ಬೆಂಗಳೂರಿನ ಜಂಜಾಟ ಸಾಕು ಅಂತ ಗೋವಾಗೆ ಶಿಫ್ಟ್‌ ಆದ ಜೋಡಿ: ₹75,500 ವೆಚ್ಚದಲ್ಲಿ ನೆಮ್ಮದಿಯ ಸ್ಲೋ ಲೈಫ್ ಕಂಡುಕೊಂಡ ದಂಪತಿ!

Published : Oct 30, 2026, 06:15 PM IST
Bengaluru Couple Relocates to Goa

ಸಾರಾಂಶ

ಬೆಂಗಳೂರಿನ ಇಕ್ಕಟ್ಟಿನ ಬದುಕಿನಿಂದ ಹೊರಬಂದು ಗೋವಾದಲ್ಲಿ ನೆಲೆಸಿರುವ ಐಟಿ ದಂಪತಿ ರಾಧಿಕಾ ಮತ್ತು ಏಕಾಂಶ್, ತಮ್ಮ ಶಿಫ್ಟಿಂಗ್ ಅನುಭವ ಮತ್ತು ತಗುಲಿದ ಖರ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟು ₹75,500 ವೆಚ್ಚವಾಗಿದ್ದು, ಈ ನಿರ್ಧಾರ ಸಂಪೂರ್ಣ ಯೋಗ್ಯ ಎಂದು ತಿಳಿಸಿದ್ದಾರೆ.

ಬೆಂಗಳೂರು (ಅ.30): ಮೆಟ್ರೋ ಸಿಟಿಯ ಇಕ್ಕಟ್ಟಿನ ಬದುಕಿನಿಂದ ಹೊರಬಂದು ಸಮುದ್ರದ ತೀರದಲ್ಲಿ ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿಯ ಜೀವನ ನಡೆಸಬೇಕೆಂಬುದು ಇಂದಿನ ಬಹುತೇಕ ಐಟಿ ಹಾಗೂ ಕಾರ್ಪೊರೇಟ್ ನೌಕರರ ಕನಸು. ಆದರೆ, ಈ ಕನಸನ್ನು ನನಸು ಮಾಡಿಕೊಳ್ಳಲು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೂಕ್ತ ಪ್ಲಾನಿಂಗ್ ನಡೆಸಿ, ಕೊನೆಗೂ ಯಶಸ್ವಿಯಾಗಿ ಗೋವಾಗೆ ಶಿಫ್ಟ್ ಆಗಿದ್ದಾರೆ ಬೆಂಗಳೂರಿನ ದಂಪತಿ ರಾಧಿಕಾ ಹಾಗೂ ಏಕಾಂಶ್ (Radhika and Ekansh). ಬೆಂಗಳೂರು ಬಿಟ್ಟು ಗೋವಾದಲ್ಲಿ ನೆಲೆಸಿ ಒಂದು ತಿಂಗಳು ಪೂರೈಸಿರುವ ಈ ದಂಪತಿ, ತಮಗೆ ಬೆಂಗಳೂರಿನಿಂದ ಗೋವಾಗೆ ಶಿಫ್ಟ್ ಆಗಲು ತಗುಲಿದ ಪ್ರತಿಯೊಂದು ರೂಪಾಯಿಯ ಖರ್ಚಿನ ವಿವರಗಳನ್ನು ಒಳಗೊಂಡ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಖರ್ಚಿನ ಕಂಪ್ಲೀಟ್ ಬ್ರೇಕಪ್: ಆರಂಭಿಕ ವೆಚ್ಚ ಎಷ್ಟು?

ಒಂದು ನಗರದಿಂದ ಮತ್ತೊಂದು ನಗರಕ್ಕೆ ವಾಸಸ್ಥಳ ಬದಲಾಯಿಸುವುದು ಸಣ್ಣ ಮಾತಲ್ಲ. ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಗುವುದಷ್ಟೇ ಅಲ್ಲದೇ, ಲಗೇಜ್ ಶಿಫ್ಟಿಂಗ್, ಸ್ಟೋರೇಜ್ ಮತ್ತು ಬೆಂಗಳೂರಿನಿಂದ ಗೋವಾಗೆ ರೋಡ್ ಟ್ರಿಪ್ ಮಾಡುವ ವೆಚ್ಚಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ನಾವು ಹೆಕ್ಟಿಕ್ ಬೆಂಗಳೂರು ನಗರವನ್ನು ಬಿಟ್ಟು ಶಾಂತವಾದ, 'ಸ್ಲೋ ಲೈಫ್' (Slower life) ನಡೆಸುವ ಭರವಸೆಯಿಂದ ಗೋವಾಗೆ ಶಿಫ್ಟ್ ಆಗಿ ಈಗ ಒಂದು ತಿಂಗಳು ಕಳೆದಿದೆ ಎಂದು ವಿಡಿಯೋದಲ್ಲಿ ರಾಧಿಕಾ ಹೇಳಿದ್ದಾರೆ.

