
ರಾಹುಲ್ ವೋಹ್ರಾ ಅವರಿಗೆ ಕೇವಲ 27 ವರ್ಷ ವಯಸ್ಸಾಗಿದ್ದಾಗ, ತಾವು ಸ್ಥಾಪಿಸಿದ್ದ ಸಣ್ಣ ಸ್ಟಾರ್ಟ್‌ಅಪ್ ಕಂಪನಿಯನ್ನು ‘ಲಿಂಕ್ಡ್‌ಇನ್’ ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಲಕ್ಷಾಂತರ ಡಾಲರ್ ಒಡೆಯರಾದರು. ಆದರೆ, ಆ ಯಶಸ್ಸಿನ ಬೆನ್ನಲ್ಲೇ ಕಂಪನಿಯನ್ನು ನಡೆಸುವುದು ಮತ್ತು ಒಪ್ಪಂದ ಪೂರ್ಣಗೊಳಿಸುವುದರಲ್ಲಿದ್ದ ಅತಿಯಾದ ಒತ್ತಡ ಅವರನ್ನು ನೇರವಾಗಿ ಆಸ್ಪತ್ರೆಗೆ ಸೇರಿಸಿತ್ತು. ಇಂದು ಇಂಡೋ-ಬ್ರಿಟಿಷ್ ಮೂಲದ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ರಾಹುಲ್, ತೀವ್ರ ಅನಾರೋಗ್ಯದ ಹಂತದಿಂದ ಚೇತರಿಸಿಕೊಂಡು ಮತ್ತೊಂದು ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟ್‌ಅಪ್ ನಿರ್ಮಿಸಿದ ತಮ್ಮ ರೋಚಕ ಪ್ರಯಾಣವನ್ನು ಹಂಚಿಕೊಂಡಿದ್ದಾರೆ.
ರಾಹುಲ್ ವೋಹ್ರಾ 2009 ರಲ್ಲಿ ಇಮೇಲ್ ಸೇವೆಗೆ ಸಹಕಾರಿಯಾಗಿದ್ದ 'ರ‍್ಯಾಪೋರ್ಟಿವ್' ಎಂಬ ಬ್ರೌಸರ್ ಪ್ಲಗ್-ಇನ್ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದ್ದರು. ಫೆಬ್ರವರಿ 2012 ರಲ್ಲಿ, ಲಿಂಕ್ಡ್‌ಇನ್ ಸಂಸ್ಥೆಯು ಈ ಸ್ಟಾರ್ಟ್‌ಅಪ್ ಅನ್ನು ಬರೋಬ್ಬರಿ ಸುಮಾರು 125 ಕೋಟಿಗೂ ಹೆಚ್ಚು ರೂಪಾಯಿ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಂಡಿತು.
ಆದರೆ, ಒಪ್ಪಂದ ಅಂತಿಮಗೊಳ್ಳುವ ಕೆಲವೇ ತಿಂಗಳುಗಳ ಮೊದಲು, ರ‍್ಯಾಪೋರ್ಟಿವ್‌ನ ಸಿಇಒ ಹಾಗೂ ಸಹ-ಸಂಸ್ಥಾಪಕರಾಗಿದ್ದ ರಾಹುಲ್ ತೀವ್ರ ಒತ್ತಡಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದರು. ನಾನು ಒತ್ತಡದಲ್ಲಿದ್ದೇನೆ ಎಂದು ನನಗಾಗ ಅನಿಸುತ್ತಲೇ ಇರಲಿಲ್ಲ. ಏಕೆಂದರೆ ನೀವು ನಿರಂತರವಾಗಿ ತೀವ್ರ ಒತ್ತಡದಲ್ಲಿದ್ದಾಗ, ಅದು ನಿಮ್ಮ ಜೀವನದ ಭಾಗವೇ ಆಗಿಬಿಡುತ್ತದೆ. ಅದನ್ನು ನೀವು ಪ್ರತ್ಯೇಕವಾಗಿ ಗಮನಿಸುವುದನ್ನೇ ಬಿಟ್ಟುಬಿಡುತ್ತೀರಿ ಎಂದು ಅವರು ಫಾರ್ಚೂನ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪ್ರತಿದಿನದ ಕೆಲಸದ ಒತ್ತಡ ಹೆಚ್ಚಾಗುತ್ತಾ ಹೋಗಿ, ಒಂದು ದಿನ ಬೆಳಗಿನ ಜಾವ 3 ಗಂಟೆಗೆ ತೀವ್ರ ವಾಕರಿಕೆ ಮತ್ತು ಎದೆಉರಿಯಿಂದ ರಾಹುಲ್ ಎಚ್ಚರಗೊಂಡರು. ಆದರೂ, ನೋವನ್ನು ನಿರ್ಲಕ್ಷಿಸಿ ಎಂದಿನಂತೆ ಕೆಲಸಕ್ಕೆ ಹೊರಟರು. ಆದರೆ, ಮಧ್ಯಾಹ್ನದ ವೇಳೆಗೆ ನೋವು ಅಸಹನೀಯವಾಯಿತು.
