
ಮಾಸಿಕ ₹4 ಲಕ್ಷದಷ್ಟು ಭಾರಿ ಆದಾಯವಿದ್ದರೂ ಗೃಹ ಸಾಲದ ಇಎಂಐ (EMI) ಮತ್ತು ಜೀವನಶೈಲಿಯ ವೆಚ್ಚಗಳಿಂದಾಗಿ ದಂಪತಿಯೊಬ್ಬರು ಮಗು ಬೇಡವೆಂದು ನಿರ್ಧರಿಸಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಿಯಲ್ ಎಸ್ಟೇಟ್ ಬೆಲೆ ಏರಿಕೆ ಹಾಗೂ ಆರ್ಥಿಕ ಒತ್ತಡಗಳು ಜೀವನದ ಅತ್ಯಂತ ಪ್ರಮುಖ ನಿರ್ಧಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರಾದ (SEBI RIA) ವಿವೇಕ್ ಎಸ್‌ಜಿ ಅವರು ತಮ್ಮ ಗ್ರಾಹಕರೊಬ್ಬರ ಆರ್ಥಿಕ ಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತೆರಿಗೆ ಪಾವತಿಯ ನಂತರ ಈ ದಂಪತಿಯ ಮಾಸಿಕ ಆದಾಯ ₹3.96 ಲಕ್ಷ. ಆದರೂ ಇವರ ಆರ್ಥಿಕ ಸ್ಥಿತಿ ಮಕ್ಕಳನ್ನು ಬೆಳೆಸುವಷ್ಟು ಸಡಿಲವಾಗಿಲ್ಲ ಎಂಬುದು ಅವರ ಲೆಕ್ಕಾಚಾರ.
ಇತ್ತೀಚೆಗೆ ಈ ದಂಪತಿ ₹4 ಕೋಟಿ ಮೌಲ್ಯದ ಮನೆಯನ್ನು ಖರೀದಿಸಿದ್ದರು. ಇದಕ್ಕಾಗಿ ಪತಿಯ ತಂದೆ ₹2 ಕೋಟಿ ನೆರವು ನೀಡಿದ್ದರೆ, ಉಳಿದ ಮೊತ್ತಕ್ಕೆ ಗೃಹ ಸಾಲ ಪಡೆಯಲಾಗಿತ್ತು.
ಕೈಯಲ್ಲಿ ಉಳಿಯುವ ₹42,000 ಮೊತ್ತವನ್ನು ಸಹ ದಂಪತಿಗೆ ಸ್ವತಂತ್ರವಾಗಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಮನೆಗೆ ಅಗತ್ಯವಿರುವ ಪೀಠೋಪಕರಣ ಹಾಗೂ ನವೀಕರಣ ಕಾರ್ಯಗಳಿಗಾಗಿ 2 ವರ್ಷಗಳ ನಂತರ ಸುಮಾರು ₹70 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದೆ. ಈ ನಿಧಿಯನ್ನು ಕಲೆಹಾಕಲು ದಂಪತಿ ಈ ₹42,000 ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಪ್ರಸ್ತುತ ಉಳಿತಾಯದ ಪ್ರಕಾರ, 2 ವರ್ಷಗಳ ನಂತರ ಅವರ ಬಳಿ ₹65 ಲಕ್ಷ ಮಾತ್ರ ಸಂಗ್ರಹವಾಗಲಿದ್ದು, ನವೀಕರಣ ವೆಚ್ಚಕ್ಕೆ ಇನ್ನೂ ₹5 ಲಕ್ಷ ಕೊರತೆಯಾಗಲಿದೆ.
ತುರ್ತು ಆರ್ಥಿಕ ಭದ್ರತೆಯ ಕೊರತೆ: ದಂಪತಿಯಲ್ಲಿ ಯಾರಾದರೂ ಒಬ್ಬರು ಕೆಲಸ ಕಳೆದುಕೊಂಡರೆ, ಇಡೀ ಕುಟುಂಬದ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.
ರಿಯಲ್ ಎಸ್ಟೇಟ್ ಬೆಲೆ ಏರಿಕೆ: ತೀವ್ರವಾಗಿ ಹೆಚ್ಚುತ್ತಿರುವ ಗೃಹ ಸಾಲದ ಕಂತುಗಳು ಕುಟುಂಬ ಯೋಜನೆಯ ಮೇಲೆಯೂ ಪರಿಣಾಮ ಬೀರುತ್ತಿವೆ.
ಹೆಚ್ಚುವರಿ ಖರ್ಚಿನ ಭಯ: ಈಗಾಗಲೇ ತಲುಪಿರುವ ಗರಿಷ್ಠ ವೆಚ್ಚದ ಮಿತಿಯಲ್ಲಿ ಮಗುವಿನ ಶಿಕ್ಷಣ ಹಾಗೂ ಪಾಲನೆ ವೆಚ್ಚಗಳನ್ನು ಭರಿಸುವುದು ಅಸಾಧ್ಯವೆಂದು ದಂಪತಿ ಭಾವಿಸಿದ್ದಾರೆ.
