ದೇವರ ಸ್ವಂತ ನಾಡಿನಲ್ಲೊಂದು ಸ್ಮಾರ್ಟ್ ಐಡಿಯಾ..! ಕೇರಳದಲ್ಲಿ ಹೀಗಿದೆ ಕ್ವಾರೆಂಟೈನ್
ಕೇರಳ ಸೇರುವ ತಲಪಾಡಿ ಗೇಟ್ ಓಪನ್ ಆಗಿದೆ ಎಂಬ ಸುದ್ದಿ ಸಿಕ್ಕಿತು. ಆದರೂ ಅಲ್ಲಿ ಯಾರು ಗಡಿ ದಾಟಬಹುದು, ಹೋಗುವ ವಿಧಾನವೇನು..? ಅಲ್ಲಿ ಹೋದರೆ ಗಡಿ ದಾಟಲಾಗದೆ ಮರಳುವಂತಾದರೆ ಏನು ಮಾಡುವುದು… ಹೀಗೆ ಸಾಕಷ್ಟು ಗೊಂದಲ, ಭಯವಿದ್ದರೂ ಒಂದು ಮುಂಜಾನೆ ಕೈಗೆ ಸಿಕ್ಕ ಅಗತ್ಯ ವಸ್ತು ಹಿಡಿದು ತಾತ್ಕಾಲಿಕವಾಗಿ ಬೆಂಗಳೂರಿಗೆ ಬಾಯ್ ಹೇಳಿಯಾಗಿತ್ತು.. ಕೇರಳಕ್ಕೆ ತಲುಪಿದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತು..? ಕ್ವಾರೆಂಟೈನ್ ವ್ಯವಸ್ಥೆ ಹೇಗಿದೆ..? ಇಲ್ಲಿ ಓದಿ
ಆರಂಭದಲ್ಲಿ ದೇಶದಲ್ಲಿಯೇ ಮೊದಲು ಕೊರೋನಾ ವೈರಸ್ ಕಾಣಿಸಿಕೊಂಡು, ನಂತರದ ಕೆಲವೇ ದಿನಗಳಲ್ಲಿ ನೋಡು ನೋಡುತ್ತಿದ್ದಂತೆಯೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಹೋದ ಪುಟ್ಟ ರಾಜ್ಯ ಕೇರಳ ಚೇತರಿಸಿಕೊಳ್ಳುತ್ತಿದೆ. ಅದೂ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಸ್ವಲ್ಪ ವೇಗವಾಗಿಯೇ..!
ಕೇರಳದಲ್ಲಿಯೂ ಇತರ ರಾಜ್ಯಗಳಲ್ಲಿರುವಷ್ಟೇ ಸೌಲಭ್ಯವಿರುವುದು, ವಿಶೇಷ ಟೆಕ್ನಾಲಜಿ ಏನಿಲ್ಲ, ಆದರೂ ಇರುವುದನ್ನು ಸ್ಮಾರ್ಟ್ ಆಗಿ ಬಳಸಿರುವ ರೀತಿ ನೋಡಿದರೆ ಅಚ್ಚರಿಯಾಗುತ್ತೆ. ಇರುವ ಸೌಲಭ್ಯಗಳನ್ನೇ ಅಚ್ಚುಕಟ್ಟಾಗಿ ಬಳಸಿಕೊಂಡು ಒಟ್ಟಾಗಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಪರಿ ಶ್ಲಾಘನೀಯ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಸಿಬ್ಬಂದಿಗೆ ಬಿಗ್ ರಿಲೀಫ್: ವರದಿ ನೆಗೆಟಿವ್
ಕೇರಳ ಸರ್ಕಾರ ದೇಶಾದ್ಯಂತ ಇರುವ ಕೇರಳಿಗರನ್ನು ಕರೆತಲು ಸಿದ್ಧತೆ ಮೊದಲೇ ಆರಂಭಿಸಿತ್ತು. ಕರ್ನಾಟಕದಲ್ಲಿ ಸೇವಾ ಸಿಂಧು ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಕೇರಳದಲ್ಲಿ ನೋರ್ಕಾ ರೂಟ್ಸ್ ಸಹ ಕೆಲಸ ಮಾಡುತ್ತಿತ್ತು. ಇರುವುದು ಕೇರಳ, ಕೆಲಸ ಮಾಡುವುದು ಬೆಂಗಳೂರಾಗಿರುವ ಕಾರಣ ಎರಡು ವೆಬ್‌ಸೈಟ್‌ಗಳಲ್ಲಿಯೂ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದೆ. ಆದರೆ ಇದರಿಂದ ಯಾವುದಾದರೂ ಪ್ರತಿಕ್ರಿಯೆ ಬರಬಹುದೆಂಬ ನಿರೀಕ್ಷೆ ಖಂಡಿತಾ ಇರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಆದ್ಯತೆ ಮೇರೆಗೆ ಜನರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.
