‘ಕೋಟಿ ಕೋಟಿ ಒಡೆಯನಾದ್ರೂ ಸಿಂಪಲ್ ಲೈಫ್‌ಸ್ಟೈಲ್’: 15 ವರ್ಷಗಳಿಂದ ಗೂಗಲ್ ಸಿಇಒ ಸುಂದರ್ ಪಿಚೈ ತಿನ್ನೋ ಬೆಳಗಿನ ತಿಂಡಿ ಇದೇ

Published : Nov 04, 2026, 12:48 PM IST
Google CEO Sundar Pichai is eating the same breakfast for 15 years

ಸಾರಾಂಶ

ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರ ಜೀವನಶೈಲಿ ಹೇಗಿರಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಲ್ಲೂ ಕಳೆದ 15 ವರ್ಷಗಳಿಂದ ಬಹುತೇಕ ಒಂದೇ ರೀತಿಯ ಬೆಳಗಿನ ಉಪಾಹಾರ ಸೇವಿಸುತ್ತಿದ್ದಾರೆ ಎಂಬುದು ವಿಶೇಷ.

ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರ ಜೀವನಶೈಲಿ ಹೇಗಿರಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಕೋಟ್ಯಂತರ ರೂಪಾಯಿ ಮೌಲ್ಯದ ಕಂಪನಿಯನ್ನು ಮುನ್ನಡೆಸುವ ಅವರು ಆಹಾರ, ಆರೋಗ್ಯ ಮತ್ತು ಫಿಟ್ನೆಸ್ ವಿಚಾರದಲ್ಲಿ ಮಾತ್ರ ತುಂಬಾ ಸರಳವಾದ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ 15 ವರ್ಷಗಳಿಂದ ಬಹುತೇಕ ಒಂದೇ ರೀತಿಯ ಬೆಳಗಿನ ಉಪಾಹಾರ ಸೇವಿಸುತ್ತಿದ್ದಾರೆ ಎಂಬುದು ವಿಶೇಷ.

ಹಾಗಾದರೆ ಸುಂದರ್ ಪಿಚೈ ಪ್ರತಿದಿನ ಬೆಳಗ್ಗೆ ತಿನ್ನುವ ತಿಂಡಿ ಯಾವುದು? ಅವರ ನೆಚ್ಚಿನ ದಕ್ಷಿಣ ಭಾರತದ ಆಹಾರಗಳೇನು? ಬಿಡುವಿಲ್ಲದ ಕೆಲಸದ ನಡುವೆಯೂ ಫಿಟ್ನೆಸ್ ಕಾಪಾಡಿಕೊಳ್ಳಲು ಏನು ಮಾಡುತ್ತಾರೆ? ಇಲ್ಲಿದೆ ಮಾಹಿತಿ.

15 ವರ್ಷಗಳಿಂದ ಒಂದೇ ರೀತಿಯ ಬೆಳಗಿನ ಉಪಾಹಾರ!

'ಮಿಂಟ್' ವರದಿಯ ಪ್ರಕಾರ, ಸುಂದರ್ ಪಿಚೈ ಕಳೆದ ಸುಮಾರು 15 ವರ್ಷಗಳಿಂದ ಪ್ರತಿದಿನ ಬೆಳಗ್ಗೆ ಬಹುತೇಕ ಒಂದೇ ರೀತಿಯ ಉಪಾಹಾರ ಸೇವಿಸುತ್ತಿದ್ದಾರೆ. ಅವರ ಬೆಳಗಿನ ತಿಂಡಿಯ ಮೆನುವಿನಲ್ಲಿ ಮೊಟ್ಟೆ, ಬ್ರೆಡ್ ಟೋಸ್ಟ್ ಮತ್ತು ಒಂದು ಕಪ್ ಚಹಾ ಇರುತ್ತದೆ. ಪ್ರತಿದಿನ ಬೆಳಗ್ಗೆ ಏನು ತಿನ್ನಬೇಕು ಎಂದು ಹೆಚ್ಚು ಸಮಯ ಯೋಚಿಸುವ ಬದಲು, ಒಂದೇ ರೀತಿಯ ಆಹಾರ ಸೇವಿಸುವ ಮೂಲಕ ಸಮಯ ಉಳಿಸಿಕೊಳ್ಳುವುದು ಅವರ ಉದ್ದೇಶ. ಇದರಿಂದ ದಿನದ ಇತರ ಪ್ರಮುಖ ಕೆಲಸಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ.