ಜನಸಂಖ್ಯೆಯನ್ನು ಕಾಯ್ದುಕೊಳ್ಳಲು ಇಬ್ಬರು ಮಕ್ಕಳನ್ನು ಹೊಂದುವುದನ್ನು ಪಕ್ಕಕ್ಕಿಡಿ, ಜನರಿಗೆ ಈಗ ಒಂದು ಮಗುವನ್ನು ಪಡೆಯಲೂ ಸಾಧ್ಯವಾಗುತ್ತಿಲ್ಲ! ಅತಿಯಾದ ರಿಯಲ್ ಎಸ್ಟೇಟ್ ದರ ಮತ್ತು ಜೀವನ ವೆಚ್ಚವೇ ಇದಕ್ಕೆ ಮುಖ್ಯ ಕಾರಣ.
— ವಿವೇಕ್ ಎಸ್‌ಜಿ, SEBI ನೋಂದಾಯಿತ ಹೂಡಿಕೆ ಸಲಹೆಗಾರ
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಪರ-ವಿರೋಧ ಚರ್ಚೆ
ಚಾರ್ಟರ್ಡ್ ಅಕೌಂಟೆಂಟ್ (CA) ಕಾನನ್ ಬಕ್ಸ್ ಅವರು ಈ ವಿಷಯವನ್ನು 'X' (ಟ್ವಿಟರ್) ನಲ್‌ನಲ್ಲಿ ಹಂಚಿಕೊಂಡ ನಂತರ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಇಎಂಐ ಭೂತ: "ಮಾಸಿಕ ₹4 ಲಕ್ಷ ಗಳಿಸಿದರೂ ಮಗುವನ್ನು ಸಾಲಬಹದೇ ಎಂದು ಸ್ಪ್ರೆಡ್‌ಶೀಟ್ ಲೆಕ್ಕ ಹಾಕುತ್ತಿದ್ದಾರೆ. 'ಇಎಂಐ ಕಾ ಭೂತ್' ಕುಟುಂಬ ಯೋಜನೆಯನ್ನೇ ನಿಯಂತ್ರಿಸುತ್ತಿದೆ."
ಬಂಧನದಲ್ಲಿ ಜೀವನ: "ಗಳಿಸುವ ಆದಾಯದಲ್ಲಿ ಕೇವಲ ₹42,000 ಉಳಿಯುವುದು ಗೃಹ ಸಾಲವು ಹಣಕಾಸನ್ನು ಮಾತ್ರವಲ್ಲದೆ, ವ್ಯಕ್ತಿಯ ಗುರುತು, ಸಂಬಂಧಗಳು ಹಾಗೂ ಜೀವನದ ನಿರ್ಧಾರಗಳನ್ನೇ ನಿಯಂತ್ರಿಸುತ್ತದೆ ಎಂಬುದಕ್ಕೆ ಸಾಕ್ಷಿ."
ದುರಾಸೆ ಹಾಗೂ ಆದ್ಯತೆಯ ಕೊರತೆ: "ದಂಪತಿ ಮಕ್ಕಳಿಗಿಂತ ಮನೆಯ ಪೀಠೋಪಕರಣ ಹಾಗೂ ನವೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆರ್ಥಿಕತೆಯ ನೆಪ ಹೇಳುತ್ತಿದ್ದಾರೆ."
ಖರ್ಚಿನ ಶೈಲಿ: ಕನಿಷ್ಠ ಆದಾಯ ಗಳಿಸುವ ಅನೇಕ ಕುಟುಂಬಗಳು ಮಕ್ಕಳನ್ನು ಯಶಸ್ವಿಯಾಗಿ ಬೆಳೆಸುತ್ತಿವೆ. ₹4 ಕೋಟಿಯ ಫ್ಲಾಟ್ ಪಡೆದು ಪಾರ್ಟಿ, ಪಬ್ ಸಂಸ್ಕೃತಿಯಲ್ಲಿರುವವರಿಗೆ ಮಕ್ಕಳ ಜವಾಬ್ದಾರಿ ಬೇಡವಾಗಿದೆ ಅಷ್ಟೇ ಎಂಬುದು ಕೆಲವರ ಅಭಿಪ್ರಾಯ.
ಉನ್ನತ ಆದಾಯ ವರ್ಗದ ಕುಟುಂಬಗಳಲ್ಲೂ ಬೃಹತ್ ಗೃಹ ಸಾಲಗಳು ಹಾಗೂ ಆಧುನಿಕ ಜೀವನಶೈಲಿಯ ವೆಚ್ಚಗಳು ವೈಯಕ್ತಿಕ ನಿರ್ಧಾರಗಳ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಿವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.