
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.13): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿದೇಶಿಗರು ಆಟೋ ರೈಡ್ ಮಾಡಿದ್ದಾರೆ. ವಿದೇಶಿಗರಿಗೆ ಭಾರತದ ಬಗ್ಗೆ ಇನ್ನಿಲ್ಲದ ಪ್ರೀತಿ.., ಹೀಗಾಗಿ ಪ್ರತಿ ವರ್ಷ ಸಾವಿರಾರು ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಈ ವಿದೇಶಿ ಪ್ರಜೆಗಳು ಡಿಫ್ರೆಂಟ್ ಆಗಿ ಆಟೋದಲ್ಲಿ ಸುತ್ತಾಡುತ್ತಾ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಳೆದ 3 ತಿಂಗಳಿಂದ ಆಟೋದಲ್ಲೇ ಓಡಾಡ್ತಿರೋ ಫಾರಿನರ್ಸ್: ಸ್ವಿಡ್ಜರ್‌ಲ್ಯಾಂಡ್ ಮೂವರು ಪ್ರಜೆಗಳು ಕಳೆದ 3 ತಿಂಗಳಿಂದ ಭಾರತದ ಪ್ರವಾಸವನ್ನು ಕೈಗೊಂಡಿದ್ದಾರೆ. ಅವರು ಸಂಚಾರ ನಡೆಸುತ್ತಿರುವುದು ಆಟೋದಲ್ಲಿ. ಕಳೆದ ಮೂರು ತಿಂಗಳಿನಿಂದ 7 ಸಾವಿರ ಕಿ.ಮೀ. ಪ್ರವಾಸ ಮಾಡಿರುವ ಇದೀಗ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದಾರೆ. ಆಟೋದ ಮೇಲೆ ಸ್ವಿಡ್ಜರ್‌ಲ್ಯಾಂಡ್ ಧ್ವಜ ಹಾಗೂ ಅದರ ಪಕ್ಕದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಪ್ರವಾಸ ಕೈಗೊಂಡಿದ್ದಾರೆ. ಇನ್ನು ಇವರ ಪ್ರವಾಸದ ಹವ್ಯಾಸವನ್ನು ನೋಡಿ ಎಲ್ಲರೂ ಮೆಚ್ಚುಗ ವ್ಯಕ್ತಪಡಿಸುತ್ತಿದ್ದಾರೆ.
2024ರ ಡಿಸೆಂಬರ್‌ನಲ್ಲಿ ಸ್ವಿಜರ್ಲ್ಯಾಂಡ್‌ನಿಂದ ಗೋವಾಕ್ಕೆ ಬಂದು ಅಲ್ಲಿಂದ ಆಟೋವನ್ನು ಬಾಡಿಗೆ ಪಡೆದು ಮಹಾರಾಷ್ಟ್ರ, ಹರಿಯಾಣ, ಗುಜರಾತ್, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ. ಈವರೆಗೆ ಅವರು 7 ಸಾವಿರ ಕಿ.ಮೀ ಸಂಚಾರ ಮಾಡಿದ್ದಾರೆ. ನಮಗೆ ಇಂಡಿಯಾ ಎಂದರೆ ತುಂಬಾ ಇಷ್ಟ.. ಇಲ್ಲಿನ ಜನರು ತುಂಬಾ ಒಳ್ಳೆಯವರು. ಹೀಗಾಗಿ ಆಟೋದಲ್ಲಿ ಪ್ರವಾಸ ಮಾಡುವುದರಿಂದ ಹೆಚ್ಚು ಜನರನ್ನು ನೋಡಬಹುದು ಎಂದು ವಿದೇಶಿ ಪ್ರವಾಸಿಗ ಸಿಮಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಬೇಸಿಗೆಗೂ ಮುನ್ನವೇ 56 ಕಾಡ್ಗಿಚ್ಚು, ನೂರಾರು ಎಕರೆ ಅರಣ್ಯ ನಾಶ!
ಕಾಫಿನಾಡು ಸಂಸ್ಕೃತಿ ಬಗ್ಗೆ ಮೆಚ್ಚುಗೆ : ಭಾರತದ ಸಂಸ್ಕೃತಿ ನಮಗೆ ತುಂಬಾ ವಿಶೇಷ ಎನಿಸಿದ್ದು ಇಲ್ಲಿನ ಎಲ್ಲ ಮಹಿಳೆಯರು ಹಣೆಗೆ ಬಿಂದಿ ಇಡುವುದು, ಕಾಲಿಗೆ ಗೆಜ್ಜೆ ಕಟ್ಟುವುದು ಎಂದು ನಾವು ತಿಳಿದುಕೊಂಡಿದ್ದೇವೆ ಎಂದರು. ಇತ್ತೀಚೆಗೆ ತಮಿಳುನಾಡಿನ ವಾಲ್ಪಾರೈ ಬಳಿ ಜರ್ಮನ್ ಪ್ರಜೆಯ ಮೇಲೆ ನಡೆದ ಆನೆ ದಾಳಿಯ ಬಗ್ಗೆ ಭಾರತೀಯರು ಕಣ್ಣೀರು ಹಾಕಿದ್ದಾರೆ. ಇದು ನಮಗೆ ಬೇಸರ ಆಯ್ತು ಅಂತಾ ಮತ್ತೊಬ್ಬ ಪ್ರವಾಸಿ ಸೋನಿಯಾ ಹೇಳಿದರು. ಭಾರತೀಯರು ತುಂಬಾ ಕ್ರಿಕೆಟ್ ನೋಡುತ್ತಾರೆ. ಆದರೆ, ಕ್ರಿಕೆಟ್ ನಮಗೆ ಅಷ್ಟು ಅರ್ಥ ಆಗಲ್ಲ. ಆದರೆ, ಭಾರತದ ಮಹಿಳೆಯರ ಕ್ರಿಕೆಟ್ ಆಡುವುದನ್ನು ನೋಡಿ ನಮಗೆ ಆಶ್ಚರ್ಯ ಆಯ್ತು ಎಂದರು.
ಭಾರತೀಯರು ಮುಖ್ಯವಾಗಿ ಪ್ಲಾಸ್ಟಿಕ್ ಕಸವನ್ನು ಕಂಡ ಕಂಡಲ್ಲಿ ಎಸೆಯೋದನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಪ್ರವಾಸಿ ಈಫ್ ಎಂಬಾತ ಹೇಳಿದರು. ಒಟ್ಟಾರೆ ವಿದೇಶಿಗರು ಸ್ವಿಜರ್ಲ್ಯಾಂಡ್‌ನಿಂದ ಭಾರತಕ್ಕೆ ಬಂದು ಆಟೋದಲ್ಲಿ ಸುತ್ತಾಡಿ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಿರುವುದು ಸಂತಸವೇ ಸರಿ. ನಮ್ಮ ಕನ್ನಡಿಗ ಯೂಟೂಬರ್ ಡಾ.ಬ್ರೋ ಕೂಡ ಇದೇ ರೀತಿ ವಿದೇಶಕ್ಕೆ ಹೋಗಿ ಅಲ್ಲಿನ ಮಾಹಿತಿ, ಸಂಸ್ಕೃತಿ ಆಚಾರ ವಿಚಾರ, ಆಹಾರ ಪದ್ದತಿಯನ್ನು ತೋರಿಸುವುದು ನೋಡಿದ್ದ ನಮಗೆ ಇವರೂ ಅದೇ ರೀತಿ ಎನ್ನುವುದಂತೂ ಅರಿವಾಗಿದೆ.
ಇದನ್ನೂ ಓದಿ: ಮಲೆನಾಡಿಗರಿಗೆ 20 ವರ್ಷದಿಂದ ಕಾಡುತ್ತಿದ್ದ ನಕ್ಸಲ್, ಪೊಲೀಸ್ ಭಯಕ್ಕೆ ಮುಕ್ತಿ