ಸುಂದರ್ ಪಿಚೈ ಅವರಿಗೆ ಬೆಳಗಿನ ಸಮಯ ಬಹಳ ಮುಖ್ಯ. ಈ ಸಮಯದಲ್ಲಿ ಅವರು ಸ್ವಲ್ಪ ಏಕಾಂತದಲ್ಲಿ ಕಳೆಯಲು, ಯೋಚನೆ ಮಾಡಲು ಹಾಗೂ ಜಗತ್ತಿನ ಪ್ರಮುಖ ಸುದ್ದಿಗಳನ್ನು ಓದಲು ಇಷ್ಟಪಡುತ್ತಾರೆ. 'ದಿ ವಾಲ್ ಸ್ಟ್ರೀಟ್ ಜರ್ನಲ್' ಸೇರಿದಂತೆ ವಿವಿಧ ಪತ್ರಿಕೆಗಳನ್ನು ಓದುವುದು ಅವರ ಬೆಳಗಿನ ದಿನಚರಿಯ ಒಂದು ಭಾಗವಾಗಿದೆ.

ಬೆಳಗ್ಗೆ ಬೇಗ ಎದ್ದರೂ ರಾತ್ರಿ ಹೆಚ್ಚು ಆಕ್ಟಿವ್!

ಸುಂದರ್ ಪಿಚೈ ಸಾಮಾನ್ಯವಾಗಿ ಬೆಳಗ್ಗೆ 6.45ರಿಂದ 7.30ರ ನಡುವೆ ಎದ್ದೇಳುತ್ತಾರೆ. ಆದರೆ ಅವರ ದಿನಚರಿಯ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ರಾತ್ರಿ 9 ಗಂಟೆಯ ನಂತರ ಅವರಿಗೆ ಮತ್ತೊಮ್ಮೆ ಕೆಲಸ ಮಾಡುವ ಉತ್ಸಾಹ ಬರುತ್ತದೆಯಂತೆ. ರಾತ್ರಿ 10 ಗಂಟೆಯ ನಂತರವೂ ಹೆಚ್ಚು ಉತ್ಪಾದಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೂ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಕನಿಷ್ಠ 6.5ರಿಂದ 7 ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸುತ್ತಾರೆ.

ಬೆಂಗಳೂರಿಗೆ ಬಂದರೆ ದೋಸೆ, ದೆಹಲಿಯಲ್ಲಿ ಚೋಲೆ ಬಟೂರೆ!

ವಿಶ್ವದ ಹಲವು ದೇಶಗಳಿಗೆ ಪ್ರಯಾಣಿಸುವ ಸುಂದರ್ ಪಿಚೈ ಅವರಿಗೆ ಭಾರತೀಯ ಆಹಾರಗಳೆಂದರೆ ವಿಶೇಷ ಪ್ರೀತಿ. ಯೂಟ್ಯೂಬರ್ ವರುಣ್ ಮಯ್ಯ ಅವರೊಂದಿಗಿನ ಸಂವಾದದಲ್ಲಿ ತಮ್ಮ ನೆಚ್ಚಿನ ಭಾರತೀಯ ಖಾದ್ಯಗಳ ಬಗ್ಗೆ ಅವರು ಮಾತನಾಡಿದ್ದರು.

ಪ್ರತಿಯೊಂದು ನಗರಕ್ಕೂ ಅವರದ್ದೇ ಆದ ಫೇವರಿಟ್ ಆಹಾರವಿದೆ.

- ಬೆಂಗಳೂರು: ಮಸಾಲೆ ದೋಸೆ ಸೇರಿದಂತೆ ದೋಸೆ ಎಂದರೆ ಸುಂದರ್ ಪಿಚೈ ಅವರಿಗೆ ತುಂಬಾ ಇಷ್ಟ.

- ದೆಹಲಿ: ಇಲ್ಲಿಗೆ ಹೋದಾಗ ಚೋಲೆ ಬಟೂರೆ ತಿನ್ನಲು ಇಷ್ಟಪಡುತ್ತಾರೆ.

- ಮುಂಬೈ: ಮುಂಬೈನಲ್ಲಿ ಅವರ ಆಯ್ಕೆ ಪಾವ್ ಭಾಜಿ.

