ರಾಜಧಾನಿಯಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಬೆಂಗಳೂರು- ಮೈಸೂರು ಹೆದ್ದಾರಿಯ ನಾಯಂಡಳ್ಳಿ- ಕೆಂಗೇರಿ ನಡುವೆ ವೃಷಭಾವತಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ನದಿಯ ತಡೆಗೋಡೆ ಕುಸಿಯಿತು. ಇದರಿಂದ ನೀರು ರಸ್ತೆಗೂ ನುಗ್ಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬೆಂಗಳೂರು(ಜೂ.26): ರಾಜಧಾನಿಯಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಬೆಂಗಳೂರು- ಮೈಸೂರು ಹೆದ್ದಾರಿಯ ನಾಯಂಡಳ್ಳಿ- ಕೆಂಗೇರಿ ನಡುವೆ ವೃಷಭಾವತಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ನದಿಯ ತಡೆಗೋಡೆ ಕುಸಿಯಿತು. ಇದರಿಂದ ನೀರು ರಸ್ತೆಗೂ ನುಗ್ಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಇದೇ ವೇಳೆ ಅಬ್ಬರದ ಮಳೆಗೆ ಕಾಡುಗೋಡಿ ರಸ್ತೆಯ ಚನ್ನಸಂದ್ರ, ಆರ್‌ಪಿಸಿ ಲೇಔಟ್ ಹಾಗೂ ವಿದ್ಯಾಪೀಠ ವೃತ್ತದಲ್ಲಿ ತಲಾ ಒಂದೊಂದು ಮರಗಳು ಸೇರಿದಂತೆ ನಗರದ ವಿವಿಧೆಡೆ ಎಂಟಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಮುರಿದು ಬಿದ್ದಿವೆ.
ಲಿವರ್ ಕಸಿಗೆ ಬಂದಿದ್ದ ವೈದ್ಯ ಕೊರೋನಾ ಸೋಂಕಿಗೆ ಬಲಿ
ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ವೃಷಭಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಯಿತು. ನೀರಿನ ರಭಸಕ್ಕೆ ಕೆಂಗೇರಿ ಸಮೀಪ ಹೆದ್ದಾರಿಗೆ ಹೊಂದಿಕೊಂಡಿರುವ ನದಿಯ ತಡೆಗೋಡೆ ಸುಮಾರು 300 ಮೀಟರ್ ಉದ್ದ ಕುಸಿದಿದೆ. ತಡೆಗೋಡೆ ಕುಸಿದಿರುವ ಕಡೆ ರಸ್ತೆಯೂ ಬಿರುಕು ಬಿಟ್ಟು ಆತಂಕ ಸೃಷ್ಟಿಯಾಗಿತ್ತು. ನೀರು ಹೆಚ್ಚಿನ ಪ್ರಮಾಣದಲ್ಲಿ ಹೆದ್ದಾರಿ ಮೇಲೆ ಹರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.
ರಸ್ತೆಯ ಮೇಲೆ ಸುಮಾರು ಐದು ಅಡಿ ಎತ್ತರಕ್ಕೆ ನೀರು ಹರಿದಿದ್ದರಿಂದ ವಾಹನ ಸಂಚಾರ ಸ್ಥಗಿತವಾಗಿ, ಕಿಲೋ ಮೀಟರ್‌ಗಟ್ಟಲೇ ವಾಹನಗಳು ನಿಂತು ಸಂಚಾರ ದಟ್ಟಣೆ ಉಂಟಾಗಿತ್ತು. ನೀರಿನ ಹರಿವು ತಗ್ಗುವವರೆಗೂ ಕೆಲ ಕಾರು, ದ್ವಿಚಕ್ರ ವಾಹನ ಹಾಗೂ ಬಿಎಂಟಿಸಿ ಬಸ್‌ಗಳು ಸೇರಿದಂತೆ ಇತರೆ ವಾಹನಗಳನ್ನು ರಸ್ತೆಯಲ್ಲೇ ನಿಲುಗಡೆ ಮಾಡಲಾಗಿತ್ತು.
ಒಂದೇ ದಿನ ರಾಜ್ಯದಲ್ಲಿ 442 ಹೊಸ ಸೋಂಕು, 519 ಜನ ಡಿಸ್ಚಾರ್ಜ್..!
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು, ನದಿಯ ತಡೆಗೋಡೆ ಕುಸಿದ ಜಾಗ ಪರಿಶೀಲಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ ಇರಿಸಿ ಆ ರಸ್ತೆಯನ್ನು ಬಂದ್ ಮಾಡಿದರು. ಮೈಸೂರು ಕಡೆಯಿಂದ ಬರುವ ರಸ್ತೆಯಲ್ಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹೀಗಾಗಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸವಾರರು ಕಿರಿಕಿರಿ ಅನುಭವಿಸಿದರು.
