ಸಾವನ್ನು ಜಯಿಸಲು ಮಾಡಬೇಕಾದ್ದೇನು ?

By Suvarna Web DeskFirst Published Oct 4, 2017, 6:31 PM IST
Highlights

ಹುಟ್ಟದೇ ಇರುವ ಸ್ಥಿತಿ ಎಂದರೆ ಮೋಕ್ಷ ಪಡೆಯುವುದೇ ಆಗಿದೆ. ಈ ಮೋಕ್ಷವೆನ್ನುವುದುನಮ್ಮ ಸದಾಚಾರ, ಸತ್‌ಚಿಂತನೆ, ಸರ್ವಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಶ್ರೇಷ್ಠವಿಚಾರ, ಭಗವತ್ ಚಿಂತನೆ ಮತ್ತು ವಿನಯಶೀಲತೆ. ಹಿರಿಯರನ್ನು ಗೌರವಿಸುವ, ದಾನಧರ್ಮಾದಿಗಳನ್ನು ಮಾಡುವ ಶ್ರೇಷ್ಠನಡವಳಿಕೆಗಳಿಂದ ಮಾತ್ರ ಮೋಕ್ಷದ ಹಾದಿ ಹತ್ತಿರವಾಗುತ್ತದೆ.

‘ಸಾವು’ ಎಂದರೆ ಅಂಜದವರು ಯಾರೂ ಇಲ್ಲ. ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಸಾವಿಗೆ ಅಂಜುವುದನ್ನು ಕಾಣುತ್ತೇವೆ. ಹುಟ್ಟಿದವನಿಗೆ ಸಾವು ಖಚಿತ ಎನ್ನುವ ಸತ್ಯ ಗೊತ್ತಿದ್ದರೂ, ನಾವು ಎಷ್ಟೇ ಧೈರ್ಯ ಶಾಲಿಗಳಾಗಿದ್ದರೂ ಮೃತ್ಯು ಎಂದೊಡನೆ ನಮ್ಮ ಮೈ ಮತ್ತು ಮನಸ್ಸು ನಡುಗುತ್ತದೆ. ಅಧೀರರಾಗುತ್ತೇವೆ. ಸಾಮಾನ್ಯವಾಗಿ ನಮಗೆಲ್ಲ ರಿಗೂ ಗೊತ್ತು. ಹುಟ್ಟಿದವನಿಗೆ ಸಾವು ನಿಶ್ಚಿತ ಹಾಗೂ ಅಪರಿಹಾರವೆಂಬುದು.

ಹೀಗಾಗಿಯೇ ಗೀತಾಚಾರ್ಯರು ‘ಜಾತಸ್ಮಹಿದ್ರುವೋ ಮೃತ್ಯುಃ’ ಆಧುನಿಕ ಭಾಷೆಯಲ್ಲಿ ‘ಮ್ಯಾನ್ ಈಸ್ ಮೊರಟಲ್’ ಎಂದು ಹೇಳಿದ್ದಾರೆ. ಹೀಗಿದ್ದಾಗಿಯೂ ನಾವು ಮರಣದಿಂದ ಪಾರಾಗಲು ಅನೇಕ ತರಹದ ಉಪಾಯ ಮತ್ತು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಆದರೂ ಈ ಎಲ್ಲಾ ಪ್ರಯತ್ನಗಳು ಸಾವನ್ನು ಜಯಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಆದ್ದರಿಂದ ನಮ್ಮ ಹಿರಿಯರು ಮರಣದಿಂದ ತಪ್ಪಿಸಿಕೊಳ್ಳಲು ಇರುವುದೇ ಒಂದೇ ದಾರಿ ಅದೇನೆಂದರೆ ಪುನಃ ಹುಟ್ಟಿ ಬರದಂತೆ ಪ್ರಯತ್ನ ಮಾಡುವುದು ಎಂದು ಹೇಳಿದ್ದಾರೆ. ‘ಮೃತ್ಯೋರ್ಬಿ ಭೇಷಿ ಕಿಂ ಮೂಢ| ಜಾತಂ ಮುಂಚತಿ ಕಿಂ ಯಮಃ| ಅಜಾತಂ ನೈವ ಗೃಣ್ವಾತಿ ಕುರು ಯತ್ನಂ ಅಜನ್ಮನಿ|’ ಎಂದು ಉಪದೇಶಿಸಿದ್ದಾರೆ.

