
ಅಡೆತಡೆಯಿಲ್ಲದ ನಿದ್ರೆಯೊಂದಾದರೆ ಮರುದಿನಕ್ಕೆ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂಪೂರ್ಣ ರಿಚಾರ್ಜ್ ಆಗಿಬಿಡುತ್ತೇವೆ. ಆದರೆ, ನಮ್ಮಲ್ಲಿ ಬಹುತೇಕರು ಒಂದಿಲ್ಲೊಂದು ಕಾರಣಗಳಿಂದ ನಿದ್ರೆಯ ಸಮಸ್ಯೆ ಎದುರಿಸುತ್ತೇವೆ. ಇದರಿಂದ ಉತ್ತಮ ನಿದ್ದೆಗೆ ಅಡಚಣೆಯಾಗಿ ಅದು ನಮ್ಮ ಕೆಲಸ ಕಾರ್ಯ, ಮಾನಸಿಕ ಕ್ಷಮತೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಮಲಗಿದಾಗ ಕಂಡುಬರುವ ಈ ಸಮಸ್ಯೆಗಳನ್ನು ನಿಭಾಯಿಸಲು ಏನು ಮಾಡಬಹುದೆಂಬುದಕ್ಕೆ ಸರಳ ಪರಿಹಾರ ಇಲ್ಲಿದೆ.
ನಿದ್ರಾಹೀನತೆ
ಸಂಜೆ 5 ಗಂಟೆ ಮೇಲೆ ಕೆಫಿನ್‌ಯುಕ್ತ ಪದಾರ್ಥಗಳಾದ ಕಾಫಿ, ಟೀ ಸೇವನೆ ಬೇಡ. ಪ್ರತಿ ಬೆಳಗ್ಗೆ ಅಥವಾ ಮಧ್ಯಾಹ್ನ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಮಲಗುವ ಕನಿಷ್ಠ 1 ಗಂಟೆ ಮೊದಲು ಮೊಬೈಲ್ ಫೋನ್ ತೆಗೆದಿಡಿ. ಮಲಗುವ ಸಮಯದಲ್ಲಿ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಕುತ್ತಿಗೆ ನೋವು
ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ತಲೆದಿಂಬುಗಳನ್ನು ಬದಲಿಸಿ. ಲ್ಯಾಟೆಕ್ಸ್ ದಿಂಬುಗಳು ಹೆಚ್ಚು ಕಂಫರ್ಟ್ ನೀಡುತ್ತವೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ಹೀಗಾಗಿ ಅವುಗಳನ್ನೇ ಬಳಸಿ.
ಗೊರಕೆ
ನಿಮ್ಮ ಬಲ ಇಲ್ಲವೇ ಎಡಕ್ಕೆ ತಿರುಗಿ ಮಲಗುವುದನ್ನು ರೂಢಿಸಿಕೊಳ್ಳಿ. ತಲೆ ಸ್ವಲ್ಪ ಎತ್ತರದಲ್ಲಿರುವಂತೆ ದಿಂಬುಗಳನ್ನು ಬಳಸಿ. ಮಲಗುವ ಮುನ್ನ ಸಲೈನ್ ಮೂಗಿಗೆ ಹಾಕಿಕೊಂಡು ಸೈನಸ್ ಕ್ಲಿಯರ್ ಮಾಡಿಕೊಳ್ಳಿ. ಆಲ್ಕೋಹಾಲ್‌ನಿಂದ ದೂರವಿರಿ.
ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಅನ್ನೋದೇಕೆ?
ಪದೆ ಪದೆ ಎಚ್ಚರವಾಗುವುದು
ಕೋಣೆಯ ತಾಪಮಾನ 68ನಿಂದ 71 ಫ್ಯಾರನ್ಹೀಟ್ ಇರುವಂತೆ ನೋಡಿಕೊಳ್ಳಿ. ಫ್ರೆಶ್ ಗಾಳಿ ಆಡುವಂತೆ ಕಿಟಕಿಗಳನ್ನು ತೆರೆದಿಡಿ. ಆಲ್ಕೋಹಾಲ್ ಸೇವನೆಯು ಡೀಪ್ ಆರ್‌ಇಎಂ ಸ್ಲೀಪ್‌ಗೆ ಹೋಗಲು ತಡೆ ಒಡ್ಡುತ್ತದೆ. ಆದ್ದರಿಂದ ಮದ್ಯ ಸೇವನೆಯಿಂದ ದೂರವಿರಿ. ಸಂಜೆ ಹೊತ್ತಿನಲ್ಲಿ ಮಸಾಲಾ ಅಡುಗೆ ಬೇಡ.
