
ಗೋವಾ ಅಂದ್ರೆ ತಕ್ಷಣ ನೆನಪಾಗೋದು ಸಮುದ್ರ ತೀರ, ಹಾಲಿಡೇ ಹೋಮ್ಸ್. ಆದ್ರೆ ಬೆಂಗಳೂರು ಅಂದ್ರೆ ಉದ್ಯೋಗಾವಕಾಶಗಳ ಸ್ವರ್ಗ. ಈ ಎರಡು ನಗರಗಳಲ್ಲಿ ವಾಸ ಮಾಡೋಕೆ ಪ್ಲಾನ್ ಮಾಡ್ತಿದ್ರೆ, ನಿಮ್ಮ ಜೇಬಿಗೆ ಯಾವುದು ಹೆಚ್ಚು ಸೇಫ್? ಪ್ರವಾಸಿ ತಾಣಗಳಿಂದ ಸ್ವಲ್ಪ ದೂರ ಉಳಿದ್ರೆ ಗೋವಾದಲ್ಲಿ ಖರ್ಚು ಕಡಿಮೆ. ಆದ್ರೆ ಬೆಂಗಳೂರಿನಲ್ಲಿ ನೀವು ಎಲ್ಲಿರ್ತೀರಾ, ಆಫೀಸ್ಗೆ ಎಷ್ಟು ದೂರ ಓಡಾಡ್ತೀರಾ ಅನ್ನೋದರ ಮೇಲೆ ಖರ್ಚು ಡಿಪೆಂಡ್ ಆಗುತ್ತೆ.
1. ತಿಂಗಳ ಬಾಡಿಗೆ: ಯಾವ ಊರಲ್ಲಿ ಎಷ್ಟು?
ಗೋವಾದಲ್ಲಿ 1BHK ಮನೆಗೆ ತಿಂಗಳಿಗೆ ₹12,000 ದಿಂದ ₹40,000 ವರೆಗೆ ಬಾಡಿಗೆ ಇದೆ. ಅದೇ ಬೆಂಗಳೂರಿನಲ್ಲಿ 1BHK ಮನೆಗೆ ₹10,000 ದಿಂದ ₹42,000 ವರೆಗೆ ರೇಟ್ ಇದೆ. ಏರಿಯಾ, ಫರ್ನಿಶ್ಡ್ ಅಥವಾ ಅನ್ಫರ್ನಿಶ್ಡ್ ಅನ್ನೋದರ ಮೇಲೆ ಈ ರೇಟ್ ಬದಲಾಗುತ್ತೆ. ಗೋವಾದ ಕ್ಯಾಂಡೋಲಿಮ್, ಅಸ್ಸಾಗಾವೊದಂತಹ ಫೇಮಸ್ ಟೂರಿಸ್ಟ್ ಪ್ಲೇಸ್ಗಳಲ್ಲಿ ಬಾಡಿಗೆ ಜಾಸ್ತಿ. ಇತ್ತ ಬೆಂಗಳೂರಿನ ಸೆಂಟ್ರಲ್ ಏರಿಯಾಗಳು, ಐಟಿ ಕಂಪನಿಗಳು ಹಾಗೂ ಕಾಲೇಜುಗಳ ಸುತ್ತಮುತ್ತ ಕೂಡ ಮನೆ ಬಾಡಿಗೆ ತುಟ್ಟಿ.
2. ಊಟ ಮತ್ತು ದಿನಸಿ ಖರ್ಚು
ನೀವು ಮನೆಯಲ್ಲೇ ಅಡುಗೆ ಮಾಡ್ತೀರಾ, ಆನ್ಲೈನ್ನಲ್ಲಿ ಆರ್ಡರ್ ಮಾಡ್ತೀರಾ ಅಥವಾ ಹೋಟೆಲ್ನಲ್ಲಿ ತಿಂತೀರಾ ಅನ್ನೋದರ ಮೇಲೆ ಊಟದ ಖರ್ಚು ನಿಂತಿದೆ. ಗೋವಾದಲ್ಲಿ ರಾತ್ರಿ ಊಟಕ್ಕೆ ಕನಿಷ್ಠ ₹300 ಬೇಕು. ಆದ್ರೆ ಬೆಂಗಳೂರಿನಲ್ಲಿ ₹250 ಕ್ಕೆಲ್ಲಾ ಊಟ ಸಿಗುತ್ತೆ. ಎರಡು ಕಡೆ ದಿನಸಿ ಅಂಗಡಿಗಳು, ಬಜೆಟ್ ಹೋಟೆಲ್ಗಳು ಸಿಗುತ್ತವೆ. ನಿಮ್ಮ ಲೈಫ್ಸ್ಟೈಲ್ ಹೇಗಿದೆ ಅನ್ನೋದರ ಮೇಲೆ ದಿನಸಿ ಖರ್ಚು ನಿರ್ಧಾರ ಆಗುತ್ತೆ. ಒಬ್ಬರಿಗೆ ತಿಂಗಳಿಗೆ ಸರಾಸರಿ ₹3000 ದಿಂದ ₹10,000 ವರೆಗೆ ದಿನಸಿಗೆ ಬೇಕಾಗುತ್ತೆ.
