ರೈತರ ಆದಾಯ ಹೆಚ್ಚುವಂತೆ ನೋಡಿಕೊಳ್ಳಬೇಕು: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

By Kannadaprabha News  |  First Published May 28, 2023, 11:03 AM IST

ರೈತರ ಖರ್ಚು ಕಡಿಮೆಗೊಳಿಸಿ ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳಬೇಕಾದ ಗುರಿ ಹೊಂದಿದ್ದೇನೆ ಎಂದು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು. 


ಮೈಸೂರು (ಮೇ.28): ರೈತರ ಖರ್ಚು ಕಡಿಮೆಗೊಳಿಸಿ ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳಬೇಕಾದ ಗುರಿ ಹೊಂದಿದ್ದೇನೆ ಎಂದು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು. ನಗರದ ಕಲಾಮಮಂದಿರ ಆವರಮದ ಕಿರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯ ಬಗ್ಗೆ ಗಮನ ಹರಿಸಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಎಂಎಸ್‌ಪಿ ಬಗ್ಗೆ ಹೋರಾಟ ನಡೆಸಬೇಕು. ರೈತರು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವ ಸಂಬಂಧ ಕೆಲಸ ಮಾಡಬೇಕು. ಅಲ್ಲದೆ ಕ್ಷೇತ್ರದ ಬೆಳವಣಿಗೆ ಕುರಿತು ಆಲೋಚಿಸಬೇಕು ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ತಾಲೂಕು ಕಚೇರಿಗಳಲ್ಲಿ ಆಗುವ ವಿಳಂಬ ನೀತಿಯ ಬಗ್ಗೆಯೂ ಗಮನ ನೀಡಬೇಕು. ರೈತರಿಗೆ ವ್ಯವಸ್ಥಿತವಾಗಿ ನ್ಯಾಯ ದೊರಕಬೇಕು. ರೈತರು ಆರ್ಥಿಕವಾಗಿ ಸ್ವಾತಂತ್ರ್ಯರಾಗಬೇಕು. ರೈತರ ಖರ್ಚು ಕಡಿಮೆಯಾಗಿ, ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳಬೇಕು ಎಂದರು. ರೈತರು ಸಾಲ ಮಾಡಿ ತಮ್ಮ ಮಕ್ಕಳ ಶುಲ್ಕ ಕಟ್ಟುತ್ತಾರೆ. ಜೀವನ ಪೂರ್ತಿ ಸಾಲ ತೀರಿಸುವುದರಲ್ಲೇ ಕಳೆಯುತ್ತೇವೆ. ಆದ್ದರಿಂದ ಪಂಚಾಯ್ತಿ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳನ್ನು ತೆರೆದು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಬೇಕು ಎಂದರು.

Tap to resize

Latest Videos

ಸಿಎಂ ಸಿದ್ದರಾಮಯ್ಯ ತವರಲ್ಲಿ ಯಾರಿಗೆ ಜಿಲ್ಲಾ ಉಸ್ತುವಾರಿ?

ಕಳೆದ ಮೂರು ದಿನಗಳಿಂದ ಪ್ರಗತಿಪರ ಚಿಂತಕರ ಜತೆ ಕಾಲ ಕಳೆಯುತ್ತಿದ್ದೇನೆ. ಶಾಸಕನಾದವರಿಗೆ ಇಷ್ಟೊಂದು ಜವಾಬ್ದಾರಿ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಚುನಾವಣೆಯಲ್ಲಿ ನಿಲ್ಲಬೇಕು, ಗೆಲ್ಲಬೇಕು ಎಂಬುದಷ್ಟೇ ಗೊತ್ತಿತ್ತು. ಹಾಗೆ ನೋಡಿದರೆ ನನಗಿಂತ ಕಡಿಮೆ ಅನುಭವ ಇರುವ ಹಿರಿಯರು ಇದ್ದಾರೆ. ರೈತ ಸಂಘಟನೆ ಆರಂಭವಾಗಿ 41 ವರ್ಷವಾಯಿತು. ಈ ಸಂಘಟನೆಯನ್ನು ಹೇಗೆ ಹೋರಾಟ ಮಾಡಿಕೊಂಡು ನಿಸ್ವಾರ್ಥವಾಗಿ ಕಟ್ಟಿದ್ದಾರೆ. ಈಗ ಯುವ ಘಟಕವನ್ನು ದೊಡ್ಡ ಮಟ್ಟದಲ್ಲಿ ಕಟ್ಟಬೇಕು ಎಂಬ ಆಲೋಚನೆ ಇದೆ ಎಂದರು.