ಊರಿನ ಪಂಚಾಯತ್ ಕಚೇರಿಯಿಂದ ಬೆಂಗಳೂರಿಗೆ ಕಾಲ್:
ಅಚ್ಚರಿ ಎಂಬಂತೆ ನನ್ನೂರಿನ ಪಂಚಾಯತ್ ಕಚೇರಿಯಿಂದ ಕರೆ ಬಂತು. ಅವರ ಮೊದಲ ಪ್ರಶ್ನೆ ನಿಮಗೆ ಮನೆಯಲ್ಲಿ ಕ್ವಾರೆಂಟೈನ್ ಇರಲು ವ್ಯವಸ್ಥೆ ಇದೆಯೇ ಎಂಬುದಾಗಿತ್ತು. ಅದು ಅನಿರೀಕ್ಷಿತ ಕರೆ. ಓಹ್ ರಿಜಿಸ್ಟ್ರೇಷನ್ ಮಾಡಿದ್ದು ವೇಸ್ಟ್ ಆಗಲಿಲ್ಲ ಎಂದು ಸಮಾಧಾನವಾಯಿತು. ಆದರೆ ಅವರು ನಮ್ಮನ್ನು ಕರೆದೊಯ್ಯುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. ಆದರೂ ಕನಿಷ್ಟ ವಿಚಾರಿಸಿಕೊಂಡರಲ್ಲ ಎಂಬುದು ಖುಷಿಕೊಟ್ಟ ವಿಚಾರ.
ಅದಾಗಿ ಎರಡೇ ದಿನದಲ್ಲಿ ತಲಪಾಡಿ ಗೇಟ್ ಓಪನ್ ಆಗಿದೆ ಎಂಬ ಸುದ್ದಿ ಸಿಕ್ಕಿತು. ಆದರೂ ಅಲ್ಲಿ ಯಾರು ಗಡಿ ದಾಟಬಹುದು, ಹೋಗುವ ವಿಧಾನವೇನು..? ಅಲ್ಲಿ ಹೋದರೆ ಗಡಿ ದಾಟಲಾಗದೆ ಮರಳುವಂತಾದರೆ ಏನು ಮಾಡುವುದು… ಹೀಗೆ ಸಾಕಷ್ಟು ಗೊಂದಲ, ಭಯವಿದ್ದರೂ ಒಂದು ಮುಂಜಾನೆ ಕೈಗೆ ಸಿಕ್ಕ ಅಗತ್ಯ ವಸ್ತು ಹಿಡಿದು ತಾತ್ಕಾಲಿಕವಾಗಿ ಬೆಂಗಳೂರಿಗೆ ಬಾಯ್ ಹೇಳಿಯಾಗಿತ್ತು.
ಹೊಸ ಪ್ರಯೋಗಶೀಲ, ಸೃಜನಶೀಲ ಮನಸ್ಸು ಹುಟ್ಟು ಹಾಕಿದ ಲಾಕ್‌ಡೌನ್
ಇತ್ತೀಚೆಗಷ್ಟೇ ಬೆಂಗಳೂರಿನಿಂದ ಕೇರಳದ ಕಾಸರಗೋಡಿಗೆ ಪ್ರಯಾಣಿಸಿದ್ದೆ. ಕೇರಳ ಹಾಗೂ ಕರ್ನಾಟಕದ ಪ್ರಮುಖ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಕೊರೋನಾ ವೈರಸ್ ಭೀತಿ ಹೆಚ್ಚಾಗಿದ್ದ ಮಾರ್ಚ್ ಕೊನೆಯ ವಾರ ಹಾಗೂ ಎಪ್ರಿಲ್ ಮೊದಲ ವಾರದಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಮಧ್ಯೆ ಗಡಿ ವಿಚಾರವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿತ್ತು. ಕಾಸರಗೋಡಿನಲ್ಲಿ ಮಹಾಮಾರಿಯ ಅಟ್ಟಾಹಾಸ ತಾರಕಕ್ಕೇರಿದ್ದಾಗ ಅಲ್ಲಿನ ಜನರು ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ಪಡೆಯುವುದಕ್ಕೆ ಪರದಾಡುವಂತಾಗಿತ್ತು.