ಶಿಫ್ಟಿಂಗ್‌ಗೆ ತಗುಲಿದ ಆರಂಭಿಕ ಖರ್ಚುಗಳು

ಬೆಂಗಳೂರಿನ ಸೊಸೈಟಿ ಬಿಟ್ಟು ವಸ್ತುಗಳನ್ನು ತಾತ್ಕಾಲಿಕವಾಗಿ ಸ್ಟೋರ್ ಮಾಡಲು ₹15,000 ವೆಚ್ಚವಾಗಿತ್ತು ಎಂದು ಹೇಳಿದ್ದರೆ, ಮನೆ ಸಾಮಗ್ರಿಗಳನ್ನು ಬೆಂಗಳೂರಿನಿಂದ ಗೋವಾಗೆ ಸಾಗಿಸಲು 24 ಸಾವಿರ ರೂಪಾಯಿ ಸಾರಿಗೆ ವೆಚ್ಚವಾಗಿದೆ ಎಂದಿದ್ದಾರೆ. ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಗೋವಾಗೆ ಪಯಣಿಸುವಾಗ ಕಾರ್ ಸರ್ವಿಸಿಂಗ್, ಪಿಯುಸಿ ಹಾಗೂ ಪೆಟ್ರೋಲ್ ಖರ್ಚು ಎಂದು ₹10,000 ಆಗಿದೆ ಎಂದಿದ್ದಾರೆ. ಇನ್ನು ಗೋವಾಗೆ ತಲುಪಿದ ತಕ್ಷಣವೇ ಮನೆ ಸಿಗಲಿಲ್ಲ. ತಮಗೆ ಸೂಕ್ತವಾದ ಮನೆ ಸಿಗುವವರೆಗೆ ರಾಧಿಕಾ ಹಾಗೂ ಏಕಾಂಶ್ ದಂಪತಿ 3 ವಾರಗಳ ಕಾಲ ಕಾಯಬೇಕಾಯಿತು.

3 ವಾರಗಳ ಮನೆ ಹುಡುಕಾಟದ ಸಮಯದಲ್ಲಿ ತಾತ್ಕಾಲಿಕವಾಗಿ ಏರ್‌ಬಿಎನ್‌ಬಿಯಲ್ಲಿ ತಂಗಿದ್ದ ದಂಪತಿ ₹45,000 ಖರ್ಚು ಮಾಡಿದ್ದರು. ಆದರೆ, ಈ ಮೊತ್ತವನ್ನು ಅವರು ತಮ್ಮ ಹೆಚ್ಚುವರಿ ಶಿಫ್ಟಿಂಗ್ ವೆಚ್ಚದ ಪಟ್ಟಿಗೆ ಸೇರಿಸಿಲ್ಲ. ಏಕೆಂದರೆ, ಬೆಂಗಳೂರಿನಲ್ಲಿ ಅವರು ಕಟ್ಟುತ್ತಿದ್ದ ಮಾಸಿಕ ಮನೆ ಬಾಡಿಗೆಗೆ ಇದು ಸಮನಾಗಿತ್ತು ಎಂದು ವಿವರಿಸಿದ್ದಾರೆ.

ಗೋವಾದ ವಿವಿಧ ಮೂಲೆಗಳಲ್ಲಿ ಮನೆ ಹುಡುಕಾಡಲು ಅಲೆದಾಡಿದಾಗ ಪೆಟ್ರೋಲ್‌ಗೆ 5 ಸಾವಿರ ರೂಪಾಯಿ ವೆಚ್ಚವಾಗಿತ್ತು. ಶಿಫ್ಟಿಂಗ್ ಗಡಿಬಿಡಿಯ ಸಮಯದಲ್ಲಿ ದಿನಸಿ, ಆನ್‌ಲೈನ್ ಫುಡ್ ಆರ್ಡರ್ ಹಾಗೂ ಹೊರಗಡೆ ಊಟಕ್ಕಾಗಿ ₹12,000 ವೆಚ್ಚವಾಗಿದೆ. ಕೊನೆಗೂ ಸೂಕ್ತ ಮನೆ ಸಿಕ್ಕ ಬಳಿಕ ಅಲ್ಲಿ ಏರ್ ಕಂಡೀಷನರ್ (AC) ಮತ್ತು ವಾಷಿಂಗ್ ಮೆಷಿನ್ ಫಿಕ್ಸ್ ಮಾಡಲು ಹಾಗೂ ಕಾರ್ಪೆಂಟರ್ ಮತ್ತು ಪ್ಲಂಬರ್ ಕೂಲಿ ಎಲ್ಲಾ ಸೇರಿ ತಗುಲಿದ ವೆಚ್ಚ ₹9,500 ರೂಪಾಯಿ ಎಂದಿದ್ದಾರೆ.

