* ಕರೆಂಟ್ ಕೈ ಕೊಟ್ಟು ಕಲಬುರಗಿ ನಗರದ ಹಲವೆಡೆ ಗಾಡಾಂಧಕಾರ
* ಕಾರ್ಯಾಚರಣೆ ಸ್ಥಗಿತಗೊಳಿಸಿದ ಜೆಸ್ಕಾಂ ಸಹಾಯವಾಣಿ
* ನಿರಂತರ ಮಳೆಯಿಂದ ವ್ಯಾಪಕ ಬೆಳೆ ಹಾನಿ
ಕಲಬುರಗಿ(ಸೆ.23): ಕಲಬುರಗಿ(Kalaburagi) ಜಿಲ್ಲೆಯಾದ್ಯಂತ ಬುಧವಾರ ಸಂಜೆ 3 ಗಂಟೆಗಳ ಕಾಲ ಧಾರಕಾರ ಮಳೆ(Rain) ಸುರಿದಿದೆ, ಗುಡುಗು, ಮಿಂಚು ಸಹಿತ ಬಿರುಸಿನ ಮಳೆಗೆ ನಗರ ಹಾಗೂ ಸುತ್ತಲಿನ ಜನ ಜೀವನ ಅಸ್ತವ್ಯಸಸ್ತಗೊಂಡಿದೆ. ಸಂಜೆ 3 ಗಂಟೆ ಸುರಿದ ಗುಡುಗು ಸಿಡಿಲು ಸಹಿತ ಮಳೆಗೆ ನಗರದಲ್ಲಿರುವ ಚರಂಡಿಗಳು ತುಂಬಿ ಹರಿಯುತ್ತಿವೆ. ಮುಖ್ಯ ರಸ್ತೆಗಳ ಮೇಲೆಲ್ಲಾ ಮಳೆ ನೀರು ಮಡುಗಟ್ಟಿ ನಿಲ್ಲುವ ಮೂಲಕ ವಾಹನ ಸಂಚಾರಕ್ಕೆ ಭರಿ ಅಡಚಣೆ ಉಂಟಾಗಿದೆ.
ನಗರದ ಕೆಬಿಎನ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದಾಗಿ ವಾಹನ ಸಂಚಾರ, ಜನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಇಲ್ಲೆಲ್ಲಾ ಮಳೆ ನೀರಿನದ್ದೆ ಸಮಸ್ಯೆ ತಲೆದೋರಿದೆ. ಇದಲ್ಲದೆ ರೇಲ್ವೆ ಮೇಲ್‌ಸೇತುವೆಯ ಇಕ್ಕೆಲ ರಸ್ತೆಗಳು, ಕೋರಂಟಿ ಹನುಮಂತ ದೇವರ ಮಂದಿರದ ರೇಲ್ವೆ ಕೆಳ ಸೇತುವೆ ರಸ್ತೆಯಲ್ಲಿಯೂ ಭಾರಿ ಪ್ರಮಾಣದಲ್ಲಿ ಮಳೆ ನೀರು ಶೇಖರಣೆಯಾಗಿದ್ದು ಜನ ಈ ರಸ್ತೆಗಳನ್ನು ಬಳಸದಂತಾಗಿದೆ.
3 ಗಂಟೆಗಳ ಬಿರುಸಿನ ಮಳೆ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಹಳೆ ಕಲಬುರಗಿ ಪರಿಸದಲ್ಲಿರುವ ತಗ್ಗು ಪ್ರದೇಶದ ಮನೆಗಳು ಜಲಾವೃತ ಭೀತಿ ಎದುರಿಸುತ್ತಿದ್ದರೆ ಹೊಸ ಪ್ರದೇಶಗಲಾದ ಪೂಜಾ ಕಾಲೋನಿ, ಜನತಾ ಬಡಾವಣ ಎಸೇರಿದಂತೆ ಹಲವು ಬಡಾವಣೆಗಳಲ್ಲಿಯೂ ಮಳೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.
