ದುಬೈಯಿಂದ ಮಂಗಳೂರಿಗೆ ಬಂದವರ ಕ್ವಾರೆಂಟೈನ್‌ ಟೀಕೆ-ಟಿಪ್ಪಣಿಗಳು..!

By Divya Perla  |  First Published May 21, 2020, 5:07 PM IST

ವಿಮಾನ ಹಾರಾಟವೇ ನಿಂತಾಗ ಅನ್ಯ ರಾಜ್ಯ, ಅನ್ಯ ದೇಶದಲ್ಲಿರುವ ಜನ ದೇವರೇ ಒಮ್ಮೆ ನನ್ನೂರು ತಲುಪಿದರೆ ಸಾಕಿತ್ತು, ಬೇರೇನೂ ಬೇಡ, ಇದ್ದಿದ್ದನ್ನೇ ಹಂಚಿ ತಿಂದು ಹಾಯಾಗಿರೋಣ ಎಂದುಕೊಂಡವರೇ ಈಗ ಊರು ತಲುಪಿದ ಮೇಲೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ತಗಾದೆ ತೆಗೆಯುತ್ತಿದ್ದಾರೆ. ಟೀಕಿಸುವ ಮುನ್ನ ತವರಿಗೆ ತಲುಪಿದ ಕೃತಜ್ಞತೆಯಾದರೂ ಇರಲಿ..!


ದೇಶದಲ್ಲಿ ಕೊರೋನಾ ತಾಂಡವ ಹೆಚ್ಚುತ್ತಲೇ ಇದೆ. ರಾಜ್ಯಗಳು ತಮ್ಮಿಂದಾಗುವ ಮಟ್ಟಿಗೆ ತಮ್ಮ ರಾಜ್ಯದ ಜನರನ್ನು ಮರಳಿ ಊರಿಗೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡುತ್ತಿವೆ. ದೇಶದ ಯವ್ಯಾವುದೋ ಭಾಗದಲ್ಲಿ, ವಿದೇಶಗಳಲ್ಲಿರುವವರನ್ನು ವ್ಯವಸ್ಥಿತವಾಗಿ, ಸುರಕ್ಷಿತರಾಗಿ ಊರು ತಲುಪಿಸುವುದು ಸುಲಭದ ಕೆಲಸವಲ್ಲ.

ವಿಮಾನ ಹಾರಾಟವೇ ನಿಂತಾಗ ಅನ್ಯ ರಾಜ್ಯ, ಅನ್ಯ ದೇಶದಲ್ಲಿರುವ ಜನ ದೇವರೇ ಒಮ್ಮೆ ನನ್ನೂರು ತಲುಪಿದರೆ ಸಾಕಿತ್ತು, ಬೇರೇನೂ ಬೇಡ, ಇದ್ದಿದ್ದನ್ನೇ ಹಂಚಿ ತಿಂದು ಹಾಯಾಗಿರೋಣ ಎಂದುಕೊಂಡವರೇ ಈಗ ಊರು ತಲುಪಿದ ಮೇಲೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ತಗಾದೆ ತೆಗೆಯುತ್ತಿದ್ದಾರೆ. ಇನ್ನೂ ವಿಪರ್ಯಾಸವೆಂದರೆ ಇದಕ್ಕೂ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಬರೀ ವಿರೋಧಿಸುವುದಕ್ಕೇ ಇರೋದು ನಾವು ಎಂಬಂತೆ ಕೆಲವರು ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಗಂಟಲು ಹರಿಯುತ್ತಿದ್ದಾರೆ.

Tap to resize

Latest Videos

undefined

14 ದಿನ ಸುಮ್ಮನೆ ಕೂರುವುದೂ ಹೊರೆಯೇ..?

ಎಲ್ಲ ರಾಜ್ಯದಲ್ಲಿಯೂ, ಎಲ್ಲರಿಗೂ ಒಂದೇ ರೀತಿ ಕ್ವಾರೆಂಟೈನ್ ಅನುಭವಗಳಾಗಿರಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರ ಅಗತ್ಯಗಳನ್ನೂ ಪ್ರತ್ಯೇಕವಾಗಿ ಪೂರೈಸಲು ಸರ್ಕಾರಕ್ಕೂ ಸಾಧ್ಯವಿಲ್ಲ. ಹೊಂದಿಕೊಂಡು ಈ ಸಂದರ್ಭದ ಜೊತೆ ಬಾಳಬೇಕಷ್ಟೆ. ತೀರ ಅವ್ಯವಸ್ಥೆಗಳಾದಾಗ ವಿರೋಧಿಸುವುದು ಅಗತ್ಯವೂ ಹೌದು

