ಮೈಸೂರು(ಡಿ.07): ಮೈಸೂರು- ಚಾಮರಾಜನಗರ (Mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ (MLC Election) ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಬಹು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ. ಅಲ್ಲದೇ ಉಭಯ ಜಿಲ್ಲೆಗಳಲ್ಲಿ ಒಗ್ಗಟ್ಟಿನ ಹೋರಾಟವನ್ನು ಪ್ರದರ್ಶಿಸುತ್ತಿದೆ. ಇದಕ್ಕೆ 2009ರ ಚುನಾವಣೆಯಲ್ಲಿ ಆದ ಸೋಲು ಕಾರಣ. 1988 ರಿಂದ ಈವರೆಗೆ ಈ ಕ್ಷೇತ್ರದಿಂದ ಒಂದು ಉಪ ಚುನಾವಣೆ (By election) ಸೇರಿದಂತೆ ಆರು ಚುನಾವಣೆಗಳು ನಡೆದಿವೆ. ಕಾಂಗ್ರೆಸ್ 2009 ರಲ್ಲಿ ಮಾತ್ರ ಸೋತಿದೆ. 1997ರ ಚುನಾವಣೆಯಲ್ಲಿ ಎಂ. ವೆಂಕಟರಾಮು ಬಂಡಾಯದ ಬಾವುಟ ಹಾರಿಸಿದ್ದರಿಂದ ಗೆಲುವಿಗಾಗಿ ಎರಡನೇ ಸುತ್ತಿನವರೆಗೆ ಕಾಯಬೇಕಾಯಿತು. ಉಳಿದೆಲ್ಲಾ ಚುನಾವಣೆಗಳಲ್ಲೂ ಪ್ರಥಮ ಸುತ್ತಿನಲ್ಲಿಯೇ ಜಯಭೇರಿ ಬಾರಿಸಿದೆ.
ಜಿಟಿಡಿ - ಸಂದೇಶ್ ಬೆಂಬಲ
undefined
ಜೆಡಿಎಸ್‌ನಿಂದ ದೂರವಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ (GT Devegowda) ಈಗ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಸಖ್ಯ ಬೆಳೆಸಿದ್ದಾರೆ. ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್(Congress) ಸೇರಿ ತಮ್ಮ ಹಾಗೂ ತಮ್ಮ ಪುತ್ರ ಜಿ.ಡಿ. ಹರೀಶ್ ಗೌಡರ (GD harish gowda) ರಾಜಕೀಯ ಭವಿಷ್ಯರೂಪಿಸುವ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಭೇಟಿಯಾಗಿ ಮನವಿ ಮಾಡಿದ್ದರೂ ಕೂಡ ಜಿ.ಟಿ. ದೇವೇಗೌಡರು ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ ಅವರ ಪರ ಮತ ಚಲಾಯಿಸಿ ಎಂದು ಸೂಚಿಸುತ್ತಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಜೆಡಿಎಸ್ ಗೆಲ್ಲಬಾರದು ಎಂದುಕೊಂಡಿರುವ ಅವರು ಎರಡನೇ ಪ್ರಾಶಸ್ತ್ಯದ ಮತ ನೀಡುವುದಾದರೆ ಬಿಜೆಪಿ ಅಭ್ಯರ್ಥಿ ಆರ್. ರಘು ಅವರಿಗೆ ಚಲಾಯಿಸುವಂತೆ ಬೆಂಬಲಿಗರಿಗೆ ಸಲಹೆ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಇನ್ನೂ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದಾಗಿನಿಂದಲೂ ಜೆಡಿಎಸ್‌ನಿಂದ ದೂರವಿದ್ದ ಸಂದೇಶ್ ನಾಗರಾಜ್ (Sandesh nagaraj) ಈ ಬಾರಿ ಬಿಜೆಪಿ(BJP) ಟಿಕೆಟ್ ಬಯಸಿದ್ದರು. ಸಿಗದಿದ್ದಾಗ ಮತ್ತೆ ಜೆಡಿಎಸ್ ಬಾಗಿಲು ಬಡಿದಿದ್ದರು. ಆದರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಂಡತುಂಡವಾಗಿ ನಿರಾಕರಿಸಿದರು. ಇದರಿಂದ ಅಸಮಾಧಾನಗೊಂಡಿರುವ ಸಂದೇಶ್ ನಾಗರಾಜ್ ಅವರನ್ನು ಬಿಜೆಪಿಯ ಮುಖಂಡರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಭೇಟಿ ಮಾಡಿ, ಬೆಂಬಲ ಕೋರಿದ್ದಾರೆ. ಅಲ್ಲದೇ ಸಂದೇಶ್ ನಾಗರಾಜ್ ಬೆಂಗಳೂರಿನಲ್ಲಿ ಸಿದ್ದರಾಮಯ್ಯಅವರನ್ನು ಭೇಟಿ ಮಾಡಿ, ಜೆಡಿಎಸ್ ಅನ್ನು ಸೋಲಿಸುವ ಬಗ್ಗೆ ಚರ್ಚಿಸಿದ್ದಾರೆ.
