ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಎಲ್ಲ ಕಾಮಗಾರಿ ಹಾಗೂ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿರುವುದ್ದಕ್ಕೆ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕೂಡಲೇ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಧಾರವಾಡ (ಮೇ.28) ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ ಎಲ್ಲ ಕಾಮಗಾರಿ ಹಾಗೂ ಹಣ ಬಿಡುಗಡೆಯನ್ನು ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿರುವುದ್ದಕ್ಕೆ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕೂಡಲೇ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುಭಾಸ ಪಾಟೀಲ, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿ ಹಾಗೂ ಬಿಲ್ ಪಾವತಿಯನ್ನು ಸ್ಥಗಿತಗೊಳಿಸಬೇಕು ಎಂದು ಆದೇಶಿಸಿರುವುದು ಸರಿಯಲ್ಲ. ಸರ್ಕಾರದ ಈ ಆದೇಶದಿಂದ ನಿಯಮಾವಳಿ ಪ್ರಕಾರ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ತೊಂದರೆಗೆ ಸಿಲುಕಲಿದ್ದಾರೆ. ಸಮಸ್ಯೆ ಎದುರಿಸುತ್ತಿರುವ ಗುತ್ತಿಗೆದಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಬಿಜೆಪಿ ಸರಕಾರದ ಅನುದಾನ ತಡೆ ಹಿಡಿದ ಕಾಂಗ್ರೆಸ್ ಸರಕಾರ, ಗುತ್ತಿಗೆದಾರರು ಕಂಗಾಲು
ಸರ್ಕಾರದ ಎಲ್ಲ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಂದಿನ ಹಣ ಬಿಡುಗಡೆ ಮತ್ತು ಪಾವತಿಗಳನ್ನು ತಡೆಹಿಡಿಯಬೇಕು. ಪ್ರಾರಂಭವಾಗದೆ ಇರುವ ಕಾಮಗಾರಿಗಳನ್ನು ತಡೆಹಿಡಿಯಬೇಕು ಎಂದು ಮೇ 22ರಂದು ಸರ್ಕಾರ ಆದೇಶಿಸಿದೆ. ಇದರಿಂದ ಸಮಸ್ಯೆಗಳೇ ಹೆಚ್ಚಾಗಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಬಾಕಿ ಹಣವನ್ನು ಪಾವತಿ ಮಾಡುವ ಮೂಲಕ ಅವರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿನ ಗುತ್ತಿಗೆದಾರರ ಒಟ್ಟು .7 ಸಾವಿರ ಕೋಟಿಯಷ್ಟುಹಣ ಬಿಡುಗಡೆಯಾಗದೆ ಸರಕಾರದಲ್ಲಿದೆ. ಅದು ಕೂಡ ಶೀಘ್ರ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಿದರು. ನಾವು ಹಿಂದಿನ ಸರ್ಕಾರಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಸಪೋರ್ಚ್ ಮಾಡಿದ್ದೇವೆ. ಇದೀಗ ಇವರು ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಮಾಡುವುದು ತಪ್ಪು ಎಂದರು.
ದಕ್ಷಿಣದ ಪ್ರತಿನಿಧಿಗಳು:
ಗುತ್ತಿಗೆದಾರರ ಕ್ಷೇಮನಿಧಿ ಕಮಿಟಿಯಲ್ಲಿ ದಕ್ಷಿಣ ಕರ್ನಾಟಕದ ಪ್ರತಿನಿಧಿಗಳು ಮಾತ್ರವಿದ್ದಾರೆ. ಅಲ್ಲಿ ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಈ ಭಾಗದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನೂ ಕಮಿಟಿಯಲ್ಲಿ ಸೇರಿಸಬೇಕು. ಇದರಿಂದ ಎಲ್ಲ ಭಾಗಕ್ಕೂ ಸಮಾನ ಸ್ಥಾನಮಾನ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು.
ಅಧೀಕ್ಷಕ ಅಭಿಯಂತರರು ಅಂತಿಮ ಬಿಲ್‌ಗಳಿಗಾಗಿ ಮೇಲು ರುಜು ಮಾಡುತ್ತಿದ್ದಾರೆ. ಇದರಿಂದ ಗುತ್ತಿಗೆದಾರರ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಈ ನಿಯಮವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ: ಅಮ್ಮಾಜೇಶ್ವರಿ ಏತ ನೀರಾವರಿಗೂ ಬಿದ್ದಿದೆ ಬ್ರೇಕ್!
ಹಲವು ಕಾಮಗಾರಿಗಳ ಅಂದಾಜು ಪತ್ರಿಕೆ ಒಟ್ಟುಗೂಡಿಸಿ ಪ್ಯಾಕೇಜ್ ಮಾಡುತ್ತಿರುವುದು ಒಪ್ಪಿತವಲ್ಲ. ಇದನ್ನು ನಿಲ್ಲಿಸಬೇಕು. ಕಾಮಗಾರಿ ಟೆಂಡರ್‌ಗಳನ್ನು ನಿಯಮದಂತೆ ಕೆಡಬ್ಲು-5 ಮತ್ತು ಕೆಡಬ್ಲು-6ನಲ್ಲಿ ಕರೆಯದೇ ತಮಗೆ ಬೇಕಾದ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಅದನ್ನು ಕೆಡಬ್ಲು-4ನಲ್ಲಿ ಕರೆಯುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ರವೀಂದ್ರ ಮಾನೆ, ಅಷ್ಪಾಕ ಬೆಟಗೇರಿ ಸುದ್ದಿಗೋಷ್ಠಿಯಲ್ಲಿದ್ದರು.