ಮನೆಯ ಅಂಗಳದಲ್ಲೋ ಅಥವಾ ಛಾವಣಿಯ ಮೇಲೋ ಸಾವಯವ ತರಕಾರಿಗಳನ್ನು ಬೆಳೆಸುವುದರಿಂದ ಹಣ ಉಳಿತಾಯವಾಗುವುದಲ್ಲದೆ, ಆರೋಗ್ಯವೂ ವೃದ್ಧಿಸುತ್ತದೆ. ಕೆಮಿಕಲ್ ಮುಕ್ತ ತಾಜಾ ತರಕಾರಿಗಳನ್ನು ಬೆಳೆಸುವುದು ಬಹಳ ಸುಲಭ. ಮಳೆಗಾಲವು ತರಕಾರಿ ಬೆಳೆಯಲು ಅತ್ಯಂತ ಸೂಕ್ತ ಸಮಯ. ನಿಮ್ಮ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಬೆಂಡೆಕಾಯಿ ಗಿಡಗಳನ್ನು ಹಾಕಲು ಇದು ಸರಿಯಾದ ಸಮಯವಾಗಿದೆ. ಕುಂಡ ಅಥವಾ ಗ್ರೋ ಬ್ಯಾಗ್‌ನಲ್ಲಿ ಬೆಂಡೆಕಾಯಿ ಬೆಳೆಸುವ ಸರಳ ವಿಧಾನ ಇಲ್ಲಿದೆ.
ಬೆಂಡೆಕಾಯಿಯನ್ನು ಜನವರಿಯಿಂದ ಆಗಸ್ಟ್ ತಿಂಗಳವರೆಗೆ ಯಾವಾಗ ಬೇಕಾದರೂ ನೆಡಬಹುದು. ಇದನ್ನು ಬೆಳೆಸಲು 12 ರಿಂದ 15 ಇಂಚು ಆಳ ಮತ್ತು ಅಗಲವಿರುವ ದೊಡ್ಡ ಕುಂಡ ಅಥವಾ ಗ್ರೋ ಬ್ಯಾಗ್ ಬಳಸಿ. ಒಂದು ಕುಂಡದಲ್ಲಿ ಸುಮಾರು ನಾಲ್ಕು ಗಿಡಗಳನ್ನು ಬೆಳೆಸಬಹುದು.
ಬೆಂಡೆಕಾಯಿಗೆ ಹಗುರವಾದ ಮತ್ತು ಫಲವತ್ತಾದ ಮಣ್ಣು ಬೇಕು. ಮೊದಲು ಮಣ್ಣನ್ನು ಸಿದ್ಧಪಡಿಸುವಾಗ ಕೋಕೋಪೀಟ್, ವರ್ಮಿ ಕಾಂಪೋಸ್ಟ್ (ಎರೆಹುಳು ಗೊಬ್ಬರ), ಬೇವಿನ ಹಿಂಡಿ ಮತ್ತು ಪರ್ಲೈಟ್ ಮಿಶ್ರಣ ಮಾಡಿಕೊಳ್ಳಿ. ಕೋಕೋಪೀಟ್ ಬಳಕೆಯಿಂದ ಬೀಜಗಳು ಬೇಗನೆ ಮೊಳಕೆಯೊಡೆಯುತ್ತವೆ ಮತ್ತು ಶಿಲೀಂಧ್ರ (Fungus) ಸೋಂಕಿನಿಂದ ರಕ್ಷಿಸುತ್ತವೆ. ಮಣ್ಣನ್ನು ಬಳಸುವ ಮೊದಲು ಎರಡು-ಮೂರು ದಿನ ಬಿಸಿಲಿನಲ್ಲಿ ಒಣಗಿಸಿ, ನಂತರ ಅದಕ್ಕೆ ಜೈವಿಕ ಗೊಬ್ಬರ ಮತ್ತು ಸ್ವಲ್ಪ ಫಂಗಿಸೈಡ್ ಪೌಡರ್ ಬೆರೆಸಿ. ಕುಂಡದಲ್ಲಿ ನೀರು ಹೊರಹೋಗಲು ಸರಿಯಾದ ರಂಧ್ರಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಯಾವಾಗಲೂ ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ದುಕೊಳ್ಳಿ. ಬೀಜಗಳನ್ನು ಬಿತ್ತುವ 6 ರಿಂದ 12 ಗಂಟೆಗಳ ಮೊದಲು ನೀರಿನಲ್ಲಿ ನೆನೆಸಿಡಿ, ಇದರಿಂದ ಮೊಳಕೆ ಚೆನ್ನಾಗಿ ಬರುತ್ತದೆ. ಬೀಜಗಳನ್ನು ಮಣ್ಣಿನ 1-2 ಇಂಚು ಆಳದಲ್ಲಿ ಬಿತ್ತಿ ಮತ್ತು ಪ್ರತಿ ಬೀಜದ ನಡುವೆ 3-4 ಇಂಚು ಅಂತರವಿರಲಿ. ಬಿತ್ತಿದ ನಂತರ ನೀರು ಹಾಕಿ, ಮಣ್ಣಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಿ.