ಭಾರತೀಯ ಆಹಾರಗಳ ಬಗ್ಗೆ ಅವರಿಗಿರುವ ಪ್ರೀತಿಯನ್ನು ಈ ಆಯ್ಕೆಗಳು ತೋರಿಸುತ್ತವೆ. ಅದರಲ್ಲೂ ಬೆಂಗಳೂರಿನ ದೋಸೆಯೇ ಅವರ ನೆಚ್ಚಿನ ಆಹಾರಗಳಲ್ಲಿ ಒಂದಾಗಿರುವುದು ವಿಶೇಷ.

ಬಿಡುವಿಲ್ಲದ ಕೆಲಸದ ನಡುವೆಯೂ ಫಿಟ್ನೆಸ್‌ಗೆ ಆದ್ಯತೆ

ಗೂಗಲ್‌ನಂತಹ ಬೃಹತ್ ಕಂಪನಿಯ ಜವಾಬ್ದಾರಿ ಹೊತ್ತಿರುವ ಸುಂದರ್ ಪಿಚೈ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ವ್ಯಾಯಾಮಕ್ಕೆ ಸಮಯ ಮೀಸಲಿಡುತ್ತಾರೆ.

'ಮಿಂಟ್' ಜೊತೆಗಿನ ಮಾತುಕತೆಯಲ್ಲಿ ತಮ್ಮ ವರ್ಕೌಟ್ ಅಭ್ಯಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವಾರಾಂತ್ಯದಲ್ಲಿ ಸರಿಯಾಗಿ ವ್ಯಾಯಾಮ ಮಾಡಲು ಸಮಯ ಮೀಸಲಿಡುತ್ತಾರೆ. ಅಲ್ಲದೆ, ವಾಕಿಂಗ್ ಮತ್ತು ಹೈಕಿಂಗ್ ಮಾಡುವುದನ್ನೂ ಇಷ್ಟಪಡುತ್ತಾರೆ.

ವಾರದ ದಿನಗಳಲ್ಲಿ ಶುಕ್ರವಾರ ಸಂಜೆ ವರ್ಕೌಟ್ ಮಾಡುತ್ತಾರೆ. ಸೋಮವಾರದಿಂದ ಗುರುವಾರದವರೆಗೆ ಕೆಲಸದ ನಡುವೆಯೇ ಸಮಯ ಸಿಕ್ಕಾಗ ವ್ಯಾಯಾಮ ಮಾಡುತ್ತಾರೆ. ಪ್ರತಿದಿನ ಒಂದೇ ರೀತಿಯ ವ್ಯಾಯಾಮ ಮಾಡುವುದನ್ನು ಅವರು ಇಷ್ಟಪಡುವುದಿಲ್ಲ. ಕೆಲವೊಮ್ಮೆ ಸೈಕ್ಲಿಂಗ್ ಮಾಡಿದರೆ, ಇನ್ನು ಕೆಲವೊಮ್ಮೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ, ದೊಡ್ಡ ಹುದ್ದೆ, ಅಪಾರ ಕೆಲಸದ ಒತ್ತಡದ ನಡುವೆಯೂ ಸರಳ ಆಹಾರ ಪದ್ಧತಿ, ಸಾಕಷ್ಟು ನಿದ್ರೆ ಮತ್ತು ನಿಯಮಿತ ವ್ಯಾಯಾಮಕ್ಕೆ ಸುಂದರ್ ಪಿಚೈ ಆದ್ಯತೆ ನೀಡುತ್ತಾರೆ. 15 ವರ್ಷಗಳಿಂದ ಬಹುತೇಕ ಒಂದೇ ರೀತಿಯ ತಿಂಡಿ ಸೇವಿಸುವ ಅವರ ಅಭ್ಯಾಸ ಕೂಡ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Salman Khan: 'ಒಂದು ಕ್ಷಮೆ ಸಾಕು' ಸಲ್ಮಾನ್​ಖಾನ್‌ಗೆ ಬಿಷ್ಣೋಯ್ ಸಂಬಂಧಿ ಸಲಹೆ; ರಿಯಾಕ್ಷನ್ ಬಂದಿರೋದು ಏನು?
ಎರಡೂವರೆ ವರ್ಷ ದೂರವಿದ್ದು ಪ್ರೀತಿಸಿದ ಜೋಡಿ! ಮದುವೆ ರಾತ್ರಿ ನಡೆದ ಆ ಒಂದು ಘಟನೆಗೆ ಕಣ್ಣೀರಿಟ್ಟ ಲಕ್ಷಾಂತರ ಮಂದಿ