ದಿನನಿತ್ಯದ ಸಾಮಾಗ್ರಿಗಳನ್ನು ತಲುಪಿಸುವ ಗೂಡ್ಸ್ ವಾಹನಗಳಿಗೂ, ಆರೋಗ್ಯ ತರ್ತು ಅಗತ್ಯಕ್ಕೂ ಕಾಸರಗೋಡಿನ ಪಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕದ ತಾತ್ಕಾಲಿಕವಾಗಿ ಮುಚ್ಚಿತ್ತು. ಕೇರಳ ಸಿಎಂ ಗಡಿ ತೆರೆಯುವಂತೆ ಕೋರಿ ಪ್ರಧಾನಿಗೂ ಪತ್ರ ಬರೆದಾಗಿತ್ತು. ಆದರೂ ದಕ್ಷಿಣ ಕನ್ನಡದ ಸುರಕ್ಷತೆ ದೃಷ್ಟಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಿಲ್ಲ. ಆಗ ಆ ಅಗತ್ಯವೂ ಇತ್ತು. ಸ್ವಲ್ಪ ದಿನ ಕಷ್ಟ ಪಟ್ಟರೂ ನಂತರದಲ್ಲಿ ಕಾಸರಗೋಡು ಸೇರಿ ಕೇರಳ ಚೇತರಿಸಿಕೊಳ್ಳಲಾರಂಭಿಸಿತು.
ಗಡಿ ದಾಟುವವರಿಗಾಗಿಯೇ ದೊಡ್ಡ ಹೆಲ್ಪ್ ಡೆಸ್ಕ್:
ಮಂಗಳೂರಿನಿಂದ ತಲಪಾಡಿಗೆ ಬಂದಾಗ ವಾಟ್ಸಾಪ್ ಫೋಟೋಗಳಲ್ಲಿ ನೋಡಿದಂತೆಯೇ ದೊಡ್ಡ ಕ್ಯಾಂಪ್ ಅಲ್ಲಿ ಸಿದ್ಧವಾಗಿತ್ತು. ಸುಮಾರು 30ಕ್ಕೂ ಹೆಚ್ಚು ಕೊರೋನಾ ಹೆಲ್ಪ್ ಡೆಸ್ಕ್‌ಗಳಿದ್ದವು. ತಲಪಾಡಿ ಟೋಲ್ ದಾಟುತ್ತಿದ್ದಂತೆ ಕೇರಳ ಪೊಲೀಸರ ಚಿಕ್ಕದೊಂದು ಕ್ಯಾಂಪ್. ಅಲ್ಲಿ ಜನರು ವಾಹನ, ಹೆಸರು, ಬಂದ ಸ್ಥಳ ಇಂತಹ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ, ನಂತರ ನಾವು ಮಾಡಬೇಕಾದ ಕೆಲಸ ವಿವರಿಸಿ, ಆ ಕೆಲಸ ನಂತರ ಸಿಗುವ ಕ್ಯಾಂಪ್‌ನ ಯಾವ ಕೌಂಟರ್‌ನಲ್ಲಿ ನಡೆಯುತ್ತದೆ ಎಂಬ ಟೋಕನ್ ಕೂಡಾ ಕೊಟ್ಟರು.
