
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕ್ಯಾರೆಟ್ ಬೆಲೆ ಕೆಜಿಗೆ 20ರಿಂದ 30 ರೂ. ಇದೆ. ಹೀಗಾಗಿ, ಅಗತ್ಯವಿಲ್ಲದಿದ್ದರೂ ಕ್ಯಾರೆಟ್ ಹಲ್ವಾ ಮಾಡೋಣ ಎಂದು ಮನೆಗೆ ಹೆಚ್ಚಾಗಿ ಕೊಂಡೊಯ್ಯುವವರ ಸಂಖ್ಯೆಯೂ ಅಧಿಕಾವಾಗಿದೆ. ಆದರೆ, ಕ್ಯಾರೆಟ್ ಅನ್ನು ಹೆಚ್ಚು ಬಳಕೆ ಮಾಡಡಿದ್ದರೆ ಬೇಗನೆ ಹಾಳಾಗಿ ಹೋಗುತ್ತದೆ. ಆದ್ದರಿಂದ ಬಹಳ ದಿನಗಳ ಕಾಲ ಕ್ಯಾರೆಟ್ ಫ್ರೆಶ್ ಆಗಿರುವುದಕ್ಕೆ ಈ ಟಿಪ್ಸ್‌ಗಳನ್ನು ಫಾಲೋ ಮಾಡಿ.
ಕ್ಯಾರೆಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಸಲಾಡ್ ಇರಲಿ, ಸಾಂಬಾರ್ ಇರಲಿ ಅಥವಾ ಸಿಹಿಯಾದ ಹಲ್ವಾ ಇರಲಿ, ಕ್ಯಾರೆಟ್ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿ. ಕಿತ್ತಳೆ, ಕೆಂಪು ಮತ್ತು ಇತ್ತೀಚೆಗೆ ಮಾರುಕಟ್ಟೆಯಲ್ಲಿ ನೇರಳೆ ಬಣ್ಣದ ಕ್ಯಾರೆಟ್‌ಗಳೂ ಲಭ್ಯವಿವೆ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಮತ್ತು ತ್ವಚೆಯ ಕಾಂತಿಗೆ ಬಹಳ ಒಳ್ಳೆಯದು. ಆದರೆ, ಕ್ಯಾರೆಟ್ ಖರೀದಿಸುವಾಗ ಒಂದು ಸಮಸ್ಯೆ ಎದುರಾಗುತ್ತದೆ. ಮಾರುಕಟ್ಟೆಯಿಂದ ಒಂದೇ ಸಲ ಹೆಚ್ಚು ಪ್ರಮಾಣದಲ್ಲಿ ಕ್ಯಾರೆಟ್ ತಂದಾಗ, ಅವುಗಳನ್ನು ಸರಿಯಾಗಿ ಶೇಖರಿಸಿಡದಿದ್ದರೆ ಎರಡೇ ದಿನಕ್ಕೆ ಬಾಡಿ ಹೋಗುತ್ತವೆ ಅಥವಾ ಮೆತ್ತಗಾಗಿ ಹಾಳಾಗುತ್ತವೆ. ನಿಮ್ಮ ಮನೆಯಲ್ಲೂ ಕ್ಯಾರೆಟ್ ಬೇಗನೆ ಹಾಳಾಗುತ್ತಿದ್ದರೆ, ಅವುಗಳನ್ನು ತಿಂಗಳುಗಟ್ಟಲೆ ತಾಜಾವಾಗಿಡಲು ಇಲ್ಲಿವೆ ಕೆಲವು ಅದ್ಭುತ ಟಿಪ್ಸ್.
ಮಾರುಕಟ್ಟೆಯಿಂದ ತಂದ ಕ್ಯಾರೆಟ್‌ಗಳ ಸಿಪ್ಪೆ ತೆಗೆಯದಿದ್ದರೆ ಅವುಗಳನ್ನು ದೀರ್ಘಕಾಲ ಇಡಬಹುದು. ಮೊದಲು ಕ್ಯಾರೆಟ್‌ನ ತುದಿಯಲ್ಲಿರುವ ಎಲೆಗಳನ್ನು ಕತ್ತರಿಸಿ. ಕ್ಯಾರೆಟ್ ತುದಿಯನ್ನು ಕತ್ತರಿಸಿ ಇಟ್ಟರೆ ಅದರಲ್ಲಿ ತೇವಾಂಶ ಉಂಟಾಗಿ ಬೇಗನೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಕ್ಯಾರೆಟ್‌ಗಳನ್ನು ತೊಳೆಯುವ ಗೋಜಿಗೆ ಹೋಗಬೇಡಿ. ಸಿಪ್ಪೆ ತೆಗೆಯದೆ ಒಣ ಪೇಪರ್ ಟವೆಲ್‌ನಲ್ಲಿ ಸುತ್ತಿ, ಒಂದು ಏರ್‌ಟೈಟ್ (ಗಾಳಿಯಾಡದ) ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟರೆ ಕ್ಯಾರೆಟ್ ದೀರ್ಘಕಾಲ ಗರಿಗರಿಯಾಗಿರುತ್ತದೆ.
