ಚಿಕ್ಕಬಳ್ಳಾಪುರ (ಸೆ.23): ಅನ್ನಭಾಗ್ಯ ಯೋಜನೆಗೆ ಸೇರಿದ ಅಪಾರ ಪ್ರಮಾಣ ಅಕ್ಕಿಯನ್ನು (Rice) ರೀ ಪಾಲಿಶ್ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ( Department of Food, Civil Supplies & Consumer Affairs) ಉಪ ನಿರ್ದೇಶಕಿ ಸವಿತಾ ನೇತೃತ್ವದ ಅಧಿಕಾರಿಗಳು ಪತ್ತೆ ಹಚ್ಚಿ ಲಕ್ಷಾಂತರ ಮೌಲ್ಯದ ಪಾಲಿಶ್ ಅಕ್ಕಿ ಜಪ್ತಿ ಮಾಡಿದ್ದಾರೆ.
ನಗರದ ಕಂದವಾರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿದ ಸಂದರ್ಭದಲ್ಲಿ ಗಿರಣಿಯ ಮುಖ್ಯ ಬಾಗಿಲು ಮುಚ್ಚಿರುವುದು ಕಂಡು ಬಂದಿದೆ.
2 ತಿಂಗಳಿಂದ ಹಂಚಿಕೆಯಾಗಿಲ್ಲ ಅನ್ನಭಾಗ್ಯ ಅಕ್ಕಿ, ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ದಾಸ್ತಾನು
ಅನುಮಾನಗೊಂಡ ಅದರ ಪಕ್ಕದಲ್ಲಿದ್ದ ಕಿರಿಯ ಬಾಗಿಲು ತೆರೆದು ಪರಿಶೀಲಿಸಿದಾಗ ಅನ್ನಭಾಗ್ಯದ ಅಕ್ಕಿಯನ್ನು ರೀ ಪಾಲಿಶ್ ಮಾಡಿ ಅಕ್ಕಿ ಮತ್ತು ನುಚ್ಚಕ್ಕಿ ಬೇರ್ಪಡಿಸಿ ತಲಾ ಸುಮಾರು 25 ಕೆ.ಜಿಯಂತೆ ಪ್ಲಾಸ್ಟಿಕ್ (plastic) ಚೀಲಗಳಲ್ಲಿ ತುಂಬಿ ಮಯೂರ ಬ್ರಾಂಡ್ ಹೆಸರಿನಲ್ಲಿ ಸಿದ್ದಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ.
ದಾಖಲೆ ಕೊಡದ ಮಾಲೀಕ: ಈ ವೇಳೆ ಸ್ಥಳದಲ್ಲಿಯೆ ಇದ್ದ ಗಿರಣಿಯ ಮಾಲೀಕ ವೇಣುಗೋಪಾಲ್‌ರನ್ನು ಸದರಿ ಅಕ್ಕಿ ಕುರಿತು ಲೆಕ್ಕ ಪತ್ರಗಳ ನಿರ್ವಹಣೆಯನ್ನು ವಿಚಾರಿಸಿದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡದೇ ಸೂಕ್ತ ದಾಖಲೆ ಕೊಡದೇ ನೊಣಚಿಕೊಂಡೊಂಡಿದ್ದಾರೆ. ಕೊನೆಗೂ ಇದು ಅನಧಿಕೃತವಾಗಿ ಸರ್ಕಾರದ ವಿವಿಧ ಯೋಜನೆಗಳ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ದೃಢವಾಗಿದೆ.
1.72 ಲಕ್ಷ ಬಿಪಿಎಲ್ ಕಾರ್ಡ್ ರದ್ದು, 107 ಕೋಟಿ ರು. ಉಳಿತಾಯ
ಎರಡನೇ ಬಾರಿ ದಾಳಿ: ಕಳೆದ ಜೂನ್ ತಿಂಗಳಲ್ಲಿ ಕೂಡ ಅಧಿಕಾರಿಗಳು ಇದೇ ರೈಸ್ ಮಿಲ್ ಮೇಲೆ ದಾಳಿ ನಡೆಸಿ ಅಕ್ಕಿ ಗಿರಣಿಯಲ್ಲಿ ಅನಧಿಕೃತವಾಗಿ ರೀ ಪಾಲಿಶ್ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ ಸರ್ಕಾರದ ವಿವಿಧ ಯೋಜನೆಗಳ 350 ಕ್ವಿಂ ಅಕ್ಕಿ ಮತ್ತು ನುಚ್ಚಕ್ಕಿಯನ್ನು ಜಪ್ತಿ ಮಾಡಿ ಅಕ್ಕಿ ಗಿರಣಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ಅದೇ ರೀತಿ ದಂಧೆ ಮುಂದುರೆಸಿ ಬುಧವಾರ ಎರಡನೇ ಪ್ರಕರಣ ದಾಖಲಾಗಿದೆ.
ವಿವಿಧ ಬ್ರ್ಯಾಂಡ್‌ಗಳಡಿ ಮಾರಾಟಕ್ಕೆ ನಡೆದಿದ್ದ ಸಿದ್ಧತೆ : ದಾಳಿ ವೇಳೆ ಸಪ್ತಗಿರಿ ಅಕ್ಕಿ ಗಿರಣಿಯಲ್ಲಿ ಅಕ್ರಮವಾಗಿ ಪತ್ತೆಯಾದ ಮಯೂರ ಬ್ರಾಂಡ್ (brand) ಹೆಸರಿನ 61 ಚೀಲಗಳಲ್ಲಿ 15.25 ಕ್ವಿಂಟಾಲ್ ನುಚ್ಚಕ್ಕಿ ಹಾಗೂ ಅದೇ ಬ್ರಾಂಡ್‌ನ 122 ಚೀಲಗಳಲ್ಲಿ 27.75 ಕ್ವಿಂಟಾಲ್ ಅಕ್ಕಿ ಸೇರಿ ಒಟ್ಟು 183 ಚೀಲಗಳಲ್ಲಿ 43 ಕ್ವಿಂಟಾಲ್‌ನಷ್ಟು ಅಕ್ಕಿ, ನುಚ್ಚಕ್ಕಿಯನ್ನು ಹಾಗೂ ಎಲೆಕ್ಟ್ರಾನಿಕ್ ವೇಯಿಂಗ್ ಸ್ಕೇಲ್ ಮತ್ತು ಚೀಲಗಳ ಬಾಯಿ ಹೊಲಿಯಲು ಉಪಯೋಗಿಸುತ್ತಿದ್ದ ಸ್ಟೀಚಿಂಗ್ ಮಿಷನ್‌ನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.