ಒಂದಷ್ಟು ದೂರು ನಡೆದು ಮುಂದೆ ಬಂದರೆ ರಸ್ತೆಯ ಎರಡೂ ಬದಿಯಲ್ಲಿ ಕ್ಯಾಂಪ್. ಕೇರಳ ಪ್ರವೇಶಿಸಿಯಾಗಿತ್ತು. ನನ್ನೂರಿನವರೂ ಸೇರಿ ಬಹಳಷ್ಟು ಶಿಕ್ಷಕರು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಸಮೀಪದಲ್ಲಿ ಆಂಬುಲೆನ್ಸ್ ಹಾಗೂ ಇತರ ತರ್ತು ವಾಹನಗಳನ್ನು ನಿಲ್ಲಿಸಲಾಗಿತ್ತು. ಊಟ, ನೀರು ಮುಂತಾದ ಸೌಕರ್ಯಗಳಿಗೆ ಮೈಕ್‌ನಲ್ಲಿ ಕೂಗಿ ಕರೆಯುತ್ತಿದ್ದರು. ನಿತ್ಯ ಚಾಕ್ ಹಿಡಿದು ಬೋರ್ಡ್‌ನಲ್ಲಿ ಬರಿಯುವ ಶಿಕ್ಷಕರ ಕೈಯಲ್ಲಿ ಒಂದೊಂದು ಲ್ಯಾಪ್ ಟಾಪ್ ಕೂಡಾ ಇತ್ತು. ಅವರು ಬಳಸುವ ರೀತಿ ನೋಡಿಯೇ ಅವರು ದಿನವೂ ಲ್ಯಾಪ್‌ಟಾಪ್ ಬಳಸುವವರಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
ಎಲ್ಲವೂ ಸರಿ ಹೊದ್ಮೇಲೆ ನಾವು ಊಹಿಸದ ಕಡೆಯಿಂದ ಚಿಗುರಲಿದೆಯಾ ಬದುಕು?
ಆದರೂ ತಮಗೆ ಕೊಟ್ಟಂತಹ ಕೆಲಸವನ್ನು ಪರಸ್ಪರ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಕ್ಯಾಂಪ್‌ಗೆ ಬಂದರೆ ಅಲ್ಲಿ ನಮ್ಮ ಮೊಬೈಲ್ ನಂಬರ್ ಹೇಳುತ್ತಲೇ, ನಮ್ಮ ಮೈಲ್ ಎಡ್ರೆಸ್, ನಾವು ಬಂದ ಸ್ಥಳ, ಹೋಗುತ್ತಿರುವ ಸ್ಥಳ ಎಲ್ಲದರ ಕುರಿತೂ ಮಾಹಿತಿ ಇತ್ತು.
ಸುಳ್ಳು ಹೇಳಿ ಗಡಿ ದಾಟುವವರನ್ನು ಪತ್ತೆ ಹಚ್ಚಲು ಇದು ಸುಲಭ ವಿಧಾನವಾಗಿತ್ತು. ನೋರ್ಕಾ ರಿಜಿಸ್ಟ್ರೇಷನ್ ಸಂಪೂರ್ಣ ಮಾಹಿತಿ ಇತ್ತು. ನಮ್ಮ ರಿಜಿಸ್ಟ್ರೇಷನ್ ನಂಬರ್ ಹೇಳಿದರೆ ಅವರು ಅದರ ಮಾಹಿತಿ ಹೊರ ತೆಗೆಯುತ್ತಿದ್ದರು. ನಂತರ ಒಂದೊಂದಾಗಿಯೇ ಕ್ರಾಸ್ ಕ್ವಶ್ಚನ್ ಮಾಡುತ್ತಿದ್ದರು. ಅಲ್ಲಿಗೆ ಬಂದಿರುವ ವ್ಯಕ್ತಿ ರಿಜಿಸ್ಟಾರ್ ಮಾಡಿದ್ದಾರೆಯೋ ಇಲ್ಲವೋ, ಅಧಿಕೃತವಾಗಿ ಬಂದಿದ್ದಾರೋ ಎಂಬುದು ಕನ್ಫರ್ಮ್ ಆಗುತ್ತಿತ್ತು.
