ಎಂಎಸ್ಸಿ ಪದವೀಧರೆಯ ಹಾಲಿನ ಕ್ರಾಂತಿ: 23ರ ವಯಸ್ಸಲ್ಲೇ ಕೋಟಿಯ ಒಡತಿ! ಯುವತಿಯ ರೋಚಕ ಸ್ಟೋರಿ

Published : Sep 09, 2026, 12:15 PM IST
Shraddha dhavan

ಸಾರಾಂಶ

ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ಮಹಾರಾಷ್ಟ್ರದ ಶ್ರದ್ಧಾ ಧವನ್, ಉದ್ಯೋಗ ಅರಸದೆ ತಂದೆಯ ಎಮ್ಮೆ ಸಾಕಣೆ ಉದ್ಯಮವನ್ನು ಮುಂದುವರಿಸಿದರು. ತಮ್ಮ ಛಲ ಮತ್ತು ಶ್ರದ್ಧೆಯಿಂದ, 2 ಎಮ್ಮೆಗಳಿಂದ ಆರಂಭವಾದ ಪುಟ್ಟ ಹಟ್ಟಿಯನ್ನು 80 ಎಮ್ಮೆಗಳ ಬೃಹತ್ ಡೈರಿ ಫಾರ್ಮ್ ಆಗಿ ಪರಿವರ್ತಿಸಿ, ಇಂದು ಕೋಟಿಗೂ ಅಧಿಕ ಆದಾಯ ಗಳಿಸುವ ಮೂಲಕ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.

ದೆಹಲಿ: ಕಲಿತ ಶಿಕ್ಷಣಕ್ಕೆ ಉದ್ಯೋಗ ಸಿಕ್ತಿಲ್ಲ, ಅಷ್ಟು ಸಂಬಳ ಬರ್ತಿಲ್ಲ. ಅದಿಲ್ಲ, ಇದಿಲ್ಲ ಎನ್ನೋ ಯುವಕ-ಯುವತಿಯರೇ ಹೆಚ್ಚಾಗಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಬಳ ಬರುವ ಉದ್ಯೋಗಕ್ಕೇ ಆಸೆ ಪಟ್ಟು ಕೊನೆಗೆ ಏನೂ ಸಿಗದೇ ಸರ್ಕಾರಗಳ ಮೇಲೆ ಗೂಬೆ ಕೂಡ್ರಿಸುವುದು ಸರ್ವೇ ಸಾಮಾನ್ಯವಾಗಿದೆ. ಕೊನೆಗೆ ದೇಶದಲ್ಲಿ, ರಾಜ್ಯದಲ್ಲಿ ಹೆಚ್ಚಾಗ್ತಿದೆ ನಿರುದ್ಯೋಗಿಗಳ ಸಂಖ್ಯೆ ಎನ್ನುವ ಹಣೆಪಟ್ಟಿ ಕಟ್ಟಿ, ರಾಜಕಾರಣಿಗಳನ್ನು ಟಾರ್ಗೆಟ್​ ಮಾಡುವುದು ಹಲವು ದಶಕಗಳಿಂದ ನಡೆದುಕೊಂಡೇ ಬಂದಿದೆ. ಆದರೆ, ಸ್ವಲ್ಪ ಕಷ್ಟಪಟ್ಟು ದುಡಿದರೆ, ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು, ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ, ಮುಂದೆ ದೊಡ್ಡ ಮಟ್ಟದ ಯಶಸ್ಸು ಸಿಗಬಹುದು ಎನ್ನುವ ಉದಾಹರಣೆಗಳು, ಅಂಥ ಛಲಗಾರರಿಗೆ ಭಾರತದಲ್ಲಿ ಕೊರತೆಯೂ ಇಲ್ಲ. ಅಂಥ ಛಲಗಾರರಲ್ಲಿ ಒಬ್ಬಾಕೆ ಮಹಾರಾಷ್ಟ್ರದ ಅಹ್ಮದ್‌ನಗರದ 21 ವರ್ಷದ ಶ್ರದ್ಧಾ ಧವನ್.