ಚುನಾವಣೆಯಲ್ಲಿ ನಿಲ್ಲುವ ಕನಸು ಕಂಡಿರಲಿಲ್ಲ. ತಂದೆ ತೀರಿಕೊಂಡ ಮೇಲೆ ಚಳವಳಿ ಜೀವನಕ್ಕೆ ಕಾಲಿಟ್ಟೆ. ಈಗ ನನಗೆ ಚಳವಳಿ ಮೊದಲು, ರಾಜಕೀಯ ಆಮೇಲೆ. ಚಳವಳಿ ಜೀವಂತವಾಗಿದ್ದರೆ ಎಲ್ಲವೂ ಸಾಧ್ಯ. ನಾನು ತಿಳಿಯಬೇಕಾದ ವಿಷಯ ಬಹಳಷ್ಟಿದೆ. ಕಲಿಯುವ ಮನಸ್ಥಿತಿಯಲ್ಲಿದ್ದೇನೆ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಲುಷಿತ ವಾತಾವರಣದ ನಡುವೆ ದರ್ಶನ್‌ ಪುಟ್ಟಣ್ಣಯ್ಯ ಅವರ ಆಯ್ಕೆ ಆಶಾದಾಯಕ ಬೆಳವಣಿಗೆ. ಮುಂದೆ ಜನರೇ ರಾಜಕಾರಣ ಮಾಡುವಂತೆ ಆಗಬೇಕು. ಚಳವಳಿ ರಾಜಕಾರಣ ಜನ ರಾಜಕಾರಣಕ್ಕೆ ದಾರಿ ಆಗಬೇಕು ಎಂದರು.

ಈ ಹಿಂದಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಹೆಚ್ಚಿನ ಮತಗಳಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ನಾವು ಮೇಲ್ಗೈ ಸಾಧಿಸಿದ್ದೇವೆ. ಕಲುಷಿತ ವ್ಯವಸ್ಥೆಯ ನಡುವೆ, ಅದನ್ನು ಪೋಷಿಸುವ ಪಕ್ಷಗಳ ನಡುವೆ ಮೇಲುಕೋಟೆ ಜನತೆ ದರ್ಶನ್‌ ಅವರನ್ನು ಆಯ್ಕೆ ಮಾಡಿದ್ದಾರೆ. ನಾವು ದರ್ಶನ್‌ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಮೇಲುಕೋಟೆ ಕ್ಷೇತ್ರದ ಜನತೆಯನ್ನು ಅಭಿನಂದಿಸಬೇಕು ಎಂದರು.

ದರ್ಶನ್‌ ಅವರು ಅಮೇರಿಕಾದಲ್ಲಿ ಇದ್ದವರು. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲಿಸಿದ್ದ ಜನತೆ ಈ ಬಾರಿ ಗೆಲ್ಲಿಸಿದ್ದಾರೆ. ವಿಭಿನ್ನ ರೀತಿಯ ನಿರೀಕ್ಷೆ ಇದೆ. ಅದನ್ನು ಸರಿದೂಗಿಸಬೇಕಾದ ಹೊಣೆ ಅವರ ಮೇಲಿದೆ. ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಯಾವ ವಿಷಯವನ್ನು ಯಾವಾಗ ಪ್ರಸ್ತಾಪಿಸಬೇಕು ಎಂಬುದು ಗೊತ್ತಿರುವುದಿಲ್ಲ. ಅದನ್ನು ಕಲಿತುಕೊಳ್ಳುತ್ತಾರೆ. ಆದರೆ ನಾವು ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕು. ಈ ಹಿಂದೆ ಅಧಿಕಾರದಲ್ಲಿ ಇದ್ದವರಿಗಿಂತ ಈಗ ಇರುವವರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ದೇವೇಗೌಡ ಕುಟುಂಬದ ದಾಖಲೆ ಸರಿಗಟ್ಟಿದ ಬಂಗಾರಪ್ಪ ಕುಟುಂಬ

1975ರ ಸುಮಾರಿನಲ್ಲಿ ಚಳವಳಿಗಾರರು ರಸ್ತೆ ರಸ್ತೆಯಲ್ಲಿ ಕೂಗಿದ್ದು ವಿಧಾನಸೌಧವನ್ನು ತಟ್ಟುತ್ತಿತ್ತು. ಆದರೆ 1980ರಲ್ಲಿವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರತಿಭಟನ ಶಕ್ತಿ ಕುಂದಿಹೋಯಿತು ಎಂದರು. ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಹೇಶ್‌ ಪ್ರಭು, ಅಶ್ವಥ್‌ ನಾರಾಯಣ ಅರಸ್‌, ಕಿರಣ್‌ ಪೂಣಚ್ಚ, ಪ್ರಸನ್ನಗೌಡ, ಬೆಟ್ಟಯ್ಯಕೋಟೆ, ನೇತ್ರಾವತಿ, ಮನು ಸೋಮಯ್ಯ, ಚೋರನಹಳ್ಳಿ ಶಿವಣ್ಣ, ಜಗದೀಶ್‌ ಸೂರ್ಯ, ಬನ್ನೂರು ಕೃಷ್ಣಪ್ಪ, ಬೊಕ್ಕಳ್ಳಿ ನಂಜುಂಡಸ್ವಾಮಿ ಮೊದಲಾದವರು ಇದ್ದರು.

click me!