ಗಡಿ ದಾಟೋದು ಸುಲಭ ಅಲ್ಲ, ಅದಕ್ಕೂ ಇದೆ ಪ್ರಾಸೆಸ್:
ಅಲ್ಲಿಂದ ಮುಂದೆ ಆನ್‌ಲೈನ್ ಪಾಸ್ ಪಡೆದು ನಾವು ಗಡಿಯಿಂದ ಮನೆಗೆ ಪ್ರಯಾಣಿಸುವ ವಾಹನ, ಚಾಲಕ, ಅದರ ಡೀಟೇಲ್ಸ್ ಒದಗಿಸಿ ಜಾಗೃತ ಎಂಬ ಆ್ಯಪ್ ಮೂಲಕವೇ ಪಾಸ್ ಪಡೆಯುವ ಸೌಲಭ್ಯವಿತ್ತು. ಅದೂ ಸಿಕ್ಕಿದ ಮೇಲೆ ಮೆಸೇಜ್ ಬಂದ ಮೇಲೆ ನಾವು ಅಲ್ಲಿಂದ ಹೊರಡಬಹುದು. ಇದು ಸ್ವಲ್ಪ ಸುದೀರ್ಘ ಕೆಲಸವಾದರೂ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿತ್ತೆಂಬುದು ವಿಶೇಷ.
ಅದಾಗಲೇ ಕೊರೋನಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು ಹಲವು ಬಾರಿ ಕರೆ ಮಾಡಿ ವಿಚಾರಿಸಿದ್ದರು. ನಾವು ಬರುತ್ತಿದ್ದೇವೆ ಎಂಬುದನ್ನು ಅರಿತುಕೊಂಡ ಆರೇಳು ಜನ ಅಧಿಕಾರಿಗಳು ಮನೆಗೂ ಭೇಟಿ ನೀಡಿ ಕ್ವಾರೆಂಟೈನ್ ವ್ಯವಸ್ಥೆ ಪರಿಶೀಲಿಸಿ ಮನೆಯಲ್ಲಿರುವರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದರು. ಹಾಗೆ ನಾವು ತಲುಪಿದ ಕೂಡಲೇ ಮಾಹಿತಿ ನೀಡಲೂ ತಿಳಿಸಿದ್ದರು.
ಮನೆಗೆ ತಲುಪಿ ಸ್ವಲ್ಪ ಹೊತ್ತಲೇ ಅಧಿಕಾರಿಗಳ ತಂಡ ಅಂಗಳದಲ್ಲಿತ್ತು. ಕೇಳಿದ್ದನ್ನೇ ಹಲವು ಬಾರಿ ಕೇಳುವುದು, ನೀಡಿದ ಸೂಚನೆಯನ್ನೇ ಮತ್ತೆ ಮತ್ತೆ ಹೇಳಿದರೂ ಬೇಜಾರಾಗಲಿಲಲ್ಲ. ಹೊರ ರಾಜ್ಯದಿಂದ ಬಂದವರನ್ನು ಟ್ರಾಕ್ ಮಾಡಿ ಅಗತ್ಯ ವ್ಯವಸ್ಥೆ ಮಾಡಲು ಅವಿರತವಾಗಿ ಕೆಲಸ ಮಾಡುತ್ತಿರುವವರ ಬಗ್ಗೆ ಹೆಮ್ಮೆ ಎನಿಸಿತ್ತು. ನಂತರ ಒಂದು ದಿನ ಬಿಟ್ಟು ಮತ್ತೊಮ್ಮೆ ಬಂದು ಭೇಟಿ ಕೊಟ್ಟಿದ್ದರು.
ಹೊರ ರಾಜ್ಯದಿಂದ ಬರುವ ಪ್ರತಿಯೊಬ್ಬನಿಗೂ ಪ್ರಾಮುಖ್ಯತೆ, ವಿಶೇಷ ನಿಗಾ:
ಒಬ್ಬರಿಗೇ ಇಷ್ಟು ಪ್ರಾಮುಖ್ಯತೆ ಕೊಟ್ಟರೆ ಇನ್ನೂ ಬರುವ ಸಾವಿರಾರು ಮಂದಿಯನ್ನು ಸಂಭಾಳಿಸುವುದು ಎಷ್ಟು ಕಷ್ಟ ಎಂದು ಅಂದಾಜಿಸಬಹುದು. ನಂತರದಲ್ಲಿ ಹಾಸ್ಪಿಟಲ್ ಕ್ವಾರೆಂಟೈನ್‌ಗೆ ಶಿಫ್ಟ್ ಆಗುವಂತೆ ಕರೆ ಬಂದಿತ್ತು. ಸ್ವಲ್ಪ ಹೊತ್ತಲ್ಲಿ ಮನೆಗೆ ಬಂದ ಅಧಿಕಾರಿಗಳು ಸ್ಪಷ್ಟನೆ ಕೊಟ್ಟರು. ದಾಖಲೆ ತೋರಿಸಿರು. ಕೇರಳದ ಅಂದಿನ ಲೇಟೆಸ್ಟ್ ಪ್ರೊಟೋಕಾಲ್ ಪ್ರಕಾರ ಅನ್ಯ ರಾಜ್ಯದಿಂದ ಬಂದ ಎಲ್ಲರೂ ಹಾಸ್ಪಿಟಲ್ ಕ್ವಾರಂಟೈನ್‌ನಲ್ಲಿರಬೇಕಿತ್ತು. ಅದರಂತೆ ಶಿಫ್ಟ್ ಆಗಿದ್ದೂ ಆಯಿತು. ಹೊಸ ಕಟ್ಟಡವೊಂದರಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು.