ಡಬಲ್​ ಡಿಗ್ರಿ ಆದ ಮಾತ್ರಕ್ಕೆ ತ್ರಿಬಲ್​ ಅಂಕಿಯ ಸಂಬಳವೇ ಬೇಕೆಂದು ಪಟ್ಟುಹಿಡಿದು ಕುಳಿತಾಕೆಯಲ್ಲ ಶ್ರದ್ಧಾ. ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ ಬಳಿಕ ಶ್ರದ್ಧಾ, ಹೆಸರಿಗೆ ತಕ್ಕಂತೆಯೇ ಶ್ರದ್ಧೆಯಿಂದ ಮಾಡಿದ ಕೆಲಸವೇ ಇಂದು ಆಕೆ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡುವಂತೆ ಮಾಡಿದೆ. ಅಂಗ ವೈಕಲ್ಯ ಹೊಂದಿದ್ದ ತಂದೆಗೆ ಬಾಲ್ಯದಿಂದಲೇ ಎಮ್ಮೆ ಸಾಕಣೆ ಹಾಗೂ ಅದರ ಹಾಲು ಮಾರಾಟಕ್ಕೆ ನೆರವು ನೀಡಲು ಪ್ರಾರಂಭಿಸಿದ ಶ್ರದ್ಧಾ ಮುಂದೆ ಈ ಉದ್ಯಮವನ್ನೇ ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಮೂಲಕ ಒಂದು ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ಶ್ರದ್ಧಾ ಧವನ್ ತಮ್ಮ 11ನೇ ವಯಸ್ಸಿನಲ್ಲೇ ತಂದೆ ಸತ್ಯವನ್ ಅವರಿಗೆ ಎಮ್ಮೆಗಳ ಸಾಕಣೆ ಹಾಗೂ ಹಾಲು ಮಾರಾಟದಲ್ಲಿ ನೆರವು ನೀಡಲು ಪ್ರಾರಂಭಿಸಿದ್ದರು.

ಸತ್ಯವನ್ ಅಂಗವೈಕಲ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಶ್ರದ್ಧಾ ತಂದೆಗೆ ವ್ಯಾಪಾರದಲ್ಲಿ ನೆರವು ನೀಡಲು ಪ್ರಾರಂಭಿಸಿದರು. ಹೀಗೆ ತಂದೆಯ ಜೊತೆಗೆ ಎಮ್ಮೆ ಸಾಕಣೆ ಹಾಗೂ ಮಾರಾಟದ ಉದ್ಯಮದಲ್ಲಿ ತೊಡಗಿಕೊಂಡ ಕಾರಣ ಅವರಿಗೆ ವ್ಯಾಪಾರದ ಉದ್ದಗಲ ಬಹುಬೇಗ ಅರ್ಥವಾಯಿತು. ಹಾಲು ಮಾರಾಟದ ಸಮಯದಲ್ಲಿ ಗ್ರಾಹಕರ ಜೊತೆಗೆ ಹೇಗೆ ಚರ್ಚೆ ನಡೆಸಬೇಕು, ಎಮ್ಮೆಗೆ ಯಾವ ಆಹಾರ ನೀಡಬೇಕು, ಅದರ ಪೋಷಣೆ ಹೇಗೆ ಮಾಡಬೇಕು ಮುಂತಾದ ವಿಷಯಗಳಲ್ಲಿ ಶ್ರದ್ಧಾಗೆ ಸಾಕಷ್ಟು ಅನುಭವ ದೊರಕಿತು. 13-14ನೇ ವಯಸ್ಸಿನಲ್ಲೇ ಈ ಎಲ್ಲ ಕೆಲಸಗಳನ್ನು ಮಾಡಲು ಶ್ರದ್ಧಾ ಕಲಿತಿದ್ದರು.