3. ಓಡಾಟ ಮತ್ತು ಸಾರಿಗೆ ವ್ಯವಸ್ಥೆ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಮೆಟ್ರೋ, ಟ್ರೈನ್ ವ್ಯವಸ್ಥೆ ಇದೆ. ಜೊತೆಗೆ ಉಬರ್, ರ್ಯಾಪಿಡೋ, ನಮ್ಮ ಯಾತ್ರಿಯಂತಹ ಆ್ಯಪ್ಗಳು ಕೈಗೆಟಕುತ್ತವೆ. ಆದರೂ ಟ್ರಾಫಿಕ್, ಹವಾಮಾನ ಮತ್ತು ದೂರದ ಆಧಾರದ ಮೇಲೆ ನಿಮ್ಮ ಓಡಾಟದ ಖರ್ಚು ಬದಲಾಗುತ್ತೆ. ಗೋವಾದಲ್ಲಿ ಟ್ಯಾಕ್ಸಿ ಮತ್ತು ಬಸ್ಗಳಿವೆ. ಆದ್ರೆ ನೀವು ಇರೋ ಜಾಗದ ಮೇಲೆ ಪಬ್ಲಿಕ್ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಡಿಪೆಂಡ್ ಆಗುತ್ತೆ. ಸ್ವಂತ ಬೈಕ್ ಅಥವಾ ಕಾರು ಬಳಸುವವರು ಪೆಟ್ರೋಲ್, ಮೇಂಟೆನೆನ್ಸ್ ಮತ್ತು ಇನ್ಶೂರೆನ್ಸ್ ಖರ್ಚನ್ನು ಎಕ್ಸ್ಟ್ರಾ ಇಟ್ಟುಕೊಳ್ಳಬೇಕು.
4. ಕರೆಂಟ್ ಬಿಲ್ ಮತ್ತು ಇಂಟರ್ನೆಟ್
ಗೋವಾದಲ್ಲಿ ಒಬ್ಬರಿಗೆ ತಿಂಗಳ ಕರೆಂಟ್ ಮತ್ತು ನೀರಿನ ಬಿಲ್ ₹2500 ದಿಂದ ₹3500 ಬರಬಹುದು. ಬ್ರಾಡ್ಬ್ಯಾಂಡ್ ಇಂಟರ್ನೆಟ್ಗೆ ತಿಂಗಳಿಗೆ ₹890 ಆಗುತ್ತೆ. ಅದೇ ಬೆಂಗಳೂರಿನಲ್ಲಿ ಈ ಬಿಲ್ಗಳು ₹3500 ದಿಂದ ₹5000 ವರೆಗೆ ಬರಬಹುದು. ಅಪಾರ್ಟ್ಮೆಂಟ್ ಸೈಜ್ ಮತ್ತು ನಿಮ್ಮ ಲೈಫ್ಸ್ಟೈಲ್ ಮೇಲೆ ಇದು ಬದಲಾಗುತ್ತೆ.
ರಿಮೋಟ್ ವರ್ಕ್ ಮಾಡೋರಿಗೆ ಮತ್ತು ಟೂರಿಸ್ಟ್ ಗದ್ದಲದಿಂದ ದೂರ ಇರಬೇಕು ಅನ್ನೋರಿಗೆ ಗೋವಾ ಬೆಸ್ಟ್. ಆಫೀಸ್ಗೆ ಹೋಗಿ ಕೆಲಸ ಮಾಡೋರಿಗೆ ಬೆಂಗಳೂರು ಕಂಫರ್ಟ್. ಬೆಂಗಳೂರಿಗೆ ಹೋಲಿಸಿದ್ರೆ ಗೋವಾದ ಹಳ್ಳಿ ಕಡೆ ವಾಸ ಮಾಡೋದು ತುಂಬಾನೇ ಅಗ್ಗ. ಒಟ್ಟಾರೆಯಾಗಿ ಹೇಳೋದಾದ್ರೆ, ಗೋವಾದಲ್ಲಿ ತಿಂಗಳ ಜೀವನ ವೆಚ್ಚ ₹20,000 ದಿಂದ ₹50,000 ವರೆಗೆ ಇರುತ್ತೆ. ಅದೇ ಬೆಂಗಳೂರಿನಲ್ಲಿ ₹25,000 ದಿಂದ ₹65,000 ವರೆಗೆ ಖರ್ಚಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.