ಆ್ಯಸಿಡ್ ರಿಫ್ಲಕ್ಸ್
ವೈದ್ಯರ ಬಳಿ ಚರ್ಚಿಸಿ ಸೂಕ್ತ ಔಷಧಿ ತೆಗೆದುಕೊಳ್ಳಿ. ರಾತ್ರಿ ಮಲಗುವಾಗ ಆದಷ್ಟು ಎಡ ದಿಕ್ಕಿಗೆ ತಿರುಗಿ ಮಲಗಿ. ತಲೆಯನ್ನು ಸ್ವಲ್ಪ ಎತ್ತರದಲ್ಲಿರಿಸಿ.
ಭುಜ ನೋವು
ನೇರವಾಗಿ ಮೇಲ್ಮುಖವಾಗಿ ಮಲಗಿ. ಬದಿಗೆ ತಿರುಗಿ ಮಲಗಿಯೇ ಅಭ್ಯಾಸವೆಂದಾದಲ್ಲಿ ಯಾವ ಭುಜ ನೋವಿದೆಯೋ ಅದರ ವಿರುದ್ಧ ದಿಕ್ಕಿನಲ್ಲಿ ತಿರುಗಿ ಮಲಗಿ. ದಿಂಬನ್ನು ಒತ್ತಿ ಹಿಡಿದು ಮಲಗುವುದು ಸಹಾಯಕವಾಗಬಹುದು.
ಬೆಳಗ್ಗೆ ಎಚ್ಚರವಾಗದಿರುವುದು
ವೀಕೆಂಡ್ ಸೇರಿ ಪ್ರತಿ ದಿನವೂ ಒಂದೇ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಳಬೇಕಿರುವುದಕ್ಕಿಂತಾ 20 ನಿಮಿಷ ಮೊದಲು ಅಲಾರಾಂ ಇಟ್ಟುಕೊಳ್ಳಿ.
ಲೆಗ್ ಕ್ರ್ಯಾಂಪ್
ನಿದ್ರೆಯಲ್ಲಿ ಹೊರಳುವಾಗ ಸ್ನಾಯು ಸೆಳೆತ, ನರ ಎಳೆದಂತಾಗುವುದು ಮುಂತಾದ ಸಮಸ್ಯೆಗಳು ಕಂಡುಬರಬಹುದು. ಮಲಗುವ ಮುನ್ನ ಕಾಲನ್ನು ಚೆನ್ನಾಗಿ ಸ್ಟ್ರೆಚ್ ಮಾಡಿ. ಸಾಕಷ್ಟು ನೀರು ಕುಡಿಯಿರಿ. ಸ್ನಾಯುವಿಗೆ ಮಸಾಜ್ ಮಾಡುವುದು, ಶಾಖ ಕೊಡುವುದು ಮುಂತಾದ ತಂತ್ರ ಸಹಾಯಕವಾಗುತ್ತದೆ.
ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಲಗೋ ದಿಕ್ಕು ಹೀಗಿರಲಿ...
ಬೆನ್ನು ನೋವು
ಮಗುಚಿ ಮಲಗಿದರೆ ತೊಡೆಗಳ ಕೆಳಗೆ ದಿಂಬಿಟ್ಟುಕೊಳ್ಳಿ. ಅಂಗಾತ ಮಲಗಿದರೆ ಕಾಲುಗಳ ಕೆಳಗೆ ದಿಂಬಿಟ್ಟುಕೊಳ್ಳಿ. ಮಲಗುವ ಮುನ್ನ ಚೆನ್ನಾಗಿ ಮೈ ಮುರಿಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ:https://kannada.asianetnews.com/health-life
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.