ಬೆಂಗಳೂರಿನಲ್ಲಿದ್ದಾಗ ಕೊರೋನಾ ಅಟ್ಟಹಾಸ ನಡೆಯುತ್ತಲೇ ಇದ್ದಾಗ ಒಮ್ಮೆ ಊರು ಸೇರಿದರೆ ಸಾಕಿತ್ತು, ಆಮೇಲೆ ಕ್ವಾರೆಂಟೈನ್ ಹಾಕುತ್ತಾರೋ ಸರ್ಕಾರದ ನಿಯಮ ಏನಾದರೂ ಇರಲಿ ಪಾಲಿಸಬಹುದು ಎಂಬ ಭಾವನೆ ನನಗೆ ಮೂಡಿತ್ತು. ಹಾಗಾಗಿಯೇ ಕ್ವಾರೆಂಟೈನ್‌ ನನಗೆ ಶಿಕ್ಷೆ ಎನಿಸಲೇ ಇಲ್ಲ.

ದೇವರ ಸ್ವಂತ ನಾಡಿನಲ್ಲೊಂದು ಸ್ಮಾರ್ಟ್ ಐಡಿಯಾ..! ಕೇರಳದಲ್ಲಿ ಹೀಗಿದೆ ಕ್ವಾರೆಂಟೈನ್

ಸರ್ಕಾರ ಕಷ್ಟಪಟ್ಟು ಜನರನ್ನು ವ್ಯವಸ್ಥಿತವಾಗಿ ಊರಿಗೆ ತಲುಪಿಸುವಾಗ ಅದರೊಂದಿಗೆ ಹೊಂದಿಕೊಳ್ಳುವುದಲ್ಲದೆ, ಟೀಕಿಸುತ್ತಾ ಕೂತರೆ ಅರ್ಥವಿದೆಯೇ..? ಅವರು ನಮಗಾಗಿ ಅಷ್ಟೆಲ್ಲಾ ಕಷ್ಟಪಡುವಾಗ 14 ದಿನ ಸುಮ್ಮನೆ ಕೂರುವುದನ್ನೇ ಹೊರೆ ಎಂದುಕೊಳ್ಳುವುದು ಸರಿಯೇ..?

ದುಬೈನಿಂದ ಕನ್ನಡಿರನ್ನು ಹೊತ್ತ ವಿಮಾನ ಮಂಗಳೂರಿನಲ್ಲಿ ಬಂದಿಳಿಯಿತು. ವಿಮಾನ ಮಂಗಳೂರು ತಲುಪುವ ಮುನ್ನವೇ ಅರಬ್ಬೀ ಸಮುದ್ರದ ಮೇಲಿಂದ ಹಾರುವಾಗ ಅದರಲ್ಲಿ ಪೈಲಟ್ ಆಗಿದ್ದವರು ಬಹಳ ಭಾವುಕವಾಗಿ ಕೆಲವು ಮಾತುಗಳನ್ನಾಡಿದ್ದರು. ‘ವಂದೇ ಭಾರತ್‌ಮಿಷನ್‌ಯೋಜನೆಯ ಭಾಗವಾಗಲು ನನಗೆ ಮತ್ತು ನನ್ನ ತಂಡಕ್ಕೆ ಹೆಮ್ಮೆ ಎನಿಸುತ್ತಿದೆ. ಇದು ದುಬೈನಿಂದ ಮಂಗಳೂರಿಗೆ ಆಗಮಿಸಿದ ಮೊದಲ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ಐಎಕ್ಸ್‌ಕ್ಯಾಪ್ಟನ್‌ ಪ್ರತ್ಯೂಷ್‌ ವ್ಯಾಸ್‌ ಮಾತುಗಳು. 35 ಸಾವಿರ ಅಡಿ ಎತ್ತರದಿಂದ ಕಾಕ್‌ಪಿಟ್‌ನಲ್ಲಿ ಯಾನಿಗಳನ್ನು ಉದ್ದೇಶಿಸಿ ಹೇಳಿದ ಮಾತು.

ಮಂಗಳೂರಿನಲ್ಲಿ ದುಬೈ ಪ್ರಯಾಣಿಕರ ತಕರಾರು..!

