ಳಿ. ಸತತ ಮೂರು ದಿನಗಳ ಕಾಲ ಈ ವಿಧಾನವನ್ನು ಅನುಸರಿಸುವುದರಿಂದ ಇಯರ್ ವ್ಯಾಕ್ಸ್'ನ್ನು ಸಂಪೂರ್ಣವಾಗಿ ಹೊರತೆಗೆಯಬಹುದು.
4. ಗ್ಲಿಸರಿನ್: ಗ್ಲಿಸರಿನ್ ಎಲ್ಲಾ ಮೆಡಿಕಲ್ ಶಾಪ್'ಗಳಲ್ಲಿ ಲಭ್ಯವಿರುತ್ತದೆ. ಗ್ಲಿಸರಿನ್ ಬಳಕೆ ಸುರಕ್ಷಿತವಾಗಿದ್ದು, ಇದು ಕಿವಿಯಲ್ಲಿರುವ ಇಯರ್ ವ್ಯಾಕ್ಸ್'ನ್ನು ಮೃದುಗೊಳಿಸಿ ಹೊರಬರುವಂತೆ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಗ್ಲಿಸರಿನ್'ನ ನಾಲ್ಕು ಹನಿಗಳನ್ನು ದಿನಕ್ಕೆ ಮೂರು ಬಾರಿ ಹಾಕಿ ಕಿವಿಯನ್ನು ಸ್ವಚ್ಛಗೊಳಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.