ವಿಜಯಪುರ: ಡೋಣಿ ನದಿ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ
3 ದಿನದಿಂದ ಕೈ ಕೊಡುತ್ತಿದೆ ಕರೆಂಟ್:
ಕಲಬುರಗಿ ಮಹಾ ನಗರದ ರಿಂಗ್ ರಸ್ತೆ ಇಕ್ಕೇಲಗಳಲ್ಲಿರುವ ರಾಮ ಮಂದಿರ, ಸಾಯಿ ಮಂದಿರ, ಧನ್ವಂತರಿ ಆಸ್ಪತ್ರೆ, ಗುರು ಕಾಲೇಜು ಅಕ್ಕಪಕ್ಕದ ಆರ್‌ಟಿ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್‌ಕೈ ಕೊಟ್ಟು ಜನ ಪರದಾಡುವಂತಾಗಿದೆ. ಕಳೆದ 3 ದಿನದಿಂದ ಮಳೆ ಶುರುವಾಗಿದ್ದು ವಿದ್ಯುತ್ ತೊಂದರೆಯೂ ಅದರೊಂದಿಗೇ ಹೆಜ್ಜೆ ಹಾಕುತ್ತಿದೆ. ಆರ್‌ಟಿ ನಗರದಲ್ಲಂತೂ ಕಳೆದ 3 ದಿನದಲ್ಲಿ ಕರೆಂಟ್ ಪೂರೈಕೆಯೇ ಇಲ್ಲದಂತಾಗಿ ಜನತೆ ತೊಂದರೆ ಎದುರಿಸುತ್ತಿದ್ದಾರೆ. ಜಿಡಿಎ ಬಡಾವಣೆಯಲ್ಲಿಯೂ ಅನೇಕ ಕಡೆಗಳಲ್ಲಿ ವಿದ್ಯುತ್‌ಸಂಪರ್ಕ ಇಲ್ಲ. ಹೀಗಾಗಿ ಜನಜೀವನ ಇಲ್ಲಿ ಕಗ್ಗತ್ತಲಲ್ಲಿ ಮುಳುಗಿದೆ.
ಜೆಸ್ಕಾಂ 1912 (ಅ) ಸಹಾಯವಾಣಿ:
ಜೆಸ್ಕಾಂ(GESCOM)ಕರೆಂಟ್ ಸಮಸ್ಯೆಗಳಿದ್ದಲ್ಲಿ, ದೂರು ದಾಖಲಿಸಲು ಗ್ರಾಹಕರಿಗೆ 20 ಲೈನ್‌ಗಳ ಸಾಮರ್ಥ್ಯದ 1912 ಸಹಾಯವಾಣಿಯನ್ನು ಸ್ಥಾಪಿಸಿದ್ದರೂ ಸಹ ಕಳೆದ 3 ದಿನಗಳಿಂದ ಮಳೆ ಸುರಿಯಲಾರಂಭಿಸುತ್ತಿದ್ದಂತೆಯೇ ಈ ದೂರವಾಣಿ ಕೈ ಕಡುತ್ತಿದೆ. ಮಳೆ ಶುರುವಾಗಿ ನಿಂತು 1 ಗಂಟೆಯಾಗುವವರೆಗೂ ಈ ದೂರವಾಣಿ ಗ್ರಾಹಕರ ಸಂಪರ್ಕಕ್ಕೆ ಸಿಗೋದೇ ಇಲ್ಲ.
ಸದಾ ಕಾರ್ಯನಿರತ, ಅಥವಾ ಕರೆ ಸ್ವೀಕರಿಸಿ ತುಂಡಾಗುವ ಪರಿಪಾಠ ಇಲ್ಲಿ ಮಾಮೂಲಾಗಿದೆ. ಇಲ್ಲಿನ ಆಪರೇಟರ್‌ಗಳು ತಮ್ಮ ಕೈಚಳಕ ಮಳೆ ಸುರಿಯಲಾರಂಭಿಸಿದಂತೆ ತೋರಿಸುತ್ತ ಮಳೆ ನಿಂತು ಗಂಟೆ ಕಳಯುವವರೆಗೂ ಅದೇ ಕೈಚಳಕ ಮುಂದುವರಿಸಿರುತ್ತಾರೆ. ಇದಿರಂದ ಅಮಾಯಕ ಗ್ರಾಹಕರು ಕರೆಂಟ್‌ಪೂರೈಕೆ ಇಲ್ಲದಂತಾಗಿ ಮಳೆಯಲ್ಲಿ ಹೇಗೋ ಜೀವನ ಸಾಗಿಸುವಂತಾಗಿದೆ.