ಕಚೇರಿಯ ಬಳಿಯಿರುವ ಮೆಡಿಕಲ್ ಸ್ಟೋರ್‌ಗೆ ಹೋಗಲು ಯತ್ನಿಸಿದ ರಾಹುಲ್, ಸ್ಯಾನ್ ಫ್ರಾನ್ಸಿಸ್ಕೋದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್ ಹೊರಗಿನ ರಸ್ತೆಯಲ್ಲೇ ತೀವ್ರ ನೋವಿನಿಂದ ಕುಸಿದುಬಿದ್ದರು. ಅವರ ಸಹ-ಸಂಸ್ಥಾಪಕರೊಬ್ಬರು ಸ್ಥಳಕ್ಕೆ ಧಾವಿಸಿ ನೋವು ನಿವಾರಕ ಮಾತ್ರೆಗಳನ್ನು ತಂದುಕೊಟ್ಟರು. ಮೂರ್ಖನಂತೆ ನಾನು ಆ ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣವೇ ಮತ್ತೆ ಕೆಲಸಕ್ಕೆ ಮರಳಿದೆ ಎಂದು ರಾಹುಲ್ ನೆನಪಿಸಿಕೊಂಡಿದ್ದಾರೆ.
ಮರುದಿನ ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಪಾಸಣೆಗೆ ಒಳಗಾದಾಗ ಕಹಿ ಸತ್ಯ ಹೊರಬಿತ್ತು. ವರ್ಷಗಳ ಕಾಲ ಅನುಭವಿಸಿದ ಮಾನಸಿಕ ಒತ್ತಡ, ಕಳಪೆ ಜಂಕ್ ಫುಡ್ ಸೇವನೆ ಮತ್ತು ಕನಿಷ್ಠ ವ್ಯಾಯಾಮವೂ ಇಲ್ಲದ ಜೀವನಶೈಲಿ ಸೇರಿ ಅವರ ಜೀರ್ಣಾಂಗ ವ್ಯವಸ್ಥೆಯನ್ನು ಶೇಕಡಾ 100 ರಷ್ಟು ಹಾಳುಮಾಡಿದ್ದವು. ಅವರಿಗೆ GARD (ಜಠರ ಕರುಳಿನ ಹಿಮ್ಮುಖ ಹರಿವು ಕಾಯಿಲೆ) ತಗಲಿರುವುದು ದೃಢಪಟ್ಟಿತು.
ಅಲ್ಲಿದ್ದ ನರ್ಸ್ ಒಬ್ಬರು, ನಿಮ್ಮ ದೇಹದ ಒಳಗಿನ ಅಂಗಾಂಗಗಳ ಸ್ಥಿತಿ 10 ರಿಂದ 20 ವರ್ಷ ದೊಡ್ಡ ವಯಸ್ಸಿನ ವ್ಯಕ್ತಿಯಂತೆ ಕ್ಷೀಣಿಸಿದೆ. ತಕ್ಷಣವೇ ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ ಎಂದು ಎಚ್ಚರಿಸಿದರು. ಈ ಮಾತುಗಳು ರಾಹುಲ್ ಅವರ ಕಣ್ಣು ತೆರೆಸಿದವು.