ಒಟ್ಟು ವೆಚ್ಚ ₹75,500: ಇದು ಶೇಕಡಾ 100% ವರ್ತ್!

ಈ ಎಲ್ಲಾ ಹೆಚ್ಚುವರಿ ವೆಚ್ಚಗಳನ್ನು ಒಟ್ಟುಗೂಡಿಸಿದಾಗ, ಬೆಂಗಳೂರಿನಿಂದ ಗೋವಾಗೆ ಪೂರ್ಣಪ್ರಮಾಣದಲ್ಲಿ ಶಿಫ್ಟ್ ಆಗಲು ತಮಗೆ ತಗುಲಿದ ಒಟ್ಟು ಹೆಚ್ಚುವರಿ ಮೊತ್ತ ₹75,500 ಎಂದು ರಾಧಿಕಾ ಸ್ಪಷ್ಟಪಡಿಸಿದ್ದಾರೆ. ಈ ಖರ್ಚು ಸಂಪೂರ್ಣವಾಗಿ ಯೋಗ್ಯವಾದದ್ದು ಎಂದು ಸಮರ್ಥಿಸಿಕೊಂಡಿರುವ ರಾಧಿಕಾ, "ಸಾಮಾನ್ಯವಾಗಿ ಜನರು ಕೇವಲ 5 ದಿನಗಳ ಗೋವಾ ಟ್ರಿಪ್‌ಗಾಗಿ ₹30,000 ದಿಂದ ₹40,000 ಖರ್ಚು ಮಾಡುತ್ತಾರೆ. ಹಾಗಿರುವಾಗ, ಇಡೀ ಬದುಕನ್ನೇ ಗೋವಾದಲ್ಲಿ ಹೊಸದಾಗಿ ಆರಂಭಿಸಲು ನಾವು ₹75,000 ಖರ್ಚು ಮಾಡಿರುವುದು ಖಂಡಿತವಾಗಿಯೂ ಶೇಕಡಾ 100% ಯೋಗ್ಯವಾದ ನಿರ್ಧಾರ" ಎಂದು ಬರೆದುಕೊಂಡಿದ್ದಾರೆ.

ಜೈಪುರ ಬಿಟ್ಟು ಗೋವಾಗೇ ಯಾಕೆ ಬಂದ್ರು?

ಗೋವಾಗೆ ಶಿಫ್ಟ್ ಆಗುವ ಆಲೋಚನೆ ತಮಗೆ ಒಂದು ವರ್ಷದಿಂದ ಇತ್ತು ಎಂದು ದಂಪತಿ ಹೇಳಿದ್ದಾರೆ. ತಮ್ಮ ತಾಯ್ನಾಡಾದ ರಾಜಸ್ಥಾನದ ಜೈಪುರಕ್ಕೆ ಹಿಂತಿರುಗುವ ಅವಕಾಶವಿದ್ದರೂ, ಅವರು ಗೋವಾವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದಕ್ಕೂ ಸಕಾರಣ ನೀಡಿದ್ದಾರೆ. ಸಮುದ್ರ ತೀರದ ಹತ್ತಿರ ವಾಸಿಸುವುದು, ಐಟಿ ಮತ್ತು ಕಾರ್ಪೊರೇಟ್ ಪ್ರಪಂಚವನ್ನು ಹೊರತುಪಡಿಸಿ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸೃಜನಶೀಲ (Creative) ಜನರ ಮಧ್ಯೆ ಇರುವುದು ನಮಗೆ ಕಂಪ್ಲೀಟ್ ಭಿನ್ನ ಅನುಭವ ನೀಡುತ್ತದೆ. ನಮಗೆ ಶಾಂತವಾದ ಬದುಕು ಬೇಕಿತ್ತೇ ಹೊರತು, ಬೋರಿಂಗ್ ಲೈಫ್ ಅಲ್ಲ! ಅದಕ್ಕಾಗಿಯೇ ಗೋವಾವನ್ನು ಆಯ್ಕೆ ಮಾಡಿದೆವು ಎಂದು ಈ ಐಟಿ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೊಡ್ಡವರಾದ ಮೇಲೆ ಅಣ್ಣ-ತಂಗಿ ನಡುವೆ ಮೊದಲಿನ ಆತ್ಮೀಯತೆ ಏಕಿರಲ್ಲ? ಸಂಬಂಧ ದೂರವಾಗಲು ಇವೇ ಕಾರಣ
ಡಾ. ವಿಷ್ಣುವರ್ಧನ್‌, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್‌ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?