ಏರ್‌ಇಂಡಿಯಾ ಮೂಲಕ ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಲ್ಲಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಅವರ ಊರಿಗೆ ತಲುಪಿಸುತ್ತಿರುವಾಗ ತೃಪ್ತಿ ಭಾವವೊಂದಿತ್ತು ಆತನ ಮಾತುಗಳಲ್ಲಿ. ಕರೆದುಕೊಂಡು ಬಂದ ಆತನೇ ಅಷ್ಟು ಭಾವುಕವಾಗಿರುವಾಗ ಎಲ್ಲೋ ದುಬೈನಿಂದ ತಮ್ಮೂರಿನ ಸಣ್ಣ ಹಳ್ಳಿಗೆ ಬರಲು ಸಾಧ್ಯವಾದ ಜನರಿಗೆ ಹೇಗೆ ಅನಿಸಿಬಹುದು. ಹಾಗಿದ್ದರೂ ಅಂತಹ ಸಂದರ್ಭದಲ್ಲಿಯೂ ವ್ಯವಸ್ಥೆಯನ್ನು ಟೀಕಿಸುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂಬುದೇ ಅಚ್ಚರಿಯ ವಿಚಾರ.

ಇನ್ನು ಇವೆಲ್ಲವೂ ಬಂದ ಜನರೇ ಹೇಳುತ್ತಿರುವುದೋ, ಅಥವಾ ಯಾರದೋ ಮಾತುಗಳಿಗೆ ಇನ್ಯಾರೋ ಧ್ವನಿಯಾಗುತ್ತಿರುವುದೋ ಯಾರಿಗೆ ಗೊತ್ತು.? ಬಂದ ಅಷ್ಟೂ ಪ್ರಯಾಣಿಕರಿಗೆ ಕ್ವಾರೆಂಟೈನ್ ಒದಗಿಸುವುದು ಅಷ್ಟು ಸುಲಭದ ಮಾತಲ್ಲ.

ಗಲ್ಫ್‌ನಿಂದ 2ನೇ ಬಾರಿ ಕನ್ನ​ಡಿ​ಗ​ರನ್ನು ಹೊತ್ತು ತಂಡ ಕನ್ನಡಿಗ ಪೈಲಟ್‌!

ನಾನು ಕ್ವಾರೆಂಟೈನ್‌ನಲ್ಲಿದ್ದ ರೂಮಿನಲ್ಲಿಯೂ ಬೆಡ್‌ ಹೊಸದಾಗಿದ್ದರೂ, ಕಾಟ್ ಇರಲಿಲ್ಲ. ಪಕ್ಕದ ಶಾಲೆಯಲ್ಲಿ ಮಕ್ಕಳು ಕೂರುವ ಬೆಂಚುಗಳನ್ನೇ ಅಚ್ಚುಕಟ್ಟಾಗಿ ಸಾಲಾಗಿ ಜೋಡಿಸಿ ಅದನ್ನೇ ಕಾಟ್‌ಮಾಡಲಾಗಿತ್ತು. ಆ ಸಂದರ್ಭದಲ್ಲಿ ನನಗೆ ಕಾಟ್‌ಬೇಕು, ಇದು ಆಗಲ್ಲ ಎನ್ನುವುದು ಸರಿಯೇ..? ಕೆಲವು ದಿನಗಳ ವಿಷಯ. ಹೊಂದಿಕೊಳ್ಳಬೇಕು ಅಷ್ಟೇ..

ಊರಿಗೆ ಬಂದ ಮೇಲೆ ಜನರ ವರಸೆಯೇ ಬೇರೆ..!

ಮಂಗಳೂರಿಗೆ ದುಬೈನಿಂದ ಬಂದ ಎರಡನೇ ವಿಮಾನದಲ್ಲಿ ಆಗಮಿಸಿದ ಜನರಲ್ಲಿ ಕೆಲವರು ಕ್ವಾರೆಂಟೈನ್‌ನಲ್ಲಿರಲು ತಕರಾರು ಮಾಡಿದ್ದಾರೆ. ತಮಗೆ ತಮ್ಮದೇ ವಾಹನದಲ್ಲಿ ಹೋಗಲು ಅನುಮತಿ ಕೇಳಿ ಕಿರಿಕಿರಿ ಉಂಟು ಮಾಡಿದ್ದರು. ಇಷ್ಟೂ ಸಾಲದು ಎಂಬಂತೆ ಪ್ರಭಾವಿಗಳ ಮೂಲಕ ಜಿಲ್ಲಾಡಳಿತದ ಮೇಲೆಯೇ ಒತ್ತಡ ಹೇರಿದ್ದಾರೆ. ವಿದ್ಯಾವಂತರಾಗಿ ಕೊರೋನಾ ಬಗ್ಗೆ ತಿಳಿದೂ ಜಿಲ್ಲಾಡಳಿತದ ಜೊತೆ, ಅಧಿಕಾರಿಗಳ ಜೊತೆ ಸಹಕರಿಸದಿರುವುದು ನಿಜಕ್ಕೂ ತಪ್ಪು. ಇಂತವರಿಗಾಗಿ ಜಿಲ್ಲಾಡಳಿತಕ್ಕೇ ಒತ್ತಡ ಹೇರುವವರು ಇನ್ನೂ ಮೂರ್ಖರು.

ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಬೇಕಾದ್ದು ಅನಿವಾರ್ಯತೆ..!

ಎಲ್ಲವೂ ಅಚ್ಚುಕಟ್ಟಾಗಿರಲು ಕ್ವಾರೆಂಟೈನ್‌ ಕೇಂದ್ರಗಳೇನೂ ಹಲವು ವರ್ಷಗಳ ಹಿಂದೆ ಪ್ಲಾನ್ ಮಾಡಿ ಕಟ್ಟಿಸಿರುವುದಲ್ಲ. ನಮ್ಮ ಮನೆಯಲ್ಲಿ ಸಿಗುವ ಕಂಫರ್ಟ್ ಪಡೆಯಲು ನಾವೆಷ್ಟು ಕಷ್ಟಪಟ್ಟಿರುತ್ತೇವೆ. ಅದ್ಯಾವುದೂ ಧುತ್ತನೆ ಒಂದು ದಿನದಲ್ಲಾಗಿರುವುದಲ್ಲ. ಆದರೆ ಕ್ವಾರಂಟೈನ್ ಕೇಂದ್ರಗಳು ಹಾಗಲ್ಲ, ಈಗೇನು ಜನರು ಅಲ್ಲಿಂದ ಶಿಫ್ಟ್ ಆಗಲಿದ್ದಾರೆ ಎಂದಾಗ ಅಲ್ಲಿರುವ ವ್ಯವಸ್ಥೆಯಲ್ಲಿ, ಇತಿ ಮಿತಿಯಲ್ಲಿ ಅಧಿಕಾರಿಗಳು ತಮ್ಮಿಂದಾಗುವಷ್ಟನ್ನು ಮಾಡಿರುತ್ತಾರೆ.. ಕೆಲವೊಮ್ಮೆ ಕೆಲವು ದಿನಗಳ ನಂತರದಲ್ಲಿಯೂ ವ್ಯವಸ್ಥೆ ಸುಧಾರಿಸಬಹುದು.. ಸದ್ಯಕ್ಕೆ ನಮ್ಮ ರಾಜ್ಯ, ದೇಶದಲ್ಲಿ ಇರುವ ಸೌಲಭ್ಯಗಳನ್ನು ನೀಡಿ ಸಾಧ್ಯವಿರುವುದನ್ನು ಮಾಡಲಾಗುತ್ತಿದೆ, ನಾವು ಅದರೊಂದಿಗೆ ಹೊಂದಿಕೊಳ್ಳಬೇಕು, ಎಲ್ಲದರಲ್ಲಿಯೂ ಕೊರತೆಗಳನ್ನೇ ಹೇಳುತ್ತಾ ಕೂತರೆ ಅಧಿಕಾರಿಗಳೇನು ಮಾಡಲು ಸಾಧ್ಯ..?

ತೀರಾ ಕಳಪೆ ವ್ಯವಸ್ಥೆ ಇದ್ದರೆ, ಇಲ್ಲಿರುವುದು ಸಾಧ್ಯವೇ ಇಲ್ಲ ಎಂಬಂತಿದ್ದರೆ ಅದನ್ನು ಹೇಳುವುದು ತಪ್ಪಲ್ಲ. ಅದರ ಅಗತ್ಯವೂ ಇರುತ್ತದೆ. ಆದರೆ ಸಣ್ಣ ಪುಟ್ಟ ನೆಪಗಳನ್ನೇ ಹೇಳಿ ಆರೋಪ ಮಾಡುವುದು ತಪ್ಪು.

ವಂದೇ ಭಾರತ್ ಮಿಷನ್ ವಿಮಾನ ಅರಬ್ಬೀ ಸಮುದ್ರದ ಮೇಲೆ ಹಾರುವಾಗ ಭಾವುಕರಾದ ಪೈಲಟ್..!