ಕೆಲವೊಮ್ಮೆ ನಾವು ಅಡುಗೆಗೆ ಸುಲಭವಾಗಲಿ ಎಂದು ಸಿಪ್ಪೆ ಸುಲಿದು ಇಡುತ್ತೇವೆ. ಆದರೆ ಸಿಪ್ಪೆ ಸುಲಿದ ಕ್ಯಾರೆಟ್ ಬೇಗನೆ ಒಣಗುತ್ತದೆ. ಇದನ್ನು ತಡೆಯಲು, ಕ್ಯಾರೆಟ್‌ಗಳನ್ನು ಚೆನ್ನಾಗಿ ತೊಳೆದು ಒಂದು ಗಾಜಿನ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿ, ಅವುಗಳು ಮುಳುಗುವಷ್ಟು ನೀರು ತುಂಬಿಸಿ. ಈ ಪಾತ್ರೆಯನ್ನು ಫ್ರಿಡ್ಜ್‌ನಲ್ಲಿ ಇಡಿ. ನೆನಪಿಡಿ, ಪ್ರತಿ ಎರಡು ದಿನಕ್ಕೊಮ್ಮೆ ಈ ನೀರನ್ನು ಬದಲಾಯಿಸುತ್ತಿರಬೇಕು. ಹೀಗೆ ಮಾಡುವುದರಿಂದ ಕ್ಯಾರೆಟ್ ವಾರಗಳ ಕಾಲ ಫ್ರೆಶ್ ಆಗಿರುತ್ತದೆ.
ಒಮ್ಮೆ ಬೇಯಿಸಿದ ಕ್ಯಾರೆಟ್ ಉಳಿದರೆ ಅದನ್ನು ಎಸೆಯುವ ಅಗತ್ಯವಿಲ್ಲ. ಬೇಯಿಸಿದ ಕ್ಯಾರೆಟ್‌ಗಳನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ 4 ದಿನಗಳವರೆಗೆ ಕೆಡುವುದಿಲ್ಲ. ಆದರೆ ಬಿಸಿ ಇರುವಾಗಲೇ ಡಬ್ಬಕ್ಕೆ ಹಾಕಿ ಮುಚ್ಚಬೇಡಿ, ಇದರಿಂದ ಹಬೆ ಉಂಟಾಗಿ ಕ್ಯಾರೆಟ್ ಬೇಗನೆ ಹಾಳಾಗಬಹುದು.
ನೀವು ಕ್ಯಾರೆಟ್‌ಗಳನ್ನು 2-3 ತಿಂಗಳುಗಳ ಕಾಲ ಬಳಸಬೇಕೆಂದಿದ್ದರೆ 'ಬ್ಲಾಂಚಿಂಗ್' ವಿಧಾನ ಅತ್ಯುತ್ತಮ. ಮೊದಲು ಕ್ಯಾರೆಟ್ ಸಿಪ್ಪೆ ತೆಗೆದು ನಿಮಗೆ ಬೇಕಾದ ಗಾತ್ರಕ್ಕೆ ತುಂಡು ಮಾಡಿಕೊಳ್ಳಿ. ಕುದಿಯುವ ನೀರಿನಲ್ಲಿ ಈ ತುಂಡುಗಳನ್ನು ಹಾಕಿ ಕೇವಲ 2 ನಿಮಿಷ ಬೇಯಿಸಿ. ತಕ್ಷಣವೇ ಅವುಗಳನ್ನು ತೆಗೆದು ಐಸ್ ನೀರಿನಲ್ಲಿ ಹಾಕಿ. ಇದರಿಂದ ಕ್ಯಾರೆಟ್‌ನ ಬಣ್ಣ ಮತ್ತು ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ. ನಂತರ ನೀರನ್ನು ಪೂರ್ತಿಯಾಗಿ ಒಣಗಿಸಿ, ಒಂದು ಬೇಕಿಂಗ್ ಶೀಟ್ ಮೇಲೆ ಹರಡಿ 3 ಗಂಟೆ ಫ್ರೀಜರ್‌ನಲ್ಲಿಡಿ. ನಂತರ ಅವುಗಳನ್ನು ಜಿಪ್-ಲಾಕ್ ಬ್ಯಾಗ್ ಅಥವಾ ಡಬ್ಬಕ್ಕೆ ಹಾಕಿ ಫ್ರೀಜರ್‌ನಲ್ಲಿ ಸಂಗ್ರಹಿಸಿ.
ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಕ್ಯಾರೆಟ್ ವ್ಯರ್ಥವಾಗುವುದನ್ನು ತಡೆಯಬಹುದು ಮತ್ತು ಯಾವಾಗ ಬೇಕಾದರೂ ತಾಜಾ ಕ್ಯಾರೆಟ್ ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.