* ಮಿಯ್ಯಾಪುರದಲ್ಲಿ ಮಿಡಿನಾಗರದಂತೆ ಮಿಸುಕಾಡುತ್ತಿದೆ ಹೀನ ಅಸ್ಪೃಶ್ಯತೆ
* ದಂಡ ಕಟ್ಟಿ ಎಂದವರು ಈಗ ಜೈಲಲ್ಲಿ ಕಂಬಿ ಎಣಿಸುವಂತೆ ಮಾಡಿದ ಬಾಲಕ
* ಈಗಲೂ ಎಚ್ಚೆತ್ತಿರುವಂತೆ ಕಾಣದ ಜಿಲ್ಲಾಡಳಿತ
ಕೊಪ್ಪಳ(ಸೆ.23): ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಎಂಬ ಕುಗ್ರಾಮದಲ್ಲಿ ಹೀನ ಅಸ್ಪೃಶ್ಯತೆ(Untouchability) ಮಿಡಿ ನಾಗರದಂತೆ ಮಿಸುಕಾಡುತ್ತಿರುವ ಕರಾಳ ಮುಖವನ್ನು ಏನೂ ಅರಿಯರ ಹಸುಳೆ 3 ವರ್ಷದ ದಲಿತ ಬಾಲಕ ಇದೀಗ ಜಗತ್ತಿಗೇ ಪರಿಚಯಿಸಿದ್ದು, ಇಡೀ ಭಾರತೀಯರು ತಲೆತಗ್ಗಿಸುವಂತಾಗಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ದೇವರ ದರ್ಶನ ಪಡೆಯಲೆಂದು ಊರಿನ ಹನುಮಂತ ದೇವರ ದೇವಸ್ಥಾನಕ್ಕೆ(Temple) ಪ್ರವೇಶ ಮಾಡಿದ್ದಾನೆ ಚನ್ನದಾಸರ (ದಲಿತ) ಕುಟುಂಬಕ್ಕೆ ಸೇರಿದ 3 ವರ್ಷದ ಬಾಲಕ. ಅಯ್ಯೋ ದೊಡ್ಡ ಅಪರಾಧವಾಯಿತು ಎಂದು ಈ ಮಗುವನ್ನು ತಂದೆ ಚಂದ್ರಶೇಖರ ಅಷ್ಟೇ ರಭಸವಾಗಿ ಹೊರಕ್ಕೆ ಕರೆತಂದಿದ್ದಾನೆ.
ಅಸ್ಪೃಶ್ಯತೆಯನ್ನೇ ಉಸಿರಾಡುವ ಊರಿನ ಮಂದಿ ಇದನ್ನು ನೋಡಿದ್ದಾರೆ. ಊರಿನ ಹಿರಿಯರೆಲ್ಲ ಪಂಚಾಯ್ತಿ ಸೇರಿ ಈ ಮಗುವಿಗೆ ದಂಡ ವಿಧಿಸುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ವಿಷಯ ಗೊತ್ತಾಗಿ ಮಧ್ಯಪ್ರವೇಶ ಮಾಡಿದ ಪೊಲೀಸರು(Police) ಉಭಯ ಸಮುದಾಯಗಳ ಮಧ್ಯೆ ರಾಜೀಮಾಡಿ ತಿಪ್ಪೆಸಾರಿಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಛೀಮಾರಿಗೆ ಈಡಾಗುತ್ತಿದ್ದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಕರಕಪ್ಪ ಪೂಜಾರಿ, ಹನುಮಗೌಡ, ಗವಿಸಿದ್ದ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ ಹಾಗೂ ಶರಣಗೌಡ ಬಂಧಿತ ಆರೋಪಿಗಳು.
ದಲಿತ ಮಗು ದೇಗುಲ ಪ್ರವೇಶ, ಪೋಷಕರಿಗೆ ದಂಡ ಹಾಕಿದವರಿಗೆ ಅಧಿಕಾರಿಗಳ ಖಡಕ್ ವಾರ್ನಿಂಗ್.!