ಬೀಜಗಳು ಮೊಳಕೆಯೊಡೆಯಲು 4 ರಿಂದ 12 ದಿನಗಳು ಬೇಕಾಗುತ್ತದೆ. ಎರಡು ಗಿಡಗಳು ಒಂದೇ ಕಡೆ ಬೆಳೆದರೆ, ದುರ್ಬಲವಾಗಿರುವುದನ್ನು ತೆಗೆದುಹಾಕಿ. ಗಿಡ ಸ್ವಲ್ಪ ದೊಡ್ಡದಾದ ನಂತರ ಸಗಣಿ ಗೊಬ್ಬರ ಹಾಕಿ. 40-45 ದಿನಗಳ ನಂತರ ಗಿಡದ ಮಣ್ಣನ್ನು ಒಮ್ಮೆ ಸಡಿಲಗೊಳಿಸಿ (ಗುದ್ದಲಿ ಹಾಕುವುದು) ಮತ್ತು ಒಣಗಿದ ಎಲೆಗಳನ್ನು ತೆಗೆಯಿರಿ. ಪ್ರತಿ 15 ದಿನಕ್ಕೊಮ್ಮೆ ಸಾವಯವ ಗೊಬ್ಬರ ನೀಡುತ್ತಿರಿ.
ಮಣ್ಣು ಯಾವಾಗಲೂ ತೇವವಾಗಿರಲಿ, ಆದರೆ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರು ನಿಂತರೆ ಬೇರುಗಳು ಕೊಳೆಯಬಹುದು. ಬೆಂಡೆ ಗಿಡಕ್ಕೆ ಅಫಿಡ್ಸ್ (ಹೇನುಗಳು) ಕಾಟವಿರುತ್ತದೆ. ಇದನ್ನು ತಡೆಯಲು ಬೇವಿನ ಎಣ್ಣೆಯನ್ನು (ನೀಮ್ ಆಯಿಲ್) ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅಥವಾ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಮಾಡಿ ನೀರಿಗೆ ಬೆರೆಸಿ ಸಿಂಪಡಿಸಬಹುದು.
ಬೀಜ ಬಿತ್ತಿದ 40-50 ದಿನಗಳಲ್ಲಿ ಹೂವುಗಳು ಬಿಡಲು ಶುರುವಾಗುತ್ತವೆ. 60-65 ದಿನಗಳಲ್ಲಿ ನೀವು ಮೊದಲ ಬೆಂಡೆಕಾಯಿಯನ್ನು ಕಿತ್ತುಕೊಳ್ಳಬಹುದು. ಬೆಂಡೆಕಾಯಿ 3-4 ಇಂಚು ಉದ್ದವಾದಾಗ ತಕ್ಷಣವೇ ಕೊಯ್ಲು ಮಾಡಿ. ಸರಿಯಾದ ಸಮಯಕ್ಕೆ ಕೀಳುತ್ತಿದ್ದರೆ ಇಳುವರಿ ಹೆಚ್ಚುತ್ತದೆ. ಒಂದು ಸಣ್ಣ ಕುಟುಂಬಕ್ಕೆ 10-15 ಗಿಡಗಳು ಸಾಕಾಗುತ್ತವೆ. ಪ್ರತಿ ನಾಲ್ಕು ದಿನಕ್ಕೊಮ್ಮೆ ನಿಮಗೆ ತಾಜಾ ಬೆಂಡೆಕಾಯಿ ಸಿಗುತ್ತಿರುತ್ತದೆ.
ಹೀಗೆ ಹಂತ ಹಂತವಾಗಿ ಬೀಜಗಳನ್ನು ಹಾಕುತ್ತಾ ಹೋದರೆ ವರ್ಷಪೂರ್ತಿ ನಿಮ್ಮ ಮನೆಯಲ್ಲಿ ತಾಜಾ, ವಿಷಮುಕ್ತ ಬೆಂಡೆಕಾಯಿ ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.