ಆರಂಭದಲ್ಲಿ ಮುಜುಗರವಾಯ್ತು ಎಂದ ಶ್ರದ್ಧಾ

ನನ್ನ ತಂದೆಗೆ ಬೈಕ್ ಓಡಿಸಲು ಸಾಧ್ಯವಾಗಲಿಲ್ಲ. ನನ್ನ ಸಹೋದರ ಯಾವುದೇ ಜವಾಬ್ದಾರಿಗಳನ್ನು ಹೊರಲು ತುಂಬಾ ಚಿಕ್ಕವನಾಗಿದ್ದನು." ಹಾಗಾಗಿ 11 ನೇ ವಯಸ್ಸಿನಲ್ಲಿ ನಾನು ಆ ಜವಾಬ್ದಾರಿಯನ್ನು ವಹಿಸಿಕೊಂಡೆ, ಅದು ವಿಚಿತ್ರವೆನಿಸಿತು, ಏಕೆಂದರೆ ನಮ್ಮ ಹಳ್ಳಿಯಲ್ಲಿ ಈ ಹಿಂದೆ ಯಾವುದೇ ಹುಡುಗಿ ಅಂತಹ ಕೆಲಸ ಮಾಡಿರಲಿಲ್ಲ. ಆರಂಭದಲ್ಲಿ, ಈ ಕೆಲಸ ಮಾಡುವುದರಿಂದ ಅವರಿಗೆ ಮುಜುಗರವಾಯಿತು. "ನನ್ನ ಪ್ರದೇಶದಲ್ಲಿ ಹಾಲು ಮಾರಾಟ ಮಾಡಲು ಬೈಕ್ ಸವಾರಿ ಮಾಡುವ ಹುಡುಗಿಯನ್ನು ನಾನು ಎಂದಿಗೂ ನೋಡಿರಲಿಲ್ಲ" ಎಂದು ಅವರು ಹೇಳುತ್ತಾರೆ. ಕೆಲವು ಗ್ರಾಮಸ್ಥರು ಪ್ರಭಾವಿತರಾಗಿ ಅವರನ್ನು ಪ್ರೋತ್ಸಾಹಿಸಿದರು. ಇದು ಶ್ರದ್ಧಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಅವರು ತಮ್ಮ ಎಮ್ಮೆಗಳಿಗೆ ಮೇವು ಒದಗಿಸುವುದು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು, ಆದರೆ ಅವರು ಮುಂದುವರಿಯುತ್ತಲೇ ಇದ್ದರು. ಈಗ ಅವರು 80 ಎಮ್ಮೆಗಳನ್ನು ಹೊಂದಿದ್ದಾರೆ ಮತ್ತು ಪ್ರತಿದಿನ ಸುಮಾರು 450 ಲೀಟರ್ ಹಾಲು ಮಾರಾಟ ಮಾಡುತ್ತಾರೆ. 2019 ರಲ್ಲಿ, ಪ್ರಾಣಿಗಳಿಗಾಗಿ ಎರಡನೇ ಮಹಡಿಯನ್ನು ನಿರ್ಮಿಸಲಾಯಿತು. ಕೆಲಸ ಮಾಡುತ್ತಲೇ ಶ್ರದ್ಧಾ ತನ್ನ ಅಧ್ಯಯನವನ್ನು ಮುಂದುವರಿಸಿದರು.

ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ ಬಳಿಕ ಶ್ರದ್ಧಾ ಬೇರೆ ಯಾವ ಉದ್ಯೋಗವನ್ನು ಕೂಡ ಅರಸಿ ಹೋಗದೆ ತಂದೆಯ ಎಮ್ಮೆ ಸಾಕಾಣೆ, ಮಾರಾಟ ಹಾಗೂ ಹಾಲು ಮಾರಾಟದ ಉದ್ಯಮವನ್ನೇ ಬೆಳೆಸುವ ನಿರ್ಧಾರ ಕೈಗೊಳ್ಳುತ್ತಾರೆ. ಸತತ ಪರಿಶ್ರಮ, ಬದ್ಧತೆ ಹಾಗೂ ಸೂಕ್ತ ಯೋಜನೆಗಳ ಮೂಲಕ ಶ್ರದ್ಧಾ ತಂದೆಯ ಪುಟ್ಟ ಉದ್ಯಮವನ್ನು ಇಂದು 1 ಕೋಟಿ ರೂ. ಮೌಲ್ಯದ ಉದ್ಯಮವನ್ನಾಗಿ ಬದಲಾಯಿಸಿದ್ದಾರೆ.ನಿಘೋಜ್ ಹಳ್ಳಿಯಲ್ಲಿರುವ ಶ್ರದ್ಧಾ ಫಾರ್ಮ್ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಹಾಲು, ಬೆಣ್ಣೆ, ತುಪ್ಪ, ಪನೀರ್​ ಮಾರಾಟ ಮಾಡಿ ಕೋಟಿಗೂ ಅಧಿಕ ಗಳಿಸುತ್ತಿದ್ದಾರೆ.