ದೇಶದಾದ್ಯಂತ ಹೆಸರು:
ಬಾಲಕ ಈಗ ಬೆಳಗಾಗುತ್ತಲೇ ದೇಶದಾದ್ಯಂತ ಸದ್ದು ಮಾಡಿದ್ದಾನೆ. ಆದರೆ, ಈ ಬಾಲಕನಿಗೆ ಇದ್ಯಾವುದರ ಅರಿವು ಇಲ್ಲ. ತಾನು ಏನು ಮಾಡಿದ್ದೇನೆ ಎನ್ನುವ ಅರಿವು ಇಲ್ಲದಿದ್ದರೂ ಸಮಾಜದಲ್ಲಿದ್ದ ದೋಷವನ್ನಂತೂ ಎತ್ತಿ ಹಿಡಿದಿದ್ದಾನೆ. ಆರೋಪಿಗಳು ಜೈಲು ಪಾಲಾಗುವಂತೆ ಮಾಡಿದ್ದಾನೆ. ಆದರೆ, ಇದರಿಂದ ತಂದೆ ಭಯಭೀತನಾಗಿದ್ದಾರೆ. ನನ್ನ ಮಗನೇನೋ ದೇವಸ್ಥಾನ ಹೊಕ್ಕಿದ್ದಾನೆ, ಆತನನ್ನು ಕರೆತರಲು ನಾನೂ ದೇವಸ್ಥಾನ ಪ್ರವೇಶ ಮಾಡಿದ್ದೇನೆ, ಇದೆಲ್ಲವೂ ಈಗ ಸುದ್ದಿಯಾಗಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತಿದೆ. ಆದರೆ, ಇದರಿಂದ ನನಗೆ ಮುಂದೆ ಏನಾದರೂ ತೊಂದರೆಯಾಗಬಹುದು ಎನ್ನುವ ಸಹಜ ಆತಂಕ ವ್ಯಕ್ತಪಡಿಸುತ್ತಾನೆ. ಅಧಿಕಾರಿಗಳ ಮುಂದೆ ಮಗ ಮಾಡಿದ್ದು ತಪ್ಪೇ ಅಲ್ಲ ಎನ್ನುವ ಆತ, ಒಳಗೊಳಗೆ ಹೆದರಿದ್ದು, ಯಾಕಾದರೂ ಮಗ ದೇವಸ್ಥಾನದ ಕಟ್ಟೆ ಏರಿದನೋ ಎನ್ನುತ್ತಿದ್ದಾನೆ.
ಈ ಊರಲ್ಲಿ ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷಿದ್ಧ!
ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಗ್ರಾಮದಲ್ಲಿ ದಲಿತರಿಗೆ(Dalit) ದೇವಸ್ಥಾನದಲ್ಲಿ ಪ್ರವೇಶ ನಿಷಿದ್ಧ! ಅಷ್ಟೇ ಅಲ್ಲ ಇಲ್ಲಿಯ ಸುತ್ತಮುತ್ತಲ ಪ್ರದೇಶದ ಹಳ್ಳಿಗಳಲ್ಲಿಯೂ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ಇಲ್ಲ ಎನ್ನುವುದು ದಿಟ.
ಹೌದು, ಕೆಲವೇ ವರ್ಷಗಳ ಹಿಂದೆ ಪಕ್ಕದ ಕಲಾಲಬಂಡಿ ಗ್ರಾಮದಲ್ಲಿ ದಲಿತರು ಊರೊಳಗೆ ಬರಬಾರದು ಎಂದು ಕೇರಿಗೆ ಬೇಲಿಯನ್ನೇ ಹಾಕಲಾಗಿತ್ತು. ಸುತ್ತಮುತ್ತಲ ಗ್ರಾಮಗಳಲ್ಲಿ ದೇವಸ್ಥಾನದಲ್ಲಿ ಪ್ರವೇಶ ಇಲ್ಲ. ಪಡಿತರವನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗುತ್ತದೆ. ಇಂಥ ಅಮಾನವೀಯ ಅಸ್ಪೃಶ್ಯತೆ ಆಚರಣೆ ಜೀವಂತವಾಗಿಯೇ ಇದೆ.