ಮೊದಲ ಮೂರು ಚುನಾವಣೆಗಳಲ್ಲಿ ಹಣ (Money), ಜಾತಿ (Cast) ಅಷ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಜನತಾ ಪರಿವಾರದಿಂದ ನಾಮಪತ್ರ ಸಲ್ಲಿಸಿದರೆ ಸಾಕು ಗೆಲವು ಖಚಿತವಾಗಿತ್ತು. ಆದರೆ ನಾಲ್ಕನೇ ಚುನಾವಣೆ ವೇಳೆಗೆ ‘ರಾಜಕೀಯ ಹವಾಮಾನ‘ ಬದಲಾಗಿತ್ತು. ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈ ಚುನಾವಣೆಯಲ್ಲಿ ಜಾತಿಯ ಪ್ರಭಾವದ ಜೊತೆಗೆ ಹಣ, ಆಣೆ- ಪ್ರಮಾಣ ಚಾಲ್ತಿಗೆ ಬಂದವು. 15 ಸಾವಿರ, 10 ಸಾವಿರ ಹಂಚಿದವರು ಗೆದ್ದರು. 5 ಸಾವಿರದೊಳಗೆ ನೀಡಿದವರು ಸೋತರು. ಇದು ಕಾಂಗ್ರೆಸ್‌ಗೆ ತೀವ್ರ ಆಪಾತ ನೀಡಿತು. ಹೀಗಾಗಿ ಪಾಠ ಕಲಿತ ಕಾಂಗ್ರೆಸ್ ಅಲ್ಲಿಂದ ಇಲ್ಲಿಯವರೆಗೆ ಈ ಕ್ಷೇತ್ರದಿಂದ ನಡೆಯುವ ಪ್ರತಿ ಚುನಾವಣೆಯಲ್ಲೂ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. 2013ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅಲ್ಲದೇ ಏಕ ಸ್ಥಾನಕ್ಕೆ ಚುನಾವಣೆ ನಡೆದಿದ್ದರಿಂದ ಸುಲಭವಾಗಿ ಗೆದ್ದಿತು. 2015 ರಲ್ಲೂ ಚುನಾವಣೆ ನಡೆದಾಗಲೂ ಪಕ್ಷ ಅಧಿಕಾರದಲ್ಲಿತ್ತು. ಅಲ್ಲದೇ ‘ಸಂಪನ್ಮೂಲ’ದ ಕೊರತೆ ಕಾಡಲಿಲ್ಲ.
ಈ ಬಾರಿ ಕೂಡ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಸಾಧ್ಯವಾಗದ ದಲಿತರಲ್ಲಿ ಎಡಗೈ ಸಮೂದಾಯಕ್ಕೆ ಆದ್ಯತೆ ನೀಡಿದೆ. ‘ಸಂಪನ್ಮೂಲ’ ನೋಡಿಕೊಂಡೆ ಆರೋಗ್ಯ ಇಲಾಖೆ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ.ತಿಮ್ಮಯ್ಯ ಅವರಿಗೆ ಟಿಕೆಟ್ ನೀಡಿದೆ.