ಗ್ರೀನ್‌ಝೋನ್ ‌ಉಡುಪಿಯಲ್ಲಿ ದುಬೈನಿಂದ ಬಂದವರಿಂದಲೇ ಸೋಂಕು ಕಾಣಿಸಿಕೊಂಡಿದೆ, ಸ್ವಲ್ಪ ನಿರಾಳವಾಗಿದ್ದ ಜಿಲ್ಲೆಯಲ್ಲಿ ಆತಂಕ ಕಾಣಿಸಿಕೊಂಡಿದೆ. ಹಾಗೆಂದು ದುಬೈನಿಂದ ಜನರನ್ನೇ ಕರೆದುಕೊಂಡು ಬರದೇ ಇದ್ದರೆ ಅಲ್ಲಿನ ಜನರು ತಮ್ಮ ಹುಟ್ಟೂರು ತಲುಪುವುದು ಸಾಧ್ಯವಿತ್ತಾ..? ದೇಶದ ವಿವಿಧೆಡೆಯಿಂದ, ವಿದೇಶಗಳಿಂದ ತಮ್ಮೂರಿಗೆ ಮರಳಲು ತುದಿಗಾಲಲ್ಲಿ ನಿಂತಿರುವುದು ಅಷ್ಟಿಟ್ಟು ಜನರಲ್ಲ, ಸಾವಿರಾರು ಮಂದಿ ಇದ್ದಾರೆ. ಅವರೆಲ್ಲರನ್ನೂ ಆದ್ಯತೆಯ ಮೇರೆಗೆ ಕರೆ ತರಲಾಗುತ್ತಿದೆ.

ಹಾಗಿರುವಾಗ ಅಷ್ಟೂ ಜನರಲ್ಲಿ ತಾವು ಮೊದಲೇ ತಲುಪಿದ್ದೇವಲ್ಲ ಎಂಬ ಸಂತೃಪ್ತ ಭಾವವಿರಬೇಕು, ಹೇಗೋ ಊರು ಸೇರಿದೆವಲ್ಲ, ಎಂಬ ನಿರಾಳತೆ ಇರಬೇಕು, ಅದಲ್ಲದೆ ಎಲ್ಲಿ ಹೋದರೂ, ಎಲ್ಲಿ ಬಂದರೂ ಅದು ಸರಿ ಇಲ್ಲ, ಇದು ಸರಿ ಇಲ್ಲ ಎನ್ನುತ್ತಲೇ ಇದ್ದರೆ ಇನ್ನೂ ಬರಲಿರುವ ಅಷ್ಟು ಜನರನ್ನು ಸರ್ಕಾರ ಸಂಭಾಳಿಸುವುದು ಸಾಧ್ಯವಿದೆಯೇ..? ಇಷ್ಟೂ ಯೋಚಿಸದೆ ಬಾಯಿ ಚಪಲಕ್ಕೆ ದೂಷಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬಿರಿದರೆ ಏನು ಬಂತು..?

ದೂಷಿಸುತ್ತಾ ಕೂರುವ ಸಮಯವಲ್ಲ ಇದು:

ಪಕ್ಷವನ್ನೂ ಮೀರಿ ಜನರು ಒಂದಾಗುವ ಸಂದರ್ಭದಲ್ಲಿ ನೀಚ ರಾಜಕಾರಣ ಮಾಡುತ್ತಾ ಕೂತರೆ ಜನ ಬುದ್ಧಿ ಕಲಿಯುವುದು ಯಾವಾಗ..? ಕೊರೋನಾದಂತಹ ಕೊರೋನಾವೇ ರೌದ್ರ ತಾಂಡವ ಆಡುತ್ತಿರುವಾಗಲೂ ಅದರ ವಿರುದ್ಧ ಹೋರಾಡದೇ ಪರಸ್ಪರ ದೂಷಿಸುತ್ತಾ ಕೂತರೆ ಕೊರೋನಾ ಗೆಲ್ಲಲು ಸಾಧ್ಯವೇ..?

ಮಂಗಳೂರಿಗೆ ಈಗಾಗಲೇ ಮೂರು ವಿಮಾನಗಳು ವಂದೇ ಭಾರತ್ ಮಿಷನ್ ಅಡಿಯಲ್ಲಿ ತಲುಪಿಯಾಗಿದೆ. 22ರಂದು ಇನ್ನೊಂದು ವಿಮಾನ ಕತ್ತಾರ್‌ಲ್ಲಿರುವ ಕನ್ನಡಿಗರನ್ನು ಕರೆತರಲಿದೆ. ಕೊರೋನಾ ಅಟ್ಟಹಾಸ ಹೆಚ್ಚಾಗಲಿದೆಯಾ..? ಮುಂದಿನ ದಿನಗಳ ಪರಿಸ್ಥಿತಿ ಊಹಿಸುವುದೂ ಕಷ್ಟ. ಇಂತಹ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ಸಹಕರಿಸುವುದು ಅತೀ ಅಗತ್ಯ.

-ದಿವ್ಯಾ ಪೆರ್ಲ

click me!