ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ಕೇವಲ ಮನರಂಜನೆಯ ಮಾಧ್ಯಮವಾಗಿ ಉಳಿದಿಲ್ಲ, ಬದಲಿಗೆ ಯುವಜನತೆಯ ಪಾಲಿಗೆ ಭರ್ಜರಿ ಆದಾಯ ತರುವ ಬೃಹತ್ ಉದ್ಯಮವಾಗಿ ಬೆಳೆದುನಿಂತಿದೆ. ನಮ್ಮ ಕನ್ನಡದಲ್ಲೇ ನೋಡುವುದಾದರೆ ಮಧು ಗೌಡ, ಸ್ಯಾಮ್ ಸಮೀರ್, ವರುಣ್ ಮುಂತಾದ ಜನಪ್ರಿಯ ಯೂಟ್ಯೂಬರ್‌ಗಳು ಕಂಟೆಂಟ್ ಕ್ರಿಯೇಷನ್ ಅನ್ನೇ ತಮ್ಮ ಪೂರ್ಣಾವಧಿ ವೃತ್ತಿಯನ್ನಾಗಿಸಿಕೊಂಡು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಐಷಾರಾಮಿ ಕಾರು ಮತ್ತು ಬಂಗಲೆಗಳನ್ನು ಖರೀದಿಸಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಇವರ ಸಾಲಿಗೆ ಈಗ ಒಡಿಶಾ ಮೂಲದ ಇನ್‌ಫ್ಲುಯೆನ್ಸರ್ ಶುಭಶ್ರೀ ಸಾಹೂ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ.
ಯಾವುದೇ ಬ್ಯಾಂಕ್ ಸಾಲ ಅಥವಾ ಇಎಂಐ ಇಲ್ಲದೆ ಈಕೆ ಸ್ವಂತ ಗಳಿಕೆಯಲ್ಲೇ ₹2.5 ಕೋಟಿ ಮೌಲ್ಯದ ಭವ್ಯ ಮನೆ ಖರೀದಿಸಿದ್ದಾರೆ ಎಂಬ ಸುದ್ದಿ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ, ಈ ವೈರಲ್ ಸುದ್ದಿಯ ಅಸಲಿ ಸತ್ಯವೇ ಬೇರೆ!
ಜುಲೈನಲ್ಲಿ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವ್ಲಾಗ್‌ನಲ್ಲಿ ಶುಭಶ್ರೀ ಕಾಫಿ ಕುಡಿಯುತ್ತಾ, "ಇಂದು ನನ್ನ ದೊಡ್ಡಮ್ಮನ ಮನೆಯ ಗೃಹ ಪ್ರತಿಷ್ಠಾಪನೆ ಇದೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆ ಭವ್ಯ ಬಂಗಲೆ ವಾಸ್ತವವಾಗಿ ಅವರದ್ದಲ್ಲ, ಬದಲಿಗೆ ಅವರ ಸಂಬಂಧಿಕರದ್ದಾಗಿದೆ. ಆದಾಗ್ಯೂ ಡ್ಯಾನ್ಸ್, ಮೇಕಪ್ ಮತ್ತು ಲೈಫ್‌ಸ್ಟೈಲ್ ವ್ಲಾಗ್‌ಗಳನ್ನು ಮಾಡುವ ಈಕೆ, ತಮ್ಮ "Subhashree Sahu Vlogs" ಯೂಟ್ಯೂಬ್‌ನಲ್ಲಿ 1.59 ಲಕ್ಷ ಸಬ್‌ಸ್ಕ್ರೈಬರ್ಸ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 1.7 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮಿಂಟ್ (Mint) ವರದಿಯ ಪ್ರಕಾರ, ಸುಮಾರು 6,274 ಸಬ್‌ಸ್ಕ್ರೈಬರ್‌ಗಳಿಂದ ತಿಂಗಳಿಗೆ ತಲಾ ₹399 ಶುಲ್ಕ ಪಡೆಯುವ ಈಕೆ, ಜಾಹೀರಾತು ಮತ್ತು ಬ್ರ್ಯಾಂಡ್ ಪ್ರಮೋಷನ್‌ಗಳ ಮೂಲಕ ತಿಂಗಳಿಗೆ ಅಂದಾಜು ₹23 ರಿಂದ ₹24 ಲಕ್ಷ ಗಳಿಸುತ್ತಿದ್ದಾರೆ.
