
ರಾಜಸ್ಥಾನದ ಸಣ್ಣ ಹಳ್ಳಿಯೊಂದರ ಕೃಷಿ ಭೂಮಿಯಲ್ಲಿ ಸುರಿಯುತ್ತಿದ್ದ ಬೆವರಿನ ಹನಿಗಳು ಇಂದು ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ಮೈದಾನದಲ್ಲಿ ಹೆಮ್ಮೆಯ ಕಣ್ಣೀರಾಗಿ ಮಾರ್ಪಟ್ಟಿವೆ! ಟೀಮ್ ಇಂಡಿಯಾ ನೀಲಿ ಉಡುಪು ಧರಿಸಿ ದೇಶವನ್ನು ಪ್ರತಿನಿಧಿಸಬೇಕೆಂಬ ಕೋಟ್ಯಂತರ ಯುವಕರ ಕನಸನ್ನು ನನಸು ಮಾಡಿಕೊಂಡಿದ್ದಾರೆ ಯುವ ವೇಗಿ ಅಶೋಕ್ ಶರ್ಮಾ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ, ಭಾರತೀಯ ಕ್ರಿಕೆಟ್‌ಗೆ ಮತ್ತೊಬ್ಬ 'ಮಣ್ಣಿನ ಮಗ' ಪದಾರ್ಪಣೆ (Debut) ಮಾಡಿದ್ದು, ಅಶೋಕ್ ಅವರ ತಂದೆಯ ರಕ್ತ-ಬೆವರಿನ ಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಿದೆ.
ಅಶೋಕ್ ಶರ್ಮಾ ಅವರ ಈ ಯಶಸ್ಸಿನ ಹಾದಿ ಸುಲಭದ್ದಾಗಿರಲಿಲ್ಲ. ಮೂಲತಃ ರಾಜಸ್ಥಾನದವರಾದ ಅಶೋಕ್, ಬಡ ರೈತ ಕುಟುಂಬದಿಂದ ಬಂದವರು. ತಂದೆ ನಾಥುಲಾಲ್ ದಿನವಿಡೀ ಹೊಲದಲ್ಲಿ ರಾಬಿಯಾಡಿ ಕುಟುಂಬವನ್ನು ಸಲಹುತ್ತಿದ್ದರು. ಮಗ ಚೆನ್ನಾಗಿ ಓದಿ, ತನ್ನೊಂದಿಗೆ ಕೃಷಿ ಕೆಲಸದಲ್ಲೂ ನೆರವಾಗಲಿ ಎಂಬುದು ನಾಥುಲಾಲ್ ಅವರ ಬಯಕೆಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು.
ಅಶೋಕ್ ಶರ್ಮಾ ಅವರಲ್ಲಿದ್ದ ಕ್ರಿಕೆಟ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅವರ ಸ್ವಂತ ಸಹೋದರ ಅಕ್ಷಯ್. ತಮ್ಮ ತಮ್ಮನ ಬೌಲಿಂಗ್ ಸಾಮರ್ಥ್ಯವನ್ನು ಕಂಡ ಅಕ್ಷಯ್, ಅವನನ್ನು ದೊಡ್ಡ ಕ್ರಿಕೆಟಿಗನನ್ನಾಗಿ ಮಾಡಲು ನಿರ್ಧರಿಸಿದರು. ಅಷ್ಟೇ ಅಲ್ಲ, ಅಶೋಕ್ ಅವರ ಕ್ರಿಕೆಟ್ ಕನಸಿಗಾಗಿ ಅಕ್ಷಯ್ ತಮ್ಮ ಸ್ವಂತ ವೃತ್ತಿಜೀವನವನ್ನೇ ತ್ಯಾಗ ಮಾಡಿದರು! ತಂದೆಯ ನಿರಂತರ ಕಷ್ಟ ಮತ್ತು ಸಹೋದರನ ಅಪಾರ ತ್ಯಾಗವೇ ಇಂದು ಅಶೋಕ್ ಅವರನ್ನು ಟೀಮ್ ಇಂಡಿಯಾದ ಅಂಗಳಕ್ಕೆ ತಂದು ನಿಲ್ಲಿಸಿದೆ.
ಅಶೋಕ್ ಶರ್ಮಾ ತಮ್ಮ ಅದ್ಭುತ ಹಾಗೂ ಕಂಟ್ರೋಲ್ಡ್ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾದವರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ ಒಂದೇ ಋತುವಿನಲ್ಲಿ 22 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯಾವಳಿಯಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅಷ್ಟೇ ಅಲ್ಲದೆ, ಈ ಸರಣಿಯಲ್ಲಿ ಬರೋಬ್ಬರಿ 11 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯೊಂದನ್ನು ಮುರಿದು ದೇಶದ ಗಮನ ಸೆಳೆದರು. ಅವರ ಈ ದೇಶಿಯ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಐಪಿಎಲ್ 2026ರ ಹರಾಜಿನಲ್ಲಿ 'ಗುಜರಾತ್ ಟೈಟಾನ್ಸ್' ತಂಡವು ಬರೋಬ್ಬರಿ 90 ಲಕ್ಷ ರೂಪಾಯಿ ನೀಡಿ ಅಶೋಕ್ ಅವರನ್ನು ಖರೀದಿಸಿತು. ಐಪಿಎಲ್‌ನಲ್ಲಿ ಗುಜರಾತ್ ಪರ ಪದಾರ್ಪಣೆ ಮಾಡಿದರೂ, ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆದರೆ ಅವರ ಬೌಲಿಂಗ್‌ನಲ್ಲಿದ್ದ ವೇಗ, ಸ್ವಿಂಗ್ ಮತ್ತು ಕಠಿಣ ಶ್ರಮವನ್ನು ಗುರುತಿಸಿದ ಆಯ್ಕೆಗಾರರು ಅವರಿಗೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಆಡುವ ಸುವರ್ಣ ಅವಕಾಶವನ್ನು ನೀಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಈ ಪ್ರಮುಖ ಪಂದ್ಯಕ್ಕಾಗಿ ನಾಯಕ ಶ್ರೇಯಸ್ ಅಯ್ಯರ್ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಅಶೋಕ್ ಶರ್ಮಾಗೆ ಕ್ಯಾಪ್ ನೀಡಿ ಪ್ರೋತ್ಸಾಹಿಸಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ, ಅಶೋಕ್ ತಮ್ಮ ಮಿಂಚಿನ ಎಸೆತಗಳ ಮೂಲಕ ಉತ್ತಮ ಆರಂಭ ನೀಡುವ ಭರವಸೆ ಮೂಡಿಸಿದ್ದಾರೆ.
ಹೊಲದಲ್ಲಿ ಅಪ್ಪ ಹರಿಸಿದ ಬೆವರಿನ ಹನಿ ಹಾಗೂ ಸಹೋದರ ಮಾಡಿದ ತ್ಯಾಗಕ್ಕೆ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಉತ್ತರ ನೀಡಲು ಅಶೋಕ್ ಶರ್ಮಾ ಸಂಪೂರ್ಣ ಸಜ್ಜಾಗಿದ್ದಾರೆ. ಬಡತನದಿಂದ ಬಂದು ಟೀಮ್ ಇಂಡಿಯಾ ಕ್ಯಾಪ್ ಧರಿಸಿರುವ ಈ ಯುವ ತಾರೆ ಸಿಕ್ಕಿರುವ ಈ ದೊಡ್ಡ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಮತ್ತು ದೇಶಕ್ಕೆ ಹೇಗೆ ಜಯ ತಂದುಕೊಡಲಿದ್ದಾರೆ ಎಂಬುದನ್ನು ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.