ಹಲವೆಡೆ ಮಳೆ ಅಬ್ಬರ
ಇನ್ನು ನಗರದ ಮೆಜೆಸ್ಟಿಕ್, ಮಲ್ಲೇಶ್ವರಂ, ಕಾಟನ್‌ಪೇಟೆ, ಬಿನ್ನಿಮಿಲ್, ಓಕಳಿಪುರಂ, ವಿಧಾನಸೌಧ, ಶಿವಾಜಿನಗರ, ಆನಂದರಾವ್ ಸರ್ಕಲ್, ಕಾರ್ಪೋರೇಷನ್, ಹೆಬ್ಬಾಳ, ನಾಗವಾರ, ಯಲಹಂಕ, ಸಂಜಯನಗರ, ಗಂಗೇನಹಳ್ಳಿ, ಆರ್.ಟಿ.ನಗರ, ಕೆ.ಜಿ.ಹಳ್ಳಿ, ಹೆಣ್ಣೂರು ಸೇರಿದಂತೆ ಹಲವೆಡೆ ಅಬ್ಬರದ ಮಳೆಯಾಯಿತು. ಸಂಜೆ ಕಚೇರಿ, ಉದ್ಯೋಗ ಮುಗಿಸಿ ಮನೆಗಳಿಗೆ ತೆರಳುವವರು ಮಾರ್ಗ ಮಧ್ಯೆ ಮಳೆಗೆ ಸಿಲುಕಿ ಪರದಾಡಿದರು.
ಇನ್ನು ಓಕಳೀಪುರಂ ಕೆಳಸೇತುವೆ, ಶಿವಾನಂದ ವೃತ್ತ ರೈಲ್ವೆ ಸೇತುವೆ, ಹೆಬ್ಬಾಳ ಅಂಡರ್ ಪಾಸ್ ಸೇರಿದಂತೆ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಕೆಂಗೇರಿಯಲ್ಲಿ ಅತ್ಯಧಿಕ 93.5 ಮಿ.ಮೀ. ಮಳೆ!
ನಗರದ ಬಹುತೇಕ ಕಡೆ ಮಳೆಯಾಗಿದ್ದು, ಕೆಂಗೇರಿಯಲ್ಲಿ ಅತಿ ಹೆಚ್ಚು 93.5 ಮಿ.ಮೀ. ಮಳೆ ಸುರಿಯಿತು. ಅಂತೆಯೆ ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಆರ್.ಆರ್.ನಗರದಲ್ಲಿ ತಲಾ 77 ಮಿ.ಮೀ., ಮಾರುತಿ ಮಂದಿರ, 62.5 ಮಿ.ಮೀ., ನಾಗರಬಾವಿ 58.5 ಮಿ.ಮೀ, ಹೊಯ್ಸಳನಗರ 52 ಮಿ.ಮೀ., ಅಗ್ರಹಾರ ದಾಸರಹಳ್ಳಿ ಹಾಗೂ ಹಂಪಿನಗರ ತಲಾ 51 ಮಿ.ಮೀ., ಜ್ಞಾನಭಾರತಿ, ಬನ್ನೇರುಘಟ್ಟ, ಎಚ್‌ಎಎಲ್ ಏರ್‌ಪೋರ್ಟ್, ಚಾಮರಾಜಪೇಟೆ, ಉತ್ತರಹಳ್ಳಿಯಲ್ಲಿ 40 ಮಿ.ಮೀ.ಗೂ ಅಧಿಕ ಮಳೆಯಾಯಿತು. ಕೊಟ್ಟಿಗೆಪಾಳ್ಯ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಕುಮಾರಸ್ವಾಮಿ ಲೇಔಟ್, ಸಂಪಂಗಿರಾಮ ನಗರ, ವನ್ನಾರಪೇಟೆ, ಕಾಡುಗೋಡಿ, ಪಟ್ಟಾಭಿರಾಮನ್‌ನಗರ, ಪುಟ್ಟೇನಹಳ್ಳಿ, ವಿದ್ಯಾಪೀಠ ಸೇರಿದಂತೆ ಹಲವೆಡೆ 30 ಮಿ.ಮೀ.ಗೂ ಹೆಚ್ಚು ಮಳೆ ಸುರಿಯಿತು. ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಯಿತು.
ಸುಧಾಕರ್ ಬಿಡದ ಕೊರೋನಾ; ಬಾಮೈದ, ಸ್ನೇಹಿತನಿಗೂ ಪಾಸಿಟಿವ್
ನದಿಯ ತಡೆಗೋಡೆ ಕುಸಿದಿರುವುದನ್ನು ಪರಿಶೀಲಿಸಿದ್ದು, ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರ ಸೂಚನೆ ಮೇರೆಗೆ ರಸ್ತೆ ಬಂದ್ ಮಾಡಲಾಗಿದೆ. ಶುಕ್ರವಾರ ರಸ್ತೆ ಮತ್ತು ಮೂಲ ಸೌಕರ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟಇಲಾಖೆಗಳ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸ್ಥಳ ಪರಿಶೀಲಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆರ್.ಆರ್.ನಗರ ವಲಯ ವಿಶೇಷ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ.