
ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ಹೆಚ್ಚಿನ ಗಮನ ಇರಬೇಕು. ಒಲೆ ಆನ್ ಮಾಡಿ, ಹೊರಗೆ ಬಂದ್ರೆ ಆಹಾರ, ಪಾತ್ರೆ ಕರಕಲಾಗೋದಲ್ದೆ ಗ್ಯಾಸ್ ಸಿಲಿಂಡರ್ ಸ್ಪೋಟಕ್ಕೆ ಕಾರಣ ಆಗ್ಬಹುದು. ಗ್ಯಾಸ್ ಆಫ್ ಮಾಡೋದು ಮಾತ್ರವಲ್ಲ ಒಲೆ ಬಳಿ ಏನಿಟ್ಟಿದ್ದೇವೆ ಎಂಬುದೂ ಮುಖ್ಯವಾಗುತ್ತದೆ. ಕೆಲವೊಮ್ಮೆ ಉರಿ ಜಾಸ್ತಿ ಇದ್ದಾಗ ಪಕ್ಕದಲ್ಲಿದ್ದ ವಸ್ತುವಿಗೆ ಬೆಂಕಿ ತಗುಲುವ ಅಪಾಯವಿರುತ್ತದೆ.
ಅಡುಗೆ ಮಾಡುವಾಗ ಎಣ್ಣೆ ಅಥವಾ ತುಪ್ಪ ಪದೇಪದೇ ಬೇಕಾಗುವುದರಿಂದ, ಅವುಗಳನ್ನು ಗ್ಯಾಸ್ ಪಕ್ಕದಲ್ಲೇ ಇಡುವ ಅಭ್ಯಾಸ ಹಲವರಿಗಿರುತ್ತದೆ. ಆದರೆ ಸ್ಟವ್ನಿಂದ ಬರುವ ಶಾಖಕ್ಕೆ ಎಣ್ಣೆ ಬಿಸಿಯಾಗಬಹುದು. ಇದರಿಂದ ಬೆಂಕಿಯ ಅಪಾಯ ಹೆಚ್ಚಾಗಬಹುದು. ಹಾಗಾಗಿ ಎಣ್ಣೆ ಮತ್ತು ತುಪ್ಪದ ಬಾಟಲಿಗಳನ್ನು ಸ್ಟವ್ನಿಂದ ಸ್ವಲ್ಪ ದೂರದಲ್ಲಿ, ತಂಪಾದ ಜಾಗದಲ್ಲಿ ಇಡುವುದು ಉತ್ತಮ.
ಪೇಪರ್ ಟವೆಲ್, ನ್ಯಾಪ್ಕಿನ್, ದಿನಪತ್ರಿಕೆ ಅಥವಾ ಇತರ ಕಾಗದದ ವಸ್ತುಗಳನ್ನು ಗ್ಯಾಸ್ ಸ್ಟವ್ ಬಳಿ ಇಡಬೇಡಿ. ಇವುಗಳಿಗೆ ಬಹಳ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತವೆ. ಸ್ಟವ್ನ ಜ್ವಾಲೆ ಅಥವಾ ಸಣ್ಣ ಕಿಡಿ ಕಾಗದಕ್ಕೆ ತಗುಲಿದರೂ ಬೆಂಕಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಗದದಿಂದ ತಯಾರಾದ ವಸ್ತುಗಳನ್ನು ಸ್ಟವ್ ಬಳಿ ಇಡುವ ಬದಲು ಕ್ಯಾಬಿನೆಟ್ನಲ್ಲಿ ಇಡಿ.
ಪ್ಲಾಸ್ಟಿಕ್ ಡಬ್ಬಿಗಳು ಮತ್ತು ಬ್ಯಾಗ್ಗಳು
ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿನ ಶಾಖಕ್ಕೆ ಒಡ್ಡಿಕೊಂಡಾಗ ಕರಗಬಹುದು. ಕೆಲವು ಪ್ಲಾಸ್ಟಿಕ್ ವಸ್ತುಗಳನ್ನು ಬೆಂಕಿಯ ಸಮೀಪ ಇಡುವುದು ಅಪಾಯಕಾರಿಯೂ ಆಗಬಹುದು. ವಿಶೇಷವಾಗಿ ಪ್ಲಾಸ್ಟಿಕ್ ಬ್ಯಾಗ್ ಅಥವಾ ಡಬ್ಬಿ ಆಕಸ್ಮಿಕವಾಗಿ ಜ್ವಾಲೆಗೆ ತಾಗಿದರೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮಸಾಲೆ ಡಬ್ಬಿಗಳು ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಗ್ಯಾಸ್ ಸ್ಟವ್ನಿಂದ ದೂರದಲ್ಲಿ ಇಡುವುದು ಸುರಕ್ಷಿತ.
ಮರದ ವಸ್ತುಗಳು
ಮರದ ಚಮಚ, ಸ್ಪ್ಯಾಚುಲಾ, ಕಟಿಂಗ್ ಬೋರ್ಡ್ ಸೇರಿದಂತೆ ಮರದಿಂದ ತಯಾರಾದ ವಸ್ತುಗಳನ್ನು ಗ್ಯಾಸ್ ಸ್ಟವ್ನ ಪಕ್ಕದಲ್ಲೇ ಇಡಬೇಡಿ. ಹೆಚ್ಚು ಸಮಯ ಶಾಖಕ್ಕೆ ಒಡ್ಡಿಕೊಂಡರೆ ಮರ ಬಿಸಿಯಾಗಬಹುದು. ತೆರೆದ ಜ್ವಾಲೆಗೆ ತಾಗಿದರೆ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಇರುತ್ತದೆ. ಹೀಗಾಗಿ ಇಂತಹ ವಸ್ತುಗಳನ್ನು ಡ್ರಾಯರ್ ಅಥವಾ ಪ್ರತ್ಯೇಕ ಹೋಲ್ಡರ್ನಲ್ಲಿ ಇಡಿ.
ಬಟ್ಟೆ ಮತ್ತು ಕಿಚನ್ ಟವೆಲ್
ಕಿಚನ್ ಟವೆಲ್, ಬಟ್ಟೆಯ ನ್ಯಾಪ್ಕಿನ್ ಅಥವಾ ಏಪ್ರನ್ಗಳನ್ನು ಗ್ಯಾಸ್ ಸ್ಟವ್ ಬಳಿ ಇಡುವುದು ಸಾಮಾನ್ಯ. ಆದರೆ ಬಟ್ಟೆ ತೆರೆದ ಜ್ವಾಲೆಗೆ ತಾಗಿದರೆ ಬೇಗನೆ ಬೆಂಕಿ ಹೊತ್ತಿಕೊಳ್ಳಬಹುದು. ಹೀಗಾಗಿ ಟವೆಲ್ ಮತ್ತು ಇತರ ಬಟ್ಟೆಗಳನ್ನು ಸ್ಟವ್ನಿಂದ ದೂರದಲ್ಲಿಡಿ. ಅಡುಗೆ ಮಾಡುವಾಗ ಸಡಿಲವಾದ ಬಟ್ಟೆಗಳೂ ಜ್ವಾಲೆಯಿಂದ ದೂರ ಇರುವಂತೆ ನೋಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.