ಆಸ್ಪತ್ರೆಯಲ್ಲಿ ಒಂದು ವಾರ ಕಳೆದು, ನಂತರ ಕುಟುಂಬದೊಂದಿಗೆ ಕೆಲ ವಾರಗಳನ್ನು ಕಳೆಯುವಾಗ ರಾಹುಲ್ ಅವರಿಗೆ ತಮ್ಮ ಉದ್ಯಮ ಶೈಲಿ ಮತ್ತು ಜೀವನದ ಕುರಿತು ಮರುಚಿಂತನೆ ಮಾಡಲು ಅವಕಾಶ ಸಿಕ್ಕಿತು.
ಇಂದಿನ 20ರ ಹರೆಯದ ಯುವ ಸಂಸ್ಥಾಪಕರು ಹಗಲು-ರಾತ್ರಿ ಎನ್ನದೆ ತಮ್ಮ ದೇಹ ಮತ್ತು ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿಕೊಳ್ಳುವುದನ್ನು ಕಂಡಾಗ ನನಗೆ ಬೇಸರವಾಗುತ್ತದೆ. ಅವರು ಅದನ್ನು ಕಷ್ಟಪಟ್ಟು ಕೆಲಸ ಮಾಡುವ 'ಹೆಮ್ಮೆಯ ಸಂಕೇತ' ಎಂದು ಭಾವಿಸಿದ್ದಾರೆ. ಆದರೆ, ಯಶಸ್ಸು ಸಾಧಿಸಲು ಇದೊಂದೇ ಮಾರ್ಗವಲ್ಲ, ಮತ್ತೊಂದು ಸರಿಹಾದಿ ಇದೆ ಎಂಬುದನ್ನು ಅವರು ಅರಿಯಬೇಕು ಎನ್ನುತ್ತಾರೆ ರಾಹುಲ್.
ಕೆಲಸದಿಂದ ಸಂಪೂರ್ಣ ವಿರಾಮ ತೆಗೆದುಕೊಂಡ ಅವರು, ವೆಲ್ನೆಸ್ ಕೋಚ್ ಮತ್ತು ‘ಪೀಕ್ ಲೀಡರ್‌ಶಿಪ್ ಇನ್‌ಸ್ಟಿಟ್ಯೂಟ್’ನ ಸಿಇಒ ಲಾರೆಂಟ್ ವ್ಯಾಲೋಸೆಕ್ ಅವರ ಮಾರ್ಗದರ್ಶನದಲ್ಲಿ ‘ಅತೀಂದ್ರಿಯ ಧ್ಯಾನ’ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಭಾರತದ ವೈದಿಕ ರಾಜ್ ಸಂಪ್ರದಾಯದ ಈ ಧ್ಯಾನ ಪದ್ಧತಿಯು ಅವರಿಗೆ ಮಾನಸಿಕ ಶಾಂತಿ ಮತ್ತು ಅದ್ಭುತ ಸ್ಥಿರತೆಯನ್ನು ನೀಡಿತು.
ಇಂದು 42 ವರ್ಷ ವಯಸ್ಸಿನ ರಾಹುಲ್ ಪ್ರತಿದಿನ ಬೆಳಿಗ್ಗೆ 20 ನಿಮಿಷಗಳ ಧ್ಯಾನದೊಂದಿಗೆ ತಮ್ಮ ದಿನವನ್ನು ಆರಂಭಿಸುತ್ತಾರೆ. ಸರಿಯಾದ ಆಹಾರ ಕ್ರಮ, ನಿರಂತರ ವ್ಯಾಯಾಮ ಮತ್ತು ಧ್ಯಾನ ಅಭ್ಯಾಸದಿಂದ ಅವರಿಗೆ ಹೊಸ ಶಕ್ತಿ ಮತ್ತು ಕಷ್ಟಗಳನ್ನು ಎದುರಿಸುವ ಮಾನಸಿಕ ಧೈರ್ಯ ಸಿಕ್ಕಿತು.