ಒಂದು ಕೋಟಿಯ ವ್ಯವಹಾರ

ತಂದೆಯ 2 ಎಮ್ಮೆಗಳ ಹಟ್ಟಿ ಇಂದು 80 ಎಮ್ಮೆಗಳಿಗೆ ಆಶ್ರಯ ನೀಡುತ್ತಿದೆ. ಶ್ರದ್ಧಾ ಅವರ ತಂದೆ ಎಮ್ಮೆಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದರೆ, ಶ್ರದ್ಧಾ ಇದನ್ನು ಡೈರಿ ಫಾರ್ಮ್ ಆಗಿ ಬದಲಾಯಿಸಿದರು. ಇದನ್ನು ಸೂಕ್ತ ಯೋಜನೆ ಮೂಲಕ ಮಾಡಿದ ಕಾರಣಕ್ಕೆ ಎಮ್ಮೆ ಹಾಲಿನ ಮಾರಾಟ ಹೆಚ್ಚಿ ಕುಟುಂಬದ ಆರ್ಥಿಕ ಪರಿಸ್ಥಿತಿ ಬದಲಾಯಿತು. ಲಾಭದ ಹಣವನ್ನು ಬೇರೆ ಎಲ್ಲೂ ಬಳಸದೆ ಮತ್ತೆ ಉದ್ಯಮದಲ್ಲಿ ತೊಡಗಿಸಿದ ಕಾರಣ ಶ್ರದ್ಧಾಗೆ ಸಾಲ ಮಾಡುವ ಅನಿವಾರ್ಯತೆ ಎದುರಾಗಲಿಲ್ಲ.

2016ರಲ್ಲಿ ದೊಡ್ಡ ಶೆಡ್ ಕಟ್ಟಿ ಎಮ್ಮೆಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಿದರು. 2017ರಲ್ಲಿ ಎಮ್ಮೆಗಳ ಸಂಖ್ಯೆ 45ಕ್ಕೆ ಏರಿಕೆಯಾಯಿತು. ಆ ಬಳಿಕ ಶ್ರದ್ಧಾ ಹಾಲಿನ ಗುಣಮಟ್ಟ ಹೆಚ್ಚಿಸುವ ಕಡೆಗೆ ಗಮನ ನೀಡಿದರು. ಇದಕ್ಕಾಗಿ ಅವರು ಹತ್ತಿಬೀಜದ ಹಿಂಡಿ, ಜೋಳ, ಜೋಳದ ಪುಡಿ ಹಾಗೂ ಮೆಂತೆ ಹಲ್ಲು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡಲು ಪ್ರಾರಂಭಿಸಿದರು. ಇದರಿಂದ ಹಾಲಿನ ಗುಣಮಟ್ಟ ಹೆಚ್ಚುವ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Geyser safety tips: ಸ್ನಾನ ಮಾಡುವಾಗ ಗೀಸರ್ ಸ್ವಿಚ್ ಆನ್ ಇರುತ್ತಾ? ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ!
ಹಾಟ್ ಬಾಕ್ಸ್ ನಲ್ಲಿಟ್ಟ ರೊಟ್ಟಿ ಗಟ್ಟಿಯಾಗ್ತಿದ್ಯಾ? ಪ್ಯಾನ್ ನಿಂದ ತೆಗೆದ ತಕ್ಷಣ ಇದೊಂದು ಕೆಲ್ಸ ಮಾಡಿ