ಹಿಂದೆ ಖಾಸಗಿ ವಿಡಿಯೋ ಲೀಕ್ ವಿವಾದದಲ್ಲಿ ಸಿಲುಕಿ, ಮೆಟಾದಿಂದ 1.3 ಮಿಲಿಯನ್ ಫಾಲೋವರ್ಸ್ ಇದ್ದ ಖಾತೆ ರದ್ದಾದರೂ ಧೃತಿಗೆಡದ ಶುಭಶ್ರೀ, ಛಲದಿಂದ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೇವಲ ಗ್ಲಾಮರ್‌ಗಷ್ಟೇ ಸೀಮಿತವಾಗದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ 'SMILE' ಯೋಜನೆಗೆ ಪೂರಕವಾಗಿರುವ 'ಭಿಕ್ಷಾಟನೆ ಮುಕ್ತ ಭಾರತ' ಅಭಿಯಾನದ ಯೂತ್ ಅಂಬಾಸಿಡರ್ ಆಗಿಯೂ ಆಯ್ಕೆಯಾಗಿದ್ದಾರೆ. "ಒಡಿಶಾದಲ್ಲಿ ಬೆಳೆದ ನನಗೆ ಬಡತನ ಹತ್ತಿರದಿಂದ ಗೊತ್ತು. ಮಕ್ಕಳು ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದನ್ನು ಮತ್ತು ವೃದ್ಧರು ಊಟಕ್ಕಾಗಿ ಕೈಚಾಚುವುದನ್ನು ಕಂಡಿದ್ದೇನೆ" ಎಂದು ಹೇಳಿರುವ ಈಕೆ, ಈ ಅಭಿಯಾನಕ್ಕಾಗಿ ವಿಶೇಷ ಹೆಲ್ಪ್‌ಲೈನ್ ಇಮೇಲ್ ಸಹ ಆರಂಭಿಸಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಇಂದಿನ ದಿನಗಳಲ್ಲಿ ಕೇವಲ ಸಾಮಾನ್ಯ ಡಿಗ್ರಿ ಮುಗಿಸಿ 9-to-5 ಕೆಲಸಕ್ಕೆ ಸೇರಿದರೆ, ತಿಂಗಳ ಕೊನೆಯಲ್ಲಿ ಇಎಂಐ ಮತ್ತು ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದೇ ಸವಾಲಾಗುತ್ತದೆ. ಒಂದು ಸಾಮಾನ್ಯ ಬೈಕ್ ಕೊಳ್ಳುವುದಕ್ಕೂ ನೂರು ಬಾರಿ ಯೋಚಿಸಬೇಕಾದ ಆರ್ಥಿಕ ಬಿಕ್ಕಟ್ಟು ಇಂದಿನ ಯುವಜನರದ್ದಾಗಿದೆ. ಇಂತಹ ಸಮಯದಲ್ಲಿ ಕೇವಲ ಪುಸ್ತಕದ ಓದಿನ ಜೊತೆಗೆ, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳಲ್ಲಿ ಹೊಸ ಡಿಜಿಟಲ್ ಕೌಶಲಗಳನ್ನು (Skills) ಬೆಳೆಸಿಕೊಳ್ಳುವುದು ಎಷ್ಟು ಅನಿವಾರ್ಯ ಎಂಬುದನ್ನು ಶುಭಶ್ರೀ ಸಾಧನೆ ತೋರಿಸುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಮನೆಯ ಸುದ್ದಿ ಕೇವಲ ವದಂತಿಯಾಗಿದ್ದರೂ, ಇವರ ಡಿಜಿಟಲ್ ಗಳಿಕೆ ಮತ್ತು ಸಮಾಜಮುಖಿ ನಿಲುವು ಮಾತ್ರ ಯುವ ಪೀಳಿಗೆಗೆ ನಿಜಕ್ಕೂ ಹೊಸ ಪ್ರೇರಣೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.