ನಂತರದಲ್ಲಿ ವಿದೇಶದಲ್ಲಿರುವ ಕೇರಳಿಗರನ್ನು ಏರ್‌ಲಿಫ್ಟ್ ಮಾಡುವ ವಿಚಾರವಾಗಿ ಸ್ಥಳೀಯ ಜನರನ್ನು ಹೋಂ ಕ್ವಾರೆಂಟೈನ್‌ನಲ್ಲಿಟ್ಟು ವಿದೇಶದಿಂದ ಬಂದವರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ರಾಜ್ಯದೊಳಗಿಂದ ಬಂದವರಿಗಿಂತ ಹೊರ ದೇಶದಿಂದ ಬಂದವನ್ನು ಕ್ವಾರೆಂಟೈನ್ ಮಾಡಬೇಕಾದ್ದು ಅಗತ್ಯ ಎಂಬುದನ್ನು ಅರಿತು ಇರುವ ವ್ಯವಸ್ಥೆಯಲ್ಲೇ ಇಲ್ಲವೂ ಅಡ್ಜೆಸ್ಟ್ ಮಾಡುವ ಅನಿವಾರ್ಯತೆ ಇದ್ದು, ನಮ್ಮನ್ನು ಮತ್ತೆ ಮನೆಗೆ ಕಳುಹಿಸಲಾಗಿತ್ತು. ಹಾಗೆ ಹೊರಡುವಾಗಲೂ ಎಲ್ಲ ಫಾರ್ಮಲೀಟೀಸ್ ಮಾಡಿಯಾಗಿತ್ತು.
ಸಮೀಪದ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿಕೊಟ್ಟಿದ್ದರು. ನಮ್ಮ ಮಾಹಿತಿ ಸಂಗ್ರಹಿಸಿ ನಮ್ಮ ವಾಟ್ಸಾಪ್ ಬಂಬರ್ ತೆಗೆದುಕೊಂಡು ಲಿಂಕ್ ಕಳುಹಿಸಿದ್ದರು. ನಮ್ಮನ್ನು ಟ್ರಾಕ್ಯ್ ಮಾಡುವ ವ್ಯವಸ್ಥೆಯಾಗಿತ್ತದು. ಕೇರಳ ಪೊಲೀಸ್ ಇಲಾಖೆಯಿಂದಲೇ ಮಾಡಲಾಗಿದ್ದು ಆ್ಯಪ್ ಬಗ್ಗೆ ನಮಗೂ ಮಾಹಿತಿ ಇರಲಿಲ್ಲ. ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರಲಿಲ್ಲ. ಅವರು ಕಳುಹಿಸಿದ ಲಿಂಕ್ ಕಳುಹಿಸಿದರಷ್ಟೇ ಆ್ಯಪ್ ಡೌನ್ ಲೋಡ್ ಆಗುತ್ತಿತ್ತು.
ಮುಚ್ಚಿತು ಓಝೋನ್ ಪದರದ ದೊಡ್ಡ ರಂಧ್ರ
ನಮ್ಮನ್ನು ಕ್ವಾರೆಂಟೈನ್ ಕೇಂದ್ರದಿಂದ ಮನೆ ತನಕ ಬಿಟ್ಟ ಪೊಲೀಸರು ಆ ಆ್ಯಪ್ ಬಗ್ಗೆ ಮಾಹಿತಿ ನೀಡಿ, ಅರ್ಧ ಗಂಟೆಗೂ ಹೆಚ್ಚು ಹೊತ್ತು ನಾವು ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿವರಿಸಿದರು.
