ರಾಜ್ಯದಲ್ಲಿ ಮಳೆ ಕ್ಷೀಣಿಸಿ ಬರಗಾಲದ ಪರಿಸ್ಥಿತಿ ಎದುರಾಗಿರುವ ಈಗಿನ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಹಾಗೂ ರೈತರ ನೆರವಿಗೆ ಬಾರದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರೈತರ ನೆರವಿಗೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿದ ಎನ್.ಕೆ. ಮಂಜುನಾಥಗೌಡ ನಿಸರಾಣಿ
ಸೊರಬ(ಸೆ.24): ನಾಡಿನ ಜೀವನದಿ ಕಾವೇರಿ ನಮ್ಮ ಸ್ವತ್ತು. ಅದರ ಒಂದು ಹನಿಯೂ ತಮಿಳುನಾಡಿಗೆ ನೀಡುವುದು ಅಕ್ಷಮ್ಯ. ರಾಜ್ಯ ಸರ್ಕಾರ ಈಗಾಗಲೇ ನೀರು ಹರಿಸುವ ಮೂಲಕ ರೈತಸಮೂಹಕ್ಕೆ ಅನ್ಯಾಯ ಎಸಗಿದೆ. ಇಂತಹ ದುರ್ವತನೆಯನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೆ.26ರಂದು ಅರಸೀಕೆರೆಯಿಂದ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥಗೌಡ ನಿಸರಾಣಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ರಾಜ್ಯ ರೈತ ಸಂಘದ ತಾಲೂಕು ಘಟಕ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮಳೆ ಕ್ಷೀಣಿಸಿ ಬರಗಾಲದ ಪರಿಸ್ಥಿತಿ ಎದುರಾಗಿರುವ ಈಗಿನ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಹಾಗೂ ರೈತರ ನೆರವಿಗೆ ಬಾರದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರೈತರ ನೆರವಿಗೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸಿಟ್ಟಿದ್ರೆ ಎಷ್ಟಾದ್ರೂ ಬೈಯಿರಿ, ಬೈಸಿಕೊಳ್ತೀವಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬರಗಾಲ ಘೋಷಣೆಯಾಗಿದೆ ವಿನಃ, ರೈತರಿಗೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಿಲ್ಲ. ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರಿಲ್ಲದ ಜನ ಜೀವನದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ರೈತರು ಬೆಳೆದ ಮೆಕ್ಕೆಜೋಳ, ಭತ್ತ ಸೇರಿದಂತೆ ತೋಟಗಾರಿಕೆ ಬೆಳೆಗಳು ನೀರು ಕಾಣದೇ ಒಣಗಿವೆ. ಮಲೆನಾಡು ಪ್ರದೇಶದಲ್ಲಿಯೇ ಮಳೆ ಇಲ್ಲದೇ ಭೂಮಿ ಬರಡಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹಾಯಿಸುತ್ತಿರುವ ಸರ್ಕಾರದ ಕ್ರಮಕ್ಕೆ ರೈತರು ರೊಚ್ಚಿಗೆದ್ದಿದ್ದಾರೆ ಎಂದರು.
ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಎನ್. ಪಾಟೀಲ್ ಮಾತನಾಡಿ, ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾವೇರಿ ನೀರಿನ ವಿಷಯದಲ್ಲಿ ದಿಟ್ಟ ನಿಲುವು ತಾಳಿದ್ದರು. ಆದರೆ, ಪ್ರಸ್ತುತ ಆಡಳಿತದಲ್ಲಿ ಇರುವವರು ರೈತರ ಬಗ್ಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಕಬ್ಬು ಬೆಳೆಗಾರರು ನಷ್ಟದಲ್ಲಿದ್ದಾರೆ. ತೆಂಗು ಬೆಳೆಗೆ ಬೆಲೆ ಇಲ್ಲದಂತಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಅಳಿದುಳಿದ ಬೆಳೆಗಳು ಒಣಗಿ ಹಾಳಾಗುತ್ತಿವೆ. ಬಗರ್‌ಹುಕುಂ ರೈತರಿಗೆ ಭೂ ಮಂಜೂರಾತಿ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಸೇರಿದಂತೆ ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವುಗಳನ್ನು ವಿರೋಧಿಸಿ ಅರಸೀಕೆರೆಯಿಂದ ಸಂಘಟನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿ, ಅ.4ರಂದು ಸಾವಿರಾರು ರೈತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸೈಯದ್ ಶಫಿವುಲ್ಲಾ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಶಿಕಾರಿಪುರ ತಾಲೂಕು ಅಧ್ಯಕ್ಷ ಸಿ.ವೈ. ರವಿ, ರೈತ ಮುಖಂಡರಾದ ಧನಂಜಯ ಬನ್ನೂರು, ಶಿವಪ್ಪ ಹುಣಸವಳ್ಳಿ, ಕೃಷ್ಣಪ್ಪ ಶಿಕಾರಿಪುರ, ಈರಮ್ಮ, ಶಿವಕುಮಾರ್, ಲೋಕಪ್ಪ, ಫಕೀರಸ್ವಾಮಿ, ಎಸ್. ವೀರನಗೌಡ ಗಿಣಿವಾಲ, ಜಿ.ಎಸ್. ಚಿತ್ರಶೇಖರಗೌಡ ಸೇರಿದಂತೆ ಮತ್ತಿತರರಿದ್ದರು.