ಧ್ಯಾನದ ನಂತರ ನಾನು ಕೆಲಸಕ್ಕೆ ಮರಳಿದಾಗ, ವೆಂಚರ್ ಕ್ಯಾಪಿಟಲಿಸ್ಟ್‌ಗಳು (VCs) ಆಡುತ್ತಿದ್ದ ಆಟಗಳು ಮತ್ತು ನೀಡುತ್ತಿದ್ದ ಒತ್ತಡಗಳು ನನಗೆ ಸ್ಪಷ್ಟವಾಗಿ ಅರ್ಥವಾಗತೊಡಗಿದವು. ಯಾವುದೇ ಕಾರಣಕ್ಕೂ ನಾನು ಅನಗತ್ಯ ಒತ್ತಡಕ್ಕೆ ಒಳಗಾಗಬಾರದು ಎಂಬ ನಿರ್ಧಾರಕ್ಕೆ ಬಂದೆ ಎನ್ನುತ್ತಾರೆ ರಾಹುಲ್.
ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡ ನಂತರ ರಾಹುಲ್ ‘ಸೂಪರ್‌ಹ್ಯೂಮನ್’ (Superhuman) ಎಂಬ ತಮ್ಮ ಎರಡನೇ ಪ್ರಸಿದ್ಧ ಸ್ಟಾರ್ಟ್‌ಅಪ್ ಅನ್ನು ಕಟ್ಟಿ ಬೆಳೆಸಿದರು. ಈ ಕಂಪನಿಯನ್ನು ಇತ್ತೀಚೆಗೆ ಪ್ರಸಿದ್ಧ ಸಾಫ್ಟ್‌ವೇರ್ ಸಂಸ್ಥೆ ‘ಗ್ರ್ಯಾಮರ್ಲಿ’ (Grammarly) ಬರೋಬ್ಬರಿ ಸುಮಾರು 6,800 ಕೋಟಿಗೂ ಹೆಚ್ಚು ರೂಪಾಯಿ ಸ್ವಾಧೀನಪಡಿಸಿಕೊಂಡಿತು!
ವಿಶೇಷವೆಂದರೆ, ಈ ಬಾರಿಯ ಬೃಹತ್ ಒಪ್ಪಂದದ ಸಮಯದಲ್ಲಿ ರಾಹುಲ್ ಅವರಿಗೆ ಯಾವುದೇ ಮಾನಸಿಕ ಒತ್ತಡವಿರಲಿಲ್ಲ, ಆಸ್ಪತ್ರೆಗೆ ಅಲೆದಾಡುವ ಸ್ಥಿತಿಯೂ ಬರಲಿಲ್ಲ.
ವಯಸ್ಸಾಗುತ್ತಿದ್ದಂತೆ ಬುದ್ಧಿವಂತಿಕೆ ಬೆಳೆಯುತ್ತದೆ. ಸರಿಯಾದ ದೃಷ್ಟಿಕೋನ, ದೈಹಿಕ ವ್ಯಾಯಾಮ, ಧ್ಯಾನ ಮತ್ತು ಉತ್ತಮ ಆಹಾರ ಪದ್ಧತಿ ನಿಮ್ಮಲ್ಲಿದ್ದರೆ ನೀವು ಒತ್ತಡವಿಲ್ಲದೆ ಬೃಹತ್ ಸಾಧನೆ ಮಾಡಬಹುದು. ಕಂಪನಿಯನ್ನು ಮಾರಾಟ ಮಾಡುವಾಗ ನಮಗೆ ಹಣದ ಅಭಾವವಿರಲಿಲ್ಲ. ಬದಲಿಗೆ, ಈ ನಿರ್ಧಾರದಿಂದ ನಮ್ಮ ಗುರಿಯನ್ನು ಮತ್ತಷ್ಟು ವೇಗವಾಗಿ ತಲುಪಲು ಸಾಧ್ಯವೇ ಎಂಬುದು ಮಾತ್ರ ನಮಗೆ ಮುಖ್ಯವಾಗಿತ್ತು ಎಂದು ರಾಹುಲ್ ವೋಹ್ರಾ ತಮ್ಮ ಯಶಸ್ಸಿನ ಮಂತ್ರವನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.