ವಿದ್ಯುತ್ತಿಲ್ಲ ಎಂದು ದೂರಲು ಜನ ಪರದಾಡುವಂತಾಗಿದೆ. ಬೆಳಗ್ಗೆಯೇ ಕರಂಟ್ ಆರ್‌ಟಿ ನಗರ, ಗುರು ಕಾಲೇಜು ಪರಿಸರ, ಸರ್ವಜ್ಞ ನಗರ ಸೇರಿದಂಎ ದೇವ ನಗರ, ಜಿಡಿಎ ಬಡಾವಣೆ, ಕುಬೇರ ನಗರ ಇಲ್ಲೆಲ್ಲಾ ಕೈ ಕೊಡೋದರಿಂದ ಜನ ಕೊಳವೆ ಬಾವಿ ಕಾರ್ಯಾಚರಣೆ ಸೇರಿದಂತೆ ಬೆಳಗಿನ ಅನೇಕ ಕೆಲಸಗಲಿಗೆ ಕರೆಂಟ್‌ಇಲ್ಲದಂತಾಗಿ ಪರದಾಡುವಂತಾಗಿದೆ.
ಆರ್ಟಿ ನಗರ ನಿವಾಸಿಗಳು ಅಲ್ಲಿನ ಸೆಕ್ಷನ್ ಅಧಿಕಾರಿ, ಎಇಇ, ಇಇ ಇವರನ್ನೆಲ್ಲ ಸಂಪರ್ಕಿಸಿ ಆಗುತ್ತಿರುವ ತೊಂದರೆ ಅರುಹಿದರೂ ಕ್ಯಾರೆ ಎನ್ನೋರಿಲ್ಲ. ಈ ಪ್ರದೇಶದಲ್ಲಿ ಕರೆಂಟ್‌ಕೈ ಕೊಟ್ಟರೆ ತೀರಿತು, ಅದು ಮರಳಲು ಕನಿಷ್ಠ 3 ಗಂಟೆಯಾದರೂ ಬೇಕೇಬೇಕು, ನಗರ ಮದ್ಯಭಾಗದಲ್ಲೇ ಈ ರೀತಿಯಾದಲ್ಲಿ ಇನ್ನು ಗ್ರಾಮೀಣ ಪ್ರದೇಶದ ಬವಣೆ, ಅಲ್ಲಿನ ಜೆಸ್ಕಾಂ ತೊಂದರೆಗಳು ದೇವರೇ ಬಲ್ಲ ಎಂಬಂತಾಗಿದೆ.
ಬೆಳೆ ಹಾಳಾಗುವ ಆತಂಕ:
ಜಿಲ್ಲೆಯಲ್ಲೀಗ ತೊಗರಿ ಬಂಪರ್ ಬೆಳೆ ಇದೆ, ಹೆಸರು ಬಳೆಯ ರಾಶಿ ಸಾಗಿದೆ. ಈ ಹಂತದಲ್ಲಿ ಕಳೆದ 3 ದಿನದಿಂದ ಮಳೆ ಸತತ ಸುರಿ.ಯುತ್ತಿರೋದರಿಂದಾಗಿ ರೈತರು ಕಂಗಾಲಗಿದ್ದಾರೆ. ಇತ್ತ ಹೆಸರು ರಾಶಿಗೂ ಮಳೆ ಅಡ್ಡಿಯೊಡ್ಡುತ್ತಿದೆ. ಇನ್ನು ನಿರಂತರ ಮಳೆಗೆ ಹುಲುಸಾಗಿ ಬೆಳೆದು ನಿಂತಿರುವ ತೊಗರಿಗೂ ತೊದಂರೆ ಕಟ್ಟಿಟ್ಟಬುತ್ತಿ ಎಂದು ರೈತರು ಹೇಳುತ್ತಿದ್ದಾರೆ.