ಮಿಯ್ಯಾಪುರ ಗ್ರಾಮದಲ್ಲಿ ಹನುಮಂತ ದೇವರ ದೇವಸ್ಥಾನಕ್ಕೆ ಮೂರು ವರ್ಷದ ಬಾಲಕ ಪ್ರವೇಶ ಮಾಡಿದ ಎನ್ನುವ ಕಾರಣಕ್ಕಾಗಿ ಅವರ ಕುಟುಂಬಕ್ಕೆ 25 ಸಾವಿರ ದಂಡ ಹಾಕಿದ್ದಾರೆ. ಇದುವೇ ಸಾರಿ ಸಾರಿ ಹೇಳುತ್ತದೆ ಮಿಯ್ಯಾಪುರ ಗ್ರಾಮದಲ್ಲಿ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ಇಲ್ಲ ಎನ್ನುವುದು.
ದೇಗುಲ ಪ್ರವೇಶಿಸಿದ 2 ವರ್ಷದ ದಲಿತ ಮಗು : ದಂಡ ವಿಧಿಸಿದ ಮುಖಂಡರು!
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರೂ ಈ ಗ್ರಾಮದಲ್ಲಿ ಇದುವರೆಗೂ ದಲಿತರು ದೇವಸ್ಥಾನದ ಕಟ್ಟೆಯನ್ನು ತುಳಿಯುವಂತೆ ಇಲ್ಲ. ಸ್ಪೃಶ್ಯ ಸಮಾಜದ ಚನ್ನದಾಸರ ಜನಾಂಗಕ್ಕೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎನ್ನುವುದಾದರೆ ಇನ್ನು ಅಸ್ಪೃಶ್ಯ ಸಮಾಜವಾಗಿರುವ ದಲಿತರಿಗೆ ಇಲ್ಲಿ ದೇವಸ್ಥಾನಕ್ಕೆ ಪ್ರವೇಶ ನೀಡಲು ಸಾಧ್ಯವೇ?.
ಈಗಲೂ ಜಿಲ್ಲಾಡಳಿತ ಎಚ್ಚೆತ್ತಿರುವಂತೆ ಕಾಣುತ್ತಿಲ್ಲ, ದೇವಸ್ಥಾನಕ್ಕೆ ಮೂರು ವರ್ಷದ ಬಾಲಕ ಪ್ರವೇಶ ಮಾಡಿದ ಪ್ರಕರಣದಲ್ಲಿ ದಂಡ ಹಾಕಿರುವುದನ್ನು ತಪ್ಪು ಎನ್ನುವುದರಲ್ಲಿಯೇ ಕಾಲ ಕಳೆಯುತ್ತಿದೆ. ಇದರಿಂದ ಬಯಲಿಗೆ ಬಂದಿರುವ ದೇವಸ್ಥಾನಕ್ಕೆ ದಲಿತರ ಪ್ರವೇಶ ಇಲ್ಲ ಎನ್ನುವ ವಿಷಯಕ್ಕೆ ಒತ್ತು ನೀಡುತ್ತಲೇ ಇಲ್ಲ ಎನ್ನುವುದು ಮಾತ್ರ ನೋವಿನ ಸಂಗತಿ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮಕೈಗೊಂಡು, ಆರೋಪಿಗಳಾದ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಉಳಿದಂತೆ ತನಿಖೆ ನಡೆಯುತ್ತಿದೆ ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ತಿಳಿಸಿದ್ದಾರೆ.
ಇದು ನಿಜಕ್ಕೂ ನೋವಿನ ಸಂಗತಿ. 21ನೇ ಶತಮಾನದಲ್ಲಿಯೂ ಇಂಥ ಆಸ್ಪೃಶ್ಯ ಆಚರಣೆ ಜೀವಂತ ಆಗಿದೆ ಎನ್ನುವುದು ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಜಾಗೃತಿ ಮೂಡಿಸಲಾಗುವುದು ಎಂದು ಕೊಪ್ಪಳ ಡಿಸಿ ವಿಕಾಸ್ ಕಿಶೋರ ಸುರಳ್ಕರ್ ಹೇಳಿದ್ದಾರೆ.