ಲೊಕೇಷನ್ ಟ್ರ್ಯಾಕ್ ಮಾಡುವ ವಿಧಾನವಾಗಿತ್ತದು. 24ಗಂಟೆ 14 ದಿನ ಡಾಟಾ ಓನ್ ಆಗಿರಬೇಕಿತ್ತು. ಫೋನನ್ನು ಅತ್ಯಂತ ಕಾಳಜಿಯಿಂದ ನೋಡಿ, ಫೋನ್ ಸ್ವಲ್ಪ ಬಿಸಿಯಾದರೂ ಆಫ್ ಮಾಡುವ ನನಗೆ ಪೊಲೀಸರ ಸೂಚನೆ ತಲೆ ನೋವಾಯ್ತು. ಎರಡು ದಿನಕ್ಕೊಮ್ಮೆ ಮೊಬೈಲ್ ಚಾರ್ಜ್ ಮಾಡುತ್ತಿದ್ದ ನನಗೆ ಮೊಬೈಲ್ ಆಫ್ ಆಗದಂತೆ ನೋಡಿಕೊಳ್ಳುವ ಜೊತೆಗೆ ಪ್ರತಿ ದಿನ ಚಾರ್ಜ್ ಮಾಡುವ ಅನಿವಾರ್ಯವೂ ಸೃಷ್ಟಿಯಾಗಿತ್ತು. ಆದರೆ ಅನಿವಾರ್ಯವಾಗಿತ್ತು.
ಮೊಬೈಲ್ ಆದ್ರೆ FIR ಪಕ್ಕಾ:
ಮೊಬೈಲ್ ಆಫ್ ಆದರೆ, ಡಾಟಾ ಆಫ್ ಆದರೆ, ಇರೋ ಸ್ಥಳ ಬಿಟ್ಟು ಬೇರೆ ನೆಟ್‌ವರ್ಕ್ ಏರಿಗಾಗೆ ಹೋದರೆ ತಕ್ಷಣ ಸಂಬಂಧಿಸಿದವರಿಗೆ ಸಂದೇಶ ಹೋಗುತ್ತೆ. ತಕ್ಷಣ ಎಫ್‌ಐಆರ್ ದಾಖಲಿಸಲಾಗುತ್ತದೆ. ಹಾಗಾಗಿ ಕ್ವಾರೆಂಟೈನನ್‌ನಲ್ಲಿದ್ದವರ ಮೇಲೆ ನಿಗಾ ವಹಿಸಲು ಪೊಲೀಸರಿಗೆ ಸುಲಭವಾಗುತ್ತದೆ.
ಅಂತೂ ಸೇಫ್ ಹೋಂ ಕ್ವರಂಟೈನ್ ವ್ಯವಸ್ಥೆ ಆಗಿದೆ. ಇರುವ ವ್ಯವಸ್ಥೆಯಲ್ಲೇ ಕೇರಳಕ್ಕೆ ವಿದೇಶಿಗರನ್ನು ಏರ್‌ಲಿಫ್ಟ್ ಮಾಡುವ ವ್ಯವಸ್ಥೆ ಆಗಿದೆ. ತನಲ್ಲಿದ್ದ ಸೋಂಕಿತರನ್ನು ಯಶಸ್ವಿಯಾಗಿ ಕಾಪಾಡಿದ ಪುಟ್ಟ ರಾಜ್ಯದಿಂದ ವೈದ್ಯರ ತಂಡವೊಂದು ದುಬೈಗೆ ಹಾರಿದೆ. ದೇವರ ಸ್ವಂತ ನಾಡಿನಲ್ಲಿ ವೈದ್ಯರೂ, ಜನರೂ, ಪೊಲೀಸರೂ ಅಧಿಕಾರಿಗಳು ಕೊರೋನಾ ವಿರುದ್ಧ ಗೆದ್ದೇ ತೀರುತ್ತೇವೆ ಎಂದು ಟೊಂಕಕಟ್ಟಿ ನಿಂತಿದ್ದಾರೆ. ದೇಶ ಬೇಗನೆ ಕೊರೋನಾ ಮುಕ್ತವಾಗಲಿ..
- ದಿವ್ಯಾ ಪೆರ್ಲ