
ಕಮಲದ ಹೂಗಳನ್ನು ನೋಡೋದೇ ಚೆಂದ. ಆದ್ರೆ ಮನೆ ಅಥವಾ ಬಾಲ್ಕನಿಯಲ್ಲಿ ಕಮಲ ಹೂ ಬೆಳೆಯೋದು ಕಷ್ಟ ಎಂದು ಹಲವರು ಹೇಳುತ್ತಾರೆ. ಟೆರೇಸ್, ಬಾಲ್ಕನಿ ಅಥವಾ ಅಂಗಳದಲ್ಲಿರುವ ದೊಡ್ಡ ಟಬ್‌ನಲ್ಲಿ ನೀರು ಸ್ಟೋರ್ ಮಾಡಿ ಸುಲಭವಾಗಿ ಕಮಲದ ಗಿಡವನ್ನು ನೆಡಬಹುದು. ಕಮಲದ ಗಿಡ ಬೆಳೆಸೋದು ಹೇಗೆ ಗೊತ್ತಾ?
ರಂಧ್ರಗಳಿಲ್ಲದ ಅಗಲವಾದ ದೊಡ್ಡ ಟಬ್ ಅಥವಾ ಇನ್ನಿತರ ಯಾವುದೇ ವಸ್ತು (ಇದು ನೀರು ಹಿಡಿದಿಟ್ಟುಕೊಳ್ಳುವಂತಿರಬೇಕು)
ಜೇಡಿಮಣ್ಣು (ತೋಟದ ಮಣ್ಣು)
ಶುದ್ಧ ನೀರು
ನೀರಿನಲ್ಲಿ ಬೆಳೆಯುವ ಸಸ್ಯಗಳಿಗೆ ಬೇಕಾಗುವ ಗೊಬ್ಬರ
ಪ್ರತಿನಿತ್ಯ ಸೂರ್ಯನ ಬೆಳಕು ಗಿಡದ ಮೇಲೆ ಬೀಳುವಂತಿರುವ ಸ್ಥಳದಲ್ಲಿ ಗಿಡ ಬೆಳೆಸಬೇಕು.
ಕಮಲದ ಗಿಡ ನೆಡಲು ಪುಟ್ಟ ಸಸಿಯನ್ನು ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಕಮಲ ಸಸ್ಯದ ಬೀಜಗಳು ಸಿಗುತ್ತವೆ. ಆದರೆ ಈ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಬೆಳೆದಿರುವ ಕಮಲ ಗಿಡದ ತುಂಡು ಬಳಸಿ. ಕಮಲ ಗಿಡಕ್ಕಾಗಿ ನೀರು ಸೋರಿಕೆಯಾಗದಂತಹ ದೊಡ್ಡ ಟಬ್ ಬಳಸಿ. ಕಮಲದ ಎಲೆಗಳು ಹರಡಲು ಸ್ಥಳ ಬೇಕಾಗಿರುವ ಕಾರಣ ಅಗಲವಾದ ಟಬ್ ಅಥವಾ ಮನೆ ಆವರಣದಲ್ಲಿಯೇ ದೊಡ್ಡ ತೊಟ್ಟಿಯನ್ನು ನಿರ್ಮಿಸಿಕೊಳ್ಳಿ.
ತೊಟ್ಟಿ ಸಿದ್ಧವಾದ ಬಳಿಕ ತೋಟಗಾರಿಕೆ ಮಣ್ಣು\ಜೇಡಿ ಮಣ್ಣು ಸೇರಿಸಿಕೊಳ್ಳಿ. ಮಣ್ಣು ಸೇರಿಸಿದ ಬಳಿಕ ಕಮಲ ಗಿಡದ ಕಡ್ಡಿಯನ್ನು ತೊಟ್ಟಿಯೊಳಗಿಡಿ. ಈ ಕಮಲದ ಕಡ್ಡಿ ಕೆಳಭಾಗ ಮಣ್ಣಿನಲ್ಲಿರಬೇಕು ಮತ್ತು ಮೇಲ್ಭಾಗದಲ್ಲಿಯೂ ಕಾಣಿಸುತ್ತಿರುವಂತೆ ನೆಡಬೇಕು. ತಳಭಾಗದ ಮಣ್ಣಿನ ಮೇಲೆ ಕನಿಷ್ಠ 5 ರಿಂದ 6 ಸೆಂಟಿ ಮೀಟರ್‌ನಷ್ಟು ನೀರು ಸಂಗ್ರಹವಾಗಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಯಾವುದೇ ಸಮಯದಲ್ಲಿ ನೀರು ಕಡಿಮೆಯಾಗದಂತೆ ನಿರ್ವಹಿಸಬೇಕು.
ಕಮಲದ ಕಡ್ಡಿ ಹಾಕಿದ ಕೂಡಲೇ ಗೊಬ್ಬರ ಸೇರಿಸಬಾರದು. ಕಡ್ಡಿಯಲ್ಲಿ ಹಸಿರು ಚಿಗುರು ಕಾಣಿಸಿಕೊಳ್ಳಲು ಆರಂಭಿಸಿದಾಗ ಹಂತ ಹಂತವಾಗಿ ಗೊಬ್ಬರ ಸೇರಿಸಿಕೊಳ್ಳಬೇಕಾಗುತ್ತದೆ. ಎಲೆಗಳು ಕಾಣಿಸಿದಾಗ ಗೊಬ್ಬರ ಪ್ರಮಾಣ ಹೆಚ್ಚಿಸಬೇಕು. ಹೀಗೆ ಗಿಡವನ್ನು ಆರೈಕೆ ಮಾಡಿದ್ರೆ ನಿಮ್ಮ ಅಂಗಳದಲ್ಲಿ ಸುಂದರವಾದ ಕಮಲಗಳು ಅರಳುತ್ತವೆ.
ಈ ವಿಷಯಗಳು ನೆನಪಿನಲ್ಲಿರಲಿ
ಪ್ರತಿದಿನ ಕನಿಷ್ಠ ಆರು ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಕಮಲ ಗಿಡವಿರಬೇಕು. ಸೂರ್ಯನ ಬೆಳಕು ಕಮಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೆಯೇ ಆಗಾಗ ತೊಟ್ಟಿಯಲ್ಲಿರುವ ನೀರನ್ನು ಬದಲಾಯಿಸುತ್ತಿರಬೇಕು. ಕಾಂಡಗಳನ್ನು ಕತ್ತರಿಸುವಾಗ, ನೀರಿನ ಅಡಿಯಲ್ಲಿ ಕತ್ತರಿಸದಂತೆ ಎಚ್ಚರಿಕೆ ವಹಿಸಿ. ಸರಿಯಾದ ಹವಾಮಾನ ಮತ್ತು ಆರೈಕೆ ಮಾಡಿದ್ರೆ ಕಮಲ ಹೂಗಳು ಅರಳುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.