ಎಲೈ ತಿಳಿಗೇಡಿಯೇ ಮೃತ್ಯುವಿಗೆ ಏಕೆ ಹೆದರುವೆ. ಹುಟ್ಟಿದ ಯಾವ ಜೀವಿಯನ್ನಾದರೂ ಯಮ ಧರ್ಮರಾಯ ಬಿಟ್ಟಿದ್ದಾನೆಯೆ? ಯಾವನು ಹುಟ್ಟುವುದಿಲ್ಲವೋ ಅವನನ್ನು ಯಮ ಮುಟ್ಟಲಾರ. ಹೀಗಾಗಿ ಪುನಃ ಹುಟ್ಟದೇ ಇರುವುದಕ್ಕಾಗಿ ಪ್ರಯತ್ನ ಮಾಡು ಎನ್ನುವುದು ಸುಭಾಷಿತದ ಅರ್ಥ. ಹುಟ್ಟದೇ ಇರುವ ಸ್ಥಿತಿ ಎಂದರೆ ಮೋಕ್ಷ ಪಡೆಯುವುದೇ ಆಗಿದೆ. ಈ ಮೋಕ್ಷವೆನ್ನುವುದು ನಮ್ಮ ಸದಾಚಾರ, ಸತ್‌ಚಿಂತನೆ, ಸರ್ವಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಶ್ರೇಷ್ಠ ವಿಚಾರ, ಭಗವತ್ ಚಿಂತನೆ ಮತ್ತು ವಿನಯ ಶೀಲತೆ. ಹಿರಿಯರನ್ನು ಗೌರವಿಸುವ, ದಾನ ಧರ್ಮಾದಿಗಳನ್ನು ಮಾಡುವ ಶ್ರೇಷ್ಠ ನಡವಳಿಕೆಗಳಿಂದ ಮಾತ್ರ ಮೋಕ್ಷದ ಹಾದಿ ಹತ್ತಿರವಾಗುತ್ತದೆ. ಆದ್ದರಿಂದ ಮೃತ್ಯುವಿಗೆ ಅಂಜುತ್ತಾ ಇದ್ದರೆ ಅದರಿಂದ ಪಾರಾಗಲು ಸಾಧ್ಯವಿಲ್ಲ. ಜನನ ಮರಣದ

ಸಾಗರವನ್ನು ಪಾರು ಮಾಡಿದಾಗಲೇ ಮೃತ್ಯುವಿನ ಸೆರೆಯಿಂದ ತಪ್ಪಿಸಿಕೊಳ್ಳಬಹುದು. ಅದಕ್ಕಾಗಿ ಪರಮಾತ್ಮನ ಸಾಕ್ಷಾತ್ಕಾರದೊಂದಿಗೆ ಪರಮಾನಂದ ಸಾಗರದಲ್ಲಿ ಸದಾನಂದವನ್ನು ಪಡೆಯಲು ಪರಮಾತ್ಮನಲ್ಲಿ ಶರಣಾಗಿ ಮೋಕ್ಷಕ್ಕಾಗಿ ಪ್ರಯತ್ನ ಮಾಡೋಣ. ಬದುಕನ್ನು ಸಾರ್ಥಕ ಮಾಡಿಕೊಳ್ಳೋಣ.

- ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ, ದೈವಜ್ಞ ಬ್ರಾಹ್ಮಣ ಮಠ, ಕರ್ಕಿ

click me!