ನಿರಂತರ ಮಳೆಯಿಂದ ಈಗಾಗಲೇ ವ್ಯಾಪಕ ಬೆಳೆ ಹಾನಿಯಾಗುವ ಆತಂಕ ಜಿಲ್ಲಾದ್ಯಂತ ಕಾಡುತ್ತಿದೆ. ರೈತರಂತೂ ಹೆಸರು ಕೈಗೆ ಬಂದರೂ ಅದರ ರಾಶಿ ಮಾಡಲಾಗದೆ ರೈತರೆಲ್ಲರು ಕಂಗಾಲಗಿದ್ದಾರೆ. ಹೀಗಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾದರೆ ಹೇಗೆಂಬ ಆತಂಕ ರೈತರದ್ದಾಗಿದೆ. ಅಫಜಲ್ಪುರ ತಾಲೂಕಿನ ನಿಲೂರಲ್ಲಿ ನಿರಂತರ 2ಗಂಟೆ ಮಳೆ ಸುರಿದರೆ ಸೇಡಂ, ಚಿತ್ತಾಪುರ, ಜೇವರ್ಗಿಗಳಲ್ಲಿ ಮಳೆ, ಮೋಡದ ವಾತಾವರಣ ಕಾಡುತ್ತಿದೆ.
ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲಿಗೆ ರೈತ ಬಲಿ
ಚಿಂಚೋಳಿಯಲ್ಲಿ ಧಾರಾಕಾರ ಮಳೆ
ಚಿಂಚೋಳಿ ತಾಲೂಕಿನಲ್ಲಿ ಗುಡುಗು ಮಿಂಚಿನ ಸಿಡಿಲಿನಿಂದ ಕೂಡಿದ ಆರ್ಭಟದಿಂದ ಸುರಿಯುತ್ತಿರುವ ಮಳೆ ಅಬ್ಬರ ಮುಂದುವರಿದೆ. ಕಳೆದೆರಡು ದಿನಗಳಿಂದ ರಾತ್ರಿವಿಡಿ ಸುರಿದ ಭಾರಿ ಮಳೆಯಿಂದ ಜಲಾಶಯಗಳು ಮತ್ತು ಸಣ್ಣ ನೀರಾವರಿಗಳು ಸಂಪೂರ್ಣವಾಗಿ ಭರ್ತಿಯಾಗಿ ಉಕ್ಕಿ ಹರಿಯುತ್ತಿವೆ.
ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿರುವುದರಿಂದ 936ಕ್ಯೂಸೆಕ್ ನದಿಗೆ ಹರಿದು ಬಿಡಲಾಗಿದೆ ಎಂದು ಯೋಜನೆ ಎಇಇ ಹಣಮಂತರಾವ ಪೂಜಾರಿ ತಿಳಿಸಿದ್ದಾರೆ.
ಸಣ್ಣ ನೀರಾವರಿ ಕೆರೆಗಳಾದ ಚಿಕ್ಕನಿಂಗದಳ್ಳಿ, ತುಮಕುಂಟಾ, ಖಾನಾಪೂರ, ಅಲ್ಲಾಪೂರ,ಮುಕರಂಬಾ,ಹುಲಸಗೂಡ, ಧರ್ಮಸಾಗರ,ಅಂತಾವರಂ, ಜಿಲವರ್ಷ, ಲಿಂಗಾನಗರ, ಹಸರಗುಂಡಗಿ, ಚಂದನಕೇರಾ, ಪಂಗರಗಾ, ಚೆಂಗಟಾ, ಐನಾಪೂರ ಖಾನಾಪೂರ ಕೆರೆಗಳು ತುಂಬಿ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ.
ಚಂದ್ರಂಪಳ್ಳಿ ಜಲಾಶಯವು ಸಹಾ ತುಂಬಿದ್ದು 2 ಗೇಟು 2 ಅಡಿ ಮೇಲೆತ್ತಿ 500 ಕ್ಯೂಸೆಕ್‌ನೀರು ಸರನಾಲಾ ನದಿಗೆ ಹರಿದು ಬಿಡಲಾಗಿದೆ. ಕುಂಚಾವರಂ ಅರಣ್ಯಪ್ರದೇಶದಲ್ಲಿ ವ್ಯಾಪಕ ಮಳೆ ಸುರಿದ್ದರಿಂದ ಎತ್ತಪೋತ ಮತ್ತು ಮಾಣಿಕಪುರ ಜಲಧಾರೆ ಭೋರ್ಗರೆಯುತ್ತಿವೆ. ಮೈದುಂಬಿ ಹರಿಯುವ ಜಲಧಾರೆಯನ್ನು ನೋಡಲು ದಿನನಿತ್ಯ ಸಾವಿರಾರು ಮಳೆಯಲ್ಲಿಯೇ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ.